ಐಜಿಪಿಯವರಿಗೆ ನಿದ್ರಾಭಂಗ ತಂದ ಕಾವೂರು ಮಹಾಶಿವರಾತ್ರಿಯ ಯಕ್ಷಗಾನ!!
ರೋಮ್ ನಲ್ಲಿದ್ದಾಗ ರೋಮ್ ನವರಾಗಿರಬೇಕು ಎನ್ನುವ ಗಾದೆ ಮಾತು ಇಂಗ್ಲೀಷ್ ನಲ್ಲಿದೆ. ಹಾಗೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದಾಗ ತುಳುನಾಡಿನವನಾಗಿರಲೇಬೇಕು. ಅದು ಬಿಟ್ಟು ಏನ್ರೀ ಅದು ಕಿರಿಕಿರಿ ಎಂದು ಯಕ್ಷಗಾನದ ಶಬ್ದಕ್ಕೆ ಹೇಳಿದರೆ ಆ ಮನುಷ್ಯನಿಗೆ ಇಲ್ಲಿನ ವಿಷಯವೇ ಗೊತ್ತಿಲ್ಲ ಎಂದು ಅರ್ಥ. ನಾನು ಹೇಳುತ್ತಿರುವುದು ಪಶ್ಚಿಮ ವಲಯದ ಐಜಿಪಿ ಅರುಣ್ ಚಕ್ರವರ್ತಿಯವರ ಬಗ್ಗೆ. ನನಗೆ ಐಜಿಪಿಯವರ ಬಗ್ಗೆ ಯಾವುದೇ ರೀತಿಯ ಪೂರ್ವಾಗ್ರಹವಿಲ್ಲ. ವೈಯಕ್ತಿಕವಾಗಿ ನನಗೆ ಯಾವುದೇ ದ್ವೇಷವೂ ಇಲ್ಲ. ಆದರೆ ಮಹಾಶಿವರಾತ್ರಿಯ ದಿನ ರಾತ್ರಿ ಅವರು ಮಂಗಳೂರಿನ ದೇವಭಕ್ತ, ಯಕ್ಷಗಾನ ಪ್ರಿಯ ನಾಗರಿಕರ ಕಣ್ಣಲ್ಲಿ ವಿಲನ್ ಆಗಿರುವುದು ಮಾತ್ರ ನಿಜ.
ನಿದ್ರಾ ದೇವತೆಯ ವಶದಲ್ಲಿದ್ದರು ಐಜಿಪಿ…
ಅಷ್ಟಕ್ಕೂ ಒಂದು ವೇಳೆ ನಿಮಗೆ ವಿಷಯ ಸರಿಯಾಗಿ ಗೊತ್ತಿಲ್ಲದಿದ್ದರೆ ಹೇಳುತ್ತೇನೆ. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾವೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಿದೆ. ಈ ಭಾಗದಲ್ಲಿ ಅದು ಪ್ರಸಿದ್ಧ ದೇವಸ್ಥಾನ ಮತ್ತು ಕಾರಣಿಕ ಕ್ಷೇತ್ರವೂ ಹೌದು. ಈಶ್ವರನ ದೇವಸ್ಥಾನವಾಗಿರುವುದರಿಂದ ಸಹಜವಾಗಿ ಮಹಾಶಿವರಾತ್ರಿಯ ರಾತ್ರಿ ಸಂಭ್ರಮವಿರುತ್ತದೆ. ಇಲ್ಲಿ ಕೂಡ ಹಾಗೇ ಇತ್ತು. ಪೂಜೆ ಪುನಸ್ಕಾರದ ನಡುವೆ ಭಜನೆ ಕಾರ್ಯಕ್ರಮ ಕೂಡ ನಡೆಯುತ್ತಿತ್ತು. ಭಕ್ತರು ಭಕ್ತಿಯ ಪರವಶದಲ್ಲಿದ್ದರು. ಹಾಗೇ ಹೊರಗೆ ದೇವಿ ಮಹಾತ್ಮೆ ಯಕ್ಷಗಾನ ನಡೆಯುತ್ತಿತ್ತು. ಸಡನ್ನಾಗಿ ಪೊಲೀಸ್ ಅಧಿಕಾರಿಗಳು ಬಂದು ಸೌಂಡ್ ಸಿಸ್ಟಮ್ ಎಲ್ಲಾ ಬಂದ್ ಮಾಡಿಸಿದ್ದಾರೆ. ಇದು ಇಲ್ಲಿ ಬಂದಂತಹ ಭಕ್ತರಿಗೆ ಸಾಕಷ್ಟು ನಿರಾಸೆಯಾಗಿದೆ. ಹೀಗೆ ಮಾಡುವುದು ಸರಿಯಲ್ಲ ಎನ್ನುವುದು ಅವರ ಆಕ್ರೋಶವಾಗಿತ್ತು. ಆದರೆ ಪೊಲೀಸರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅಷ್ಟಕ್ಕೂ ಸ್ಥಳೀಯ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಹೀಗೆ ಆಚಾನಕ್ ಆಗಿ ಬಂದು ಸೌಂಡ್ ಸಿಸ್ಟಮ್ ಆಫ್ ಮಾಡುವ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿರಬಹುದು. ಕಾರಣ ಏನೆಂದರೆ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಒಂದಿಷ್ಟು ದೂರವೇ ಇರುವ ಮೇರಿಹಿಲ್ ನ ಗುಡ್ಡೆಯಲ್ಲಿ ಐಜಿಪಿಯವರ ಸರಕಾರಿ ವಿಶಾಲವಾದ ಬಂಗ್ಲೆ ಇದೆ. ಅಲ್ಲಿ ಸಾಹೇಬ್ರು ಕಂಬಳಿ ಹೊದ್ದು ಮಲಗಿದ್ರು. ಪಾಪ, ಅವರಿಗೆ ಮಧ್ಯರಾತ್ರಿ ಮೂತ್ರಕ್ಕೋ ಯಾವುದಕ್ಕೋ ಎಚ್ಚರವಾಗಿದೆ. ನೋಡಿದ್ರೆ ದೂರದಲ್ಲಿ ಎಲ್ಲಿಯೋ ಧ್ವನಿ ಕೇಳಿಸುತ್ತಿದೆ. ಇದೇನೂ ಗಲಾಟೆ ಎಂದು ಅಲ್ಲಿನ ಕಾವೂರು ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಫೋನ್ ಮಾಡಿ ಕೇಳಿದ್ದಾರೆ. ಅವರು “ಅದು ಮಹಾಶಿವರಾತ್ರಿ ಅಲ್ವಾ. ಯಕ್ಷಗಾನ ನಡೆಯುತ್ತಿದೆ ಸರ್” ಎಂದಿದ್ದಾರೆ. ಅದಕ್ಕೆ ಇವರು ಹೋಗಿ ಅದನ್ನು ಬಂದ್ ಮಾಡಿಸ್ರಿ ಅಥವಾ ಸೌಂಡ್ ಇಲ್ಲದೆ ಮಾಡಿ, ಇಲ್ಲಿ ನಿದ್ರೆ ಬರುತ್ತಿಲ್ಲ ಎಂದಿದ್ದಾರೆ.
ಮಸೀದಿ ಆಗಿದಿದ್ರೆ ಹೀಗೆ ಮಾಡುತ್ತಿದ್ದರಾ…
ಯಕ್ಷಗಾನದ ಬಗ್ಗೆ ಗೊತ್ತಿದ್ದವರು, ಅದರ ಬಗ್ಗೆ ಪ್ರೀತಿ ಇದ್ದವರು ಯಾವತ್ತೂ ಕೂಡ ಅದರ ವಿರುದ್ಧ ಒಂದು ಶಬ್ದವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತನಾಡುವುದಿಲ್ಲ. ಆದರೆ ಅರುಣ್ ಚಕ್ರವರ್ತಿಯವರಿಗೆ ಯಕ್ಷಗಾನದ ಬಗ್ಗೆ ಗೊತ್ತಿಲ್ಲವೋ ಅಥವಾ ತಾವು ಐಜಿಪಿಯಾಗಿರುವುದರಿಂದ ಏನು ಹೇಳಿದ್ರೂ ನಡೆಯಬೇಕು ಎನ್ನುವ ಧಿಮಾಕು ಇತ್ತೋ ಗೊತ್ತಿಲ್ಲ. ತಮಗೆ ನಿದ್ರೆ ಬರದೇ ಇರಲು ದೂರದಿಂದ ಕೇಳುತ್ತಿರುವ ಯಕ್ಷಗಾನವೇ ಕಾರಣ ಎಂದು ಅಂದುಕೊಂಡು ತಕ್ಷಣ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಐಜಿಪಿಯವರು ಹೇಳಿದ್ದಾರೆ ಎಂದ ಮೇಲೆ ನಮ್ಮ ಪೊಲೀಸ್ ಅಧಿಕಾರಿಗಳ ಹುಮ್ಮಸ್ಸು ಕೇಳಬೇಕಾ. ತಕ್ಷಣ ಅಲ್ಲಿ ಓಡಿಹೋಗಿದ್ದಾರೆ. ಹೋಗಿ ಎಲ್ಲವನ್ನು ಬಂದ್ ಮಾಡಿಸಿದ್ದಾರೆ. ಜನರಿಗೆ ಮೊದಲು ಆಶ್ಚರ್ಯವಾಗಿದೆ. ಸರಿಯಾಗಿ ಚುನಾವಣೆ ನಡೆದು ವರ್ಷವಾಗಿಲ್ಲ. ಅಷ್ಟು ಬೇಗ ಮತ್ತೆ ಮೊಗಲರ ಆಳ್ವಿಕೆ ಬಂತಾ ಎಂದು ದಂಗುಬಡಿದಂತೆ ಆಗಿದೆ. ಏನಾಗಿದೆ ಎಂದು ಗೊತ್ತಾಗುವಷ್ಟರಲ್ಲಿ ಪೊಲೀಸರು ಬಂದ್ ಮಾಡಿಸಿರುವ ಸಂಗತಿ ಗೊತ್ತಾಗಿದೆ. ಸಹಜವಾಗಿ ಆಶ್ಚರ್ಯ ಹೋಗಿ ಆಕ್ರೋಶ ಉಂಟಾಗಿದೆ. ವಿಷಯ ಗೊತ್ತಾದ ತಕ್ಷಣ ಉತ್ತರ ಮತ್ತು ದಕ್ಷಿಣದ ಇಬ್ಬರು ಶಾಸಕರೂ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ತಮ್ಮ ಅಸಹಾಯಕತೆಯನ್ನು ತೋರಿಸಿದ್ದಾರೆ. ನಂತರ ಶಾಸಕದ್ವಯರ ಮಧ್ಯಸ್ಥಿಕೆಯಲ್ಲಿ ಎಲ್ಲವೂ ಸರಿಯಾಗಿ ಹೋಗಿದೆ. ಆದರೆ ಜನರಿಗೆ ಮಾತ್ರ ಪೊಲೀಸರ ನಡೆವಳಿಕೆಯಿಂದ ಆದ ಬೇಸರ ಮಾತ್ರ ಅಷ್ಟಿಷ್ಟಲ್ಲ.
ನನ್ನ ಪ್ರಶ್ನೆ ಏನೆಂದರೆ ಐಜಿಪಿ ಸಾಹೇಬ್ರರಿಗೆ ಯಾವತ್ತೂ ತಮ್ಮ ಸವಿನಿದ್ರೆಗೆ ಯಾವುದೇ ಮಸೀದಿಯವರು ಹಾಕುವ ಬಾಂಗ್ ಭಾದೆ ಕೊಡಲಿಲ್ಲವೇ ಅಥವಾ ಸುಪ್ರೀಂಕೋರ್ಟ್ ನಿರ್ದೇಶನದ ನಂತರವೂ ಬಾಂಗ್ ಸಮಯ ಮೀರಿ ಹಾಕುತ್ತಿರುವ ಮಸೀದಿಯ ಆಡಳಿತ ಮಂಡಲಿಗಳ ವಿರುದ್ಧ ಧ್ವನಿ ಎತ್ತಲು ಧೈರ್ಯ ಇಲ್ಲವೇ. ಹಿಂದೂಗಳು ಏನು ಮಾಡಿದ್ರೂ ಸುಮ್ಮನೆ ಕೂರುತ್ತಾರೆ ಎನ್ನುವ ಗ್ಯಾರಂಟಿ ಇರುವುದರಿಂದ ಹೀಗೆ ಮಾಡುತ್ತಾರಾ? ಒಟ್ಟಿನಲ್ಲಿ ದೇವಿ ಮಹಾತ್ಮೆಯ ನಡುವೆ ಪೊಲೀಸರ ಎಂಟ್ರಿ ನೋಡಿದವರಿಗೆ ಚಂಡಮುಂಡರ ಪ್ರವೇಶ ಇಷ್ಟು ಬೇಗ ಆಯಿತಾ ಎಂದೆನಿಸರಬಹುದು!
Leave A Reply