ಕಂಕನಾಡಿಯಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಸಾವನ್ನಪ್ಪಿದ 7 ವರ್ಷದ ಬಾಲಕ

ಮಂಗಳೂರು: ಮಕ್ಕಳಿಗೆ ಲಿಫ್ಟ್ ನಲ್ಲಿ ಆಟವಾಡುವುದೆಂದರೆ ಎಲ್ಲಿಲ್ಲದ ಖುಷಿ. ಲಿಫ್ಟ್ ನಲ್ಲಿ ಒಂದು ಫ್ಲೋರ್ ನಿಂದ ಮತ್ತೊಂದು ಫ್ಲೋರ್ ಗೆ ಹೋಗಿ ವಾಪಾಸ್ ಬರುವುದು. ಲಿಫ್ಟ್ ಆಪರೇಟರ್ ಇಲ್ಲದಾಗ ತಾವೇ ಲಿಫ್ಟ್ ಚಲಾಯಿಸುವುದು ಇವೆಲ್ಲ ಮಕ್ಕಳಿಗೆ ಇನ್ನಿಲ್ಲದ ಖುಷಿ ಕೊಡುತ್ತವೆ.
ಆದರೆ ಮಕ್ಕಳ ಈ ಆಟ ಕೆಲವೊಮ್ಮೆ ಜೀವಕ್ಕೆ ಎರವಾಗುತ್ತವೆ. ಇಂತಹುದೇ ದುರಂತ ಮಂಗಳೂರಿನ ಕಂಕನಾಡಿ ಪರಿಸರದಲ್ಲಿ ನಡೆದಿದೆ. ಕಂಕನಾಡಿಯ ವಾಸ್ ಲೇನ್ ನಲ್ಲಿರುವ 25 ವರ್ಷ ಹಳೆಯ ಶಮಾ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ಸಂಭವಿಸಿದೆ. ಬಾಲಕ ಮಹಮ್ಮದ್ ಸಿನಾನ್ (7) ಘಟನೆಯಲ್ಲಿ ಮೃತಪಟ್ಟ ದುರ್ದೈವಿ.
ನಿನ್ನೆ ಗುರುವಾರ ತಾಯಿ ಜೊತೆಗೆ ಮೂರು ಮಕ್ಕಳು ಶಾಪಿಂಗ್ ಗೆ ತೆರಳಲು ಸಿದ್ಧರಾಗಿ ನಿಂತಿದ್ದರು. ವಾಸವಿದ್ದ ಫ್ಲಾಟ್ ಗೆ ತಾಯಿ ಬೀಗ ಹಾಕುತ್ತಿದ್ದ ಸಂದರ್ಭ 7 ವರ್ಷದ ಸಿನಾನ್ ಏಕಾಏಕಿ ಲಿಫ್ಟ್ ನೊಳಗೆ ಹೋಗಿದ್ದಾನೆ. ಹಳೆ ಮಾದರಿಯ ಈ ಲಿಫ್ಟ್ ನೊಳಗೆ ಹೋಗಿ ಸರಿಯಾಗಿ ಬಾಗಿಲು ಭದ್ರಗೊಳಿಸದೇ ಲಿಫ್ಟ್ ನ ಕೆಳಹೋಗುವ ಬಟನ್ ಒತ್ತಿದ್ದಾನೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಬಾಲಕನ ತಲೆ ಲಿಫ್ಟ್ ನ ಸಂದಿಯಲ್ಲಿ ಸಿಲುಕಿದೆ.
ಬಾಲಕನ ಕಿರುಚಾಟ ಕೇಳಿ ತಾಯಿ ಓಡಿ ಬಂದಿದ್ದಾರೆ. ಇತರರ ಸಹಕಾರ ಪಡೆದು ಲಿಫ್ಟ್ ನ ಬಾಗಿಲು ಒಡೆದು ಬಾಲಕ ಸಿನನ್ ನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು . ಆದರೆ ಅದಾಗಲೇ ಬಾಲಕ ಸಿನಾನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತ ಸಿನಾನ್ ಅಹಮ್ಮದ್ ಬಾಸಿಂ ಎಂಬುವವರ ಪುತ್ರನಾಗಿದ್ದು, ಈ ಘಟನೆಯ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Leave A Reply