ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜಾನ ತಾಯಿ ವಿಲಾಸಿನಿ ಶೆಟ್ಟಿಗಾರ್ ವಿಧಿವಶ
ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜಾ ಅವರ ತಾಯಿ ವಿಲಾಸಿನಿ ಶೆಟ್ಟಿಗಾರ್ ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬನ್ನಂಜೆ ರಾಜಾ ಅವರ ತಾಯಿ ಮನೆಯಲ್ಲಿ ಕಾಲು ಜಾರಿ ಬಿದ್ದು ಇಂದು ಭಾನುವಾರ ಮೃತಪಟ್ಟಿದ್ದಾರೆ. ಜುಲೈ.9 ರಂದು ತಾಯಿಯನ್ನು ಭೇಟಿಯಾಗಲು ಭೂಗತ ಪಾತಕಿ ಬನ್ನಂಜೆ ರಾಜಾ ಉಡುಪಿಗೆ ಬಂದಿದ್ದ. ತಾಯಿಯೊಂದಿಗೆ ಕೆಲಕಾಲ ಮನೆಯಲ್ಲಿ ಕಳೆದಿದ್ದ. ನಂತರ ಮತ್ತೆ ಬೆಳಗಾವಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿತ್ತು.
ಮಲ್ಪೆಯ ಕಲ್ಮಾಡಿಯಲ್ಲಿ ಬನ್ನಂಜೆ ರಾಜನ ತಾಯಿ ಮನೆ ಇದ್ದು, ಮನೆಯಲ್ಲಿ ಕಾಲು ಜಾರಿ ಬಿದ್ದು ತಾಯಿ ವಿಲಾಸಿನಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಡರಲ್ಲೇ ವಿಲಾಸಿನಿ ಅವರು ಮೃತಪಟ್ಟಿದ್ದಾರೆ. ಬನ್ನಂಜೆ ರಾಜಾನ ತಾಯಿ ವಿಲಾಸಿನಿ ಮೃತದೇಹ ಸದ್ಯ ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ.
ಬನ್ನಂಜೆ ರಾಜಾನ ಕರೆತರುವ ಬಗ್ಗೆ ಕುಟುಂಬ ವಕೀಲರ ಜೊತೆ ಮಾತುಕತೆ ನಡೆಸಲಿದೆ ಎಂದು ಹೇಳಲಾಗಿದ್ದು, ಬನ್ನಂಜೆ ರಾಜ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ. ಒಂದು ವೇಳೆ ಬನ್ನಂಜೆ ರಾಜಾಗೆ ಉಡುಪಿಗೆ ಬರಲು ನ್ಯಾಯಾಲಯ ಅನುಮತಿ ನೀಡಲಿದೆಯೇ ಎನ್ನುವುದು ತಿಳಿದಿಲ್ಲ. ಬನ್ನಂಜೆ ರಾಜಾನ ಆಗಮನದ ಮಾಹಿತಿ ನಂತರ ಕುಟುಂಬದ ನಿರ್ಧಾರದ ಬಳಿಕವೇ ತಾಯಿಯ ಶವ ದಹನ ಮಾಡಲಿದ್ದಾರೆ. ಈಗಾಗಲೇ ಬನ್ನಂಜೆ ರಾಜನ ಬಂಟರು ಸಕಲ ಸಿದ್ಧತೆಗಳನ್ನು ಮಾಡಿದ್ದು, ನ್ಯಾಯಾಲಯ ರಾಜಾನಿಗೆ ಅವಕಾಶ ನೀಡುವ ಬಗ್ಗೆ ಚರ್ಚೆಗಳಾಗುತ್ತಿದೆ.
Leave A Reply