ಮಂಗಳೂರು-ಮೈಸೂರು ಸಂಪರ್ಕಿಸುವ ಸಂಪಾಜೆ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರ ಆರಂಭ!
ಮಂಗಳೂರು : ಮಂಗಳೂರು-ಮೈಸೂರು ಸಂಪರ್ಕಿಸುವ ಸಂಪಾಜೆ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರವನ್ನು ಆರಂಭಿಸಲಾಗಿದೆ. ಭೂ ಕುಸಿತದಿಂದಾಗಿ ಕಳೆದ ಒಂದು ತಿಂಗಳಿನಿಂದ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆಗಸ್ಟ್ 16 ಮತ್ತು 17ರಂದು ಸಂಭವಿಸಿದ ಭೂ ಕುಸಿತದಿಂದಾಗಿ ಸಂಪಾಜೆ ಘಾಟ್ ರಸ್ತೆಯಲ್ಲಿ 25ಕ್ಕೂ ಹೆಚ್ಚು ಕಡೆ ಭೂ ಕುಸಿತ ಉಂಟಾಗಿತ್ತು. ಆದ್ದರಿಂದ, ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾಡಳಿ ರಸ್ತೆ ದುರಸ್ಥಿ ಕಾರ್ಯವನ್ನು ಆರಂಭಿಸಿದ್ದವು. ಮಂಗಳೂರು-ಮೈಸೂರು ಸಂಪರ್ಕಿಸುವ ಸಂಪಾಜೆ ಘಾಟ್ ರಸ್ತೆ ಮರು ನಿರ್ಮಾಣಕ್ಕೆ ತಿಂಗಳುಗಳೇ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಜೋಡುಪಾಲದ ಬಳಿ ಜಲಸ್ಪೋಟಕ್ಕೆ ಕೊಚ್ಚಿಹೋಗಿದ್ದ ರಸ್ತೆ ಮರು ನಿರ್ಮಾಣಕ್ಕೆ ಸುಮಾರು 2 ರಿಂದ 3 ತಿಂಗಳು ಹಿಡಿಯಬಹುದೆಂದು ಹೇಳಲಾಗಿತ್ತು. ರಸ್ತೆ ದುರಸ್ತಿ ಕಾಮಗಾರಿ ಶೀಘ್ರವಾಗಿ ಪೂರ್ಣಗೊಂಡ ಕಾರಣ ಲಘು ವಾಹನಗಳಿಗೆ ಸಂಪಾಜೆ ಘಾಟ್ ರಸ್ತೆಯಲ್ಲಿ ಸಂಚಾರ ನಡೆಸಲು ಅನುಮತಿ ನೀಡಲಾಗಿದೆ. ಒಂದು ತಿಂಗಳೊಳಗೆ ಎಲ್ಲಾ ರೀತಿಯ ವಾಹನಗಳಿಗೆ ಸಂಪಾಜೆ ಘಾಟ್ ಮೂಲಕ ಮಡಿಕೇರಿ ಪ್ರಯಾಣ ಸಾಧ್ಯವಾಗಲಿದೆ.
Leave A Reply