ಉಡುಪಿಯಿಂದ ಪಾರ್ಸೆಲ್ ತೆಗೆದುಕೊಂಡ ವ್ಯಕ್ತಿ ಕುವೈಟ್‌ನಲ್ಲಿ ಬಂಧನ
ಉಡುಪಿ: ಯಾರಾದರೂ ಪಾರ್ಸೆಲ್ ತಂದು ಕೊಟ್ಟರೆ ಸ್ವಲ್ಪ ಹುಷಾರಾಗಿರಿ. ಹೌದು, ಉಡುಪಿಯಲ್ಲಿ ಯಾರೋ ಕೊಟ್ಟ ಪಾರ್ಸಲ್ ಒಂದನ್ನು ತೆಗೆದುಕೊಂಡ ಹೋದ ವ್ಯಕ್ತಿಯೊಬ್ಬರು ದೂರದ ಕುವೈಟ್ ನಲ್ಲಿ ಜೈಲುಪಾಲಾಗಿದ್ದಾರೆ. ವಿಶ್ವಾಸದಿಂದ ಉಪಕಾರ ಮಾಡಲು ಹೋದ ವ್ಯಕ್ತಿ ಕಳೆದ ಮೂರು ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಮತ್ತೊಂದು ಕಡೆ ಅವರ ಪತ್ನಿ ಕಂಡಕಂಡವರಲ್ಲಿ, ನನ್ನ ಗಂಡನನ್ನು ಬಿಡಿಸಿ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
ಅವರು ಜ್ಯೋತಿ ಪೂಜಾರಿ, ಕುಂದಾಪುರ ತಾಲೂಕಿನ ಬಸ್ರೂರು ಪರಿಸರದ ಕಳಂಜೆ ಎಂಬಲ್ಲಿ ಇವರ ಮನೆ ಇದೆ. ಪತಿ ಶಂಕರ ಪೂಜಾರಿ ದೂರದ ಕುವೈಟ್ ನಲ್ಲಿದ್ದರು. ಅಲ್ಲಿ ದುಡಿದ ಬಂದ ಹಣದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಸಾಕುತ್ತಿದ್ದರು. ಈ ಕುಟುಂಬದ ನೆಮ್ಮದಿ ಹಾಳು ಮಾಡಿದ್ದು ಮುಬಾರಕ್. ಮೂರು ತಿಂಗಳ ಹಿಂದೆ ಶಂಕರ್ ಪೂಜಾರಿ ಊರಿಗೆ ಬಂದು ರಜೆ ಮುಗಿಸಿ ಕುವೈಟ್‌ಗೆ ಹೊರಟಿದ್ದರು. ಆಗ ಮುಬಾರಕ್ ವಿನಂತಿ ಮೇರೆಗೆ ಮಾತ್ರೆಗಳ ಪಾರ್ಸೆಲ್ ಒಂದನ್ನು ಶಂಕರ್ ತೆಗೆದುಕೊಂಡು ಹೋಗಿದ್ದಾರೆ. ಮುಬಾರಕ್ ಅತ್ತೆ ತಸ್ಲೀಮಾ ಫಾತಿಮಾ ಎಂಬುವರಿಗೆ ತಲುಪಬೇಕಾದ ಮಾತ್ರೆಗಳವು.
ಆದರೆ, ಅದು ಯಾವ ಮಾತ್ರೆ?, ಎಷ್ಟು ಪ್ರಮಾಣದಲ್ಲಿವೆ? ಎಂಬುದನ್ನು ನೋಡುವ ಗೋಜಿಗೆ ಶಂಕರ್ ಪೂಜಾರಿ ಹೋಗಿರಲಿಲ್ಲ. ಮುಬಾರಕ್ ಹೇಗೆ ಕೊಟ್ಟಿದ್ದರೂ ಹಾಗೇ ಪಾರ್ಸೆಲ್‌ಅನ್ನು ಕುವೈಟ್ ಗೆ ತೆಗೆದುಕೊಂಡು ಹೋಗಿದ್ದಾರೆ. ಕುವೈಟ್ ವಿಮಾನ ನಿಲ್ದಾಣದಲ್ಲಿ ಶಂಕರ ಪೂಜಾರಿಯವರ ವಸ್ತುಗಳನ್ನು ಪರಿಶೀಲಿಸಿದ ಅಧಿಕಾರಿಗಳು ಮಾತ್ರೆ ತಂದಿರುವುದನ್ನು ಗಮನಿಸಿದ್ದಾರೆ. ಶಂಕರ ಪೂಜಾರಿಯವರು ನೀಡಿದ ವಿವರಣೆ ಅಲ್ಲಿನ ಪೊಲೀಸರಿಗೆ ವಿಶ್ವಾಸ ಮೂಡಿಸದ ಕಾರಣ ಮತ್ತು ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿನ ಕಾನೂನಿನ ಪ್ರಕಾರ ಬಂಧಿಸಲಾಗಿದೆ. ಶಂಕರ್ ಪೂಜಾರಿಯವರು ತಂದಿದ್ದ ಮಾತ್ರೆಗಳು ಮುಬಾರಕ್ ಅತ್ತೆ ತಸ್ಲೀಂ ಫಾತಿಮಾಗೆ ಸೇರಿದ್ದು. ಆದರೆ, ಶಂಕರ್ ಪೂಜಾರಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರಿಂದ ಬೆದರಿದ ತಸ್ಲೀಂ ಫಾತಿಮಾ ಏರ್ ಪೋರ್ಟ್ ಅಧಿಕಾರಿಗಳನ್ನು ಸಂಪರ್ಕಿಸಲು ಹಿಂದೇಟು ಹಾಕಿದ್ದಾರೆ.
ಪರಿಣಾಮವಾಗಿ ಶಂಕರ್ ಪೂಜಾರಿ ಅನ್ಯಾಯವಾಗಿ ಜೈಲಿನ ಕಂಬಿ ಎಣಿಸಬೇಕಾಗಿದೆ. ಶಂಕರ ಪೂಜಾರಿಯವರ ಪತ್ನಿ ಜ್ಯೋತಿ ಕಂಡ ಕಂಡವರನ್ನು ಭೇಟಿಯಾಗಿ ಗಂಡನನ್ನು ಬಿಡಿಸಿಕೊಡಿ ಎಂದು ಗೋಗರೆಯುತ್ತಿದ್ದಾರೆ. ಪತಿಯನ್ನು ಕುವೈಟ್ ಜೈಲಿನಿಂದ ಬಿಡಿಸುವಂತೆ ಸಂಘಟನೆಗಳ ಮೊರೆ ಹೋಗಿದ್ದಾರೆ. ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಮೊದಲಾದವರನ್ನೂ ಸಂಪರ್ಕಿಸಿದ್ದಾರೆ. ಕುವೈಟ್ ನಲ್ಲಿರುವ ಕನ್ನಡಿಗರು ಶಂಕರ ಪೂಜಾರಿಯವರನ್ನು ಜೈಲಿನಿಂದ ಬಿಡಿಸಲು ಪ್ರಯತ್ನಿಸಿದ್ದರೂ ಈ ಪ್ರಕರಣದ ಗಂಭೀರತೆಯಿಂದ ಅವರನ್ನು ಬಿಡಿಸಲು ಸಾಧ್ಯವಾಗಿಲ್ಲ. ತಸ್ಲೀಂ ಫಾತಿಮಾ ಪೊಲೀಸರ ಎದುರು ಹಾಜರಾಗಿ ಈ ಮಾತ್ರೆಗಳನ್ನು ತನಗೆ ನೀಡಲಿಕ್ಕೆಂದು ತಂದಿದ್ದು ಎಂಬ ಹೇಳಿಕೆ ದಾಖಲಿಸಿದರೆ ಮಾತ್ರ ಶಂಕರ ಪೂಜಾರಿಯವರನ್ನು ಜೈಲಿನಿಂದ ಬಿಡುಗೊಡೆಗೊಳಿಸುವ ಬಗ್ಗೆ ಪರಿಶೀಲಿಸಬಹುದು ಎಂದು ಕುವೈಟ್ ಪೊಲೀಸರು ಹೇಳಿದ್ದಾರೆ.
Leave A Reply