ಗುರುವಾಯನಕೆರೆಯಲ್ಲೇ ಟ್ರಾಫಿಕ್ ಜಾಮ್; ಪೊಲೀಸರ ಜತೆ ಸಂಚಾರ ನಿಯಂತ್ರಿಸಿದ ತಹಶೀಲ್ದಾರ್
ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಘನ ವಾಹನ ಸಂಚಾರಕ್ಕೆ ಅವಕಾಶ ನೀಡುವ ಕುರಿತು ದ.ಕ.ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಗೊಂದಲದಿಂದಾಗಿ ಗುರುವಾರ ಬೆಳಗ್ಗೆ ಗುರುವಾಯನಕೆರೆಯಲ್ಲೇ ಟ್ರಾಫಿಕ್ ಜಾಮ್ ಉಂಟಾಗಿ ಕೊನೆಗೆ ಬೆಳ್ತಂಗಡಿ ತಹಶೀಲ್ದಾರ್ ಮದನ್‌ಮೋಹನ್ ಅವರೇ ಫೀಲ್ಡಿಗಿಳಿದು ಟ್ರಾಫಿಕ್ ನಿಯಂತ್ರಿಸಿದ ಘಟನೆ ಸಂಭವಿಸಿದೆ.
ಟ್ರಾಫಿಕ್ ಜಾಮ್; ಜಿಲ್ಲಾಧಿಕಾರಿ ಆದೇಶದ ಮಧ್ಯೆಯೂ ಪೊಲೀಸರು ಘನ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ ಎಂದು ಆರೋಪದ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆ. 29ರಿಂದ ತರಕಾರಿ, ಅಡುಗೆ ಅನಿಲ ಸಿಲಿಂಡರ್ ಸಹಿತ ಆಹಾರ ಸಾಮಗ್ರಿಗಳ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲ ಲಾರಿಗಳನ್ನು ಚಾರ್ಮಾಡಿ ಘಾಟಿಯಲ್ಲಿ ತೆರಳದಂತೆ ಗುರುವಾಯನಕೆರೆಯಲ್ಲಿ ತಡೆಹಿಡಿಯಲಾಗಿತ್ತು.
ಹೀಗಾಗಿ ಎಲ್ಲ ಲಾರಿಗಳು ಗುರುವಾಯನಕೆರೆಯಲ್ಲಿ ಬಂದು ನಿಂತಿದ್ದವು. ಇದರಿಂದ ಗುರುವಾರ ಬೆಳಗ್ಗೆ ಇತರ ವಾಹನಗಳು ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ, ಪೊಲೀಸರಿಗೆ ಮನವರಿಕೆ ಮಾಡಿ 6 ಚಕ್ರಗಳ ಲಾರಿಗಳಿಗೆ ಘಾಟಿ ರಸ್ತೆಯಲ್ಲಿ ಅವಕಾಶ ನೀಡುವಂತೆ ತಿಳಿಸಿದರು.
ಸಹಜ ಸ್ಥಿತಿಗೆ; ಇದರಿಂದ ಗುರುವಾಯನಕೆರೆಯಲ್ಲಿ ನಿಂತಿದ್ದ ಎಲ್ಲ ಲಾರಿಗಳು ಏಕಕಾಲದಲ್ಲಿ ಹೊರಟ ಪರಿಣಾಮ ಬೆಳ್ತಂಗಡಿ, ಉಜಿರೆ ಭಾಗದಲ್ಲೂ ವಾಹನಗಳ ಒತ್ತಡ ಹೆಚ್ಚಾಗಿತ್ತು. ಎಲ್ಲ ಲಾರಿಗಳು ತೆರಳಿದ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು
Leave A Reply