ಇಚ್ಚಲ್ಲಂಪಾಡಿಯಲ್ಲಿ ರೇಬಿಸ್ ಹರಡುವ ಆತಂಕ, ಚುಚ್ಚು ಮದ್ದು ಹಾಕಿಸಿಕೊಳ್ಳಲು ಮುಗಿಬಿದ್ದ ಜನ
ಮಂಗಳೂರು: ರೇಬಿಸ್ ರೋಗ ಹರಡುವ ಭಯದಿಂದ ಊರಿಗೆ ಊರೆ ಆಂಟಿ ರೇಬಿಸ್ ಚುಚ್ಚು ಮದ್ದು ಪಡೆಯಲು ಮುಗಿಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಹೌದು, ರೇಬಿಸ್ ವೈರಾಣುವಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಇಡೀ ಊರಿನ ಜನ ಆಂಟಿ ರೇಬಿಸ್ ಚುಚ್ಚುಮದ್ದು ಪಡೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣಗೊಂಡಿರುವ ಪ್ರಸಂಗ ಪುತ್ತೂರು ತಾಲೂಕಿನ ಇಚ್ಚಲ್ಲಂಪಾಡಿ ಎಂಬಲ್ಲಿ ಬೆಳಕಿಗೆ ಬಂದಿದೆ.
ಆಶಿತ್ ಎನ್ನುವ ಯುವಕ ಆಗಸ್ಟ್ 22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಆತನ ಮೃತದೇಹವನ್ನು ಮನೆಯವರಿಗೆ ನೀಡುವ ಸಂದರ್ಭದಲ್ಲಿ ಸಾವು ರೇಬಿಸ್ ವೈರಾಣುವಿನಿಂದ ಸಂಭವಿಸಿದೆ ಎನ್ನುವ ಕಾರಣ ನೀಡಿದ್ದರು.ಪ್ಲಾಸಿಟ್ ಪ್ಯಾಕ್ ಮಾಡಿದ ಮೃತದೇಹವನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎನ್ನುವ ಸೂಚನೆಯನ್ನೂ ನೀಡಿದ್ದರು. ಆದರೆ ಮನೆ ಮಂದಿ ಅದನ್ನು ನಿರ್ಲಕ್ಷಿಸಿ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಪ್ಯಾಕ್ ಮಾಡಿದ್ದ ಮೃತದೇಹವನ್ನು ಬಿಚ್ಚಲಾಗಿದ್ದು, ಮೃತದೇಹದಿಂದ ರಕ್ತ ಸೇರಿದಂತೆ ದ್ರವ ರೂಪದ ವಸ್ತು ಮನೆ ಹಾಗು ಅಂಗಳದಲ್ಲಿ ಚೆಲ್ಲಿತ್ತು. ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಮೃತ ಯುವಕನ ಸಂಬಂಧಿಕರು ಹಾಗೂ ಊರವರು ಭಾಗಿಯಾಗಿದ್ದರು.
ಸಾವು ರೇಬೀಸ್ ರೋಗದಿಂದ ಸಂಭವಿಸಿದೆ ಎನ್ನುವ ವಿಚಾರವೀಗ ಊರವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇದೀಗ ಊರಿಗೆ ಊರೇ ಬೆಚ್ಚಿ ಬಿದ್ದಿದೆ. ರೇಬಿಸ್ ರೋಗ ಹರಡುವ ಆತಂಕ ಊರಲ್ಲೆಲ್ಲಾ ಹಬ್ಬಿದೆ. ಇದೀಗ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ 67 ಮಂದಿ ನೆಲ್ಯಾಡಿ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಆಂಟಿ ರೇಬೀಸ್ ಚುಚ್ಚುಮದ್ದನ್ನು ಪಡೆದಿದ್ದಾರೆ. ಇನ್ನು ಕೆಲವು ಮಂದಿ ಖಾಸಗಿ ಚಿಕಿತ್ಸಾಲಯದಲ್ಲೂ ಇಂಜೆಕ್ಷನ್ ಪಡೆದಿದ್ದಾರೆ ಎನ್ನಲಾಗಿದೆ.
ಅಂತ್ಯಸಂಸ್ಕಾರದ ವೇಳೆ ಮೃತದೇಹದಿಂದ ರಕ್ತ ಹಾಗೂ ಎಂಜಲು ಚೆಲ್ಲಿದ್ದಲ್ಲಿ ಇದರಿಂದ ರೇಬೀಸ್ ವೈರಾಣು ಹರಡುವ ಸಾಧ್ಯತೆಯಿದೆ ಎನ್ನುವ ಅಭಿಪ್ರಾಯವನ್ನು ನೆಲ್ಯಾಡಿ ಸರಕಾರಿ ಆರೋಗ್ಯ ಕೇಂದ್ರದ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಚುಚ್ಚುಮದ್ದಿಗಾಗಿ ಸರಕಾರಿ ಆಸ್ಪತ್ರೆಗೆ ಬರುವ ಬಿಪಿಎಲ್ ಕುಟುಂಬಗಳಿಂದಲೂ 100 ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.
Leave A Reply