ಎಷ್ಟು ಇಂಚಿನ ಪೈಪ್ ಹಾಕಬೇಕು ಎಂದು ಗೊತ್ತಿಲ್ಲದವರಿಗೆ ಎಷ್ಟು ಕೋಟಿ ಬಂದರೆಷ್ಟು?
ಈ ಬಾರಿ ಮತ್ತೆ ಏಶಿಯನ್ ಡೆವಲಪಮೆಂಟ್ ಬ್ಯಾಂಕ್ ನಿಂದ ಎರಡನೇ ಕಂತಿನಲ್ಲಿ ಸಾಲ ಬಂದಿದೆ. ಬಂದಿರುವ ಹಣ ಸುಮಾರು 360 ಕೋಟಿ. ಈ ಹಣದಿಂದ ಮಂಗಳೂರು ನಗರ ಪಾಲಿಕೆಯ ಅರವತ್ತು ವಾರ್ಡಿನಲ್ಲಿ ದಿನದ 24 ಗಂಟೆ, ವಾರದ ಏಳು ದಿನಗಳಲ್ಲಿಯೂ ಕುಡಿಯುವ ನೀರು ಪೂರೈಸಲು ಸಾಧ್ಯ ಎಂದು ಮೇಯರ್ ಭಾಸ್ಕರ್ ಮೊಯಿಲಿ ಅವರು ತಮ್ಮ ನಿರ್ಗಮನ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ನಾನು ಅವರು ಸುದ್ದಿಗೋಷ್ಟಿಯಲ್ಲಿ ಮಾಡಿದ ವರದಿ ವಾಚನದ ಮುಂದುವರೆದ ಭಾಗವನ್ನು ಹೇಳುತ್ತಿದ್ದೇನೆ.
ಅದರ ಮೊದಲ ಭಾಗವನ್ನು ನನ್ನ ಹಿಂದಿನ ಜಾಗೃತ ಅಂಕಣದಲ್ಲಿ ನೀವು ಓದಬಹುದು. ಎಡಿಬಿಯಿಂದ ಹಣ ನಮಗೆ ಬಂದಿರುವುದೇ ಒಳಚರಂಡಿ ಮತ್ತು ಕುಡಿಯುವ ನೀರಿನ ಪೂರೈಕೆ ಸರಿಯಾಗಿ ಮಾಡಬೇಕು ಎನ್ನುವ ಕಾರಣಕ್ಕೆ. ಈಗ ಎರಡನೇ ಕಂತು 360 ಕೋಟಿ ಬಂದಾಗಲೂ ನಮ್ಮ ಪಾಲಿಕೆಯಲ್ಲಿ ಈ ಹಣದಿಂದ ಒಳಚರಂಡಿ ಮತ್ತು 24*7 ಕುಡಿಯುವ ನೀರು ಪೂರೈಸಲಾಗುವುದು, ಎಲ್ಲವನ್ನು ಸರಿ ಮಾಡಲಾಗುವುದು ಎಂದು ಮೇಯರ್ ಹೇಳುತ್ತಿದ್ದಾರೆ. ಹಾಗಾದರೆ ಹಿಂದೆ ಬಂದ ಇಷ್ಟೇ ಕೋಟಿ ಹಣದಿಂದ ನೀವು ಮಾಡಿರುವುದು ಏನು ಮೇಯರ್ ಅವರೇ. ಕೇಳಿದರೆ ಈಗ ಎಡಿಬಿ-2 ನಲ್ಲಿ ಒಳಚರಂಡಿಯ ಮಿಸ್ಸಿಂಗ್ ಲಿಂಕ್ ಜೋಡಿಸುವ ಕೆಲಸ ಶುರು ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಎಷ್ಟು ಮಿಸ್ಸಿಂಗ್ ಲಿಂಕ್ ಜೋಡಿಸುವ ಕೆಲಸವನ್ನು ಮೇಯರ್ ಅವರು ಹೋಗಿ ನೋಡಿದ್ದಾರೆ. ಪೈಪ್ ಎಷ್ಟು ದೊಡ್ಡದಿದೆ ಎನ್ನುವುದು ಇವರಿಗೆ ಗೊತ್ತಿದೆಯಾ? ಒಳಚರಂಡಿಯಲ್ಲಿ ಈ ಮ್ಯಾನ್ ಹೋಲ್ ಗಳ ಕೆಲಸ ಏನು ಎನ್ನುವುದು ನಿಮಗೆ ಗೊತ್ತಿರಬಹುದು. ಉದಾಹರಣೆಗೆ ನೀವು ಫ್ಲಾಟಿನಲ್ಲಿ ವಾಸಿಸುತ್ತಾ ಇದ್ದೀರಿ ಎಂದು ಅಂದುಕೊಳ್ಳೋಣ. ಅಲ್ಲಿಂದ ತ್ಯಾಜ್ಯದ ಪೈಪನ್ನು ಮ್ಯಾನ್ ಹೋಲ್ ಗೆ ಜೋಡಿಸುತ್ತಾರೆ. ಒಂದು ಮ್ಯಾನ್ ಹೋಲ್ ನಿಂದ ಮತ್ತೊಂದು ಮ್ಯಾನ್ ಹೋಲ್ ಗೆ ಇವರು ಹೊಸ ಪೈಪನ್ನು ಅಳವಡಿಸಬೆಕಾಗಿದೆ. ಪಾಲಿಕೆಯವರು ಈಗ ಹಲವು ಕಡೆ ಹತ್ತು ಇಂಚು ದಪ್ಪದ ಪೈಪನ್ನು ಹಾಕುತ್ತಿದ್ದಾರೆ. ಅದು ಮುಂದಿನ ಇಪ್ಪತ್ತು ವರ್ಷವನ್ನು ಗಮನವಿಟ್ಟು ಅವರು ಮಾಡುತ್ತಿರುವ ಯೋಜನೆ. ಅದೇ ಈಗಿನ ಏರುತ್ತಿರುವ ಜನಸಂಖ್ಯೆಯನ್ನು ನೋಡಿದರೆ ಅದು ಕೂಡ ಸಾಕಾಗುವಂತಹ ಯಾವುದೇ ಲಕ್ಷಣ ಇಲ್ಲ. ಆದರೆ ಇಲ್ಲಿ ಆಶ್ಚರ್ಯ ಎಂದರೆ ಎಡಿಬಿ-2 ರಲ್ಲಿ ಬಂದಿರುವ ಅನುದಾನದಲ್ಲಿ ನಮ್ಮ ಇಂಜಿನಿಯರ್ಸ್ ಎಂಟು ಇಂಚಿನ ಹೊಸ ಪೈಪನ್ನು ಹಾಕುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯವರೇ ಮಂಗಳೂರು ನಗರದ ಮುಂದಿನ ಬೆಳವಣಿಗೆಯನ್ನು ಗಮನವಿಟ್ಟು ಕನಿಷ್ಟ 10 ಇಂಚಿನ ಪೈಪಾದರೂ ಬೇಕು ಎನ್ನುವ ನಿರ್ಧಾರಕ್ಕೆ ಬಂದಿರುವಾಗ ಎಡಿಬಿ-2 ನೋಡುತ್ತಿರುವ ಅಧಿಕಾರಿಗಳು ಹೇಗೆ ಎಂಟು ಇಂಚು ಅಳವಡಿಸುತ್ತಿದ್ದಾರೆ. ಇಷ್ಟಾದರೂ ಅವರಿಗೆ ಹೇಳುವವರು ಯಾರೂ ಇಲ್ಲವೇ? ನಾವು ತುಂಬಾ ಕಲಿತು ಹಿಂದೆ ಹೋಗುತ್ತಿದ್ದೇವಾ ಎಂದು ಅನಿಸುತ್ತದೆ.
ಇನ್ನು ಎರಡು ವರ್ಷ ಮೊದಲು ನಗರಾಭಿವೃದ್ಧಿ ಸಚಿವರಾಗಿದ್ದ ರೋಶನ್ ಬೇಗ್ ಅವರು ಮಂಗಳೂರಿಗೆ ಭೇಟಿ ಕೊಟ್ಟಾಗ ಪಾಲಿಕೆಯಲ್ಲಿ ಎಲ್ಲ ಬಿಲ್, ತೆರಿಗೆಯನ್ನು ಒನ್ ಲೈನ್ ನಲ್ಲಿ ಸಲ್ಲಿಸುವ ವ್ಯವಸ್ಥೆ ಮಾಡುತ್ತೇನೆ ಎಂದಿದ್ದರು. ಆದರೆ ಇಲ್ಲಿಯ ತನಕ ಎಷ್ಟು ಬಿಲ್, ತೆರಿಗೆಯನ್ನು ಒನ್ ಲೈನ್ ನಲ್ಲಿ ಕಟ್ಟುವ ಪ್ರಕ್ರಿಯೆ ಶುರುವಾಗಿದೆ ಎನ್ನುವುದನ್ನು ಮೇಯರ್ ಅವರು ಹೇಳಬೇಕು? ಇನ್ನೂ ಸಾಕಷ್ಟು ವಿಷಯ ಇದೆ.
Leave A Reply