ಗಾಳಿಬೀಡು, ವಣಚ್ಚಲ್ ಬೆಟ್ಟದ ತುತ್ತ ತುದಿಯಲ್ಲಿ ಕಿಲೋಮೀಟರ್‌ಗಟ್ಟಲೇ ಭೂಮಿ ಬಿರುಕು; ಭೂಮಿ ಕುಸಿತ!
ಮಂಗಳೂರು: ಕೊಡಗು ಮಹಾಮಳೆ ಹಾಗೂ ಭಾರೀ ಭೂ ಕುಸಿತದ ಅನಾಹುತದಿಂದ ನಿಧಾನವಾಗಿ ಹೊರ ಬರುತ್ತಿದೆ. ದುರಂತಗಳಿಂದ ಸಂತ್ರಸ್ತರಾದ ಜನ ಮತ್ತೆ ಬದುಕು ಕಟ್ಟಿಕೊಳ್ಳುವ ನಿರ್ಧಾರದೊಂದಿಗೆ ಮುಂದಡಿ ಇಟ್ಟಿದ್ದಾರೆ. ಆದರೆ ಈ ನಡುವೆಯೇ ಬೆಟ್ಟಗಳ ಮೇಲೆ ಹೋದ ರಕ್ಷಣಾ ತಂಡ ಆಘಾತಕಾರಿ ವಿಷ ಹೊರಹಾಕಿದೆ. ಪಶ್ಚಿಮ ಘಟ್ಟದ ಬೆಟ್ಟಗಳಲ್ಲಿ ಬಿರುಕು ಮೂಡಿದ ಆಘಾತಕಾರಿ ಘಟನೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಈ ವಿಚಾರಗಳು ಸ್ಥಳೀಯ ಜನರಲ್ಲಿ ಮತ್ತೆ ದುರಂತ ಸಂಭವಿಸುವ ಆತಂಕ ಮೂಡಿಸಿವೆ..
ಬೆಟ್ಟದ ತುತ್ತ ತುದಿಯಲ್ಲಿ ಕಿಲೋಮೀಟರ್‌ಗಟ್ಟಲೇ ಭೂಮಿ ಬಿರುಕು ಬಿಟ್ಟಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಪಶ್ಚಿಮ ಘಟ್ಟದ ಗಿರಿಶಿಖರದ ಮೇಲೆ ಭೂಮಿ ಬಾಯಿ ತೆರೆದಿರುವುದು ಕಂಡುಬಂದಿದೆ. ಭೂ ಕುಸಿತವಾದ ಸಂಧರ್ಭದಲ್ಲಿ ಜೀವ ಭಯದಿಂದ ಬೆಟ್ಟ ಪ್ರದೇಶಗಳಿಂದ ಜನ ಓಡಿ ಹೋಗಿ ಸುರಕ್ಷಿತ ಸ್ಥಳ ಸೇರಿದ್ದರು. ಆದರೆ ಈ ಬೆಟ್ಟಪ್ರದೇಶದ ಮನೆಗಳ ಸಾಕು ಪ್ರಾಣಿಗಳು ಅಲ್ಲಿಯೇ ಉಳಿದು ಬಿಟ್ಟಿದ್ದವು.
ಈ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿಕೊಂಡು ಕೆಳಗೆ ಇಳಿಯಲಾಗದೆ ಒದ್ದಾಡುತ್ತಿದ್ದ ಸಾಕು ಪ್ರಾಣಿಗಳ ರಕ್ಷಣೆಗೆ ಬೆಟ್ಟದ ಮೇಲೆ ಹೋಗಿದ್ದ ರಕ್ಷಣಾ ತಂಡಕ್ಕೆ ಆಘಾತಕಾರಿ ದೃಶ್ಯ ಕಾಣಿಸಿದೆ. ಬೆಟ್ಟ ಪ್ರದೇಶದಲ್ಲಿ ಆಹಾರ ಇಲ್ಲದೆ ಕಂಗಾಲಾಗಿದ್ದ ಸಾಕು ಪ್ರಾಣಿಗಳನ್ನು ಸುರಕ್ಷಿತವಾಗಿ ಮರಳಿ ತರಲು ರಿಸರ್ವ್ ಪೊಲೀಸ್ ಇನ್ಸ್ ಪೆಕ್ಟರ್ ಗಣೇಶ್ ಮತ್ತು ಕೆಲ ಸ್ವಯಂ ಸೇವಕರ ತಂಡ ಗಿರಿ ಶಿಖರಗಳ ಮೇಲೆ ಹೋಗಿತ್ತು. ಗಿರಿ ಶಿಖರದ ಮೇಲೆ ತಂಡ ಹೋಗುತ್ತಿದ್ದಂತೆಯೇ ಅಪಾಯಕಾರಿಯಾಗಿ ಭೂಮಿ ಬಾಯ್ದೆರೆದಿರುವುದು ಗೋಚರಿಸಿದೆ.
ಅತೀ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾದ ಪಶ್ಚಿಮ ಘಟ್ಟದಲ್ಲಿ ಮತ್ತೆ ಭಾರೀ ಭೂಕುಸಿತವಾಗುವ ಸಾಧ್ಯತೆಗಳು ಕಂಡು ಬಂದಿದ್ದು, ಮತ್ತೆ ಮಳೆ ಬಂದರೆ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗುವ ಸಾಧ್ಯತೆಗಳ ಬಗ್ಗೆ ರಕ್ಷಣಾ ತಂಡ ಆತಂಕ ವ್ಯಕ್ತಪಡಿಸಿದೆ. ಬೆಟ್ಟದ ತುದಿಗೆ ಪರಿಶೀಲನೆಗೆ ತೆರಳಿದ್ದ ತಂಡ ಈ ಆಘಾತಕಾರಿ ವಿಚಾರ ಪತ್ತೆ ಹಚ್ಚಿದೆ. ಗಾಳಿಬೀಡು ಹಾಗು ಪಕ್ಕದ ವಣಚ್ಚಲ್ ಬೆಟ್ಟದಲ್ಲಿ ಭಾರೀ ಬಿರುಕು ಕಂಡಿದೆ. ಅಲ್ಲದೇ ಎಕರೆಗಟ್ಟಲೆ ಭೂಮಿ ಕುಸಿದಿರುವ ಭೀಕರ ದೃಶ್ಯ ಕಂಡು ಬಂದಿದೆ.
ಬೆಟ್ಟದಲ್ಲಿ ಇನ್ನಷ್ಟು ಬಿರುಕು ಬಿಟ್ಟಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಮತ್ತೆ ಮಳೆ ಸುರಿದರೆ ಭಾರೀ ಗುಡ್ಡ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಈ ಸಂದರ್ಭದಲ್ಲಿ ಬೆಟ್ಟದ ಮೇಲೆ ತಂಡ ಸಾಕುಪ್ರಾಣಿಗಳ ರಕ್ಷಣೆ ಕೂಡ ಮಾಡಿದೆ.
ಬ್ರಹ್ಮಗಿರಿ, ಕೂಜುಮಲೆ, ಬೆಟ್ಟದಲ್ಲೂ ಬಿರುಕು ಕಂಡು ಬಂದಿದ್ದು, ಈಗ ಗಾಳಿಬೀಡು, ವಣಚ್ಚಲ್ ಬೆಟ್ಟಗಳ ಮೇಲೂ ಕಂಡು ಬಂದಿರುವ ಬಿರುಕು ಜನರನ್ಮು ಮತ್ತಷ್ಟು ಆತಂಕಗೊಳಿಸಿದೆ. ಬೆಟ್ಟದ ಮೇಲೆ ಕಂಡುಬಂದಿರುವ ಈ ಬಿರುಕುಗಳ ಬಗ್ಗೆ ಶೀಘ್ರವಾಗಿ ಅಧ್ಯಯನ ನಡೆಸಬೇಕಾದ ಅವಶ್ಯಕತೆ ಇದೆ. ಈ ಬಿರುಕುಗಳಿಗೆ ಕಾರಣ ಹುಡುಕ ಬೇಕಾದ ತುರ್ತು ಅನಿವಾರ್ಯತೆ ಇದೆ.
Leave A Reply