ಮೇಯರ್ ಕೊನೆಯ ಸುದ್ದಿಗೋಷ್ಟಿಯಲ್ಲಿ ಹೇಳದೇ ಇದ್ದ ಕಾಮಗಾರಿಗಳ ಪಟ್ಟಿ ನನ್ನ ಬಳಿ ಇದೆ!!
ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತದ ಐದನೆ ಮತ್ತು ಕೊನೆಯ ಮೇಯರ್ ಕೆ ಭಾಸ್ಕರ್ ಮೊಯಿಲಿ ಅವರು ತಮ್ಮ ಮೇಯರ್ ಅವಧಿಯ ಕೊನೆಯ ಸುದ್ದಿಗೋಷ್ಟಿ ಮಾಡಿ ಮುಗಿಸಿದ್ದಾರೆ. ಇನ್ನಾರು ತಿಂಗಳಿಗೆ ಪಾಲಿಕೆಯಲ್ಲಿ ಚುನಾಯಿತ ಸರಕಾರ ಇರುವುದಿಲ್ಲವಾದ್ದರಿಂದ ಜಿಲ್ಲಾಧಿಕಾರಿಯವರ ಕೈಗೆ ಅಧಿಕಾರ ಒಪ್ಪಿಸುವ ಮೊದಲು ಪಾಲಿಕೆಯ ಕೊನೆಯ ಅಧಿಕೃತ ವರದಿ ವಾಚನ ಕಾರ್ಯಕ್ರಮ ಎನ್ನಬಹುದು. ಪತ್ರಿಕೆಗಳ ಸಪ್ಲಿಮೆಂಟರಿ ಪೇಜ್ ಗಳ ಮುಖಪುಟದಲ್ಲಿ ಎದ್ದು ಕಾಣುವಂತೆ ಬರಲಿ ಎನ್ನುವ ಉದ್ದೇಶದಿಂದ ದೊಡ್ಡ ದೊಡ್ಡ ಸಂಖ್ಯೆಗಳನ್ನು ಮೇಯರ್ ಉಚ್ಚರಿಸಿದ್ದಾರೆ. ಅವರ ಕಾಮಗಾರಿಗಳಲ್ಲಿ ಜನಸಾಮಾನ್ಯರಿಗೆ ಎಷ್ಟು ಪ್ರಯೋಜನವಾಗಿದೆ ಎನ್ನುವುದು ಮಾತ್ರ ಅವರೇ ಹೇಳಬೇಕು. ಮೊದಲನೇಯದಾಗಿ ಕೊನೆಯ ಮೇಯರ್ ಹೇಳಿರುವಂತೆ ಪಾಲಿಕೆ ವತಿಯಿಂದ ಕಳೆದ ಐದು ವರ್ಷಗಳಲ್ಲಿ 403 ಕೋಟಿ ರೂಪಾಯಿ ವೆಚ್ಚದಲ್ಲಿ 11,688 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದಿದ್ದಾರೆ. ನನ್ನ ಪ್ರಕಾರ ಪಾಲಿಕೆ ಎನ್ನುವುದು ಜನರೊಂದಿಗೆ ನೇರ ಸಂಪರ್ಕದಲ್ಲಿರುವ ವ್ಯವಸ್ಥೆ. ಜನರಿಗೆ ಏನು ಬೇಕು ಮತ್ತು ಏನು ಮಾಡಿದರೆ ಜನರಿಗೆ ಉಪಯೋಗವಾಗುತ್ತೆ ಎಂದು ಅರಿತುಕೊಳ್ಳಬಲ್ಲ ಮತ್ತು ಅದನ್ನು ಅನುಷ್ಟಾನಗೊಳಿಸಲು ಹಣ ಇಡಬಲ್ಲ, ಜಾರಿಗೆ ತರಲು ಶ್ರಮಿಸಬಲ್ಲ ವ್ಯವಸ್ಥೆಯನ್ನೇ ಸ್ಥಳೀಯಾಡಳಿತ ಸಂಸ್ಥೆ ಎನ್ನುವುದು. ವಿಧಾನಸಭೆ, ವಿಧಾನಪರಿಷತ್, ಲೋಕಸಭೆಗಳೆಲ್ಲ ಶಾಸನವನ್ನು ಯೋಜಿಸಲು, ಅನುಷ್ಟಾನಕ್ಕೆ ತರಲು ಕೆಲಸ ಮಾಡುವ ಪ್ರಜಾಪ್ರಭುತ್ವದ ಅಂಗಗಳು. ಆದರೆ ಈಗೀಗ ಏನಾಗಿದೆ ಎಂದರೆ ನಳ್ಳಿ ನೀರು ಬರಲ್ಲ ಎಂದು ಸಂಸದರಿಗೆ, ಡ್ರೈನೇಜ್ ಬ್ಲಾಕ್ ಆಗಿದೆ ಎಂದು ಶಾಸಕರಿಗೆ, ಲೈಟ್ ಕಂಬದ ದೀಪ ಉರಿಯಲ್ಲ ಎಂದು ಸಚಿವರಿಗೆ ಫೋನ್ ಮಾಡುವ ಜನರಿದ್ದಾರೆ. ಹೋಗಲಿ, ಅದು ಬೇರೆ ವಿಷಯ. ಈಗ ಮೇಯರ್ ಸುದ್ದಿಗೋಷ್ಟಿಗೆ ಬರೋಣ.
ಶಕ್ತಿನಗರದ ಜಿಪ್ಲಸ್ ತ್ರೀ ಕಥೆ..
ನಾನು ಮೊದಲನೇಯದಾಗಿ ಮೇಯರ್ ಅವರಿಗೆ ಕೇಳುವುದು. ಶಕ್ತಿನಗರದ ಆಶ್ರಯ ಕಾಲೋನಿಯಲ್ಲಿ ಜನಸಾಮಾನ್ಯರಿಗೆ ಕಟ್ಟಿಕೊಡುತ್ತೇವೆ ಎಂದು ಹೇಳಿದ ಜಿ ಪ್ಲಸ್ ತ್ರೀ ವಸತಿ ಸಮುಚ್ಚಯದ ಕಥೆ ಏನಾಯ್ತು. ಕಳೆದ ವಿಧಾನಸಭಾ ಚುನಾವಣೆಯ ಮೊದಲು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರನ್ನು ಕರೆಸಿ ಮಂಗಳೂರು ನಗರ ದಕ್ಷಿಣದ ಹಿಂದಿನ ಶಾಸಕರು ಎಲ್ಲಿಯೋ ಒಂದು ಕಡೆ ಗಡಿಬಿಡಿಯಲ್ಲಿ ಮಾಡಿದ ಶಂಕುಸ್ಥಾಪನೆಯ ಕಥೆ ಏನಾಯಿತು? ಶಕ್ತಿನಗರದಲ್ಲಿ ಬಡವರಿಗೆ 930 ಮನೆ ಕಟ್ಟಿಸಿಕೊಡುತ್ತೇವೆ ಎಂದು ಪುರಭವನದಲ್ಲಿ ಚೀಟಿ ಎತ್ತಿ, ಪಾರ್ಕ್ ಸುತ್ತಲೂ ಆಳೆತ್ತರದ ನಾಯಕರ ಫ್ಲೆಕ್ಸ್ ನಿಲ್ಲಿಸಿ ಫೋಟೋ, ವಿಡಿಯೋದ ಎದುರು ಕ್ಯಾಮೆರಾಗಳಿಗೆ ನೀವೆಲ್ಲ ಫೋಸ್ ಕೊಟ್ಟು ಹೋದ ಬಳಿಕ ನಿಮ್ಮ ಪಾಲಿಕೆಯಲ್ಲಿ ಯಾರಾದರೂ ಒಬ್ಬರು ಮೇಯರ್ ಸಹಿತ ಅಲ್ಲಿ ಹೋಗಿ ಅಲ್ಲಿ ಕಾಮಗಾರಿ ಎಷ್ಟಾಗಿದೆ ಎಂದು ನೋಡಿ ಬಂದಿದ್ದೀರಾ? ಅಲ್ಲಿ ಒಂದೇ ಒಂದು ಕಲ್ಲು ಅತ್ತಲಿಂದ ಇತ್ತ ಹೋಗಿಲ್ಲ. ಟೆಂಡರ್ ಕರೆಯಲಾಗಿದೆ ಎಂದು ಹೇಳಿದ್ದಿರಿ. ಆದರೆ ಇಲ್ಲಿಯ ತನಕ ಒಂದೇ ಒಂದು ಕಾಮಗಾರಿ ನಡೆದಿಲ್ಲ. ಬಡಜನರ ಮೊಣಕೈಗೆ ಬೆಣ್ಣೆ ಹಚ್ಚಿ ಚೆಂದ ನೋಡಲು ನಿಂತ ಮೇಯರ್ ಅವರೇ ಆ ಬಗ್ಗೆ ಯಾಕೆ ಸುದ್ದಿಗೋಷ್ಟಿಯಲ್ಲಿ ವಿವರ ಕೊಡುವುದಿಲ್ಲ. ಹಾಗಾದರೆ ಫಲಾನುಭವಿಗಳಿಗೆ ಕೇವಲ ಆಸೆ ತೋರಿಸಲು ಅವರ ಮತಗಳನ್ನು ಪಡೆಯಲು ನೀವೆಲ್ಲ ಮಾಡಿದ್ದ ಪ್ಲಾನ್ ಎಂದು ಹೇಳಬಹುದಲ್ಲ?
ಪೌರಕರ್ಮಿಕರ ಮನೆ ಕಥೆ ಅವಸ್ಥೆ..
ಇನ್ನು ಪೌರಕಾರ್ಮಿಕ ಗೃಹಭಾಗ್ಯದ ಬಗ್ಗೆ ಹೇಳಿದ್ದಿರಿ. 134 ಮನೆಗಳನ್ನು ಶಕ್ತಿನಗರದ ಆಶ್ರಯ ಕಾಲೋನಿಯಂತೆ ಜಿಪ್ಲಸ್ ತ್ರೀ ಮಾದರಿಯಂತೆ 10.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎನ್ನುತ್ತೀರಿ. ತಲಾ 7.50 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಥಮ ಹಂತದಲ್ಲಿ 32 ಮನೆಗಳು ನಿರ್ಮಾಣವಾಗಿವೆ. ಆದರೆ ವಿಷಯ ಎಂದರೆ 400 ಚದರ ಅಡಿ ವಿಸ್ತ್ರೀರ್ಣದ ಮನೆ ನಿರ್ಮಿಸಿದ್ದೀರಿ. ಅದರಲ್ಲಿ ಒಂದು ಕುಟುಂಬ ವಾಸ ಮಾಡಲು ಅಗುತ್ತಾ ಮೇಯರ್ ಅವರೇ? ಗಂಡ, ಹೆಂಡತಿ, ಇಬ್ಬರು ಮಕ್ಕಳು ನಿಂತರೆ ಅಲ್ಲಾಡಲು ಜಾಗ ಇಲ್ಲದಂತಹ ಮನೆ ಕಟ್ಟಿದರೆ ಅವರಿಗೆ ವಾಸಿಸಲು ಅಲ್ಲ, ಬಿಡಲು ಅಲ್ಲ. ಅಂತಹ ಪರಿಸ್ಥಿತಿ ತಂದು ಇಟ್ಟಿದ್ದಿರಿ. ನಿಮ್ಮ ಪಕ್ಷದ ನಾಯಕರೂ, ದಕ ಉಸ್ತುವಾರಿ ಸಚಿವರೂ ಆಗಿರುವ ಯುಟಿ ಖಾದರ್ ಅವರು ತಮ್ಮ ಕ್ಷೇತ್ರ ಒಂಭತ್ತುಕೆರೆ ಪ್ರದೇಶದಲ್ಲಿ ಬೆಂಕಿಪೊಟ್ಟಣದಂತೆ ನೂರಾರು ಮನೆಗಳನ್ನು ನಿರ್ಮಿಸಿ ಅದರಲ್ಲಿ ಜನ ವಾಸಿಸಲು ಆಗದೇ ಜನರ ತೆರಿಗೆಯ ಕೋಟ್ಯಾಂತರ ರೂಪಾಯಿ ಹಣ ಈಗಾಗಲೇ ಪೋಲಾಗಿದೆ. ಈಗ ಪಾಲಿಕೆ ಕೂಡ ಅಂತಹುದೇ ಕೆಲಸ ಮಾಡಿದೆ. ಅಗ್ಗದ ಪ್ರಚಾರ ಇವತ್ತು ಸಿಕ್ಕಿರಬಹುದು. ಆದರೆ ಜನ ಅಲ್ಲಿ ಖುಷಿಯಿಂದ ವಾಸ ಮಾಡದೇ ಹೋದರೆ ಅದೇ ನಿಮಗೆ ತಿರುಗುಬಾಣವಾಗಲೂಬಹುದು. ಇನ್ನು ಏಶಿಯನ್ ಡೆವಲಪಮೆಂಟ್ ಬ್ಯಾಂಕಿನಿಂದ ಎರಡನೇ ಆವೃತ್ತಿಯ ಸಾಲ ಬಂದಿದೆ. ಅದರಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಅರವತ್ತು ವಾರ್ಡಿನ ಜನರಿಗೆ 24*7 ಕುಡಿಯುವ ನೀರು ಸಿಗುತ್ತದೆ ಎಂದು ಹೇಳಿದ್ದೀರಿ. ಇದೇ ವಾಕ್ಯವನ್ನು ಹತ್ತು ವರ್ಷಗಳ ಮೊದಲು ನಿಮ್ಮ ಪಕ್ಷದವರು ಹೇಳಿಯಾಗಿದೆ. ಆದರೆ ಇಲ್ಲಿಯ ತನಕ ಇಡೀ ವಾರ ಬಿಡಿ, ಕೆಲವೆಡೆ ಇಡೀ ದಿನ ಬಂದರೆ ಆಶ್ಚರ್ಯ. ಮೊದಲ ಹಂತದಲ್ಲಿ ಬಂದ 360 ಕೋಟಿ ರೂಪಾಯಿ ಎಲ್ಲಿಗೆ ಹೋಯಿತು ಎಂದು ಈಗ ಹುಡುಕುವ ಪರಿಸ್ಥಿತಿ ಇದೆ. ಇನ್ನು ವಿಷಯ ತುಂಬಾ ಇದೆ. ನೀವು ಸುದ್ದಿಗೋಷ್ಟಿ ಮಾಡುವುದೇ ಅಪರೂಪ. ಹಾಗಿರುವಾಗ ನೀವು ಪ್ರೆಸ್ ಮೀಟ್ ಮಾಡಿ ಹೇಳಿದ್ದು ತುಂಬಾ ಗಂಭೀರ ವಿಷಯವಾಗಿರುತ್ತದೆ. ಅದನ್ನು ಅಷ್ಟೇ ಗಂಭೀರವಾಗಿ ವಿಶ್ಲೇಷಣೆ ಮಾಡಿ ಜನರ ಮುಂದೆ ಇಡುತ್ತಿದ್ದೇನೆ!
Leave A Reply