ಮುದ್ದಿನ ನಾಯಿ ರಕ್ಷಿಸಲು ಮಡಿಕೇರಿಯಿಂದ ನಡೆದುಕೊಂಡು ಬಂದ ಯುವಕ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕೊಡಗಿನ ಜೋಡುಪಾಳ, ಮೊಣ್ಣಂಗೇರಿ, ಮಾದೆನಾಡು ಸುತ್ತಮುತ್ತ ಸಂಭವಿಸಿದ ಜಲಪ್ರಳಯ ಹಾಗು ಭಾರೀ ಭೂಕುಸಿತದಲ್ಲಿ ಸಂಭವಿಸಿದ ದುರಂತ ದೃಶ್ಯಗಳು ಒಂದೊಂದಾಗಿ ಹೊರ ಜಗತ್ತಿಗೆ ಗೋಚರಿಸುತ್ತಿವೆ. ಜೋಳುಪಾಳ , ಮೊಣ್ಣಂಗೇರಿ, ಮಾದೆನಾಡು ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅಪಾಯದಲ್ಲಿದ್ದವರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.
ಜೋಡುಪಾಳದ ದುರಂತ ಮಾನವನ ಸಂಬಂಧಗಳನ್ನೂ ತಟ್ಟುವ ಕೆಲ ಅಪರೂಪದ ಪ್ರಸಂಗಗಳಿಗೂ ಸಾಕ್ಷಿಯಾಗಿದೆ. ಜೋಡುಪಾಳದ ಮನೆಯೊಂದರಲ್ಲಿ ಅನಾಥವಾಗಿ ಉಳಿದಿದ್ದ ಮುದ್ದಿನ ಸಾಕು ನಾಯಿಯನ್ನು ರಕ್ಷಣೆ ಮಾಡಲು ಯುವಕ ಸಾವು ಬದುಕಿನ ದಾರಿಯ ನಡುವೆ ಮಡಿಕೇರಿಯಿಂದ 15 ಕೀ.ಮೀ ನಡೆದುಕೊಂಡು ಬಂದು ನಾಯಿಯನ್ನು ರಕ್ಷಣೆ ಮಾಡಿದ್ದಾನೆ. ಆ ಯುವಕನ ಹೆಸರು ಜೋಡುಪಾಳದ ಕಿಶೋರ್ ಭರತ್. ಆಗಸ್ಟ್ 17 ರಂದು ಸಂಭವಿಸಿದ ಅತಿವೃಷ್ಟಿ ಹಾಗು ಭಾರೀ ಭೂಕುಸಿತದಿಂದ ಕಿಶೋರ್ ಭರತ್ ಅವರ ಮನೆ ಅಪಾಯಕ್ಕೆ ಸಿಲುಕಿತ್ತು. ಆದರೆ ಕಿಶೋರ್ ಕುಟುಂಬ ಆ ಸಂದರ್ಭದಲ್ಲಿ ಜೋಡುಪಾಳದಲ್ಲಿರಲ್ಲಿಲ್ಲ.
ಆದರೆ ಜೋಡುಪಾಳದ ನೆರೆ ಆವರಿಸಿದ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಗೂಡಿನೊಳಗೆ ಕಿಶೋರ್ ಭರತ್ ಅವರ ಮುದ್ದಿನ ನಾಯಿ ಸ್ಯಾಂಡಿ ಸಿಲುಕಿಕೊಂಡಿತ್ತು. ತನ್ನ ಮುದ್ದಿನ ನಾಯಿ ಸ್ಯಾಂಡಿಯ ರಕ್ಷಣೆಗೆ ಗುಡ್ಡ ಕುಸಿತದ ಪ್ರದೇಶಗಳ ನಡುವೆ ರಾತ್ರಿ ಹಗಲು ನಡೆದುಕೊಂಡು ಬಂದಿದ್ದರು ಕಿಶೋರ್ ಭರತ್. ಸ್ಯಾಂಡಿ ತನ್ನ ಪ್ರೀತಿಯ ಒಡೆಯ ಕಿಶೋರ್ ಭರತ್ ರನ್ನು ಕಂಡ ಕ್ಷಣವೇ ಖುಷಿಯಾಗಿದೆ. ತನ್ನ ರಕ್ಷಣೆಗೆ ಬಂದ ಕಿಶೋರ್ ಅವರನ್ನು ಕಂಡ ಕೂಡಲೇ ಸ್ಯಾಂಡಿಯ ಹರ್ಷದ ತೋರ್ಪಡಿಕೆ ಅಕ್ಷರಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದನ್ನು ನೋಡಿಯೇ ಆನಂದಿಸಬೇಕು. ಈಗ ಸ್ಯಾಂಡಿ ತನ್ನ ಪ್ರೀತಿಯ ಒಡೆಯ ಕಿಶೋರ್ ಭರತ್ ಜೊತೆ ಸುರಕ್ಷಿತವಾಗಿ ಮರಳಿ ಮಡಿಕೇರಿಗೆ ತೆರಳಿದೆ
Leave A Reply