ಆರ್ ಎಸ್ ಎಸ್ ಶಕ್ತಿ ಕೇಂದ್ರದಲ್ಲಿ ಏಕದಂತನಿಗೆ ಪೂಜೆ ಸಲ್ಲಿಸಿದ ಕ್ರೈಸ್ತ ಧರ್ಮಗುರು, ಭಗಿನಿಯರು
ಮಂಗಳೂರು: ಗಣೇಶ ಚತುರ್ಥಿ ಕೇವಲ ಹಿಂದೂಗಳ ಉತ್ಸವ ಮಾತ್ರವಾಗಿರದೇ ಸರ್ವ ಧರ್ಮಿಯರೂ ಸೇರಿ ವಿಜೃಂಭಣೆಯಿಂದ ಆಚರಿಸುವ ಹಲವಾರು ನಿದರ್ಶನಗಳ ನಮ್ಮ ಮುಂದಿದೆ. ಈ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ. ಮಂಗಳೂರಿನ ಸಂಘನಿಕೇತನದಲ್ಲಿ ಪೂಜಿಸಲಾಗುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಕ್ರೈಸ್ತ ಧರ್ಮಗುರುಗಳು ಹಾಗು ಭಗಿನಿಯರು ಭಾಗವಹಿಸಿದ್ದಾರೆ.
ಆರ್ ಎಸ್ ಎಸ್ ನ ಶಕ್ತಿ ಕೇಂದ್ರ ಎಂದೇ ಹೇಳಲಾಗುವ ಸಂಘನಿಕೇತನದ ಗಣೇಶೋತ್ಸವ ಸೌಹಾರ್ದತೆಗೆ ವೇದಿಕೆಯಾಗುತ್ತಿದೆ. ಈ ಬಾರಿ ಕ್ರೈಸ್ತ ಧರ್ಮಗುರುಗಳು ಹಾಗು ಕ್ರೈಸ್ತ ಭಗಿನಿಯರು ಈ ಗಣೇಶನ ಪಾದತಲಕ್ಕೆ ಹಣ್ಣುಹಂಪಲು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಳೆದ ಬಾರಿಯೂ ಬಾಲ ಏಸು ಕ್ಷೇತ್ರದ ಧರ್ಮಗುರುಗಳು ಬಂದು ಗಣಪತಿಗೆ ಪೂಜೆ ಮಾಡಿಸಿ ಪ್ರಾರ್ಥನೆ ಸಲ್ಲಿಸಿದ್ದರು.
ಸಂಘನಿಕೇತನದ ವತಿಯಿಂದ ಈ ಬಾರಿ 71ನೇ ವರ್ಷದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘನಿಕೇತನ ಸಭಾಂಗಣದಲ್ಲಿ ಇರಿಸಲಾದ ಗಣೇಶನ ವಿಗ್ರಹಕ್ಕೆ ಮಂಗಳೂರಿನ ಕ್ಯಾಥೊಲಿಕ್ ಸಭಾ ಮತ್ತು ಸೈಂಟ್ ಜೋಸೆಫ್ ಕಾನ್ವೆಂಟ್ ನ ಭಗಿನಿಯರು ಬಂದು ಫಲಪುಷ್ಪ ಸಮರ್ಪಿಸಿ, ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ
ಮಂಗಳೂರು ಕ್ಯಾಥೊಲಿಕ್ ಸಭಾದ ಕಾರ್ಯದರ್ಶಿ ಸೆಲೆಸ್ಟೀನ್ ಡಿಸೋಜಾ, ಸೈಂಟ್ ಜೋಸೆಫ್ ಕಾನ್ವೆಂಟ್ ನ ಭಗಿನಿಯರಾದ ಸಿಸ್ಟರ್ ಜ್ಯೋತಿ, ಸಿಸ್ಟರ್ ಮರಿಯಾ, ಸಿಸ್ಟರ್ ಅನಿತ, ಸಿಸ್ಟರ್ ರೋಸಾ, ಸಿಸ್ಟರ್ ಸುಜಾತ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದರು.
ಹಲವು ವರ್ಷಗಳಿಂದ ಈ ಕ್ರೈಸ್ತ ಧರ್ಮಕೇಂದ್ರಗಳ ಧರ್ಮಗುರುಗಳು ಗಣೇಶೋತ್ಸವದಂದು ಸಂಘನಿಕೇತನಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಯಾವುದೇ ಜಾತಿ-ಧರ್ಮ ರಾಜಕೀಯವಿಲ್ಲದೆ ನಾವೆಲ್ಲರೂ ಒಂದಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇವೆ. ಮುಂದೆಯೂ ಇದೇ ರೀತಿ ಭಾಗಿಯಾಗಲು ದೇವರು ಅನುಗ್ರಹಿಸಲಿ ಎಂದು ಕ್ರೈಸ್ತ ಧರ್ಮಗುರುಗಳು ಹಾಗು ಭಗಿನಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Leave A Reply