ಬೆಟ್ಟ ಕುಸಿದು ಅವಾಂತರ ಸೃಷ್ಟಿ; ಕೂಜುಮಲೆ, ಕಲ್ಮಕಾರಿನಲ್ಲಿ ನಡೆದ ದುರಂತವನ್ನು ಜಿಲ್ಲಾಡಳಿತ ಮುಚ್ಚಿಟ್ಟಿದ್ದೇಕೆ?
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕೊಡಗಿನ ಜೋಡುಪಾಳ ಮತ್ತು ಮದೆನಾಡಿನಲ್ಲಿ ಸಂಭವಿಸಿದ ಭೂ ಕುಸಿತಕ್ಕೆ ಸಿಲುಕಿ ಅಪಾಯದಲ್ಲಿದ್ದ ಎಲ್ಲರನ್ನು ಎನ್ ಡಿ ಆರ್ ಎಫ್ ಹಾಗು ದಕ್ಷಿಣ ಕನ್ನಡ ಪೊಲೀಸರ ತಂಡ ರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಸಾಗಿಸಿದೆ. ಈ ದುರಂತದಲ್ಲಿ ಮನೆ ಕಳೆದುಕೊಂಡ 800ಕ್ಕೂ ಹೆಚ್ಚು ಜನರನ್ನು ಸಂಪಾಜೆ, ಅರಂತೋಡಿನ ಸಂತ್ರಸ್ತರ ಶಿಬಿರದಲ್ಲಿ ಇರಿಸಲಾಗಿದೆ. ಈ ನಡುವೆ ಜೋಡುಪಾಳ ಮತ್ತು ಮದೆನಾಡಿನಲ್ಲಿ ಭೂಕುಸಿತಕ್ಕಿಂತಲೂ ದೊಡ್ಡ ಪ್ರಮಾಣದ ದುರಂತಗಳು ಸಂಭವಿಸಿರುವುದು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಮತ್ತೊಂದು ಕಡೆ ಬೃಹತ್ ಬೆಟ್ಟ ಕುಸಿದು ಅವಾಂತರ ಸೃಷ್ಟಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ಗ್ರಾಮ ಸುಳ್ಯ ತಾಲೂಕಿನ ಕಲ್ಮಕಾರಿನ ಬಳಿಯಿರುವ ಕಡಮಕಲ್ ಎಸ್ಟೇಟ್ ವ್ಯಾಪ್ತಿಯಲ್ಲಿ ಬೃಹತ್ ಬೆಟ್ಟ ಕುಸಿದಿರುವುದು ಬೆಳಕಿಗೆ ಬಂದಿದೆ. ಎಸ್ಟೇಟ್ ಒಳಗಿರುವ ಹೊಳೆಯ ಸೇತುವೆ ಕೊಚ್ಚಿ ಹೋಗಿದ್ದು, ಭಾರೀ ಗಾತ್ರದ ಬೃಹತ್ ಮರಗಳೂ ಛಿದ್ರಗೊಂಡು ಬಿದ್ದಿವೆ. ಮೂರು ದಿನಗಳ ಹಿಂದೆ ಈ ಭಾಗದಲ್ಲಿ ಭಾರೀ ಸ್ಫೋಟ ಸಂಭವಿಸಿದ ಸದ್ದು ಕೇಳಿಸಿತ್ತು. ಇದರಿಂದ ಎಸ್ಟೇಟ್ ಕಾರ್ಮಿಕರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಭಯಭೀತರಾಗಿದ್ದರು. ಹಾಗೆಯೇ ಕೂಜುಮಲೆ ಅರಣ್ಯ ವ್ಯಾಪ್ತಿಯಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಗೋಚರಿಸಿದೆ. ಅಲ್ಲೇ ಆಸುಪಾಸಿನ ಕಲ್ಮಕಾರು, ಬಾಳುಗೋಡು ಗ್ರಾಮಗಳ 30ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಅಲ್ಲದೆ, ಎಸ್ಟೇಟ್ ನಲ್ಲಿರುವ 40ಕ್ಕೂ ಹೆಚ್ಚು ತಮಿಳು ಕಾರ್ಮಿಕರು ಭಯದಿಂದ ಸ್ಥಳ ಬಿಟ್ಟು ಓಡಿಹೋಗಿದ್ದಾರೆ.
ಪಶ್ಚಿಮ ಘಟ್ಟ ಸ್ಫೋಟಗೊಂಡು ಇಡೀ ಪ್ರದೇಶವೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಭಯದಿಂದ ಕಾರ್ಮಿಕರು ಓಡಿದ್ದಾರೆ. ಇಲ್ಲಿ ಈ ಪ್ರಮಾಣದ ಭಾರೀ ದುರಂತ ನಡೆದಿದ್ದರೂ ಜನಸಂಚಾರ ವಿರಳವಾಗಿರುವ ಕಾರಣ ಘಟನೆಯನ್ನು ಜಿಲ್ಲಾಡಳಿತ ಮುಚ್ಚಿಟ್ಟಿತ್ತು ಎಂದು ಆರೋಪಿಸಲಾಗಿದೆ. ಈ ಪ್ರದೇಶ ಅತ್ಯಂತ ಕುಗ್ರಾಮ ಆಗಿರುವ ಕಾರಣ ಯಾವುದೇ ಅಧಿಕಾರಿ ವರ್ಗ ಸ್ಥಳಕ್ಕೆ ತೆರಳಿರಲಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಮಾಧ್ಯಮದಲ್ಲಿ ವರದಿಯಾಗಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಪುತ್ತೂರು ವಿಭಾಗಾಧಿಕಾರಿ ಕೃಷ್ಣಮೂರ್ತಿ ಸ್ಥಳಕ್ಕೆ ತೆರಳಿದ್ದು, ಬೆಟ್ಟಗಳ ಮೇಲೆ ಏನೋ ದುರಂತ ಸಂಭವಿಸಿರುವ ಸಾಧ್ಯತೆಯಿದೆ ಅಂತ ಒಪ್ಪಿಕೊಂಡಿದ್ದಾರೆ.
Leave A Reply