ಮಂಗಳೂರು ದಸರಾಕ್ಕೆ ಅದ್ದೂರಿ ತೆರೆ…!!!!
ಚಿತ್ರ-ಹರಿಪ್ರಸಾದ್ ಪೇರಿಂಜಿ
ಮಂಗಳೂರು-ಮಂಗಳೂರಿನ ಕೊದ್ರೋಳಿ ದೇವಾಲಯದಲ್ಲಿ ನಡೆದ ಸಂಭ್ರಮದ ದಸರಾಕ್ಕೆ ನಿನ್ನೆ ತೆರೆ ಕಂಡಿದೆ. ನವದುರ್ಗೆಯರ ಸಂಭ್ರಮದ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಕುದ್ರೋಳಿ ದೇವಸ್ಥಾನದಿಂದ ಎಂ.ಜಿ.ರೋಡ್‌ವರೆಗೆ ಜನ ಸಾಗರವೇ ನೆರೆದಿತ್ತು. ಶುಕ್ರವಾರ ಮುಂಜಾನೆ ದೇವಸ್ಥಾನದಲ್ಲಿ ವಾಗೀಶ್ವರಿ ದುರ್ಗಾಹೋಮ, ಮಧ್ಯಾಹ್ನ ಶಿವಪೂಜೆ, ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವಗಳು ನಡೆದು ಶಾರದಾ ಮೂರ್ತಿ ವಿಸರ್ಜನೆಗೆ ಚಾಲನೆ ನೀಡಲಾಯಿತು.ಜಯಘೋಷದೊಂದಿಗೆ ಮಹಾಗಣಪತಿಯ ವಿಗ್ರಹಕ್ಕೆ ಪೂಜೆ ನೆರವೇರಿಸಿ ಶೋಭಾಯಾತ್ರೆಯ ಮುಂಚೂಣಿಯ ಅಲಂಕೃತ ವಾಹನದಲ್ಲಿ ಇರಿಸಲಾಯಿತು. ಬಳಿಕ ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಲಾರಿಗಳಲ್ಲಿ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ ಮತ್ತು ಆದಿಶಕ್ತಿಯರೊಂದಿಗೆ ಶಾರದಾ ಮಾತೆ ಮತ್ತು ನಾರಾಯಣಗುರುಗಳ ಚಿತ್ರಗಳನ್ನು ಇಟ್ಟು ಮೆರವಣಿಗೆ ಆರಂಭಿಸಲಾಯಿತು. ದೇವಿಯರ ವಿಗ್ರಹ ಮಂಟಪದಿಂದ ಹೊರ ತರುತ್ತಿದ್ದಂತೆ ಸೇರಿದ್ದ ಭಕ್ತ ಸಮೂಹ ಜಯಘೋಷ ಹೊರಡಿಸಿದರು.
ಮಂಗಳೂರಿನಲ್ಲಿ ನಡೆಯುವ ಈ ವಿಜೃಂಭಣೆಯ ದಸರಾ ಉತ್ಸವದ ಆಕರ್ಷಕ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಶ್ರೀ ಕ್ಷೇತ್ರದಿಂದ ಹೊರಡಿದ ಶೋಭಾ ಯಾತ್ರೆಯು ಮಣ್ಣಗುಡ್ಡ, ಲೇಡಿಹಿಲ್ ಸರ್ಕಲ್, ಪಿವಿಎಸ್ ಸರ್ಕಲ್, ನವಭಾರತ್ ಸರ್ಕಲ್, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ, ಸರಕಾರಿ ಕಾಲೇಜು ವೃತ್ತದಿಂದ ಹೈಸ್ಕೂಲ್ ರಸ್ತೆಯಾಗಿ ಶ್ರೀ ವೆಂಕರಮಣ ದೇಗುಲದ ಮುಂಭಾಗವಾಗಿ ಕಾರ್‌ಸ್ಟ್ರೀಟ್, ಅಳಕೆಯಾಗಿ ಸಾಗಿ ಶನಿವಾರ ಮುಂಜಾನೆ ವೇಳೆ ಶ್ರೀ ಕ್ಷೇತ್ರದಲ್ಲಿ ಶಾರದಾ ವಿಸರ್ಜನೆ ಮಾಡಲಾಗಿದೆ.
ಸಾಲುಸಾಲು ಕೇರಳ ಶೈಲಿ ಕೊಡೆಗಳು, ವಿವಿಧ ಬೊಂಬೆಗಳು, ಕರ್ನಾಟಕದ ಜಾನಪದ ವೈವಿಧ್ಯ ಸಾರುವ ಡೊಳ್ಳುಕುಣಿತ, ನರ್ತನಗಳೊಂದಿಗೆ ಕೇರಳ ಚೆಂಡೆ, ಸ್ಥಳೀಯ ಚೆಂಡೆಗಳು, ಲಾರಿ ತುಂಬ ಕೇಕೆ ಹಾಕುವ ಹುಲಿವೇಷಗಳು, ಪುರಾಣ ಕತೆಗಳ ಸಂದರ್ಭಗಳನ್ನು ವ್ಯಕ್ತಪಡಿಸುವ 75ಕ್ಕೂ ಹೆಚ್ಚು ಸ್ತಬ್ಧಚಿತ್ರ, ಬ್ಯಾಂಡ್‌ಸೆಟ್‌ಗಳು ಮೆರವಣಿಗೆ ಹುರುಪು ಹೆಚ್ಚಿಸಿದವು.
100ಕ್ಕೂ ಅಧಿಕ ವೇಷಭೂಷಣ, ವಾದ್ಯಮೇಳ ತಂಡ, ಭಜನಾ ತಂಡಗಳು, ಗೊಂಬೆ ಕುಣಿತದ ತಂಡಗಳು, ಹುಲಿ ಕುಣಿದ ತಂಡ, ಭಾಗವಹಿಸಿದ್ದವು. ವಿವಿಧೆಡೆ ಆರ್ಕೆಸ್ಟ್ರಾ ತಂಡಗಳಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮೆರವಣಿಗೆ ಹೊರಡುವ ಸುಮಾರು 9 ಕಿ.ಮೀ. ಉದ್ದದ ರಸ್ತೆಯ ಇಕ್ಕಡೆಗಳು ಕೂಡ ದೀಪದಿಂದ ಅಲಂಕೃತಗೊಂಡಿದೆ. ಶ್ರೀ ಕ್ಷೇತ್ರದ ಮೂಲಗಳ ಪ್ರಕಾರ ಸುಮಾರು 20ಲಕ್ಷಕ್ಕೂ ಅಧಿಕ ಬಲ್ಬ್‌ಗಳನ್ನು ಬಳಸಲಾಗಿದೆ. ಅದಲ್ಲದೆ ಪ್ರಮುಖ ವೃತ್ತಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು.
Leave A Reply