ಊಟವಿಲ್ಲದೆ ಪರದಾಡಿದ ಜನರಿಗೆ ಆಹಾರ ವಿತರಿಸಿದ ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಮಂಗಳೂರಿನಲ್ಲಿ ಪರಿಣಾಮ ಬೀರಿದೆ. ಮುಂಜಾನೆಯಿಂದಲೇ ಖಾಸಗಿ ಹಾಗೂ ಸರಕಾರಿ ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಜನರು ಪರದಾಡುವಂತಾಗಿತ್ತು. ನಗರದಲ್ಲಿ ಹೆಚ್ಚಿನ ಹೋಟೆಲ್ ಬಂದ್ ಆಗಿರುವ ಕಾರಣ ಪರವೂರುಗಳಿಂದ ಮಂಗಳೂರಿಗೆ ಬಂದ ಪ್ರಯಾಣಿಕರಿಗೆ ಸಮಸ್ಯೆಯುಂಟಾಯಿತು. ಬಸ್ ಸಂಚಾರ ಸ್ಥಗಿತಗೊಂಡ ಕಾರಣ ನಗರದಾದ್ಯಂತ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಯಿತು.
ನಗರದ ಲಾಲ್ ಬಾಗ್ ಪ್ರದೇಶದಲ್ಲಿ ಅಂಗಡಿ ಮುಂಗಟ್ಟು, ಹೋಟೆಲ್ ಇಲ್ಲದ ಕಾರಣ ಜನರು ಆಹಾರ ಪದಾರ್ಥಗಳಿಗಾಗಿ ಸಮಸ್ಯೆ ಎದುರಿಸಿದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದ ಜನರಿಗಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ್ ಕಾಮತ್ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಮಾಡಿದರು.
ಶಾಸಕರ ಈ ಕಾರ್ಯದ ಬಗ್ಗೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಹೌದು, ಆಹಾರ ಸಮಸ್ಯೆ ಎದುರಿಸಿದ ಜನರಿಗಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸುಮಾರು ಒಂದೂವರೆ ಸಾವಿರ ಜನರಿಗಾಗುವಷ್ಟು ಪುಲಾವ್ ಮತ್ತು ನೀರಿನ ಬಾಟಲುಗಳನ್ನು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಹಂಪನಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳ ಸಹಿತ ವಿವಿಧೆಡೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ ವೇದವ್ಯಾಸ ಕಾಮತ್, ಹಲವು ಕಡೆ ಹೋಟೆಲ್ ಗಳನ್ನು ಬಲವಂತವಾಗಿ ಕಾಂಗ್ರೆಸ್ಸಿಗರು ಬಂದ್ ಮಾಡಿದ್ದಾರೆ. ಕಲ್ಲು ತೂರಿದ್ದಾರೆ. ಇದರಿಂದ ಜನರಿಗೆ ಮಧ್ಯಾಹ್ನದ ಊಟಕ್ಕೂ ತೊಂದರೆಯಾಗಿದೆ. ತೊಂದರೆಗೆ ಒಳಗಾದ ಜನರಿಗೆ ಆಹಾರ ಮತ್ತು ಶುದ್ಧ ನೀರನ್ನು ಒದಗಿಸಿರುವುದಾಗಿ ಅವರು ತಿಳಿಸಿದರು.
Leave A Reply