ರಮಾನಾಥ ರೈ ಅವರಿಗೆ ಲೋಕಸಭಾ ಟಿಕೆಟ್ ತಪ್ಪಿಸಲು ಮುಸ್ಲಿಂ ಅಭ್ಯರ್ಥಿ ದಾಳ..??
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಯಾವುದಾದರೂ ಮುಸ್ಲಿಂ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರಾ ಎನ್ನುವ ಪ್ರಶ್ನೆ ಉದ್ಭವವಾಗುತ್ತಿದೆ. ಅಂತಹ ಕೂಗು ಮುಸ್ಲಿಂ ಮುಖಂಡರಿಂದ ಕೇಳಿಬರುತ್ತಿದೆ. ಈ ಕುರಿತು ಮುಸ್ಲಿಂ ಉನ್ನತ ಮುಖಂಡರು ಪಕ್ಷಭೇದ ಮರೆತು ತಮ್ಮ ಒರಗೆಯವರನ್ನು ಸೇರಿಸಿ ಮಂಗಳೂರಿನ ಪುರಭವನದ ಆವರಣದಲ್ಲಿರುವ ಸಭಾಂಗಣದಲ್ಲಿ ಸಭೆ ಮಾಡಿದ್ದಾರೆ. ಆ ಸಭೆಯಲ್ಲಿ ಇದ್ದವರಲ್ಲಿ ಪ್ರಮುಖರು ಕೆ ಎಸ್ ಎಂ ಮಸೂದ್, ಇಬ್ರಾಹಿಂ ಕೋಡಿಜಾಲ್, ಕೆ ಅಶ್ರಫ್ ಹಾಗೂ ಮೊಯ್ದೀನ್ ಬಾವ. ಮಸೂದ್ ಅವರು ಜನಾರ್ಧನ ಪೂಜಾರಿಯವರ ಶಿಷ್ಯ. ಜನಾರ್ಧನ ಪೂಜಾರಿಯವರ ರಾಜಕೀಯ ಜೀವನ ಮುಗಿದಿದೆ. ಅವರು 1989 ರಲ್ಲಿ ಗೆದ್ದಿರುವುದೇ ಕೊನೆ. ನಂತರ ಐದು ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಸಲ ಅವರಿಗೆ ಟಿಕೆಟ್ ಕೊಡಲಾಗಿದೆ. ಒಂದು ಸಲ ವೀರಪ್ಪ ಮೊಯಿಲಿ ಅವರಿಗೆ ಕೊಡಲಾಗಿತ್ತು. ನಾಲ್ಕು ಸಲವೂ ಪೂಜಾರಿ ಸೋತಿದ್ದಾರೆ. ಹಾಗಂತ ಅವರಿಗೆ ಚುನಾವಣೆಗೆ ನಿಲ್ಲುವ ಆಸೆ ಕಡಿಮೆ ಆದಂತಿಲ್ಲ. ಅವಕಾಶ ಕೊಟ್ಟರೆ ಒಂದು ಕೈ ನೋಡೆ ಬಿಡೋಣ ಎನ್ನುವ ಉಮ್ಮೇದಿನಲ್ಲಿದ್ದಾರೆ. ಆದರೆ ಈ ಬಾರಿ ಅವರಿಗೆ ಸಿಗುವ ಸಾಧ್ಯತೆ ನೂರಕ್ಕೆ ತೊಂಭತ್ತರಷ್ಟು ಕಷ್ಟ. ಒಂದು ವೇಳೆ ಅವರಿಗೆ ಕೊಡದಿದ್ದರೆ ನೆಕ್ಟ್ ಯಾರು ಎನ್ನುವ ಬಗ್ಗೆ ಕಾಂಗ್ರೆಸ್ಸಿನಲ್ಲಿ ನಿಖರವಾದ ಉತ್ತರ ಇಲ್ಲ.
ಮಸೂದ್ ಮುಂಚೂಣಿಯಲ್ಲಿ ಯಾಕೆ…
ತಮಗೆ ಅವಕಾಶ ಕೊಟ್ಟರೆ ಸ್ಪರ್ಧಿಸುವುದಾಗಿ ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ಟಿಕೆಟ್ ಹಂಚಿಕೆ ವಿಷಯದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರೆದುರು ರಾಜ್ಯ ಉಸ್ತುವಾರಿ ವೇಣುಗೋಪಾಲ್ ರಮಾನಾಥ್ ರೈ ಹೆಸರು ಇಟ್ಟಿದ್ದಾರೆ. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಆಗಿರುವ ರಮಾನಾಥ್ ರೈ ಅವರು ನಿಜವಾಗಿಯೂ ಪ್ರಯತ್ನ ಪಟ್ಟರೆ ತಡೆಯುವಷ್ಟು ಗಟ್ಸ್ ಯಾರಿಗೂ ಇಲ್ಲ. ಹೇಗೂ ಬಂಟ್ ಸಮುದಾಯದವರು. ಬಿಲ್ಲವ ಮತಗಳ ಜೊತೆಗೆ ಅಲ್ಪಸಂಖ್ಯಾತರ ಮತಗಳು ಸೇರಿದರೆ ರೈ ಈ ಬಾರಿ ದೆಹಲಿ ರಾಜಕೀಯ ಪ್ರಾರಂಭಿಸುವುದು ಕಷ್ಟವೇನಲ್ಲ ಎನ್ನುವುದು ಕಾಂಗ್ರೆಸ್ ರಾಜ್ಯ ನಾಯಕರ ಮನದಿಂಗಿತ. ಬಹುತೇಕ ರೈ ಅವರಿಗೆ ಟಿಕೆಟ್ ಗ್ಯಾರಂಟಿ ಎನ್ನುವಂತಹ ವಾತಾವರಣ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಹರಡಿದೆ. ಇಂತಹ ಹೊತ್ತಿನಲ್ಲಿಯೇ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂದು ಬಹಿರಂಗ ಸಭೆ ಮಾಡಲು ಕಾರಣವೇನು ಮತ್ತು ಅದರ ಮುಖಂಡತ್ವವನ್ನು ಮಸೂದ್ ಅವರೇ ವಹಿಸಲು ಕಾರಣವೇನು?
ಮೇಲ್ನೋಟಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿಯವರು ಈ ಸಭೆ ಆಯೋಜಿಸಿದ್ದರು ಎಂದು ಹೇಳಲಾಗುತ್ತದೆ. ಆದರೆ ಇದರ ಹಿಂದಿರುವ ಮಾಸ್ಟರ್ ಮೈಂಡ್ ಮಸೂದ್. ಮಸೂದ್ ಅವರು ಜನಾರ್ಧನ ಪೂಜಾರಿಯವರ ಅಪ್ಪಟ ಶಿಷ್ಯ. ಪೂಜಾರಿಯವರ ಅನೇಕ ಶಿಷ್ಯರಲ್ಲಿ ಮುಂಚೂಣಿಯಲ್ಲಿ ಇರುವವರು ಹರಿಕೃಷ್ಣ ಬಂಟ್ವಾಳ್ ಮತ್ತು ಕೆ ಎಂ ಮಸೂದ್. ಅದೇ ರೀತಿಯಲ್ಲಿ ಹರಿಕೃಷ್ಣ ಹಾಗೂ ಮಸೂದ್ ಅವರಿಗೆ ಇಬ್ಬರಿಗೂ ರೈ ಸಮಾನ ಶತ್ರು. ಹರಿಕೃಷ್ಣ ಬಂಟ್ವಾಳ್ ಪಕ್ಷ ಬಿಟ್ಟಾಗಿದೆ. ಈಗಲೂ ಅವಕಾಶ ಸಿಕ್ಕಾಗಲೆಲ್ಲ ಕಾಂಗ್ರೆಸ್ಸಿಗಿಂತ ಜಾಸ್ತಿ ರೈ ಮೇಲೆ ಬೆಂಕಿಕಾರುತ್ತಲೇ ಇದ್ದಾರೆ. ಆದರೆ ಮಸೂದ್ ಅವರಿಗೆ ರೈ ಮೇಲೆ ನೇರವಾಗಿ ಆರೋಪ ಮಾಡಲು ಆಗುವುದಿಲ್ಲ. ಏಕೆಂದರೆ ಅವರು ಕಾಂಗ್ರೆಸ್ಸಿನಲ್ಲಿ ಇದ್ದಾರೆ. ಹಾಗಂತ ತಮ್ಮ ಗುರು ಜನಾರ್ಧನ ಪೂಜಾರಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದ ರೈ ಲೋಕಸಭಾ ಟಿಕೆಟ್ ಪಡೆದುಕೊಂಡು ಬರುವುದು ಕೂಡ ಶಿಷ್ಯನಿಗೆ ಸಹಿಸಲು ಆಗುವುದಿಲ್ಲ. ಆದರೆ ರಾಜ್ಯ ಹೈಕಮಾಂಡ್ ನಲ್ಲಿ ಗೊಂದಲ ಮೂಡಿಸಲು ಪೂಜಾರಿಯವರಿಂದಲೇ ರಣವೀಳ್ಯ ಪಡೆದುಕೊಂಡು ಮಸೂದ್ ಫೀಲ್ಡಿಗಿಳಿದಂತೆ ಕಾಣುತ್ತದೆ. ಮಸೂದ್ ಸಭೆ ನಡೆಸಿದ ಮರುದಿನವೇ ಪೂಜಾರಿಯವರು ಕೂಡ ತಮಗೆ ಟಿಕೆಟ್ ಕೊಡದಿದ್ದರೆ ಮುಸ್ಲಿಂ ಅಭ್ಯರ್ಥಿಗೆ ಕೊಡಲಿ ಎಂದು ಹೇಳಿಕೆ ಕೊಟ್ಟು ಶಿಷ್ಯನ ನಿಲುವಿಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ.
ಅನೇಕರಿಗೆ ಈ ಬಗ್ಗೆ ವಿರೋಧ ಇದೆ….
ಸರಿಯಾಗಿ ನೋಡಿದರೆ ಅನೇಕ ಮುಸ್ಲಿಂ ಮುಖಂಡರಿಗೆ ಅಕ್ಟೋಬರ್ 24 ರಂದು ಮಸೂದ್ ವೇದಿಕೆ ಮೇಲೆ ನಿಂತು “ಕಾಂಗ್ರೆಸ್ಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು, ನವೆಂಬರ್ ಅಂತ್ಯದೊಳಗೆ ಘೋಷಿಸಬೇಕು, ಇಲ್ಲದಿದ್ದರೆ ಡಿಸೆಂಬರ್ 15 ರ ರಂದು ನಡೆಯುವ ಸಭೆಯಲ್ಲಿ ನಮ್ಮ ದಾರಿ ಘೋಷಿಸುತ್ತೇವೆ” ಎಂದು ಹೇಳಿದ್ದು ಸರಿ ಕಾಣಲೇ ಇಲ್ಲ. ಏಕೆಂದರೆ ಸಭೆ ನಡೆದು ಹೊರಬಂದ ಮಸೂದ್ ಅವರನ್ನು ಸುತ್ತುವರಿದ ಅನೇಕ ನಾಯಕರು “ನೀವು ಏಕಾಏಕಿ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಟಿಕೆಟ್ ಕೊಡಬೇಕು ಎಂದು ಎಚ್ಚರಿಕೆ ಕೊಟ್ಟಂತೆ ಮಾತನಾಡಿದ್ದು ಏಕೆ?” ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ ಅಲ್ಲಿ ನೆರೆದಿದ್ದ ಹೆಚ್ಚಿನ ಮುಸ್ಲಿಂ ಮುಖಂಡರು ಕಾಂಗ್ರೆಸ್ ನಾಯಕರೂ ಹೌದು. ಬೆರಳೆಣಿಕೆಯವರು ಜೆಡಿಎಸ್ ಬಿಟ್ಟರೆ ಅನೇಕರಿಗೆ ಆ ಸಭೆ ಕಾಂಗ್ರೆಸ್ ವಿರುದ್ಧವಾಗಿ ಹೋಗುತ್ತೆ ಎನ್ನುವ ಐಡಿಯಾ ಕೂಡ ಇರಲಿಲ್ಲ. ಆದರೆ ಮಸೂದ್ ಅವರಿಗೆ ಇದು ಬೇಕಾಗಿರಲಿಲ್ಲ. ರೈ ಶಿಷ್ಯ ಕೋಡಿಜಾಲ್ ಇಬ್ರಾಹಿಂ ಅವರಿಗೂ ಇದ್ಯಾಕೋ ರೈ ವಿರುದ್ಧ ನಡೆಯುತ್ತಿರುವ ಶೀತಲ ಸಮರದಂತೆ ತೋರಿದೆ. ಯಾಕೆಂದರೆ ಜಾತ್ಯಾತೀತ ಸಿದ್ಧಾಂತ ಪ್ರತಿಪಾದಿಸುತ್ತಿರುವ ಕಾಂಗ್ರೆಸ್ ಪಕ್ಷದ ಮುಖಂಡರೂ ಇನ್ನು ಯಾವ ನೈತಿಕತೆಯ ಮೇಲೆ ಕಾಂಗ್ರೆಸ್ ವೇದಿಕೆ ಹಂಚಿಕೊಳ್ಳುತ್ತಾರೆ ಎನ್ನುವುದು ಪ್ರಶ್ನೆ. ಒಂದು ವೇಳೆ ಈ ಮುಸ್ಲಿಂ ಟಿಕೆಟ್ ಹಟ ಗಟ್ಟಿಯಾದರೂ ಮುಂದೊಂದು ದಿನ ಸಿದ್ಧರಾಮಯ್ಯ ಅವರು ಕರೆದು “ಏನ್ರಯ್ಯಾ ನಿಮ್ದು ಮಂಗಳೂರನ್ನು ಬಿಜೆಪಿಗೆ ಕೊಡಲು ತಯಾರಾದಂತೆ ವರ್ತಿಸುತ್ತಿದ್ದಿರಲ್ಲ?” ಎಂದು ಜೋರು ಮಾಡಿದರೆ ಇಷ್ಟೂ ನಾಯಕರು ಬಾಲ ಮಡಚಿಟ್ಟು “ಇಲ್ಲಾ ಸಾರ್, ಏನೋ ತಪ್ಪಾಯ್ತು, ಕ್ಷಮಿಸಿ ಬಿಡಿ” ಎಂದು ಬಂದೇ ಬರುತ್ತಾರೆ. ಆದರೆ ಅಲ್ಲಿಯ ತನಕ ಎಷ್ಟಾಗುತ್ತೋ ಅಷ್ಟು ಆಡೋಣ, ರೈ ಅವರಿಗೆ ಟಿಕೆಟ್ ತಪ್ಪಿದರೆ ಅಷ್ಟೇ ಸಾಕು ಎನ್ನುವ ತಾಲೀಮಿನಲ್ಲಿದ್ದಾರೆ!
Leave A Reply