ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆ!; ಬಿಜೆಪಿ ಸೇರಿದ ಮಾಜಿ ಸಚಿವ ಬಾಬೂರಾವ್ ಚಿಂಚನಸೂರು
ಬೆಂಗಳೂರು : ಲೋಕಸಭೆ ಚುನಾವಣೆಗೆ ಮೊದಲೇ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. ಹೈದರಾಬಾದ್-ಕರ್ನಾಟಕ ಭಾಗದ ಪ್ರಭಾವಿ ನಾಯಕ ಬಾಬೂರಾವ್ ಚಿಂಚನಸೂರು ಅವರು ಬಿಜೆಪಿ ಸೇರಿದ್ದಾರೆ. ಬುಧವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಾಬೂರಾವ್ ಚಿಂಚನಸೂರು ಬಿಜೆಪಿ ಸೇರಿದರು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಸಚಿವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
2018ರ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆಸಿದ್ದ ಬಾನೂರಾವ್ ಚಿಂಚನಸೂರು ಅವರು 55,147 ಮತಗಳನ್ನು ಪಡೆದು, ಜೆಡಿಎಸ್ ನಾಗನಗೌಡ ವಿರುದ್ಧ ಸೋಲು ಅನುಭವಿಸಿದ್ದರು. ‘ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಸ್ವ ಪಕ್ಷದವರೇ ಕಾರಣ. ಆದ್ದರಿಂದ ಪಕ್ಷ ತೊರೆಯುತ್ತಿದ್ದೇನೆ’ ಎಂದು ಬಾಬೂರಾವ್ ಚಿಂಚನಸೂರು ಕೆಲವು ದಿನಗಳ ಹಿಂದೆ ಹೇಳಿದ್ದರು.
2008 ಮತ್ತು 2013ರ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಲ್ಲಿ ಅವರು ಜಯಗಳಿಸಿದ್ದರು. 2013ರ ಚುನಾವಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಜವಳಿ, ಆಂತರಿಕ ಸಾರಿಗೆ, ಬಂದರು ಖಾತೆ ಸಚಿವರಾಗಿದ್ದರು. ಸಂಪುಟ ಪುನಾರಚನೆ ಸಮಯದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ನಾಯಕರಾದ ಬಾಬೂರಾವ್ ಚಿಂಚನಸೂರು ಅವರು 5 ಬಾರಿ ಶಾಸಕರಾಗಿದ್ದರು. ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಮುಜರಾಯಿ ಸಚಿವರಾಗಿದ್ದರು.
Leave A Reply