ಸಿದ್ದರಾಮಯ್ಯ, ಉಮಾಶ್ರೀ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ದೂರು
ಬೆಂಗಳೂರು: ರಾಜ್ಯದ ಎರಡು ಕನ್ನಡ ಪರ ಸಂಘಟನೆಗಳ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವೆ ಉಮಾಶ್ರೀ ಅಧಿಕಾರ ದುರುಪಯೋಗ ಮಾಡಿಕೊಂಡು ಕೋಟ್ಯಂತರ ರೂ. ಹಣ ಬಿಡುಗಡೆ ಮಾಡಿದ್ದು, ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಎಚ್.ಬಿ.ನಾಗೇಶ್ ಗುರುವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ದೂರು ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ದಾಖಲೆಗಳನ್ನು ಪಡೆಯದೆ ಟಿ.ಎ. ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ವಿಶ್ವ ಕನ್ನಡ ಜಾಗೃತಿ ಸಮಾವೇಶಕ್ಕೆ 2016-17ರಲ್ಲಿ 50 ಲಕ್ಷ ಮತ್ತು 2017-18 ರಲ್ಲಿ 50 ಲಕ್ಷ ರೂ. ಒಟ್ಟು ಒಂದು ಕೋಟಿ ಹಾಗೂ ವಾಟಾಳ್ ನಾಗರಾಜ್ ಅವರ ಕರ್ನಾಟಕ ರಾಜೋತ್ಸವ ಸಮಿತಿಗೆ 2016-17 ರಲ್ಲಿ 50 ಲಕ್ಷ , 2017-18 ರಲ್ಲಿ 60 ಲಕ್ಷ ಒಟ್ಟು 1.10 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶಿಫಾರಸ್ಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವೆ ಉಮಾಶ್ರೀ 2 ಕೋಟಿ 10 ಲಕ್ಷ ರೂ. ಹಣವನ್ನು ಸಂಘಟನೆಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ನಾಗೇಶ್ ಆರೋಪಿಸಿದರು.
ಸರ್ಕಾರದಿಂದ ಪಡೆದ ಧನ ಸಹಾಯದ ಹಣ ಯಾವ ಉದ್ದೇಶಕ್ಕೆ ನೀಡಲಾಗಿದೆಯೋ ಆ ಉದ್ದೇಶಕ್ಕೆ ಬಳಕೆಯಾಗಿಲ್ಲ. ಇದಕ್ಕೆ ಸೂಕ್ತ ದಾಖಲೆಗಳಾಗಲಿ, ಫೋಟೋಗಳಾಗಲಿ, ಪೂರಕ ರಶೀದಿಗಳಾಗಲಿ ಹಾಗೂ ಆಡಿಟ್ ರಿಪೋರ್ಟ್ ಅನ್ನು ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪಡೆದಿಲ್ಲ. ಈ ರೀತಿಯ ಕಾರ್ಯಕ್ರಮಗಳ ನೆಪದಲ್ಲಿ ಸರ್ಕಾರದ ಕೋಟ್ಯಂತರ ರೂ. ಹಣ ದುರ್ಬಳಕ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ದೂರಿದರು.
ರಾಜ್ಯದಲ್ಲಿ ಸಾವಿರಾರು ಸಂಘಟನೆಗಳು ಕನ್ನಡ ನಾಡು ಮತ್ತು ನುಡಿಯ ಪರವಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿವೆ. ಆದರೂ ಈ ಎರಡು ಸಂಘಟನೆಗಳಿಗೆ ಕೋಟ್ಯಂತರ ರೂ. ಹಣ ಬಿಡುಗಡೆ ಮಾಡಿರುವ ಹಿಂದೆ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈ ಸಂಬಂಧ ತನಿಖೆ ನಡೆಸಿ ಹಣ ಬಿಡುಗಡೆಗೆ ಶಿಫಾರಸು ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವೆ ಉಮಾಶ್ರೀ ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನಾಗೇಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.
Leave A Reply