ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದವರು ದೇಶದ ಭದ್ರತೆಗೆ ಕಂಟಕ
ಮಂಗಳೂರು: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾದವರು ದೇಶದ ಭದ್ರತೆಗೆ ಕಂಟಕ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ವಾಗ್ದಾಳಿ ನಡೆಸಿದರು. ಪುತ್ತೂರು ನಗರ ಸಭೆಯ 31 ವಾರ್ಡ್ ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾನ ಮಾಡಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಹಾಗೂ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ.
ದೇಶದ ಭದ್ರತೆಯ ದೃಷ್ಟಿಯಿಂದ ಈ ಕಠಿಣ ಕ್ರಮ ಜರುಗಿಸಲಿದೆ. ಪ್ರತಿಪಕ್ಷಗಳಿಗೆ ಬೇರೆ ವಿಚಾರವಿಲ್ಲದ ಕಾರಣ ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡುತ್ತಿವೆ ಎಂದು ಅವರು ಕಿಡಿಕಾರಿದರು. ಬೆಂಗಳೂರು – ಮಂಗಳೂರಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಶಿರಾಡಿಘಾಟ್ ರಸ್ತೆ ವಾಹನ ಸಂಚಾರಕ್ಕೆ ಶೀಘ್ರ ತೆರೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಈ ಸಂಬಂಧ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಜೊತೆ ಮಾತನಾಡಿದ್ದೇನೆ.
ಘಾಟ್ ರಸ್ತೆಯನ್ನು 6 ತಿಂಗಳು ಬಂದ್ ಮಾಡಲು ಸಹಮತವಿಲ್ಲ. ಈ ರೀತಿ ಮಾಡಿ ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಜನರನ್ನು ಬೇರ್ಪಡಿಸುವ ಪ್ರಯತ್ನ ನಡೆಸುತ್ತಿದ್ದಾರಾ? ಎಂದು ಸಂಶಯ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆ ಹಾಗು ಬಂಟ್ವಾಳ ಪುರಸಭೆಗೆ ಚುನಾವಣೆ ನಡೆಯುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ. ಹೆಚ್ಚಿನ ಕಡೆಯಲ್ಲಿ ಗೆಲುವು ಸಾಧಿಸಿ ಮೂರು ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸದಾನಂದ ಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.
Leave A Reply