ಕಾಂಗ್ರೆಸ್ ಕಚೇರಿಯೊಳಗೆ ಕಾಲಿಡಬೇಡಿ ಎಂದವರಿಗೆ ಈಗ ಪೂಜಾರಿ ಬೇಕು!!
ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ, ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಬಂದಿದ್ದರೂ ನಿರಾಕರಿಸಿದ, ಇಂದಿರಾ ಸಚಿವ ಸಂಪುಟದಲ್ಲಿ ಮನಮೋಹನ್ ಸಿಂಗ್ ನಂತರದ ಸ್ಥಾನದಲ್ಲಿ ಇದ್ದ ಪ್ರಬುದ್ಧ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿಯವರನ್ನು ತಮ್ಮ ಸ್ವಾರ್ಥ ಸಾಧನೆಗಾಗಿ ದುರುಪಯೋಗಪಡಿಸಿದ ಕೀರ್ತಿ ಈಗಿನ ದಕ್ಷಿಣ ಕನ್ನಡ ಕಾಂಗ್ರೆಸ್ ನ ಹಿರಿಯಣ್ಣ ಯುಟಿ ಖಾದರ್, ಸಣ್ಣ ರೈ ಮಿಥುನ್ ಅವರಿಗೆ ಸಲ್ಲಬೇಕು. ತಮ್ಮ ಪಾಡಿಗೆ ತಾವು ಸತ್ಯವನ್ನು ಹೇಳುತ್ತಾ ಕುಳಿತುಕೊಂಡಿದ್ದ ಪೂಜಾರಿಯವರನ್ನು ತಾವು ಸತ್ಯ ಹೇಳುವುದು ಬೇಡಾ, ತಾವು ಕಾಂಗ್ರೆಸ್ಸಿನವರಾಗಿ ಸುಳ್ಳನ್ನೇ ಹೇಳಬೇಕು. ಅದು ಇವತ್ತಿನ ಅಗತ್ಯ ಎಂದು ಅವರನ್ನು ಕರೆದುಕೊಂಡು ಪುರಭವನದ ವೇದಿಕೆಯ ಮೇಲೆ ನಿಲ್ಲಿಸಿ ಸುಳ್ಳು ಹೇಳಿಸಿದ್ದಕ್ಕಾಗಿ ಖಾದರ್ ತಮ್ಮ ಬೆಂಬಲಿಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿರಬಹುದು.
ಸತ್ಯ ಹೇಳಿದ್ದು ಶ್ರೀ ಗೋಕರ್ಣನಾಥನ ಕ್ಷೇತ್ರದಲ್ಲಿ…
ಜನಾರ್ದನ ಪೂಜಾರಿಯವರನ್ನು ಹಿಂದೆ ಇದೇ ಬಿಜೆಪಿಯವರು ತಮ್ಮ ವಿರುದ್ಧ ಟೀಕೆ ಮಾಡಿದಾಗ ಏನೇನೂ ಅಪಹಾಸ್ಯ ಮಾಡಿದ್ದರು. ಈಗ ಪೂಜಾರಿಯವರನ್ನು ಹೊಗಳುತ್ತಿದ್ದಾರೆ ಎಂದು ಕಾಂಗ್ರೆಸ್ಸ್ ನವರು ತಿರುಗೇಟು ನೀಡುತ್ತಿದ್ದಾರೆ. ನಾನು ವೈಯಕ್ತಿಕವಾಗಿ ಬಿಜೆಪಿಯವನು ಅಲ್ಲ. ಕಾಂಗ್ರೆಸ್ಸಿನವನಂತೂ ಅಲ್ಲವೇ ಅಲ್ಲ. ಜೆಡಿಎಸ್ ಮತ್ತು ಕಮ್ಯೂನಿಸ್ಟರುಗಳಿಗೆ ಸಿದ್ಧಾಂತ ಎನ್ನುವುದು ಇದೆಯಾ ಎನ್ನುವ ಕಲ್ಪನೆ ನನಗೆ ಇಲ್ಲದೇ ಇರುವುದರಿಂದ ಆ ಪಕ್ಷಗಳ ಬಗ್ಗೆ ಮಾತನಾಡುವುದೇ ವೇಸ್ಟ್. ಆದರೆ ವಿಷಯ ಏನೆಂದರೆ ಮನುಷ್ಯನ ವಯಸ್ಸು ಮಾಗಿದಂತೆಲ್ಲ ಅವನು ಹೆಚ್ಚೆಚ್ಚು ಪ್ರಬುದ್ಧನಾಗುತ್ತಾನೆ ಎನ್ನುವುದು ನಾನು ಕಂಡುಕೊಂಡ ಸತ್ಯ. ಅದರೊಂದಿಗೆ ಬೇರೆಯವರ ಹಂಗು ಕಡಿಮೆಯಾದಂತೆ ಮನುಷ್ಯ ಹೆಚ್ಚೆಚ್ಚು ಸ್ಟೇಟ್ ಫಾರ್ವಡ್ ಆಗುತ್ತಾ ಹೋಗುತ್ತಾನೆ. ಜನಾರ್ದನ ಪೂಜಾರಿಯವರಿಗೆ ಈಗ 82 ವಯಸ್ಸು. ಅವರು ಇಲ್ಲಿಯ ಎಲ್ಲಾ ಕಾಂಗ್ರೆಸ್ಸಿಗರಿಗಿಂತ ಹೆಚ್ಚು ವಯಸ್ಸು ಮತ್ತು ಹೆಚ್ಚು ರಾಜಕೀಯ ಅಧಿಕಾರ ಅನುಭವಿಸಿ ಆಗಿದೆ. ಅವರಿಗೆ ಈಗ ಸರಿಯಾಗಿ ನೋಡಿದರೆ ಕಾಂಗ್ರೆಸ್ಸಿನ ಹಂಗಿಲ್ಲ. ಕಾಂಗ್ರೆಸ್ ಅವರನ್ನು ಲೋಕಸಭಾ ಸ್ಥಾನಕ್ಕೆ ನಿಲ್ಲಿಸುವುದೂ ಇಲ್ಲ, ರಾಜ್ಯಸಭಾ ಸ್ಥಾನ ಕೊಡುವುದು ಇಲ್ಲ. ಆದ್ದರಿಂದ ಅವರಿಗೆ ಕಾಂಗ್ರೆಸ್ಸಿನ ಬಹುತೇಕ ಕೊಂಡಿ ಕಳಚಿಹೋಗಿದೆ. ಆದ್ದರಿಂದ ಅವರ ಬಾಯಿಂದ ವಾಸ್ತವ ಹೊರಗೆ ಬೀಳುತ್ತಾ ಇದೆ.
ಮುಂದಿನ ಎರಡು ಅವಧಿಗೆ ನರೇಂದ್ರ ಮೋದಿಯೇ ಈ ದೇಶದ ಪ್ರಧಾನಿಯಾಗುತ್ತಾರೆ ಎಂದು ಪೂಜಾರಿಯವರು ಹೇಳುವಾಗ ಅವರು ಕುಳಿತಿದ್ದ ಸ್ಥಳ ಪರಮಪವಿತ್ರ ಶ್ರೀಕ್ಷೇತ್ರ ಗೋಕರ್ಣನಾಥ ದೇವಸ್ಥಾನ. ಅದು ಪೂಜಾರಿಯವರು ಅತೀ ಹೆಚ್ಚು ಪ್ರೀತಿಸುವ ಸ್ಥಳ. ಶ್ರೀಗೋಕರ್ಣನಾಥ ದೇವರ ಪ್ರೇರಣೆಯಂತೆ ಪೂಜಾರಿ ಆ ಮಾತನ್ನು ಹೇಳಿದ್ದಾರೆ. ಅದರೊಂದಿಗೆ ಅದೇ ಜಾಗದಲ್ಲಿ ಕುಳಿತು ನಳಿನ್ ಕುಮಾರ್ ಕಟೀಲ್ ಅವರಿಗೆ ಗೆಲುವಾಗಲಿ ಎಂದು ಹರಸಿದ್ದಾರೆ. ಇನ್ನು ಮಿಥುನ್ ರೈ ಗೆಲ್ಲುವುದಿಲ್ಲ, ಅದಕ್ಕೆ ಖಾದರ್ ಅವರ ಅವಸರವೇ ಕಾರಣವಾಗುತ್ತೆ ಎಂದು ಶಾಪ ಕೊಟ್ಟದ್ದು ಅದೇ ಪುಣ್ಯಭೂಮಿಯಲ್ಲಿ. ಮಿಥುನ್ ರೈ ಅವರನ್ನು ತಡವಾಗಿ ಬಂದದ್ದಕ್ಕೆ ಬೈದದ್ದು ಅದೇ ಸ್ಥಳದಲ್ಲಿ. ಆದರೆ ಅದೆಲ್ಲ ಟಿವಿ, ಪೇಪರ್, ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಂತೆ ನಾಮಪತ್ರ ಸಲ್ಲಿಸುವ ಬೆಳಿಗ್ಗೆ ಪೂಜಾರಿಯವರನ್ನು ಭೇಟಿ ಮಾಡಿದ ಖಾದರ್, ಮಿಥುನ್ ರೈ ಪೂಜಾರಿಯವರ ಕೈ ಕಾಲು ಹಿಡಿದು ನಾಮಪತ್ರ ಸಲ್ಲಿಸುವಾಗ ಬರಬೇಕು, ಪುರಭವನದ ವೇದಿಕೆಯಲ್ಲಿ ಎರಡು ಒಳ್ಳೆಯ ಸುಳ್ಳುಗಳನ್ನು ಹೇಳಬೇಕು ಎಂದು ವಿನಂತಿಸಿದ್ದಾರೆ. ಪರೋಕ್ಷವಾಗಿ ಪೂಜಾರಿಯವರಿಗೆ ತಾವು ಕಾಂಗ್ರೆಸ್ ಎನ್ನುವುದನ್ನು ನೆನಪಿಸಿದ್ದಾರೆ.
ಪೂಜಾರಿಯವರ ಕೈ ಕಾಲು ಹಿಡಿಯಬೇಕಾಯಿತು…
ಪೂಜಾರಿಯವರು ಎಷ್ಟು ಕಠೋರವಾದಿಯೋ ಅಷ್ಟೇ ಬೇಗ ಯಾರದ್ದಾದರೂ ಮರಳು ಮಾತಿಗೆ ಕರಗಿಬಿಡುವುದೂ ಇದೆ. ಅದನ್ನು ಕೆಲವರು ಬಳಸಿ ಪೂಜಾರಿಯವರನ್ನು ಬೇರೆಯವರ ವಿರುದ್ಧ ಎತ್ತಿಕಟ್ಟಿರುವುದು ಇದೆ. ಹಾಗೆ ತಮ್ಮ ಕೈಕಾಲು ಹಿಡಿದು ಬೇಡಿಕೊಂಡವರ ಖುಷಿಗೆ ಪೂಜಾರಿ ಪುರಭವನದ ವೇದಿಕೆ ಹತ್ತಿದ್ದಾರೆ. ಅಲ್ಲಿ ಪೂಜಾರಿಯವರ ಪ್ರತಿ ವಾಕ್ಯಕ್ಕೆ ಚಪ್ಪಾಳೆ, ಸಿಳ್ಳೆ ಹೊಡೆಯಲು ಮೊದಲೇ ವ್ಯವಸ್ಥೆ ಮಾಡಲಾಗಿತ್ತು. ಯಾವುದಕ್ಕೆ ಹೊಡೆಯಬೇಕು ಎಂದು ಹಿಂಟ್ ಕೊಡಲು ಸ್ವತ: ಖಾದರ್ ಒಂದು ಪಕ್ಕದಲ್ಲಿ ನಿಂತು ಸಿಗ್ನಲ್ ಮಾಡುತ್ತಿದ್ದರು. ಪೂಜಾರಿಯವರ ಭಾಷಣದ ತುಣುಕನ್ನು ನೀವು ಮತ್ತೆ ವೀಕ್ಷಿಸಿದರೆ ಒಂದು ಬದಿಯಲ್ಲಿ ನಿಂತು ಖಾದರ್ ಜನರಿಗೆ ಚಪ್ಪಾಳೆ ಹೊಡೆಯಲು ಸೂಚಿಸುತ್ತಿರುವುದು ಕಂಡು ಬರುತ್ತದೆ. ಹೀಗೆ ಕೆಲವು ಚಪ್ಪಾಳೆಗೆ, ಶಿಳ್ಳೆಗೆ ಮನಸೋತು ಪೂಜಾರಿ ಕಾಂಗ್ರೆಸ್ಸಿಗರ ಇಚ್ಚೆಗೆ ತಕ್ಕಂತೆ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಸುಳ್ಳು ಹೇಳಬೇಕಾಯಿತು. ಜಿಲ್ಲಾ ಕಚೇರಿಯ ಒಳಗೆ ಕಾಲಿಡಬೇಡಿ ಎಂದು ಹೇಳಿದ್ದ ಇದೇ ಕಾಂಗ್ರೆಸ್ಸಿಗರು ಪೂಜಾರಿಯವರನ್ನು ನಾಟಕದ ಸ್ಟೇಜ್ ಮೇಲೆ ಬಳಸಿ, ಮನೆಗೆ ಬಿಟ್ಟು ಕೈ ತೊಳೆದುಕೊಂಡು ಬಿಟ್ಟರು!!
Leave A Reply