ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಮೊಸರು ಕುಡಿಕೆ ಉತ್ಸವ
ಮಂಗಳೂರು: ಮಹಾರಾಷ್ಟ್ರದಲ್ಲಿ ದಹಿಹಾಂಡಿ (ಮೊಸರಿನ ಮಡಿಕೆ ಒಡೆಯುವ) ಗೋವಿಂದರ ಟೋಲಿ ಬಹಳ ಪ್ರಸಿದ್ಧ. ದಹಿಹಾಂಡಿ ಒಡೆಯುವ ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದಿಂದ ಪ್ರವಾಸಿಗರು ಮುಂಬೈನ ಗಲ್ಲಿ ಗಲ್ಲಿಗಳಿಂದ ಬರುತ್ತಾರೆ. ಮಹಾರಾಷ್ಟ್ರದಲ್ಲಿ ಆಯೋಜಿಸಲಾಗುವ ದಹಿಹಾಂಡಿ ಒಡೆಯುವ ಉತ್ಸವದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ‘ಮೊಸರು ಕುಡಿಕೆ’ ಉತ್ಸವ ಆಯೋಜಿಲಾಗುತ್ತದೆ. ಮಂಗಳೂರಿನಲ್ಲಿ ನಡೆಯುವ ಈ ಮೊಸರು ಕುಡಿಕೆ ಉತ್ಸವವನ್ನು ನೋಡುವುದೇ ಕಣ್ಣಿಗೆ ಹಬ್ಬ. ನಗರದಾದ್ಯಂತ ಸೋಮವಾರ ಮೊಸರು ಕುಡಿಕೆ ಉತ್ಸವ ಅತ್ಯಂತ ಶ್ರದ್ಧೆ, ಭಕ್ತಿ, ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
109ನೇ ವರ್ಷದ ಮೊಸರು ಕುಡಿಕೆ ಉತ್ಸವ ಮೊಸರು ಕುಡಿಕೆ ಕಟ್ಟೆಯಲ್ಲಿ ಜರುಗಿದ್ದು, ಮೊಸರು, ನೀರು, ಹಾಲು, ನಾನಾ ವಸ್ತುಗಳನ್ನು ಎತ್ತರದ ಕಮಾನುಗಳಲ್ಲಿ ಕಟ್ಟಲಾದ ಮಣ್ಣಿನ ಮಡಕೆಯಲ್ಲಿ ಹಾಕಿ ಇಡಲಾಗುತ್ತದೆ. ಆ ನಂತರ ಗೋವಿಂದಾ… ಹಾಡಿನೊಂಡಿಗೆ ಬರುವ ಸಾಹಸಿ ಯುವಕರ ತಂಡ ಇದನ್ನು ಒಡೆದುಕೊಂಡು ಬರುವ ದೃಶ್ಯ ನೋಡುವುದೇ ಮನಮೋಹಕ. ಸಂಜೆ ನಗರದ ಹಲವಾರು ವೃತ್ತಗಳಲ್ಲಿ ವೈಭವಪೂರ್ಣ ದೃಶ್ಯಾವಳಿ, ಕಲಾ ರೂಪಕಗಳು, ನಾನಾ ಸಂಘ ಸಂಸ್ಥೆಗಳ ಟ್ಯಾಬ್ಲೋಗಗಳಿಂದ ಕೂಡಿದ ಶ್ರೀಕೃಷ್ಣ ಪರಮಾತ್ಮನ ಶೋಭಾಯಾತ್ರೆ ನಡೆಯಿತು.
ನಗರದ ಅತ್ತಾವರ , ಕದ್ರಿ, ಮಣ್ಣಗುಡ್ಡ, ಉರ್ವಾ, ಕಾವೂರು ಸೇರದಂತೆ ಇತರೆಡೆ ಮೊಸರು ಕುಡಿಕೆ ಕಟ್ಟೆಯಲ್ಲಿ ಪ್ರದರ್ಶನ ಹಾಗೂ ಗೌರವಾರ್ಪಣೆಗಳೊಂದಿಗೆ ಸಮಾಪನಗೊಂಡಿತು. ನಗರದಲ್ಲಿ ವೈಭವ ಪೂರ್ಣ ಮೊಸರು ಕುಡಿಕೆ ಮೆರವಣಿಗೆ, ಕೊಟ್ಟಾರ, ಉರ್ವಸ್ಟೋರ್ ಮಾರ್ಗವಾಗಿ ಅಶೋಕನಗರದವರೆಗೆ ನಡೆಯಿತು. ದಾರಿ ನಡುವೆ ಭಕ್ತಿ ಸಂಗೀತ ಸಂಜೆ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವ ಸಾಂಪ್ರದಾಯಿಕವಾಗಿ ನಡೆಯಿತು.
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವತಿಯಿಂದ ಮೊಸರು ಕುಡಿಕೆ ಉತ್ಸವ ಆಯೋಜಿಸಲಾಗಿತ್ತು. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಿಂದ ಭವ್ಯಾಲಂಕೃತವಾದ ಮಂಟಪದಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ನಾನಾ ವೇಷ ಭೂಷಣಗಳಿಂದೊಡಗೂಡಿದ ವಿದ್ಯುದ್ದೀಪಾಲಂಕೃತವಾದ ಟ್ಯಾಬ್ಲೋಗಳೊಂದಿಗೆ ಮೊಸರು ಕುಡಿಕೆಯ ವೈಭವದ ಮೆರವಣಿಗೆ ಕಾವೂರು ಕೇಂದ್ರ ಮೊಸರು ಕುಡಿಕೆ ಮೈದಾನಕ್ಕೆ ಆಗಮಿಸಿತು.
Leave A Reply