ಅಜಿತ್ ವಿರುದ್ಧ ಬೃಹತ್ ಪ್ರತಿಭಟನೆ ನಡೆದರೆ ಹಿಂದೂಗಳಿಗೆ ನಾಚಿಕೆಯಾಗಬೇಕು!!

ಭಗವಾನ್ ಮಾತನಾಡಿದ್ರು. ತಮ್ಮ ಹಿಂದಿನ ಸ್ಟೇಟ್ ಮೆಂಟ್ ತಣ್ಣಗಾಗಿ ಜನ ತಮ್ಮನ್ನು ಮರೆಯುತ್ತಾರೆ ಎಂದು ಅನಿಸಿದ ಕೂಡಲೇ ಅವರು ಮತ್ತೆ ಮಾತನಾಡುತ್ತಾರೆ. ನಿಮಗೆ ಒಂದು ವಿಷಯ ಗೊತ್ತಿರಬಹುದು. ನಮ್ಮ ರಾಜ್ಯ ಸರಕಾರ ಕೆಲವರಿಗೆ ಸರಕಾರದ ಹಣದಲ್ಲಿ ಅಂದರೆ ನಮ್ಮ ನಿಮ್ಮ ತೆರಿಗೆಯ ಹಣದಲ್ಲಿ ಗನ್ ಮ್ಯಾನ್ ಎಂದು ಕೊಡುತ್ತದೆಯಲ್ಲ. ಅದನ್ನು ಲೈಫ್ ಟೈಮ್ ಕ್ಕಾಗಿ ಕೊಡುವುದಿಲ್ಲ. ಕಾಲಕಾಲಕ್ಕೆ ಗೃಹ ಇಲಾಖೆ ಗುಪ್ತಚರ ಇಲಾಖೆಯಿಂದ ವರದಿಯನ್ನು ತರಿಸಿಕೊಂಡು ನಾವು ಗನ್ ಮ್ಯಾನ್ ಕೊಟ್ಟಿರುವ ವ್ಯಕ್ತಿಗೆ ಕಳೆದ ಆರು ತಿಂಗಳಲ್ಲಿ ಜೀವಕ್ಕೆ ಅಪಾಯ ಆಗುವಂತಹ ಯಾವುದಾದರೂ ಸಾಧ್ಯತೆ ಇತ್ತಾ? ಮುಂದಿನ ದಿನಗಳಲ್ಲಿ ಜೀವಕ್ಕೆ ತೊಂದರೆಯಾಗುವಂತಹುದು ಯಾವುದಾದರೂ ಘಟನೆ ಸಂಭವಿಸುವ ಸಾಧ್ಯತೆ ಇದೆಯಾ ಎಂದು ಪರೀಕ್ಷಿಸುತ್ತದೆ. ಒಂದು ವೇಳೆ ಯಾವುದೇ ಅಪಾಯ ಇಲ್ಲ ಎಂದು ಮನವರಿಕೆ ಆದರೆ ಗನ್ ಮ್ಯಾನ್ ಸೌಲಭ್ಯವನ್ನು ಹಿಂದಕ್ಕೆ ಪಡೆದುಕೊಳ್ಳುತ್ತದೆ. ಆದರೆ ಕೆಲವರು ಏನು ಮಾಡುತ್ತಾರೆ ಎಂದರೆ ಇನ್ನೇನೂ ಗನ್ ಮ್ಯಾನ್ ಫೆಸಿಲಿಟಿ ಹಿಂದಕ್ಕೆ ಹೋಗುತ್ತದೆ ಎಂದು ಅರಿವಿಗೆ ಬಂದಕೂಡಲೇ ತಕ್ಷಣ ಒಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಬಿಡುತ್ತಾರೆ. ಅದರಿಂದ ಅವರಿಗೆ ಮತ್ತೆ ಬೆದರಿಕೆಯಂತಹ ಘಟನೆಗಳು ನಡೆಯುತ್ತದೆ. ಗನ್ ಮ್ಯಾನ್ ಸೌಲಭ್ಯ ಮುಂದುವರೆಸಲೇಬೇಕಾಗುತ್ತದೆ. ಇದೊಂದು ರೀತಿಯಲ್ಲಿ ಅಂತವರಿಗೆ ಆಟ. ಭಗವಾನ್ ಕಳೆದ ಹಲವಾರು ಸಮಯದಿಂದ ಮಾಡುತ್ತಿರುವುದು ಅದನ್ನೇ.
ಭಗವಾನ್ ಬಾಯಿ ಮುಚ್ಚಿಸಲು ಏನು ಮಾಡಬೇಕು…
ಅವರಿಗೆ ಗೊತ್ತಿದೆ. ತಾವು ಹಿಂದೂಗಳ ಆರಾಧ್ಯ ದೇವರಾಗಿರುವ ಶ್ರೀ ರಾಮಚಂದ್ರನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ರಾಜ್ಯದಲ್ಲಿ ಒಂದೆರಡು ಕೇಸ್ ಬಿದ್ದೇ ಬೀಳುತ್ತದೆ. ಒಂದಿಬ್ಬರು ಮುಖಕ್ಕೆ ಎಸಿಡ್ ಹಾಕುತ್ತೇವೆ, ಕೈ ಕಾಲು ಮುರಿಯುತ್ತೇವೆ ಎಂದು ಹೇಳಿಯೇ ಹೇಳುತ್ತಾರೆ. ತಾನು ಮತ್ತೆ ಚಲಾವಣೆಯಲ್ಲಿ ಇರುತ್ತೇನೆ ಎಂದು ಭಗವಾನ್ ನಂಬಿದ್ದಾರೆ. ಅದರೊಂದಿಗೆ ಇಂತಹ ವಿಚಾರಗಳು ಟಿವಿ ವಾಹಿನಿಗಳಲ್ಲಿ ಚರ್ಚೆಯಲ್ಲಿ ಬಂದರೆ ಭಗವಾನ್ ಅಂತವರಿಗೆ ಹಬ್ಬ. ನಾನು ಹೇಳುವುದಾದರೆ ಭಗವಾನ್ ಏನು ಹೇಳಿದರೂ ಅದನ್ನು ಹಾಕುವುದಿಲ್ಲ ಎಂದು ಟಿವಿ, ಪೇಪರ್ ನವರು ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ ಭಗವಾನ್ ಫೇಸ್ ಬುಕ್ ಗೆ ಹಾಕಿದರೆ ಅವರ ಎಫ್ ಬಿ ಅಕೌಂಟ್ ಸಂಸ್ಥೆಯವರು ರದ್ದು ಮಾಡಬೇಕು. ಒಂದು ವೇಳೆ ಭಗವಾನ್ ಹೇಳಿಕೆಯನ್ನು ವಾಟ್ಸ್ ಅಪ್ ನಲ್ಲಿ ಮೊದಲು ಯಾರು ಹರಡಲು ಶುರು ಮಾಡಿದರಾ ಅವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಬೇಕು. ಹೀಗೆ ಮಾಡಿದರೆ ಭಗವಾನಿದ್ದು ಎಲ್ಲವೂ ನಿಂತುಬಿಡುತ್ತದೆ. ಈಗ ಏನಾಗಿದೆ ಎಂದರೆ ಭಗವಾನ್ ಎಂಭತ್ತು ಶೇಕಡಾ ಇರುವ ಹಿಂದೂ ದೇವರ ವಿರುದ್ಧ ಬರೆಯುತ್ತಾರೆ. ಹಲವರ ಮನಸ್ಸಿಗೆ ನೋವಾಗುತ್ತದೆ. ತುಂಬಾ ಜನರ ಹೃದಯಗಳಿಗೆ ಬೇಸರವಾಗುತ್ತದೆ. ಹೆಚ್ಚೆಂದರೆ ಈ ಸಲದ ಹಾಗೆ ರಾಜ್ಯದ ಒಟ್ಟು ಮೂರು ಕಡೆ ಪೊಲೀಸ್ ಕೇಸ್ ದಾಖಲಾಗಿದೆ. ಅದಕ್ಕಿಂತ ಹೆಚ್ಚು ಹಿಂದೂಗಳು ಏನು ಮಾಡಲು ಹೋಗುತ್ತಾರೆ. ಇನ್ನು ಹಿಂದೂ ಜನ ಜಾಗೃತಿ ಅಥವಾ ಸನಾತನ ಸಂಸ್ಥೆಯ ಕೆಲವರು ಸೇರಿ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಪ್ರತಿಭಟನೆ ಮಾಡಬಹುದು. ಆದರೆ ಯಾವತ್ತೂ ಭಗವಾನ್ ವಿರುದ್ಧ ಒಂದು ಆಂದೋಲನ ಶುರುವಾಗಿ ರಾಜ್ಯ ಸರಕಾರ ಅವರನ್ನು ಬಂಧಿಸುವ ಅನಿವಾರ್ಯ ಪರಿಸ್ಥಿತಿಯನ್ನು ತರಲು ನಮ್ಮ ಕೈಯಿಂದ ಸಾಧ್ಯವಾಗುತ್ತದೆಯಾ?
ಅದೇ ಇಸ್ಲಾಂ ಬಗ್ಗೆ ಮಾತನಾಡಿದರೆ..
ಆದರೆ ಇನ್ನೊಂದು ಭಾಗ ನೋಡಿ. ಸುವರ್ಣ ಟಿವಿಯ ನಿರೂಪಕ ಅಜಿತ್ ಹನುಮಕ್ಕನವರ್ ಅವರು ಡಿಬೇಟಿನಲ್ಲಿ ಇಸ್ಲಾಂ ಧರ್ಮದ ಪ್ರವಾದಿಯವರ ಬಗ್ಗೆ ಮಾತನಾಡಿ ಈ ಬಗ್ಗೆ ಸ್ಪಷ್ಟೀಕರಣ ಕೊಡಿ ಎಂದು ಪ್ಯಾನಲ್ ನಲ್ಲಿದ್ದ ಭಗವಾನ್ ಪರ(?) ಇರುವವರನ್ನು ಕೇಳಿದ್ದಕ್ಕೆ ಅಜಿತ್ ವಿರುದ್ಧ ಪ್ರತಿಭಟನೆ ಮಾಡಲು ವ್ಯವಸ್ಥಿತ ಸಂಚು ನಡೆಯಿತಲ್ಲ. ಅಂದರೆ ಸರಾಸರಿ ಹದಿನೈದು ಶೇಕಡಾದಷ್ಟು ಇರುವ ಮುಸ್ಲಿಮರು ತಮ್ಮ ಧರ್ಮದ ಪ್ರವಾದಿಯವರ ಬಗ್ಗೆ ವಿವರಣೆ ಕೇಳುವಾಗ ವಿಶ್ಲೇಷಣೆ ಮಾಡಿದ್ದಕ್ಕೆ ಒಗ್ಗೂಡಿ ಒಬ್ಬ ಟಿವಿ ನಿರೂಪಕರ ವಿರುದ್ಧ ಚಳುವಳಿ ಮಾಡುತ್ತಾರೆ ಎಂದರೆ ಎಂಭತ್ತು ಶೇಕಡಾ ಇರುವ ಹಿಂದೂಗಳು ತಮ್ಮ ಧರ್ಮದ ಆರಾಧ್ಯ ಮೂರ್ತಿ ಶ್ರೀರಾಮ ಕಳ್ಳು ಕುಡಿಯುತ್ತಿದ್ದ, ಸೀತೆಗೆ ಕುಡಿಸುತ್ತಿದ್ದ ಎಂದೆಲ್ಲ ಸುಳ್ಳು ಸುಳ್ಳು ಒಬ್ಬ ಬೊಗಳುತ್ತಿದ್ದರೆ ಎಲ್ಲೋ ಒಂದೆರಡು ಕಡೆ ಸಾಂಕೇತಿಕವಾಗಿ ಫೋಟೋಗೆ ಬರುವುದಕ್ಕೆ ಮಾತ್ರ ಕೇಸು ದಾಖಲಿಸುತ್ತೇವೆ ಎಂದರೆ ನಿಜಕ್ಕೂ ಧರ್ಮದ ಬಗ್ಗೆ ಪ್ರೀತಿ ಇರುವುದು ನಮಗಾ? ಅವರಿಗಾ? ಅಲ್ಲಿ ಪೊಲೀಸ್ ಸ್ಟೇಶನ್ ಗಳಿಗೆ ಹೋಗಿ ನಮ್ಮ ಪ್ರಕರಣ ಕೊಟ್ಟು ತಿಂಗಳು ಆಗುತ್ತಾ ಬಂದರೂ ಏನು ಆಗಿಲ್ಲವಲ್ಲ ಎಂದು ಯಾರಾದರೂ ತಮ್ಮ ಪ್ರಕರಣದ ಬಗ್ಗೆ ವಿಚಾರಿಸಲು ಹೋದರೆ ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದಾರೆ ಎಂದು ಹೇಳುವ ಅಧಿಕಾರಿಗಳು ಅದೇ ಭಗವಾನ್ ರಂತಹ ಚೀಪ್ ಪಬ್ಲಿಸಿಟಿ ವೀರರಿಗೆ ಐದೈದು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಹಣ, ಶ್ರಮ ವೇಸ್ಟ್ ಮಾಡುತ್ತಿದ್ದರಲ್ಲ, ಇದೆಲ್ಲ ಸಿಎಂಗೆ ಗೊತ್ತಾಗಲ್ವ? ಹೊಸ ವರ್ಷಾಚರಣೆ ಎಂಜಾಯ್ ಮಾಡಲು ಸಿಂಗಾಪುರಕ್ಕೆ ಮೊದಲ ಪತ್ನಿ ಮತ್ತು ಮಕ್ಕಳೊಂದಿಗೆ ಹೋಗಿರುವ ಸಿಎಂಗೆ ಇದೆಲ್ಲ ಬಂದ ಮೇಲೆ ಯಾರಾದರೂ ಸಲಹೆಗಾರರು ಹೇಳ್ರಪ್ಪಾ!
Leave A Reply