ಉಬರ್ ಚಾಲಕ ಬಾಗಲಕೋಟೆಯವನು, ನಂಬಿದ್ದು ಗೂಗಲ್ ಮ್ಯಾಪ್!
ಮೊನ್ನೆ ಅಂದರೆ ಜುಲೈ 23 ತಾರೀಕಿಗೆ ಭಾನುವಾರ ಭಗವತಿ ನಗರ ( ಎಂಪಾಯರ್ ಮಾಲ್ ಹಿಂದೆ)ದ ಓರ್ವ ದಂಪತಿಯವರು ಉಬರ್ ಟಾಕ್ಸಿಯಲ್ಲಿ ಪ್ರಯಾಣಿಸಿದ ನಂತರ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಅದನ್ನು ಯಥಾವತ್ತಾಗಿ ನಿಮ್ಮ ಮುಂದೆ ಇಡುತ್ತಿದ್ದೇವೆ. ” ನಮಗೆ ಆವತ್ತು ಕೊಲ್ಲೂರು ದೇವಸ್ಥಾನಕ್ಕೆ ಹೋಗಲಿತ್ತು. ಬೆಳಿಗ್ಗೆ 8.15ರ ಮಂಗಳೂರು-ಮಡಗಾಂ ಇಂಟರ್ ಸಿಟಿ ಏಕ್ಸಪ್ರೆಸ್ ರೈಲಿನಲ್ಲಿ ಹೋಗುವ ಪ್ಲಾನ್ ಹಾಕಿದ್ದೆವು. ಬೆಳಿಗ್ಗೆ ಉಬರ್ ನಲ್ಲಿ ಟ್ಯಾಕ್ಸಿ ಬುಕ್ ಮಾಡೋಣ ಎಂದು ನಿಶ್ಚಯಿಸಿದೆವು. 7.30 ರ ಸುಮಾರಿಗೆ ಹತ್ತಿರದಲ್ಲಿ ಟ್ಯಾಕ್ಸಿ ಇದೆಯಾ ಎಂದು ಉಬರ್ ನಲ್ಲಿ ಪರೀಕ್ಷಿಸಿದಾಗ ಐದು ನಿಮಿಷದಲ್ಲಿ ಒಂದು ಕಾರು ಬರುತ್ತದೆ ಎಂದು ಗೊತ್ತಾಯಿತು. ಮನೆಯಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ 35 ರೂಪಾಯಿ ಎಂದು ಅದು ತೋರಿಸುತ್ತಿತ್ತು. ನಾವು ಬುಕ್ ಮಾಡಿದ ತಕ್ಷಣ ಐದು ನಿಮಿಷದೊಳಗೆ ಕಾರು ಬರುವುದಕ್ಕೂ ನಾವು ಮನೆಗೆ ಲಾಕ್ ಮಾಡಿ ಗೇಟಿನ ಬಳಿ ಬರುವುದಕ್ಕೂ ಸರಿ ಹೋಯಿತು. ಕಾರು ಮುಂದಕ್ಕೆ ಚಲಿಸಿತು. ಕಾರಿನಲ್ಲಿ ಎಸಿ ಇರಲಿಲ್ಲ, ನಾವು ಕೇಳಲೂ ಇಲ್ಲ. ನಂತರ ಚಾಲಕ, ಬಾಗಲಕೋಟೆಯವನಾದ್ದರಿಂದ ಅವನಿಗೆ ಮಂಗಳೂರಿನ ಪರಿಚಯ ಇರಲಿಲ್ಲ. ಅವನು ಪ್ರತಿಯೊಂದು ತಿರುವಿಗೂ ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿಯನ್ನು ಅನುಸರಿಸಿಕೊಂಡು ಚಲಾಯಿಸುತ್ತಿದ್ದ. ಮನೆಯಿಂದ ಮುಂದೆ ಹೋಗುತ್ತಿದ್ದಂತೆ ಆ ಧ್ವನಿ “300 ಮೀಟರ್ ಲೆಫ್ಟ್” ಎಂದು ಊಲಿಯಿತು. ಅದು ವಿಶಾಲ ನರ್ಸಿಂಗ್ ಹೋಗುವ ರಸ್ತೆ. ಆ ರಸ್ತೆ ಕುದ್ರೋಳಿಯ ಉಳ್ಳಾಲ್ ನರ್ಸಿಂಗ್ ಹೋಂ ಅನ್ನು ಸೇರುತ್ತದೆ. ಆದರೆ ಆ ರಸ್ತೆಯ ಕೊನೆಯಲ್ಲಿ ಬ್ಯಾರಿಕೇಡ್ ಹಾಕಿ ಆ ರಸ್ತೆಯನ್ನು ಮುಚ್ಚಲಾಗಿದೆ. ನಾವು ಅಲ್ಲಿನವರೇ ಆಗಿದ್ದ ಕಾರಣ ಅಲ್ಲಿ ಮುಂದಕ್ಕೆ ಹೋಗಲು ಸಾಧ್ಯವಿಲ್ಲ ಎಂದು ವಿಶಾಲ್ ನರ್ಸಿಂಗ್ ಹೋಂ ದಾಟುತ್ತಿದ್ದಂತೆ ತಿಳಿಸಿದೆವು. ಆದರೆ ಚಾಲಕ ನಮಗಿಂತ ಗೂಗಲ್ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಂಡಿದ್ದ. ಅದರ ನಂತರ ಅವನಿಗೆ ಗೊತ್ತಾಯಿತು. ಅವನು ಅಲ್ಲಿ ಪಕ್ಕದ ಒಂದು ಓಣಿ ಎಲ್ಲಿ ಸೇರುತ್ತೆ ಎಂದ. ಅದು ಡೆಡ್ ಎಂಡ್. ನೀವು ಇದೇ ರಸ್ತೆಯಲ್ಲಿ ಹಿಂದಕ್ಕೆ ಹೋಗಿ ವೇರ್ ಹೌಸ್ ಪಕ್ಕದ ರಸ್ತೆಯಲ್ಲಿ ತಿರುಗಿ ನಂತರ ಅಳಕೆ ರಸ್ತೆಗೆ ಬರಬೇಕಾಗುತ್ತದೆ ಎಂದೆವು. ಅವನು ರಿವಸರ್್ ಹೋಗುತ್ತಿದ್ದಂತೆ ಮತ್ತೆ ಗೂಗಲ್ ಅವನಿಗೆ ದಾರಿ ತೋರಿಸುತ್ತಾ ಹೋಯಿತು. ರೂಪವಾಣಿಯ ಬಳಿ ಎಡಕ್ಕೆ ತಿರುಗಬೇಕು ಅಲ್ಲಿ ನೇರ ಹೋದರೆ ಸೆಂಟ್ರಲ್ ಮಾರುಕಟ್ಟೆ ರಸ್ತೆ ಏಕಮುಖ ಎಂದೆವು. ಅವನು ಕೇಳಲಿಲ್ಲ. ಯಾಕೆಂದರೆ ಅವನಿಗೆ ಗೂಗಲ್ ಧ್ವನಿ ಹೇಳಲಿಲ್ಲ. ಕೊನೆಗೆ ಅವನು ರೈಲ್ವೆ ನಿಲ್ದಾಣದ ಹತ್ತಿರ ಬಂದಾಗ ಬಾಗಿಲ ತನಕ ಹೋಗಲ್ಲ ಎಂದ. ಸರಿ ಎಂದು ನಾವು ಒಪ್ಪಿ ಇಳಿದೆವು. 108 ರೂಪಾಯಿ ಆಗಿದೆ ಎಂದು ಅವನ ಮೊಬೈಲ್ ತೋರಿಸಿದ. ನಾವು 35 ರೂಪಾಯಿ ಅಲ್ವಾ ಎಂದು ನಮ್ಮ ಮೊಬೈಲ್ ನೋಡಿದೆವು. ಆದರೆ ಅವನು ಹಟ ಮಾಡುತ್ತಿದ್ದ ಕಾರಣ ಬೇರೆ ದಾರಿ ಇಲ್ಲದೆ, ರೈಲಿನ ಸಮಯ ಮೀರಬಹುದು ಎನ್ನುವ ಆತಂಕದಿಂದ ಅವನು ಹೇಳಿದ್ದು ಕೊಟ್ಟು ಮುಂದೆ ಹೋದೆವು.
ನಂತರ ಈ ಬಗ್ಗೆ ಉಬೆರ್ ಗೆ ಮೊಬೈಲ್ ನಲ್ಲಿಯೇ ದೂರು ಕೊಟ್ಟಾಗ ಅವರ ಉತ್ತರ ಏನೆಂದರೆ ” ನಾವು ಪಿಕ್ ಅಪ್ ಮತ್ತು ಡ್ರಾಪ್ ಮಾಡಿದ ಜಾಗ, ಟ್ರಾಫಿಕ್, ರಸ್ತೆ ರಿಪೇರಿ ಎಲ್ಲವೂ ಇದ್ದಲ್ಲಿ ದರ ಹೆಚ್ಚಾಗುತ್ತದೆ”
ಈಗ ಆ ದಂಪತಿಗಳ ಪ್ರಶ್ನೆ- 1. ವಿಶಾಲ್ ನರ್ಸಿಂಗ್ ಹೋಂ ರಸ್ತೆ ಕ್ಲೋಸ್ ಆಗಿದೆ ಎಂದು ಗೊತ್ತಿದ್ದರೂ, ಹೇಳಿದರೂ, ಆತ ಕೇಳಲಿಲ್ಲ. ನಂತರ ಒಂದು ರಸ್ತೆ ಸುತ್ತು ಹಾಕಿದ ತಕ್ಷಣ ಬಿಲ್ ಎರಡೂವರೆ ಪಟ್ಟು ಏಕಾಏಕಿ ಹೆಚ್ಚಾಗುತ್ತಾ?”35 ರೂಪಾಯಿ ಎಲ್ಲಿ, 108 ಎಲ್ಲಿ. ಗೂಗಲ್ ತಪ್ಪು ಹೇಳಿದ್ದಕ್ಕೆ ಯಾರು ಜವಾಬ್ದಾರರು? ಚಾಲಕ ಬಾಗಲಕೋಟದವನಾಗಿದ್ದ ಕಾರಣ ಅವನಿಗೆ ರಸ್ತೆ ಗೊತ್ತಿಲ್ಲದೆ ಹೋದದ್ದಕ್ಕೆ ಯಾರು ಕಾರಣ? ಆದ್ದರಿಂದ ಒಂದು ರಸ್ತೆ ಹಾಳಾಗಿ ಹೋದರೆ ಗೂಗಲ್ ಆ ರಸ್ತೆಯಲ್ಲಿ ಹೋಗಲು ಬೇರೆ ಊರಿನ ಚಾಲಕರಿಗೆ ಹೇಳದಿರಲಿ ಎಂದು ನಮ್ಮ ಕೋರಿಕೆ” ಎಂದು ಆ ದಂಪತಿಗಳು ಹೇಳಿದರು
Leave A Reply