ಮಂಗಳೂರಿನ ಆರ್ ಟಿಒ ಹುದ್ದೆ ಮಾರಾಟಕ್ಕಿದ್ದರೆ ಚೌಕಾಶಿ ಮಾಡಿ ಕೊಟ್ಟುಬಿಡಿ ಸಿಎಂ!
ಒಂದು ಸಂಸ್ಥೆಯ ಬಾಸ್ ವರ್ಷಗಟ್ಟಲೆ ತನ್ನ ಆಫೀಸಿನ ಕಡೆ ಮುಖ ಮಾಡಿ ನೋಡದೇ ಇದ್ದರೆ ಅಂತಹ ಸಂಸ್ಥೆ ಅಭಿವೃದ್ಧಿ ಆಗುವುದು ಕಷ್ಟ. ಒಂದು ಶಾಲೆಗೆ ಮುಖ್ಯೋಪಾಧ್ಯಯರೇ ಇಲ್ಲದಿದ್ದರೆ ಶಾಲೆ ಏಳಿಗೆ ಹೊಂದುವುದು ಅಸಾಧ್ಯ. ಒಂದು ಮನೆಗೆ ಯಜಮಾನನೇ ಇಲ್ಲದಿದ್ದರೆ ಅಲ್ಲಿ ಒಗ್ಗಟ್ಟು ಮೂಡುವುದು ಡೌಟು. ಇದನ್ನು ಕರ್ನಾಟಕದ ಘನವೆತ್ತ ಮುಖ್ಯಮಂತ್ರಿಗಳಿಗೆ ಇಲ್ಲಿನ ಉಸ್ತುವಾರಿ ಸಚಿವರು ಹೇಳಿ ಬಂದರೆ ಒಳ್ಳೆಯದು. ಯಾಕೆ ಎಂದು ನೀವು ಕೇಳಬಹುದು.
ಸಚಿವ ಯುಟಿ ಖಾದರ್ ಅವರಿಗೂ ವಿಷಯ ಗೊತ್ತಿದೆಯೋ ಇಲ್ಲವೋ. ಬಂಟ್ವಾಳದ ಇಂದಿರಾ ಕ್ಯಾಂಟಿನ್ ನಲ್ಲಿ ಅವರು ಏನೋ ಮಾಡಲು ಹೋಗಿ ಅದು ಏನೋ ಆಗಿ ವಿವಾದಕ್ಕೆ ಸಿಲುಕಿ ಕೊನೆಗೆ ಅವರು ವಿಷಾದಿಸುವಂತಹ ಘಟನೆ ನಡೆದು ಬಿಟ್ಟಿದೆ. ಆದರೆ ಕಳೆದ ನಾಲ್ಕೂವರೆ ವರ್ಷಗಳಿಂದ ಮಂಗಳೂರಿಗೆ ಒಬ್ಬ ಪೂರ್ಣಕಾಲಿಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಇಲ್ಲದೇ ನಾವು ವಿಷಾದಿಸುತ್ತಿದ್ದೇವೆ. ಅದನ್ನು ಕೇಳುವವರೇ ಇಲ್ಲ. ಮಂಗಳೂರು ಆರ್ ಟಿಒ ಕಚೇರಿ ಹಳಿ ತಪ್ಪಿದ ರೈಲಿನಂತೆ ಆಗಿದೆ. ಇದನ್ನು ಸಚಿವರು ಗಮನಕ್ಕೆ ತೆಗೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ಅಂಕಿ ಅಂಶಗಳನ್ನು ಕೂಡ ಕೊಡುತ್ತಿದ್ದೇನೆ. ಇದ್ದ ಇಬ್ಬರು 75, 36 ದಿನ ಮಾತ್ರ… ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆ ಇದೆ. ನಮಗೆ ಸ್ಟೇಟ್ ಬ್ಯಾಂಕ್ ಸಮೀಪವಿರುವ, ಕೇಂದ್ರ ಮೈದಾನದ ಎದುರಿಗೆ ಇರುವ ಆರ್ ಟಿಒ ಕಚೇರಿಯ ಮಹತ್ವ ಗೊತ್ತಿಲ್ಲದೇ ಇರಬಹುದು. ಅದೇ ಹಳೆ ಧೂಳು ಹಿಡಿದ ಕಟ್ಟಡ, ಒಳಗೆ ಹೋದರೆ ಯಾವುದೋ ಮೀನು ಮಾರುಕಟ್ಟೆಗೆ ಹೋದ ಹಾಗೆ ಆಗುತ್ತದೆ ಎಂದು ಅನಿಸಬಹುದು. ನಿಮಗೆ ಗೊತ್ತಿರಲಿ, ನಮ್ಮ ರಾಜ್ಯದ ರಾಜಧಾನಿ ಬಿಟ್ಟರೆ ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ರಾಜ್ಯದಲ್ಲಿಯೇ ಅತೀ ಹೆಚ್ಚು ಆದಾಯವನ್ನು ತಂದುಕೊಡುವ ಕಚೇರಿಯಾಗಿದೆ. ಇಲ್ಲಿನ ಮುಖ್ಯಸ್ಥರನ್ನು ಉಪಸಾರಿಗೆ ಆಯುಕ್ತರು ಅಥವಾ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್ನುತ್ತಾರೆ. ರಾಜ್ಯದ ಬೊಕ್ಕಸವನ್ನು ತುಂಬಿಸುವ ಮಂಗಳೂರು ಆರ್ ಟಿಒ ಬಗ್ಗೆ ನಮ್ಮ ಆಡಳಿತ ಪಕ್ಷಗಳು, ಸರಕಾರಗಳು ತಳೆದಿರುವ ನಿರ್ಲಕ್ಷ್ಯ ನೋಡಿದರೆ ನಿಜಕ್ಕೂ ಈ ಸರಕಾರಿ ವ್ಯವಸ್ಥೆಯ ಮೇಲೆನೆ ಜಿಗುಪ್ಸೆ ಉಂಟಾಗುತ್ತದೆ. 2014 ರಿಂದ ಇಲ್ಲಿಯವರೆಗೆ ಇಲ್ಲಿ ಪೂರ್ಣಾವಧಿ ಆರ್ ಟಿಒ ಇಲ್ಲ. ಆದರೆ ಮಧ್ಯದಲ್ಲಿ ಅಂದರೆ 15.1.2015 ರಿಂದ 31.3.2015 ರ ತನಕ ಕೇವಲ ಎಪ್ಪತೈದು ದಿನ ಇಲ್ಲಿ ಒಬ್ಬರು ಆರ್ ಟಿಒ ಇದ್ದರು. ಅವರ ಹೆಸರು ಅಫ್ಜಲ್ ಅಹ್ಮದ್ ಖಾನ್. ಖಾನ್ ಬಂದು ಇಲ್ಲಿ ಸರಿಯಾಗಿ ಕುಳಿತುಕೊಂಡು ಕಮಾನು ತೆಗೆದುಕೊಳ್ಳುವ ಮೊದಲೇ ಇಲ್ಲಿಂದ ಎದ್ದು ಹೋಗಿಬಿಟ್ಟರು. ನಂತರ ಮತ್ತೆ ಇಲ್ಲಿ ಒಂದೂವರೆ ವರ್ಷ ಯಾವುದೇ ಆರ್ ಟಿಒ ಸುಳಿವೇ ಇರಲಿಲ್ಲ. ನಂತರದ ವರ್ಷ ಅಂದರೆ 18.9.2016 ರಂದು ಇನ್ನೊಬ್ಬರು ಬಂದು ಅಧಿಕಾರ ವಹಿಸಿಕೊಂಡರು. ಅವರು 24.10.2016 ರಂದು ಇಲ್ಲಿಂದ ಗಂಟುಮೂಟೆ ಕಟ್ಟಿ ಹೊರಟೇಬಿಟ್ಟರು. ಇದ್ದದ್ದು 36 ದಿನಗಳು ಮಾತ್ರ. ನಂತರ ಇಲ್ಲಿ ಯಾವ ಆರ್ ಟಿಒ ಕೂಡ ಬಂದು ವ್ಯವಸ್ಥೆಯ ಬಗ್ಗೆ ಗಮನ ಹರಿಸಲೇ ಇಲ್ಲ. ಚಿನ್ನದ ಮೊಟ್ಟೆ ಇಡುವ ಕೋಳಿ ನಮ್ಮ ಆರ್ ಟಿಒ… ಇದು ನಿನ್ನೆ ಮೊನ್ನೆಯ ಸಮಸ್ಯೆ ಆಗಿದ್ದರೆ ಹೋಗಲಿ ಇನ್ನೊಂದು ನಾಲ್ಕು ದಿನ ನೋಡೋಣ ಎಂದು ಅಂದುಕೊಂಡು ನಾನು ಬರೆಯುತ್ತಿರಲಿಲ್ಲ. ಆದರೆ ಇದು ಕಳೆದ ಬಾರಿ ಕಾಂಗ್ರೆಸ್ ಸರಕಾರ ಇದ್ದಾಗಲೂ ಇತ್ತು. ಈ ಬಾರಿ ಸಮ್ಮಿಶ್ರ ಸರಕಾರ ಇದ್ದಾಗಲೂ ಮುಂದುವರೆಯುತ್ತಿದೆ. ಕಳೆದ ಬಾರಿ ಉಸ್ತುವಾರಿ ಸಚಿವರು ಕಾಂಗ್ರೆಸ್ಸಿನವರಾಗಿದ್ದರು.
ಈ ಬಾರಿ ಕಾಂಗ್ರೆಸ್ಸಿನ ಶಾಸಕರೇ ಉಸ್ತುವಾರಿ ಸಚಿವರಾಗಿದ್ದಾರೆ. ಅಷ್ಟಕ್ಕೂ ಕೇವಲ ಆರ್ ಟಿಒ ಇಲ್ಲ ಎನ್ನುವುದು ಮಾತ್ರ ವಿಷಯ ಅಲ್ಲ. ಮಂಗಳೂರಿನ ಆರ್ ಟಿಒದಲ್ಲಿ “ಇಲ್ಲ”ದರ ಪಟ್ಟಿಯೇ ಇದೆ. ಅಲ್ಲಿ ಎರಡು ಸಹಾಯಕ ಸಾರಿಗೆ ಅಧಿಕಾರಿಗಳ ಹುದ್ದೆ ಖಾಲಿ ಇದೆ. ಅದರೊಂದಿಗೆ ಇಪ್ಪತ್ತು ವಾಹನ ನಿರೀಕ್ಷಕರು ಅಂದರೆ ಆಡುಭಾಷೆಯಲ್ಲಿ ಬ್ರೇಕ್ ಇನ್ಸಪೆಕ್ಟರ್ ಗಳಲ್ಲಿ ಇಲ್ಲಿ ಇರುವುದು ಕೇವಲ ಹತ್ತು ಇನ್ಸಪೆಕ್ಟರುಗಳು ಮಾತ್ರ. ಅಂದರೆ ಹತ್ತು ಪೋಸ್ಟ್ ಗಳು ಖಾಲಿ ಇವೆ. ಅದರಲ್ಲಿಯೇ ಒಬ್ಬರು ಡೇ, ಇನ್ನೊಬ್ಬರು ನೈಟ್ ಎಂದು ಕೆಲಸ ಹಂಚಿಕೊಂಡಿರುತ್ತಾರೆ. ಎಲ್ ಎಲ್ ಆರ್, ಚೆಕ್ ಪೋಸ್ಟ್ ಡ್ಯೂಟಿ, ಅಪಘಾತವಾಗಿರುವ ವಾಹನಗಳನ್ನು ಪರೀಕ್ಷಿಸಿ ಅದನ್ನು ಬಿಡುಗಡೆ ಮಾಡುವ ಹೀಗೆ ಇರುವ ಅಸಂಖ್ಯಾತ ಕೆಲಸಗಳಿಗೆ ಇಲ್ಲಿ ಸ್ಟಾಫ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಮಂಗಳೂರು ಆರ್ ಟಿಒದಲ್ಲಿ ದಿನಕ್ಕೆ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳು ಕನಿಷ್ಟ ನೂರೈವತ್ತಾದರೂ ನೋಂದಾವಣೆ ಆಗಿಯೇ ಆಗುತ್ತದೆ. ಅದೆಲ್ಲ ನೋಡಿಕೊಳ್ಳಲು ಇಲ್ಲಿ ಕ್ಲಾರ್ಕ್ ಕೊರತೆ ಕೂಡ ಇದೆ. ಒಟ್ಟು 46 ಕ್ಲಾರ್ಕ್ ಗಳಿರಬೇಕಾದ ಜಾಗದಲ್ಲಿ ಇಪ್ಪತ್ತು ಜನ ಮಾತ್ರ ಇದ್ದಾರೆ. ಅಲ್ಲಿ ಕೂಡ 26 ಪೋಸ್ಟ್ ಖಾಲಿ ಇದೆ. ಎಲ್ಲವನ್ನು ಸೇರಿಸಿ ಒಟ್ಟು 97 ಹುದ್ದೆಗಳು ಇರಬೇಕಾದ ಜಾಗದಲ್ಲಿ ಅಲ್ಲಿ 40 ಹುದ್ದೆಗಳು ಮಾತ್ರ ಇವೆ. ಉಳಿದ 57 ಹುದ್ದೆಗಳು ಖಾಲಿ ಇವೆ. ರಾಜ್ಯದ ಅತ್ಯಂತ ಹೆಚ್ಚು ಆದಾಯ ಇರುವ ಇಲಾಖೆಯಲ್ಲಿ ಒಂದಾಗಿರುವ ಆರ್ ಟಿಒದ ಮಂಗಳೂರು ಕಚೇರಿಯ ಬಗ್ಗೆ ಇಷ್ಟು ತಾತ್ಸಾರ ಯಾಕೆ. ನಾಲ್ಕೂವರೆ ವರ್ಷಗಳಲ್ಲಿ 75, 36 ದಿನ ಮಾತ್ರ ನಿಮಗೆ ಆರ್ ಟಿಒ ನೇಮಿಸಲು ಸಾಧ್ಯವಾದರೆ ನೀವು ರಾಜ್ಯವನ್ನು ಐದು ವರ್ಷ ನಡೆಸುವುದು ಹೌದಾ?
Leave A Reply