ನಟೋರಿಯಸ್ ಕೈದಿಯನ್ನು ಪೊಲೀಸರೇ ರಸ್ತೆ ಮಧ್ಯೆ ಮನೆಯವರನ್ನು ಭೇಟಿ ಮಾಡಿಸಿದ್ಯಾಕೆ?
ಮಂಗಳೂರು: ಜೈಲಿನಲ್ಲಿರುವ ಕೈದಿಗಳನ್ನು ಭೇಟಿಯಾಗಲು ಕಾರಾಗೃಹದ ಎದುರು ಕುಟುಂಬಸ್ಥರು ದಿನವಿಡೀ ಕಷ್ಟಪಡುತ್ತಾರೆ. ಆದರೆ ನಟೋರಿಯಸ್ ಕೈದಿಯೊಬ್ಬನನ್ನು ಪೊಲೀಸರೇ ರಸ್ತೆ ಮಧ್ಯೆ ಕುಟುಂಬಸ್ಥರಿಗೆ ಭೇಟಿ ಮಾಡಿಸಿ ಕಾನೂನು ಉಲ್ಲಂಘಿಸಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಫರಂಗಿಪೇಟೆಯ ಡಬಲ್ ಮರ್ಡರ್ ಪ್ರಕರಣದ ಪ್ರಮುಖ ಆರೋಪಿ ನಟೋರಿಯಸ್ ರೌಡಿ ನೌಫಾಲ್ ಯಾನೆ ಡೀಲ್ ನೌಫಾಲ್ ನನ್ನು ಪ್ರಕರಣ ಒಂದಕ್ಕೆ ಸಂಬಂಧಿಸಿ ತುಮಕೂರು ಪೊಲೀಸರು ಮಂಗಳೂರು ಜೈಲಿನಿಂದ ಕರೆದೊಯ್ದಿದ್ದರು.
ತುಮಕೂರಿನ ಕೋರ್ಟಿಗೆ ಹಾಜರುಪಡಿಸಿ, ಮಂಗಳೂರಿಗೆ ಹಿಂತಿರುಗುತ್ತಿದ್ದಾಗ ದಾರಿ ಮಧ್ಯೆ ತುಮಕೂರು ಪೊಲೀಸ್ ವಾಹನ ನಿಲ್ಲಿಸಿ ನೌಫಾಲ್ ಕುಟುಂಬಸ್ಥರ ಭೇಟಿಗೆ ಅವಕಾಶ ಮಾಡಿದ್ದಾರೆ. ಮಂಗಳೂರಿನ ಕದ್ರಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಘಟನೆ ನಡೆದಿದ್ದು, ನೌಫಾಲ್ ಪತ್ನಿ, ಮಗು ಸೇರಿ ಕುಟುಂಬಸ್ಥರು ಪೊಲೀಸ್ ವಾಹನದಲ್ಲಿಯೇ ಭೇಟಿ ಮಾಡಿದ್ದಾರೆ. ಪೊಲೀಸರು ಜೊತೆಗಿದ್ದರೂ, ವಿಚಾರಣಾಧೀನ ಕೈದಿಯನ್ನು ರಸ್ತೆ ಮಧ್ಯೆ ನಿಲ್ಲಿಸಿ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಿದ್ದು ಹೇಗೆ ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಇಂಥ ಸಂದರ್ಭದಲ್ಲಿ ಕೈದಿ ತಪ್ಪಿಸಿಕೊಳ್ಳುವ ಅಥವಾ ಅಪಹರಣಕ್ಕೆ ಒಳಗಾಗುವ ಸಾಧ್ಯತೆಗಳೂ ಇರುತ್ತವೆ.
ಆದರೆ, ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಪೊಲೀಸರು ಕೈದಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಕುಟುಂಬಸ್ಥರನ್ನು ಭೇಟಿ ಮಾಡಿಸಿದ್ದು ಕರ್ತವ್ಯ ಲೋಪಕ್ಕೆ ನಿದರ್ಶನ ಎಂದು ಅರೋಪಿಸಲಾಗಿದೆ. ಪೊಲೀಸರು ಎಸಗಿರುವ ಈ ಲೋಪ ಪ್ರಕರಣ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Leave A Reply