ಪುಂಡಾಟಿಕೆ ನಡೆಸಿದವರ ವಿರುದ್ಧ ಸಮರ ಸಾರಿದ ಎಸ್ಪಿ…, ಸ್ವ ಪ್ರತಿಷ್ಠೆಯ ರಾಜಕೀಯದಾಟಕ್ಕೆ ಬಲಿಯಾಗ್ತಾರಾ…!?
ಉಡುಪಿ-ಖಾಕಿ ಖದರ್ ನೊಳಗೆ ನಗುಮೊಗ ಅಡಗಿರುವ ಅಧಿಕಾರಿ ಇವರು. ಬಾಲ ಬಿಚ್ಚಿದ್ರೆ ಮಾತ್ರ ರೌದ್ರಾತಾರ ತಳೆದು ಬಿಡುವ ಖಡಕ್ ಪೊಲೀಸ್. ಉಡುಪಿಯ ರಾಷ್ಟ್ರೀಯ ಪಕ್ಷಗಳ ಮುಖಂಡರು ಸದ್ಯ ಇವರ ಹಿಂದೆ ಬಿದ್ದಿದ್ದಾರೆ. ಕೈ ಮತ್ತು ಕಮಲ ಪಡೆಯ ಒಣ ಪ್ರತಿಷ್ಠೆಗೆ ಉಡುಪಿ ಎಸ್ಪಿಯೇ ಸಮರಾಸ್ತ್ರವಾಗಿದ್ದಾರೆ. ಪಕ್ಷಗಳ ಪ್ರತಿಷ್ಠೆಗೆ ಕಾನೂನು ಕಾಪಾಡುವ ಅಧಿಕಾರಿಯ ತಲೆದಂಡವಾಗುತ್ತಾ ಅನ್ನೋದು ಸದ್ಯ ಕೃಷ್ಣನಾಡಿನಲ್ಲಿ ಬಿಸಿ ಬಿಸಿ ಚರ್ಚೆ ಗ್ರಾಸವಾಗಿದೆ.
ಹೌದು..ಕಳೆದ ಕೆಲವು ದಿನಗಳ ಹಿಂದೆಯಷ್ಟೇ ರಾಷ್ಟ್ರೀಯ ಪಕ್ಷ ಕಾಂಗ್ರೇಸ್ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಭಾರತ್ ಬಂದ್ ಗೆ ಕರೆ ನೀಡಿತ್ತು. ಉಡುಪಿಯಲ್ಲಿ ಕೂಡ ಬಂದ್ ಬಿಸಿ ಜೋರಾಗಿತ್ತು. ಆರಂಭದಲ್ಲಿ ಎಲ್ಲಾ ಚೆನ್ನಾಗಿಯೇ ಇತ್ತು, ಆದ್ರೆ ಬಿಸಿಲೇರುತ್ತಿದ್ದಂತೆ ಉಡುಪಿ ರಣಾಂಗಣವಾಯ್ತು. ಕೈ ಪಾಳಯ ಬಂದ್ ಒತ್ತಾಯಿಸಿದ್ರೆ , ಕಮಲ ಪಡೆ ಅಂಗಡಿ ಮುಗಟ್ಟು ಒಪನ್ ಮಾಡಿಸುವ ಪಣತೊಟ್ಟಿತು. ಕೈ ಮತ್ತು ಕಮಲ ಪಡೆಯ ತಿಕ್ಕಾಟ ತಾರಕೇರಿತ್ತು. ಬಂದ್ ಗಲಾಟೆ ರಕ್ತ ಹರಿಯುವ ಮಟ್ಟಕ್ಕೆ ಬಂತು. ಎರಡು ಪಕ್ಷಗಳೂ ತಾವೇನೂ ಕಮ್ಮಿಇಲ್ಲ ಅನ್ನುವಂತೆ ನಗರ ತುಂಬ ಮೇರೆದಾಡಿದ್ರು ಅಷ್ಟೇ ಸಾಕಾಗದೆ ಎಸ್ಪಿ ಅಪೀಸ್ ಮುಂದೆ ಪರಸ್ಪರ ಬಡಿದಾಟ ಆರಂಭಿಸಿದ್ರು .ಪೊಲೀಸ್ ಮಧ್ಯ ಪ್ರವೇಶ ಕ್ಕೂ ಜಗ್ಗದೇ ಹೋದಾಗ ಖುದ್ದಾಗಿ ಉಡುಪಿ ಎಸ್ಪಿ ಲಾಠಿ ಕೈಗೆತ್ತಿಕೊಂಡರು ಲಾಠಿ ಬೀಸಿದ್ರು.
ಎರಡು ಪಕ್ಷದ ಪುಡಾರಿಗಳು ಲಾಠಿ ರುಚಿ ತಿಂದು ಆಸ್ಪತ್ರೆ ಸೇರಿದ್ದು ಹಳೆಯ ಕತೆ. ಆದ್ರೆ ಲಾಠಿ ರುಚಿ ನೋಡಿದ ಮಂದಿಯಂತೂ ಇನ್ನೂ ಒಳಗೊಳಗೆ ತಣ್ಣನೆ ಕುದಿಯುತ್ತಿದ್ದಾರೆ. ಎಸ್ಪಿ ಲಕ್ಷಣ್ ನಿಂಬರಗಿ ಎತ್ತಂಗಡಿ ಮಾಡ್ಲೇ ಬೇಕು ಅಂತಾ ಕಾಂಗ್ರೇಸ್ ಯುವ ನಾಯಕರು ಒತ್ತಾಯಿಸುತ್ತಿದ್ದಾರೆ. ಗದ್ದುಗೆ ಹಿಡಿದ ಹಿರಿಯ ನಾಯಕರು ನಮ್ಮ ಬೆಂಬಲ ನಿಲುತ್ತಿಲ್ಲ ಕಾರ್ಯಕರ್ತರಿಗೆ ಬೆಂಬಲ ಇಲ್ಲ ಅಂತಾ ಆಕ್ರೋಶ ಹಾಕುತ್ತಿದ್ದಾರೆ.ಬಂದ್ ಗಲಾಟೆಯ ದಿನ ಲಾಠಿ ಏಟಿನ ರುಚಿ ಕಂಡ ಕಾಂಗ್ರೇಸ್ ಪಡೆ ಅಷ್ಟಕ್ಕೇ ಸುಮ್ಮನಾಗಲಿಲ್ಲ.
ಗಾಂಧಿ ಜಯಂತಿಯ ದಿನ ಕಾಂಗ್ರೇಸ್ ಭವನದಲ್ಲಿ ಉಸ್ತುವಾರಿ ಸಚಿವೆ ಜಯಮಾಲಾಗೆ ಮುತ್ತಿಗೆ ಹಾಕಿ ಮುಜುಗರ ಉಂಟುಮಾಡಿದ್ದಾರೆ. ಕಾರ್ಯಕರ್ತರ ಆಕ್ರೋಶ ತಣ್ಣಗೆ ಮಾಡಲಾಗದೆ ಕೋಪಗೊಂಡ ಗ್ಲಾಮರ್ ಮಿನಿಸ್ಟರ್ ಕಾರು ಹತ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.ಸದ್ಯ ಉರಿಯುವ ಬೆಂಕಿಗೆ ತುಪ್ಪ ಹಾಕಿ ಜಿಲ್ಲೆಯ ಹಿರಿಯ ಕಾಂಗ್ರೇಸ್ ನಾಯಕರು ಮಜಾ ನೋಡುತ್ತಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ. ಲಾಠಿ ಏಟು ತಿಂದ ಬಿಜೆಪಿ ಮಂದಿ ಮಾತ್ರ ಮೌನವಾಗಿದ್ದಾರೆ. ಪಕ್ಷದ ಕಾರ್ಯಕತರು ಲಾಠಿ ಏಟು ತಿಂದ್ರು ನಾಯಕರೂ ಎಸ್ಪಿ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಈ ಮೂಲಕ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ರಾಜಕೀಯ ಕಾರಣಕ್ಕೆ ಪೊಲೀಸ್ ಅಧಿಕಾರಿ ವರ್ಗಾವಣೆ ಮಾಡಿದ್ರೆ ಸಹಿಸುವುದಿಲ್ಲ ಅಂತಾ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ
ಅನಿವಾರ್ಯವಾಗಿ ಲಾಠಿ ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಿದ ಎಸ್ಪಿ ಲಕ್ಷ್ಮಣ ನಿಂಬರಗಿ ನಿಗದಿತ ಅವಧಿ ವರೆಗೆ ಉಡುಪಿಯಲ್ಲಿರ್ತಾರಾ… ಅನೈತಿಕ ದಂಧೆಕೋರರ ವಿರುದ್ಧ, ಪುಂಡಾಟಿಕೆ ನಡೆಸಿದವರ ವಿರುದ್ಧ ಸಮರ ಸಾರಿದ ಅಧಿಕಾರಿ ಸ್ವ ಪ್ರತಿಷ್ಠೆಯ ರಾಜಕೀಯದಾಟಕ್ಕೆ ಬಲಿಯಾಗ್ತಾರಾ? ಅನ್ನುವುದು ಸದ್ಯ ಜನಸಾಮಾನ್ಯರ ನ್ನು ಬಿಡದೆ ಕಾಡುತ್ತಿರುವ ಯಕ್ಷ ಪ್ರಶ್ನೆ.
Leave A Reply