ಮತ್ತೊಮ್ಮೆ ಖಾಸಗಿ ಬಸ್ ಮಾಲಿಕರ ವಿರೋಧ?

ನಾನು ನಿನ್ನೆ ನಿರೀಕ್ಷೆ ಮಾಡಿದ ಹಾಗೆ ಆಗಿದೆ. ಬೇಕಾದರೆ ನನ್ನ ನಿನ್ನೆಯ ಜಾಗೃತ ಲೇಖನ ನೋಡಿ. ಖಾಸಗಿ ಬಸ್ ಮಾಲೀಕರು ತಮ್ಮ ವಿರೋಧವನ್ನು ತೋರಿಸಿದ್ದಾರೆ. ಅವರಿಗೆ ಮಂಗಳೂರು-ಮೂಡಬಿದ್ರೆ-ಕಾರ್ಕಳ ರೂಟಿನಲ್ಲಿ ಸರಕಾರಿ ಬಸ್ಸುಗಳು ಓಡಲೇಬಾರದು ಎನ್ನುವ ಹಟ ಸ್ಪಷ್ಟವಾಗಿದೆ. ಅದಕ್ಕೆ ಸರಿಯಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ಕಡೆಯಿಂದ ಆ ರೂಟಿನಲ್ಲಿ ಎಂಟು ಬಸ್ಸುಗಳಿಗೆ ಪರ್ಮಿಟ್ ಕೇಳಲಾಗಿತ್ತು ಅದಕ್ಕೆ ಖಾಸಗಿ ಬಸ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರು ನಗರದ ಪ್ರಮುಖ ಆಯ್ದ ತಾಣಗಳಿಗೆ ಸರಕಾರಿ ಬಸ್ಸುಗಳನ್ನು ಇಳಿಸುವ ಕೆಎಸ್ ಆರ್ ಟಿಸಿಯವರ ಆಶಯಕ್ಕೆ ಕೂಡ ಖಾಸಗಿ ಬಸ್ಸು ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ಮಂಗಳೂರಿನ ಕರ್ಮವೇ ಇದು. ಇಲ್ಲಿ ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಯಾವುದೇ ಸಾರಿಗೆ ವ್ಯವಸ್ಥೆಗೆ ಖಾಸಗಿಯವರು ಸುಲಭವಾಗಿ ಅಡ್ಡಗಾಲು ಹಾಕುತ್ತಾರೆ. ಮಂಗಳೂರಿನಲ್ಲಿ ಮಾತ್ರ ವಿಮಾನ ನಿಲ್ದಾಣದಿಂದ ನಗರದೊಳಗೆ ಇರುವ ಪ್ರಮುಖ ಸ್ಥಳಗಳಿಗೆ ಹೋಗುವ ಸೂಕ್ತ ಬಸ್ಸಿನ ವ್ಯವಸ್ಥೆ ಇಲ್ಲ. ಒಂದು ವೇಳೆ ನರ್ಮ್ ಬಸ್ ಮಾದರಿಯಲ್ಲಿ ಆಕರ್ಷಕ ಬಸ್ಸುಗಳನ್ನು ವಿಮಾನ ನಿಲ್ದಾಣದ ಹೊರಗಿನಿಂದ ಮಾಡಿದರೆ ಖಂಡಿತ ನಗರದೊಳಗೆ ಇರುವ ಮಂಗಳಾದೇವಿ, ಅತ್ತ ಸುರತ್ಕಲ್, ಇತ್ತ ಕಿನ್ನಿಗೋಳಿ, ಗಡಿಭಾಗ ತಲಪಾಡಿ ಹೀಗೆ ಬೇರೆ ಬೇರೆ ಕಡೆಯವರಿಗೆ ಅನುಕೂಲವಾಗುತ್ತಿತ್ತು. ಅಷ್ಟಕ್ಕೂ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಎಂದು ಕೆಎಸ್ ಆರ್ ಟಿಸಿಯವರಿಗೆ ಸೂಚನೆ ಬಂದದ್ದು ರಾಜ್ಯ ಪ್ರಧಾನ ಕಾರ್ಯದರ್ಶಿಯವರಿಂದ.
ಕೋರ್ಟಿಗೆ ಹೋದರೆ ನ್ಯಾಯಾಲಯ ಏನು ಮಾಡಲಿದೆ…
ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಿಂದ ಇಂತಹ ವ್ಯವಸ್ಥೆ ಇರುವಾಗ ಮಂಗಳೂರಿನಿಂದ ಯಾಕೆ ಇಲ್ಲ ಎಂದು ಅವರು ಕೇಳಿದ ನಂತರ ಕೆಎಸ್ ಆರ್ ಟಿಸಿ ಕಡೆಯಿಂದ ಎಂಟು ಬಸ್ಸಿಗೆ ಪರ್ಮಿಟ್ ಕೇಳಲಾಗಿದೆ. ಆದರೆ ಅದಕ್ಕೂ ಈ ಖಾಸಗಿಯವರು ವಿರೋಧ ಮಾಡಿದ್ದಾರೆ. ಒಂದು ವೇಳೆ ಇವರ ವಿರೋಧವನ್ನು ಲೆಕ್ಕಿಸದೇ ಆರ್ ಟಿಎ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಅನುಮತಿ ಕೊಟ್ಟರೆ ಏನಾಗುತ್ತದೆ? ಈ ಖಾಸಗಿ ಬಸ್ಸು ಮಾಲೀಕರು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ. ಹೇಗೂ ಅವರ ಬಳಿ ಹಣ ಇದೆ. ಎಷ್ಟು ವರ್ಷ ಬೇಕಾದರೂ ಕೇಸನ್ನು ದೂಡಿಕೊಂಡು ಹೋಗಲು ಶಕ್ತರಾಗಿದ್ದಾರೆ. ಕೇಸ್ ಲೇಟಾದಷ್ಟು ಅವರಿಗೆ ಲಾಭ.
ನ್ಯಾಯಾಲಯದಲ್ಲಿ ಅವರ ವಾದ ಕೂಡ ಹಳೆ ಕ್ಯಾಸೆಟನ್ನು ತಿರುಗಿಸಿ ಹಾಕಿದ ಹಾಗೆ ಇರುತ್ತದೆ. ಅವರು ಏನು ಹೇಳುವುದೇಂದರೆ 1992 ರಿಂದ ಇಲ್ಲಿಯ ತನಕ ಜಿಲ್ಲಾಧಿಕಾರಿ ಆಗಿದ್ದವರು ನಗರದೊಳಗೆ ಯಾವುದೇ ಬಸ್ಸುಗಳಿಗೆ ಪರ್ಮಿಟ್ ಕೊಟ್ಟಿಲ್ಲ ಎನ್ನುವುದು. ನನ್ನ ಪ್ರಕಾರ ಒಂದು ವೇಳೆ ಆರ್ ಟಿಎ ಅಧ್ಯಕ್ಷರು ನೇರವಾಗಿ ಸರಕಾರಿ ಬಸ್ಸುಗಳಿಗೆ ಪರ್ಮಿಟ್ ಕೊಟ್ಟು ಆಗ ಈ ಖಾಸಗಿ ಬಸ್ಸಿನವರು ಕೋರ್ಟಿಗೆ ಹೋದರೆ ಆಗ ನ್ಯಾಯಾಲಯ ಇಂತಹ ಪ್ರಕರಣಗಳನ್ನು ಮೇಲ್ಮೋಟಕ್ಕೆ ನೋಡಿ ವಜಾ ಮಾಡಿಬಿಡಬೇಕು. ಯಾಕೆಂದರೆ 1992 ರಲ್ಲಿ ಇನ್ನು ಬಸ್ಸು ಪರ್ಮಿಟ್ ಬೇಡಾ ಎಂದು ಹೇಳುವಾಗ ಮಂಗಳೂರು ಹೇಗಿತ್ತು ಮತ್ತು ಈಗ ಹೇಗಿದೆ ಎನ್ನುವುದನ್ನು ಕೆಎಸ್ ಆರ್ ಟಿಸಿ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕು. ಆಗ ಜನಸಂಖ್ಯೆ ಇದ್ದದ್ದು ಹೆಚ್ಚೆಂದರೆ ಮೂರು ಲಕ್ಷ. ಈಗ ಅದು ಐದು ಲಕ್ಷ ದಾಟಿ ಮುನ್ನುಗ್ಗುತ್ತಿದೆ.
ಹಾಗಾದರೆ ಆಗ ಇದ್ದಷ್ಟೇ ಬಸ್ಸುಗಳು ಈಗ ಕೂಡ ಸಾಕಾ?
ಬೇಕಾದರೆ ಬೆಳಗಿನ ಮತ್ತು ಸಂಜೆಯ ಪೀಕ್ ಟೈಮ್ ಗಳಲ್ಲಿ ಇಲ್ಲಿನ ಸಿಟಿ ಬಸ್ಸುಗಳನ್ನು ನೋಡಬೇಕು. ಕಂಡಕ್ಟರ್ ಗೆ ಕಾಲಿಡಲು ಜಾಗ ಇಲ್ಲದಷ್ಟು ಬಸ್ಸು ತುಂಬಿ ತುಳುಕುತ್ತಿರುತ್ತದೆ. 45 ಜನ ಇರುವ ಕಡೆ ತೊಂಭತ್ತು ಜನ ಇರುತ್ತಾರೆ. ಹಿಂದೆ ಹೋಗಿ, ಮುಂದೆ ಹೋಗಿ ಎಂದು ಹಣ ತೆಗೆದುಕೊಂಡದ್ದೇ ಕೊಂಡದ್ದು. ಹತ್ತು ಸ್ಟ್ಯಾಂಡಿಂಗ್ ಇದ್ದ ಕಡೆ ನಾಲ್ವತ್ತು ಜನ ನಿಂತಿರುತ್ತಾರೆ. ಹೀಗಿರುವಾಗ ಜನ ಕಷ್ಟಪಟ್ಟು ನಿಂತು ಹಣ ಕೊಡ ಕೊಟ್ಟು ಇವರ ಬಸ್ಸಿನಲ್ಲಿ ಪ್ರಯಾಣಿಸಬೇಕಾ? ಅದರ ಬದಲಿಗೆ ಇವರು ಬೇರೆ ಬಸ್ಸುಗಳಿಗೆ ಅವಕಾಶ ಕೊಡಬಹುದಲ್ಲ. ಇನ್ನು ಈ ಬಸ್ಸಿನವರು ಜನರನ್ನು ಕುರಿಮಂದೆಯಂತೆ ತುಂಬಿ ತೆಗೆದುಕೊಂಡು ಹೋಗುತ್ತಿದ್ದರೂ ಪೊಲೀಸರು ಯಾವ ಕ್ರಮವನ್ನು ಕೂಡ ತೆಗೆದುಕೊಳ್ಳುತ್ತಿಲ್ಲ. ಆ ಧೈರ್ಯ ಬಸ್ಸಿನವರಿಗೆ ಇದೆ.
ಇನ್ನು ಬುಧವಾರ ನಡೆದ ಆರ್ ಟಿಎ ಮೀಟಿಂಗ್ ನಲ್ಲಿ ಜನರಿಗೆ ಬಸ್ಸುಗಳಲ್ಲಿ ಆಗುವ ತೊಂದರೆ, ಟ್ರಾಫಿಕ್ ಜಾಮ್ ನಂತಹ ವಿಷಯಗಳು ಚರ್ಚೆಯಾದವು. ಇನ್ನು ರಿಕ್ಷಾ ಚಾಲಕ- ಮಾಲೀಕರು ರಿಕ್ಷಾ ಬಾಡಿಗೆ ದರವನ್ನು ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಇಟ್ಟರು. ಕಳೆದ ಕೆಲವು ಸಮಯದಿಂದ ರಿಕ್ಷಾ ಬಾಡಿಗೆ ದರ ಹೆಚ್ಚಳ ಮಾಡಿಲ್ಲ, ಆದ್ದರಿಂದ ಈಗ ಹೆಚ್ಚು ಮಾಡಬೇಕು ಎಂದು ಹೇಳಿದ್ದಾರೆ. ಅದಕ್ಕೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೆ ಏಕಾಏಕಿ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಅದಕ್ಕೆ ಒಂದು ಉಪ ಸಮಿತಿಯನ್ನು ರಚನೆ ಮಾಡುವುದಾಗಿ ಹೇಳಿದರು. ಆ ಸಮಿತಿ ಮೂರು ವಾರದೊಳಗೆ ವರದಿಯನ್ನು ನೀಡಬೇಕು. ಆ ವರದಿಯನ್ನು ನೋಡಿ ನಂತರ ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಹೇಳಿದರು.
Leave A Reply