ಟ್ರಾಯಿಂಗ್ ವಾಹನಗಳು ಮಂಗಳೂರಿಗೆ ಕಾಲಿಟ್ಟಿವೆ, ದಾರಿ ಬಿಡಿ!!
ಮಂಗಳೂರಿಗೆ ಕೊನೆಗೂ ಟ್ರೋಯಿಂಗ್ ಗಾಡಿ ಬಂದಿದೆ. ಯಾವತ್ತೋ ಬರಬೇಕಿತ್ತು. ಈಗಲಾದರೂ ಬಂದಿದೆ. ಬೆಂಗಳೂರು, ಮೈಸೂರು ನಂತರ ಅತೀ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಅತೀ ಹೆಚ್ಚು. ಅದಕ್ಕೆ ಮುಖ್ಯ ಕಾರಣ ಅಡ್ಡಾದಿಡ್ಡಿ ಪಾರ್ಕಿಂಗ್. ಯಾವ ಮಳಿಗೆಗೂ ಸರಿಯಾದ ಪಾರ್ಕಿಂಗ್ ಇಲ್ಲ. ಪಾರ್ಕಿಂಗ್ ಇರುವ ಜಾಗದಲ್ಲಿ ಅನಧಿಕೃತ ಅಂಗಡಿಗಳನ್ನು ಕಟ್ಟಿ ಬಾಡಿಗೆಗೆ ಕೊಟ್ಟು ಅದರ ಮಾಲೀಕರೇ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಒಳಗೆ ಹೋಗುತ್ತಾರೆ. ಅಲ್ಲಿ ಬರುವ ಗಿರಾಕಿಗಳು ಕೂಡ ವಾಹನವನ್ನು ಅಲ್ಲಲ್ಲಿ ನಿಲ್ಲಿಸಿ ಐದು ನಿಮಿಷದಲ್ಲಿ ಬಂದು ಬಿಡುತ್ತೇವೆ ಎಂದು ಅಂದುಕೊಂಡು ಒಳಗೆ ಹೋಗುತ್ತಾರೆ. ಒಂದು ಅಂಗಡಿಗೆ ಬಂದ ನಾಲ್ಕು ಜನರಲ್ಲಿ ಮೂರು ಜನರು ಕಾರಿನಲ್ಲಿ ಬಂದಿದ್ದರೆ ಆ ರಸ್ತೆ ಅರ್ಧ ಬ್ಲಾಕ್ ಆಗುತ್ತದೆ. ಇದನ್ನೆಲ್ಲಾ ನಿಲ್ಲಿಸಬೇಕು ಎಂದರೆ ಏನು ಮಾಡಬೇಕು ಎಂದು ಯೋಚಿಸಿ, ಅನಧಿಕೃತ ಅಂಗಡಿಗಳನ್ನು ಕೆಡವಲು ನಮಗೆ ಧೈರ್ಯ ಇಲ್ಲ, ಅದರ ಬದಲಿಗೆ ಒಂದು ಟ್ರೋಯಿಂಗ್ ವೆಹಿಕಲ್ ತಂದು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ವಾಹನಗಳನ್ನೇ ತೆಗೆದುಕೊಂಡು ಹೋಗೋಣ ಎಂದು ರಾಜ್ಯ ಸರಕಾರ ಅಂದುಕೊಂಡಿತ್ತು. ಅನಧಿಕೃತ ಕಟ್ಟಡಗಳನ್ನು ಕೆಡವುದಕ್ಕಿಂತ ಇದೇ ಸುಲಭ ಎಂದುಕೊಂಡ ರಾಜ್ಯ ಸರಕಾರದ ಅಧಿಕಾರಿಗಳು ದೊಡ್ಡ ಮನಸ್ಸು ಮಾಡಿ ಒಂದು ಟ್ರಾಯಿಂಗ್ ವೆಹಿಕಲ್ ಅನ್ನು ಕಳುಹಿಸಿಕೊಟ್ಟಿದ್ದಾರೆ.
ದಂಡಂ ದಶಗುಣಂ….
ಆದರೆ ಇದು ಮಂಗಳೂರಿಗೆ ಸಾಕಾಗುವುದಿಲ್ಲ. ಈಗ ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜಿಲ್ಲಾಧಿಕಾರಿಯವರ ಆಡಳಿತ. ಅವರು ಮನಸ್ಸು ಮಾಡಿದರೆ ಪಾಲಿಕೆಯ ರಸ್ತೆ ಸುರಕ್ಷತಾ ನಿಧಿಯ ಮೂಲಕ ಇನ್ನೊಂದೆರಡು ವಾಹನಗಳನ್ನು ಖರೀದಿಸಬಹುದು. ಒಂದೊಂದು ವಾಹನಕ್ಕೆ ಅಂದಾಜು ಮೂವತ್ತು ಲಕ್ಷ ರೂಪಾಯಿಗಳು ಆಗುತ್ತವೆ. ಹಿಂದೆ ಮೇಯರ್ ಆಡಳಿತ ಇದ್ದಾಗ ಇದೇ ಫಂಡಿನಲ್ಲಿ ಬಂದ ಹಣದಲ್ಲಿ ನಮ್ಮ ಪಾಲಿಕೆ ಜೀಭ್ರಾ ಕ್ರಾಸ್, ನೋಪಾರ್ಕಿಂಗ್ ಬೋರ್ಡ್ ಎಂದು ಹಣವನ್ನು ವೇಸ್ಟ್ ಮಾಡಿದ್ದು ಬಿಟ್ಟರೆ ಒಂದು ಶಾಶ್ವತ ಉಳಿಯುವ ಕೆಲಸ ಮಾಡಿಲ್ಲ. ಅದರ ಬದಲಿಗೆ ಟ್ರಾಯಿಂಗ್ ವೆಹಿಕಲ್ ಗೆ ಹಣ ಹೂಡಿದ್ರೆ ಚೆನ್ನಾಗಿತ್ತು. ಏಕೆಂದರೆ ನಾವು ಪುಸ್ತಕಗಳಲ್ಲಿ ಮಾತ್ರ ಬುದ್ಧಿವಂತ ಜನ. ನಾವು ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಹೋಗುವುದು ನೋಡಿದರೆ ಬುದ್ಧಿ’ವಂತೆ’ ಎಂದು ಹೇಳುವವರು ಇದ್ದಾರೆ. ಅದಕ್ಕಾಗಿ ನಮ್ಮ ಊರಿಗೆ ಇಂತಹ ಮೂರ್ನಾಕು ಟ್ರಾಯಿಂಗ್ ವೆಹಿಕಲ್ ಬೇಕು. ಏಕೆಂದರೆ ದಂಡಂ ದಶಗುಣಂ ಎನ್ನುವುದನ್ನು ಜಾರಿಗೆ ತಂದರೆ ಮಾತ್ರ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಹೋಗುವವರಿಗೆ ಒಂದಿಷ್ಟು ಬುದ್ಧಿ ಬರುತ್ತದೆ.
ಹಣ, ಶ್ರಮ, ಸಮಯ ಉಳಿಯಬೇಕಾ…
ಸದ್ಯ ಟ್ರಾಯಿಂಗ್ ವಾಹನಗಳು ಎತ್ತಾಕಿಕೊಂಡು ಹೋಗುವ ವೆಹಿಕಲ್ ಗಳಿಗೆ ದ್ವಿಚಕ್ರ ವಾಹನಗಳಿಗೆ 750 ರೂಪಾಯಿ, ಹಾಗೆ ನಾಲ್ಕು ಚಕ್ರಗಳ ವಾಹನಗಳಿಗೆ 1350 ರೂಪಾಯಿ ದಂಡ ವಿಧಿಸಲಾಗುತ್ತದೆ. ನಿಮ್ಮ ವಾಹನಗಳನ್ನು ಎತ್ತಿಕೊಂಡು ಟ್ರಾಯಿಂಗ್ ವಾಹನಗಳು ಹೋಗಿ ಅದನ್ನು ಸದ್ಯ ಪುರಭವನದ ಆವರಣದಲ್ಲಿ ಇಡುತ್ತವೆ. ನೀವು ಬಳಿಕ ಯಾವ ಪೊಲೀಸ್ ಠಾಣೆಯವರು ಅದನ್ನು ಟ್ರಾಯ್ ಮಾಡಿದ್ದು ಎಂದು ನೋಡಿ ಆ ಠಾಣೆಗೆ ಹೋಗಿ ನಂತರ ಅಲ್ಲಿ ದಂಡ ಕಟ್ಟಿ ಆ ಬಳಿಕ ಪುರಭವನದ ಆವರಣದಲ್ಲಿ ಇಟ್ಟಿರುವ ವಾಹನಗಳ ಮಧ್ಯೆ ನಿಮ್ಮ ವಾಹನವನ್ನು ಹುಡುಕಿ ನಂತರ ಅದನ್ನು ತೆಗೆದು ಮನೆಗೆ ಹೋಗಬೇಕಾಗುತ್ತದೆ. ಇದರಿಂದ ನಿಮ್ಮ ಸಮಯ, ಹಣ ಮತ್ತು ಶ್ರಮ ವ್ಯರ್ಥ. ಇದರ ಬದಲಿಗೆ ಚೆಂದ ಮಾಡಿ ವಾಹನವನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿಯೇ ನಿಲ್ಲಿಸಿ ಹೋಗುವುದು ಒಳ್ಳೆಯದು. ತಪ್ಪಿದ್ರಾ. ಟ್ರೋಯಿಂಗ್ ಗತಿ!!
Leave A Reply