ಚಿಂತಕರ ಮೇಲೆ ಸುಮೋಟೋ ಕೇಸ್ ದಾಖಲಿಸಿ: ಮುತಾಲಿಕ್

ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿ ವರ್ಷ ಕಳೆದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ “ನಾನು ನಗರದ ನಕ್ಸಲೇಟ್ ಎಂದು ಸಾಹಿತಿ ಗಿರೀಶ್ ಕಾರ್ನಾಡ್ ಬೋರ್ಡ್ ಹಾಕಿಕೊಂಡಿದ್ದು ಕಾನೂನು ಬಾಹಿರ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು.ಇಂದು ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಗತಿಪರರು ಬ್ಯಾನ್ ಆರ್ಗನೈಜೇಶನ್ ಪರವಾಗಿ ನಿಂತಿರುವುದು ದೊಡ್ಡ ಅಪರಾಧ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹಕ್ಕಾಗಿ ವಿಶೇಷ ಪಡೆಯಿದೆ.
ಯಾರು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಾರೋ ಅವರನ್ನು ಹತ್ತಿಕ್ಕಲು ಸರ್ಕಾರವೇ ರಚಿಸಿದ ತಂಡವಿದೆ. ಆದರೂ ನಾನೂ ನಕ್ಸಲ್ ಎಂದು ಬೋರ್ಡ್ ಹಾಕಿಕೊಂಡು ಕಾರ್ಯಕ್ರಮ ನಡೆಸಿದವರು ಅಪರಾಧಿಗಳು. ಸಾಹಿತಿ ಗಿರೀಶ್ ಕಾರ್ನಾಡ್, ಪ್ರಕಾಶ್ ರೈ, ರೆಹಮತ್ ತರೀಕೆರೆ ಮೊದಲಾದವರು ಕಾರ್ಯಕ್ರಮ ನಡೆಸಿದ್ದು, ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿದ ಸಾಹಿತಿ, ಚಿಂತಕರುಗಳ ಮೇಲೆ ಸರ್ಕಾರ ಸುಮೋಟೋ ಕೇಸ್ ದಾಖಲಿಸಲಿ ಎಂದು ಆಗ್ರಹಿಸಿದರು. ನಗರ ನಕ್ಸಲ್ ಎನ್ನುವುದರ ಅರ್ಥ ಇವರು ಕಾಡಿನಲ್ಲಿರುವವರಿಗೆ ಸಹಕಾರ ನೀಡುತ್ತಿದ್ದಾರಾ? ಎಂಬ ಸಂಶಯ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಹೈದರಾಬಾದ್ ಸ್ಫೋಟ ಪ್ರಕರಣ ಆರೋಪಿಗಳಿಗೆ ಹೈದರಾಬಾದ್ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಆ ಆರೋಪಿಗಳು ಚಿಕ್ಕಮಗಳೂರಲ್ಲಿ ತರಬೇತಿ ಪಡೆದು ಸಹಕಾರ ಪಡೆದಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಕಾಫಿನಾಡು ಬಾಂಗ್ಲಾ ವಲಸಿಗರು ಸೇರಿದಂತೆ ಭಯೋತ್ಪಾದಕರ ಸೆಂಟರ್ ಆಗುವ ಭಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
Leave A Reply