ಶಿರಾಡಿ ಘಾಟ್ ಸಂಚಾರ ನಿಷೇಧವಿದ್ದರೂ ಹಣ ಪಡೆದು ಲಾರಿ ಬಿಡುತ್ತಿರುವ ಪೊಲೀಸರು!
ಹಾಸನ: ಅನಿರ್ಧಿಷ್ಟಾವಧಿಗೆ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧವಿದ್ದರೂ, ಪೊಲೀಸರು ಹಣ ಪಡೆದು ಲಾರಿಗಳನ್ನು ಬಿಡುತ್ತಿದ್ದಾರೆ. ಇನ್ನು ಇದನ್ನು ಪ್ರಶ್ನಿಸಲು ಹೋದ ಪಂಜಾಬ್ ಚಾಲಕನ ಮೇಲೆಯೇ ಪೊಲೀಸರು ದರ್ಪ ಮೆರೆದಿದ್ದಾರೆ.
ಸಕಲೇಶಪುರದ ಗುಂಡ್ಯ ಚೆಕ್‍ಪೋಸ್ಟ್ ಬಳಿ ಶಿರಾಡಿ ಘಾಟ್ ಮೂಲಕ 12 ಚಕ್ರದ ಲಾರಿಗಳ ಸಂಚಾರಕ್ಕೆ ಪೊಲೀಸರು ಬಿಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪಂಜಾಬ್ ಮೂಲದ ಲಾರಿ ಚಾಲಕ, ಪೊಲೀಸರು 500 ರೂ. ಪಡೆದ ನಿಷೇಧ ಇದ್ದರೂ ವಾಹನ ಬಿಡುತ್ತಿದ್ದಾರೆ. ನಾವು ಕಳೆದ ಹತ್ತು ದಿನಗಳಿಂದ ಇಲ್ಲಿ ಕಾದು ಕುಳಿತರೂ ಸಂಚಾರಕ್ಕೆ ಬಿಟ್ಟಿಲ್ಲ. ಆದರೆ ಈಗ ಹಣ ಪಡೆದು ಪೊಲೀಸರು ಬಿಡುತ್ತಿದ್ದಾರೆ ಎಂದು ಆರೋಪಿಸುತ್ತಾ ಮೊಬೈಲ್‍ನಲ್ಲಿ ವಿಡಿಯೋ ಮಾಡುತ್ತಿದ್ದರು.
ಪೊಲೀಸರು ಚಾಲಕನಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದು. ಆದರೆ ಆತ ಮೊಬೈಲ್ ನೀಡದೆ, ನಾನು ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆ ಎಂದು ಹೇಳಿದರು. ಆದರೆ ಯಾವುದಕ್ಕೂ ಕ್ಯಾರೆ ಅನ್ನದ ಪೊಲೀಸರು, ಜಿಲ್ಲಾಧಿಕಾರಿ ಅಲ್ಲ ನಿಮ್ಮಪ್ಪಗೂ ಹೇಳು ಎಂದು ಅವಾಚ್ಯ ಪದಗಳಿಂದ ಬೈದಿದ್ದಾರೆ.
Leave A Reply