ಮಂಗಳೂರಿನ ಪಿಂಕಿ ‘ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್’ ಫೈನಲಿಸ್ಟ್
ಮಂಗಳೂರು: ಮಂಗಳೂರಿನ ಒಂದು ನಾಯಿ ಇದೀಗ ದೇಶದ ಗಮನ ಸೆಳೆದಿದೆ. ಪೇಟಾ ಇಂಡಿಯಾ ನಡೆಸುವ ಬೀದಿಯಿಂದ ರಕ್ಷಿಸಲಾಗುವ ಶ್ವಾನಗಳಿಗಾಗಿ ನಡೆಸುವ ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ. ಈ ಸ್ಪರ್ಧೆಯ ಅಂತಿಮ ಹಂತಕ್ಕೆ ದೇಶದಿಂದ ಆಯ್ಕೆಯಾಗಿರುವ ಹತ್ತು ಶ್ವಾನಗಳ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ನಾಯಿ ಇದು. ಪೇಟಾ ಇಂಡಿಯಾ ಈ ಬಾರಿ ದೇಶದ ವಿವಿಧ ಭಾಗಗಳ ಒಟ್ಟು ಹತ್ತು ಶ್ವಾನಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ನಗರದ ಜೀನ್ ಕ್ರಾಸ್ತಾ ರಕ್ಷಿಸಿ ಪೋಷಿಸಿದ ಪಿಂಕಿ ಹೆಸರಿನ ಶ್ವಾನ ಸ್ಥಾನ ಪಡೆದುಕೊಂಡಿದೆ.
ಕಳೆದ ಎಂಟು ವರ್ಷಗಳಿಂದ ಹಲವು ಶ್ವಾನಗಳನ್ನು ರಕ್ಷಣೆ ಮಾಡುತ್ತಿರುವ ಜೀನ್ ಕ್ರಾಸ್ತಾ ಕಳೆದ ವರ್ಷ ಜುಲೈ ನಲ್ಲಿ ಮಂಗಳಾ ಸ್ಟೇಡಿಯಂ ಬಳಿ ಸಾಗುತ್ತಿರುವಾಗ ನಿರ್ಮಾಣ ಹಂತದ ಕಟ್ಟಡದೊಳಗೆ ನಾಯಿ ಮರಿಯೊಂದು ಸಿಲುಕಿ ಅಳುತ್ತಿದ್ದ ದೃಶ್ಯವನ್ನು ನೋಡಿದ್ದರು. ನಂತರ ನಾಯಿ ಮರಿಯನ್ನು ತಮ್ಮ ಮನೆಗೆ ತೆಗೆದುಕೊಂಡ ಹೋದ ಕ್ರಾಸ್ತಾ ಅವರು ಅದನ್ನು ಉಪಚರಿಸಿದರು. ನಂತರ ಮನೆಯ ಮಂದಿಯ ವಿಶ್ವಾಸಕ್ಕೆ ಪಾತ್ರಳಾಗುವ ನಾಯಿ ಮರಿಯನ್ನು ಮನೆಯಲ್ಲೇ ಸಾಕುತ್ತಿದ್ದಾರೆ.
ಬೀದಿ ಬದಿಯಲ್ಲಿ ಅನ್ನ- ನೀರಿಲ್ಲದೆ ಅಲೆಯುತ್ತಿರುವ , ಕಟ್ಟಡ ಅಥವಾ ಇತರೆಡೆಗಳಲ್ಲಿ ಬಂಧಿಯಾಗಿರುವ, ಮಾಲಕನನ್ನು ಕಳೆದುಕೊಂಡು ಅಲೆದಾಡುವ ಶ್ವಾನಗಳನ್ನು ಅಥವಾ ಜೀವನ್ಮರಣ ಹೋರಾಟದ ಸ್ಥಿತಿಯಲ್ಲಿರುವುದನ್ನು ರಕ್ಷಿಸಿ ಅವುಗಳನ್ನು ಸಾಕಿದವರು, ತಮ್ಮ ಪ್ರೀತಿಯಲ್ಲಿ ಬೆಳೆದ ಶ್ವಾನಗಳ ಭಾವಚಿತ್ರಗಳನ್ನು ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್ ಸ್ಪರ್ಧೆಗೆ ಕಳುಹಿಸಿ ಕೊಡಬಹುದು. ಅದರಂತೆ ದೇಶದಾದ್ಯಂತ ಸುಮಾರು ಸಾವಿರಕ್ಕೂ ಹೆಚ್ಚು ದೇಶೀಯ ತಳಿಯ ರಕ್ಷಿಸಲ್ಪಟ್ಟ ಶ್ವಾನಗಳ ಫೋಟೋಗಳು ಪೇಟಾ ಸಂಸ್ಥೆಗೆ ಬಂದಿದ್ದವು.
ಶ್ವಾನಗಳ ರಕ್ಷಣೆಯ ಕಥೆಗಳನ್ನು ಆಲಿಸಿ ಮತ್ತು ಚಿತ್ರಗಳನ್ನು ಪರಿಶೀಲಿಸಿ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ದೇಶದ ವಿವಿಧ ಭಾಗಗಳ ಒಟ್ಟು ಹತ್ತು ಶ್ವಾನಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದ್ದು, ಮಂಗಳೂರಿನ ಪಿಂಕಿ ಫೈನಲಿಸ್ಟ್. ಜೀನ್ ಕ್ರಾಸ್ತಾ ಅವರು ನಾಯಿ ಮರಿಯನ್ನು ರಕ್ಷಿಸುವ ಸಂದರ್ಭದಲ್ಲಿ ಆರು ತಿಂಗಳ ಚಿಕ್ಕ ಮರಿಯಾಗಿತ್ತು. ಈಗ ಸುಮಾರು ಒಂದೂವರೆ ವರ್ಷವಾಗಿದೆ. “ಪಿಂಕಿಯ ಮೂಗು ಮತ್ತು ಬೆರಳಿನ ಕೆಳಭಾಗದಲ್ಲಿ ಪಿಂಕ್ ಬಣ್ಣವಿತ್ತು. ಅದಕ್ಕಾಗಿ ಪಿಂಕಿ ಎಂದು ಹೆಸರಿಟ್ಟಿದ್ದೆವು. ಇದೀಗ ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್ ಕಂಟೆಸ್ಟ್ ಸ್ಪರ್ಧೆಯಲ್ಲಿ ಫೈನಲ್ ಗೆ ಆಯ್ಕೆಯಾಗಿರುವುದು ಸಂತಸ ತಂದಿದೆ” ಎನ್ನುತ್ತಾರೆ ನಾಯಿ ಮಾಲಕ ಜೀನ್ ಕ್ರಾಸ್ತಾ. ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್ ಕಂಟೆಸ್ಟ್ ಫೈನಲ್ ಸ್ಪರ್ಧೆ ಇಂದು ಮಂಗಳವಾರ ನಡೆಯಲಿದ್ದು, ನಾಳೆ ಅಂತಿಮ ಫಲಿತಾಂಶ ಬರಲಿದೆ.
Leave A Reply