ದೇಶ ದ್ರೋಹಿಗಳ ಮಹಾತಾಯಿ ಗೌರಿ ಲಂಕೇಶ್: ಚೈತ್ರಾ ಕುಂದಾಪುರ ವಿವಾದಾತ್ಮಕ ಹೇಳಿಕೆ
ಮಂಗಳೂರು: ಕರಾವಳಿಯ ಹಿಂದೂ ಫೈರ್ ಬ್ರಾಂಡ್ ಎಂದೇ ಗುರುತಿಸಿಕೊಂಡಿರುವ ಚೈತ್ರ ಕುಂದಾಪುರ ಗೌರಿ ಲಂಕೇಶ್ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ಭಾರೀ ಚರ್ಚೆಗೆ ಗುರಿಯಾಗಿದೆ. ಮಂಗಳೂರಲ್ಲಿ ಬುಧವಾರ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಚೈತ್ರಾ ಕುಂದಾಪುರ ಗೌರಿ ಲಂಕೇಶ್ ದೇಶದ್ರೋಹಿಗಳ ಮಹಾತಾಯಿ ಎಂದು ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಿಂದೂ ಸನಾತನ ಸಂಸ್ಥೆಯನ್ನು ನಿಷೇಧಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿ ಮಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚೈತ್ರಾ ಕುಂದಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತು ಮಾತನಾಡಿದ ಅವರು, ಸತ್ತ ಮೇಲೆ ಯಾವ ರೀತಿ ವ್ಯಕ್ತಿಯನ್ನು ಹೀರೋ ಮಾಡುತ್ತಾರೆ ಎನ್ನುವುದಕ್ಕೆ ಗೌರಿ ಲಂಕೇಶ್ ಸಾವೇ ಉತ್ತಮ ಉದಾಹರಣೆ. ಗೌರಿ ಲಂಕೇಶ್ ಸತ್ತಾಗ ಕರ್ನಾಟಕದ ಒಬ್ಬ ಪತ್ರಕರ್ತ ಬರೆದಿದ್ದಾನೆ.
ಗೌರಿ ಲಂಕೇಶ್ ಗುಂಡೇಟಿನಿಂದ ಸಾಯುವ ಬದಲು ಗುಂಡು ಹಾಕಿ ಸತ್ತಿದ್ದರೆ ಸಿಂಗಲ್ ಕಾಲಂ ನ್ಯೂಸ್ ಆಗುತ್ತಿತ್ತು. ಆದರೆ ಗುಂಡೇಟಿನಿಂದ ಸತ್ತಿದ್ದೇ ಪ್ರಮುಖ ಸುದ್ದಿಯಾಗಿದೆ ಎಂದು ಬರೆದಿದ್ದ ಎಂದು ವ್ಯಂಗ್ಯವಾಡಿದರು. ದೆಹಲಿಯ ಜೆ ಎನ್ ಯುದಲ್ಲಿ ಭಾರತವನ್ನು ವಿಭಜಿಸುವ, ಪಾಕಿಸ್ತಾನಕ್ಕೆ ಜೈಕಾರ ಹಾಕಿ ಕಾಶ್ಮೀರವನ್ನು ಗುಂಡಿನ ಬಲದಲ್ಲಿ ವಶಪಡಿಸಿಕೊಳ್ಳುವ ಘೋಷಣೆ ಕೂಗಿದ್ದ ಕನ್ಹಯ್ಯಾ ಕುಮಾರ್ ಹಾಗೂ ಉಮ್ಮರ್ ಖಾಲಿದ್ ನಂತಹ ದೇಶ ದ್ರೋಹಿಗಳ ಮಹಾತಾಯಿ ಗೌರಿ ಲಂಕೇಶ್.
ಪ್ರಗತಿಪರರು ಹೆಣ ಬಿದ್ದರೂ ಕೂಡ ಸ್ವಾರ್ಥಪ್ರೇರಿತವಾದ ದುರುದ್ದೇಶದಿಂದ ರಸ್ತೆಗಿಳಿದು ಪ್ರತಿಭಟಿಸುತ್ತಾರೆ. ಅಷ್ಟೇ ಅಲ್ಲ ತನಿಖಾ ವ್ಯವಸ್ಥೆಯ ಮೇಲೆ ಒತ್ತಡ ನಿರ್ಮಾಣ ಮಾಡಿ ತನಿಖೆಯ ದಿಕ್ಕನ್ನು ಬದಲಾಯಿಸುತ್ತಿದ್ದಾರೆ. ಆದರೆ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಇದೇ ಪ್ರಗತಿಪರರು ಧ್ವನಿ ಎತ್ತುವುದಿಲ್ಲ ಎಂದು ಆರೋಪಿಸಿದರು. ದಿಲ್ಲಿಯ ಜೆಎನ್ ಯು ಸಂಸ್ಥೆ ಭಯೋತ್ಪಾದಕರನ್ನು ಹುಟ್ಟು ಹಾಕುತ್ತಿದೆ. ಅಲ್ಲಿ ವ್ಯಾಸಂಗ ಮಾಡಿ ಹೊರ ಬರುವ ವಿದ್ಯಾರ್ಥಿಗಳು ಭಯೋತ್ಪಾದಕರು. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರನ್ನು ಈ ವಿದ್ಯಾಸಂಸ್ಥೆ ತಯಾರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಚೈತ್ರಾ ಕುಂದಾಪುರ ಅವರ ಈ ಹೇಳಿಕೆ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೌರಿ ಲಂಕೇಶ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ಚೈತ್ರಾ ವಿರುದ್ಧ ಗೌರಿ ಲಂಕೇಶ್ ಅಭಿಮಾನಿಗಳು ಕೆಂಡಕಾರಿದ್ದು, ಚೈತ್ರ ಕುಂದಾಪುರ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Leave A Reply