ಇಡೀ ಭಾರತದಲ್ಲೇ ಬಹಳ ಖ್ಯಾತಿ ಪಡೆದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭುಗಿಲೆದ್ದ ವಿವಾದ?
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಕರ್ನಾಟಕಕ್ಕೆ ಅಷ್ಟೇ ಅಲ್ಲ, ಇಡೀ ಭಾರತದಲ್ಲೇ ಬಹಳ ಖ್ಯಾತಿ ಪಡೆದ ಹಾಗೂ ಜನರು ನಂಬಿಕೆಯಿಂದ ನಡೆದುಕೊಳ್ಳುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ, ಸರ್ಪ ಸಂಸ್ಕಾರ ಹಾಗೂ ಕಾಳಸರ್ಪ ದೋಷ ನಿವಾರಣೆ, ರಾಹು-ಕೇತು ದೋಷ ನಿವಾರಣೆ ಸೇರಿದಂತೆ ವಿವಿಧ ದೋಷಗಳಿಗಾಗಿ ಪೂಜೆ ಮಾಡಲಾಗುತ್ತದೆ. ಕುಮಾರಾದ್ರಿ ಅಥವಾ ಕುಕ್ಕೆ ಸುಬ್ರಹ್ಮಣ್ಯ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಾಗುತ್ತಿದೆ.
ಸುಬ್ರಹ್ಮಣ್ಯ ದೇವಾಲಯ ಹಾಗೂ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಮಧ್ಯದ ವಿವಾದ ಚರ್ಚೆಗೆ ಗ್ರಾಸವಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಮಠ ಇಂದು ಆಸ್ತಿಕ ವರ್ಗದ ಮನಸ್ಸಿನಲ್ಲಿ ಹಲವಾರು ಗೊಂದಲಗಳನ್ನು ಹುಟ್ಟುಹಾಕಿದೆ.
ದೇಶದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಸುಬ್ರಹ್ಮಣ್ಯ ಮಠಕ್ಕೆ ಒಪ್ಪಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಇನ್ನೊಂದೆಡೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ರಾಜ್ಯ ಸರಕಾರ ಸುಪರ್ದಿಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪುರಾತನ ದಾಖಲೆಗಳ ಪ್ರಕಾರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಸೇರಬೇಕು ಎಂಬ ಕೂಗು ಕೇಳಿಬರುತ್ತಿದೆ.
ದೇವಾಲಯವನ್ನು ಮಠಕ್ಕೆ ವಹಿಸಬೇಕು ಎಂಬ ವಾದ ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿ ಅವರೊಂದಿಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿ, ದಾಖಲೆಯನ್ನು ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ. ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಪರವಾಗಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಖಾಡಕ್ಕಿಳಿದು ದೇವಾಲಯವನ್ನು ಈ ಕೂಡಲೇ ಮಠಕ್ಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಆದರೆ ಇತ್ತೀಚೆಗೆ ದೇವಸ್ಥಾನದ ಆಡಳಿತ ಮಂಡಳಿಯ ಕೆಲವರು ಪತ್ರಿಕಾ ಹೇಳಿಕೆ ನೀಡಿದ್ದು, ದೇವಸ್ಥಾನದ ರಶೀದಿ ಪಡೆಯದೆ, ದೇವಸ್ಥಾನದ ವತಿಯಿಂದ ನಡೆಸದ, ಇತರ ಖಾಸಗಿ ಮಠ ಮಂದಿರಗಳಲ್ಲಿ ಅಥವಾ ನದೀ ತೀರದಲ್ಲಿ ನಡೆಸುವ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ, ಸುಬ್ರಹ್ಮಣ್ಯ ದೇವರಿಗೆ ಸಲ್ಲುವುದಿಲ್ಲ. ಭಕ್ತರು ಇಂತಹವರನ್ನು ಆಶ್ರಯಿಸಿ ಮೋಸ ಹೋಗಬಾರದು ಎಂದು ಹೇಳಿ, ಭಾರೀ ವಿವಾದ ಸೃಷ್ಟಿಸಿದ್ದಾರೆ.
Leave A Reply