ಸೋರಿ ಹೋಗಿರುವ ಎರಡು ಕೋಟಿ ಪತ್ತೆ ಹಚ್ಚಲು ಕಾಮನ್ ಸೆನ್ಸ್ ಬೇಕು, ಸಿಎ ಡಿಗ್ರಿ ಅಲ್ಲ!!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸೋರಿ ಹೋಗಿರುವ ಒಂದೂವರೆಯಿಂದ ಎರಡು ಕೋಟಿ ರೂಪಾಯಿಗಳನ್ನು ಹೇಗೆ ಮತ್ತೆ ಪಾಲಿಕೆಯ ಬೊಕ್ಕಸಕ್ಕೆ ತರುವುದು ಎನ್ನುವುದರ ಬಗ್ಗೆ ಚಿಂತನೆ ಶುರುವಾಗಿ ಬೆರಳೆಣಿಕೆಯ ವರ್ಷಗಳು ಸರಿದು ಹೋಗಿದೆ. ಇವತ್ತಿನ ತನಕ ಯಾರಿಗೂ ಆ ಹಣ ಎಲ್ಲಿಗೆ ಹೋಯಿತು ಎನ್ನುವ ಯಾವ ಐಡಿಯಾ ಇಲ್ಲ. ಇಷ್ಟೊಂದು ಹಣ ಪಾಲಿಕೆಯ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಮಂಗಳೂರು ಒನ್ ನಿಂದ ಮೊದಲನೇ ಮಹಡಿಯ ನಡುವೆ ಎಲ್ಲಿಯಾದರೂ ಮಾಯವಾಗಿ ಹೋಯಿತಾ ಎನ್ನುವುದರ ಬಗ್ಗೆ ಯಾವುದಾದರೂ ನುರಿತ ಜ್ಯೋತಿಷಿಗಳ ಬಳಿ ಕೇಳಬೇಕು. ಅವರಿಗೂ ಗೊತ್ತಾಗಲಿಕ್ಕಿಲ್ಲ. ಹೀಗೊಂದು ಹಗರಣ ಆಗಿದೆ ಎಂದು ಮೊದಲು ಧ್ವನಿ ಎತ್ತಿದವರು ಪಾಲಿಕೆಯ ಭಾರತೀಯ ಜನತಾ ಪಾರ್ಟಿಯ ಸದಸ್ಯರಾಗಿರುವ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ವಿಜಯ ಕುಮಾರ್ ಶೆಟ್ಟಿ. ಆಗ ಮೇಯರ್ ಆಗಿದ್ದವರು ಕಾಂಗ್ರೆಸ್ ಆಡಳಿತದ ಈ ಅವಧಿಯ ಮೊದಲ ಮೇಯರ್ ಮಹಾಬಲ ಮಾರ್ಲ. ಅವರ ನಂತರ ನಾಲ್ಕು ಮೇಯರ್ ಆದ್ರು. ಕೊನೆಯ ಅಂದರೆ ಐದನೇ ಮೇಯರ್ ಭಾಸ್ಕರ್ ಮೊಯಿಲಿಯವರ ಅಧಿಕಾರಾವಧಿ ಮುಗಿಯಲು ಸ್ಲಾಗ್ ಒವರ್ ಮಾತ್ರ ಬಾಕಿ ಇದೆ. ಇನ್ನು ಕೂಡ ಆ ಹಣದ ಬಗ್ಗೆ ಯಾರಿಗೂ ಐಡಿಯಾ ಇಲ್ಲ. ಪ್ರಾರಂಭದಲ್ಲಿ ಮಹಾಬಲ ಮಾರ್ಲ ಹಣ ಪತ್ತೆಗೆ ಕಮಿಟಿಯೊಂದನ್ನು ನೇಮಿಸಿದ್ದರು. ಕಮಿಟಿ ಸಭೆ ನಡೆಸಿ ಅಂಬಡೆ, ಕಾಫಿಯ ಬಿಲ್ ಮಾಡಿದ್ದೇ ಬಂತು. ಏನೂ ಆಗಲಿಲ್ಲ. ನಂತರ ಈ ಬಗ್ಗೆ ಪತ್ತೆ ಹಚ್ಚಲು ಆಡಿಟರ್ ಗಳನ್ನು ನೇಮಿಸಲಾಯಿತು. ಅವರಿಗೂ ಆಗಲಿಲ್ಲ. ನಾನು ಈ ಬಗ್ಗೆ ಹಿಂದೆನೂ ಒಮ್ಮೆ ನೆನಪಿಸಿದ್ದೆ. ಆದರೆ ಸದ್ಯ ಪಾಲಿಕೆಗೆ ಇದೆಲ್ಲ ಮರೆತು ಹೋಗಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ಗಂಟು ಮೂಟೆ ಕಟ್ಟಿ ಹೊರಡುವ ತಯಾರಿಯಲ್ಲಿರುವುದರಿಂದ ಇನ್ನು ಅವರಿಂದ ನಿರೀಕ್ಷೆ ಮಾಡುವುದು ಕೂಡ ಮೂರ್ಖತನ.
ನುಂಗಿದ ಹಣಕ್ಕೆ ಲೆಕ್ಕ ಸಿಗುತ್ತಾ…
ಮಾರ್ಚ್ ಎರಡನೇ ವಾರದಲ್ಲಿ ಬಹುತೇಕ ಪಾಲಿಕೆ ಆಡಳಿತವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವುದರಿಂದ ಅವರಾದರೂ ಈ ಹಣದ ಬಗ್ಗೆ ಸೂಕ್ತವಾಗಿರುವ ಕ್ರಮ ತೆಗೆದುಕೊಳ್ಳಬಹುದು ಎನ್ನುವ ನಿರೀಕ್ಷೆ ನನ್ನದು. ಒಂದು ಲಾಜಿಕ್ ಮೂಲಕ ಪತ್ತೆ ಹಚ್ಚಿ ಆ ಎರಡು ಕೋಟಿ ಹಣವನ್ನು ಹುಡುಕಿ ತೆಗೆದುಕೊಳ್ಳಬಹುದು. ಆವತ್ತು ವಿಷಯ ಏನು ಆಗಿತ್ತು ಎಂದರೆ ನೀವು ನಿಮ್ಮ ಸ್ವಯಂ ಘೋಷಿತ ಆಸ್ತಿ ತೆರಿಗೆ ಪುಸ್ತಕವನ್ನು ತೆಗೆದುಕೊಂಡು ಮಂಗಳೂರು ಒನ್ ಗೆ ಹೋಗಿರುತ್ತಿರಿ. ಅಲ್ಲಿ ಕುಳಿತ ಸಿಬ್ಬಂದಿ ನಿಮ್ಮ ಪುಸ್ತಕ ತೆಗೆದುಕೊಂಡು ಅದಕ್ಕೆ ಸೀಲ್ ಹೊಡೆದು ನಿಮ್ಮಿಂದ ಹಣವನ್ನು ಸ್ವೀಕರಿಸಿ ನಿಮ್ಮನ್ನು ಕಳುಹಿಸಿಕೊಟ್ಟಿರುತ್ತಾರೆ. ನಿಮ್ಮ ಮನಸ್ಸಿನಲ್ಲಿ “ನಾನು ಹಣ ಕೊಟ್ಟಿದ್ದೇನೆ. ಅದಕ್ಕೆ ಸಾಕ್ಷಿಯಾಗಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪುಸ್ತಕದಲ್ಲಿ ಸೀಲ್ ಹೊಡೆದಿದ್ದಾರೆ”. ಆದರೆ ನಿಮ್ಮ ಹಣ ಪಾಲಿಕೆಗೆ ಹೋಗಿಯೇ ಇಲ್ಲ. ಅದು ಮಂಗಳೂರು ಒನ್ ನಲ್ಲಿ ಉಳಿದುಬಿಟ್ಟಿರುತ್ತದೆ. ಈಗ ಎಷ್ಟು ಪುಸ್ತಕಗಳಿಗೆ ಇವರು ಸೀಲ್ ಹೊಡೆದಿದ್ದಾರೆ, ಎಷ್ಟು ಹಣ ಸ್ವೀಕರಿಸಿದ್ದಾರೆ ಎನ್ನುವ ಬಗ್ಗೆ ಯಾವ ಲೆಕ್ಕವೂ ಪಾಲಿಕೆಗೆ ಇಲ್ಲ. ಹಾಗಾದರೆ ಈ ಹಣ ಹೋಗಿಯೇ ಬಿಟ್ಟಿತ್ತಾ ಎನ್ನುವ ನಿರಾಶವಾದ ನಿಮ್ಮಲ್ಲಿ ಉದ್ಘವಿಸುತ್ತದೆ. ಅದಕ್ಕೆ ಸ್ವಲ್ಪ ತಲೆ ಖರ್ಚು ಮಾಡಿದರೆ ಹೋದ ಹಣ ಹಿಂದಿರುಗಿ ಬರಬಹುದು.
ಹೇಗೆ ಗೊತ್ತಾ?
2012-13, 2013-14 ಮತ್ತು 2014-15 ಈ ಅವಧಿಯಲ್ಲಿ ಯಾರೆಲ್ಲ ಸ್ವಯಂ ಘೋಷಿತ ಆಸ್ತಿಯ ತೆರಿಗೆಯನ್ನು ಕಟ್ಟಿಲ್ಲ ಎನ್ನುವುದನ್ನು ನೋಡಬೇಕು. ಪಾಲಿಕೆಯ ದಾಖಲೆಗಳಲ್ಲಿ ಪ್ರತಿಯೊಬ್ಬರ ಡೋರ್ ನಂಬ್ರ ಇರುತ್ತದೆ. ಅದರ ಎದುರು ಅವರು ಯಾವ ವರ್ಷಗಳಲ್ಲಿ ತೆರಿಗೆ ಕಟ್ಟಿಲ್ಲ ಎನ್ನುವ ಮಾಹಿತಿ ಇರುತ್ತದೆ. ಅವರು ಈ ಮೂರು ವರ್ಷಗಳಲ್ಲಿ ಕಟ್ಟಿದ್ದ ತೆರಿಗೆಯ ಬಗ್ಗೆ ಪಾಲಿಕೆಯಲ್ಲಿ ನಮೂದಿಸಲಾಗಿಲ್ಲ ಎಂದಾದರೆ ಅಂತಹ ಯಾರೆಲ್ಲ ತೆರಿಗೆ ಕಟ್ಟಿಲ್ಲ ನೋಡಿ ಅವರಿಗೆ ನೋಟಿಸು ಜಾರಿ ಮಾಡುವುದು. ಬರುವಾಗ ನಿಮ್ಮ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಪುಸ್ತಕವನ್ನು ತೆಗೆದುಕೊಂಡು ಬನ್ನಿ ಎಂದು ಹೇಳುವುದು. ಅದರಲ್ಲಿ ಸೀಲ್ ಹೊಡೆದಿದ್ದರೆ ಅವರು ಹಣ ಕಟ್ಟಿದ್ದಾರೆ ಎಂದೇ ಅರ್ಥ. ಅಂತಹ ಪುಸ್ತಕಗಳನ್ನೆಲ್ಲ ಒಟ್ಟು ಮಾಡಿದರೆ ಅವರು ಕಟ್ಟಿರುವ ಹಣದ ಒಟ್ಟು ಮೊತ್ತ ಗೊತ್ತಾಗುತ್ತದೆ. ಹೇಗೂ ಕಟ್ಟಿದ ಹಣ ರಸೀದಿ ಅದರಲ್ಲಿ ಇರುತ್ತದೆ. ಹಣದ ಮೊತ್ತ ಗೊತ್ತಾಗುತ್ತದೆ. ಇಷ್ಟು ಸುಲಭದ ಲೆಕ್ಕ ತೆಗೆಯಲು ಪಾಲಿಕೆಗೆ ಆಗುತ್ತಿಲ್ಲ. ನಮ್ಮಂತವರ ಸಲಹೆ ಇವರು ತೆಗೆದುಕೊಳ್ಳುತ್ತಾರಾ!
Leave A Reply