ಅಮೇಠಿಯಲ್ಲಿ ಸೋತು ವೈಯನಾಡ್ ನಲ್ಲಿ ಗೆದ್ದರೂ ಅದು ಗಾಂಧಿ ಕುಟುಂಬದ ರಾಜಕೀಯ ಅಂತ್ಯಕ್ಕೆ ಮೊದಲ ಮೊಳೆ!!
ಮಂಡ್ಯದಲ್ಲಿ ಸುಮಲತಾ ಅಂಬರೀಷ್ ವಿರುದ್ಧ ಶಿಖಂಡಿ ಯುದ್ಧವನ್ನು ಪ್ರಾರಂಭಿಸಿರುವ ಜೆಡಿಎಸ್ ಪಕ್ಷ ಇನ್ನಿಬ್ಬರು ಸುಮಲತಾ ಎನ್ನುವ ಹೆಸರಿನ ಹೆಂಗಸರನ್ನು ಸ್ಪರ್ಧೆಗೆ ಇಳಿಸಿದೆ. ಅಷ್ಟೇ ಅಲ್ಲ, ಇವಿಎಂನಲ್ಲಿ ಅಭ್ಯರ್ಥಿಯ ಹೆಸರು ಮತ್ತು ಚಿಹ್ನೆಯ ಎದುರು ಫೋಟೋ ಕೂಡ ಇರುವುದರಿಂದ ಯಾವ ಸುಮಲತಾ ಅವರಿಗೆ ಮತ ಚಲಾಯಿಸಬೇಕು ಎಂದು ಗೊತ್ತಾಗುತ್ತದೆ ಎನ್ನುವ ಸುಳಿವು ಸಿಕ್ಕ ಕೂಡಲೇ ಜೆಡಿಎಸ್ ನವರು ಇನ್ನಿಬ್ಬರು ಸುಮಲತಾರಲ್ಲಿ ಒಬ್ಬರನ್ನು ಥೇಟ್ ಸುಮಲತಾ ಅವರಂತೆ ಕನ್ನಡಕ, ಮುಖಚರ್ಯೆ ಬರುವಂತೆ ಫೋಟೋ ತೆಗೆದು ಚುನಾವಣಾ ಆಯೋಗಕ್ಕೆ ಕೊಟ್ಟಿರುವುದರಿಂದ ಈಗ ಮತ ಹಾಕುವವರು ಯಾವ ಸುಮಲತಾ ಅವರಿಗೆ ಹಾಕುತ್ತಾರೆ ಎನ್ನುವ ಗೊಂದಲದ ವಿಷಯವಾಗಿದೆ. 19 ನಂಬರ್ ತಮ್ಮದು ಎಂದು ಸುಮಲತಾ ಅಂಬರೀಷ್ ಎಲ್ಲಾ ಕಡೆ ಹೇಳುತ್ತಾ ಬರುತ್ತಿದ್ದರೂ ಕಟ್ಟಕಡೆಗೆ ಮತದಾರನ ಒಂದು ಕ್ಷಣದ ಮೈಮರೆವು ಅರ್ಹ ಅಭ್ಯರ್ಥಿಯ ಗೆಲುವನ್ನು ಮರೀಚಿಕೆ ಮಾಡಬಹುದು. ಆದ್ದರಿಂದ ಮೇ 23 ರ ತನಕ ನಿಜಕ್ಕೂ ಅತೀ ಹೆಚ್ಚು ಕುತೂಹಲ ಯಾವುದಾದರೂ ಕ್ಷೇತ್ರದಲ್ಲಿ ಇದ್ದರೆ ಅದು ಮಂಡ್ಯ ಎಂದೇ ಕಾಣುತ್ತದೆ.
ಮಂಡ್ಯದ ಆಟ ಈಗ ವಯನಾಡಿನಲ್ಲಿ..
ಅತ್ತ ಮಂಡ್ಯದಲ್ಲಿ ಜೆಡಿಎಸ್ ಮತ್ತು ಕೆಲವು ಸಿಎಂ ಆಪ್ತ ಕಾಂಗ್ರೆಸ್ಸಿಗರು ಆಡಿದ ಆಟವನ್ನು ವೈಯನಾಡಿನಲ್ಲಿ ಅಕ್ಷರಶ: ಕಮ್ಯೂನಿಸ್ಟರು ಆಡಿ ರಾಹುಲ್ ಗಾಂಧಿಯನ್ನು ಕಕ್ಕಾಬಿಕ್ಕಿ ಮಾಡಿಬಿಟ್ಟಿದ್ದಾರೆ. ಸುಮಲತಾ ಎನ್ನುವವರಾದರೆ ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಬೀದಿಗೆ ಒಬ್ಬರು ಸಿಗುತ್ತಾರೆ. ಆದ್ದರಿಂದ ಜೆಡಿಎಸ್ ನವರಿಗೆ ಅಂತವರನ್ನು ಹುಡುಕಿ ತರುವುದು ಕಷ್ಟವಾಗಿರಲಿಕ್ಕಿಲ್ಲ. ಆದರೆ ಅಪ್ಪಟ ರಣತಂತ್ರ ನಿಪುಣ ಎಡಚರರು ಇಬ್ಬರು ರಾಹುಲ್ ಗಾಂಧಿಯವರನ್ನು ಹುಡುಕಿ ತಂದು ನಾಮಪತ್ರ ಸಲ್ಲಿಸಿದ್ದಾರೆ. ಹೆಸರು ಸಿಕ್ಕಿದ ಮೇಲೆ ಒಂದಿಷ್ಟು ಫೇಸ್ ವಾಶ್ ಮಾಡಿಸಿ ಪೌಡರ್ ಹಚ್ಚಿ ಬಿಳಿ ಮಾಡಿ ಫೋಟೋ ತೆಗೆದರೆ ನಿಜವಾದ ರಾಹುಲ್ ಗಾಂಧಿ ಯಾರು ಎಂದು ಇವಿಎಂನಲ್ಲಿ ಹುಡುಕುವಾಗ ರಾತ್ರಿ ಬೆಳಗಾಗಿರುತ್ತದೆ. ಅಲ್ಲಿ ಅಮೇಠಿಯಲ್ಲಿ ಸೋಲಿನ ಭಯ ಕಾಣಿಸಿತೋ ಅಥವಾ ಕೇರಳದಲ್ಲಿ ನಿಂತರೆ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಜೀವ ಕೊಡಬಹುದು ಎಂದು ಅನಿಸಿತೋ ರಾಹುಲ್ ನೀಲಿಗಣ್ಣಿನ ಹುಡುಗರು ಹುಡುಕಿ ಹುಡುಕಿ ತೆಗೆದದ್ದು ದಕ್ಷಿಣದ ಕಾಶಿ ವಯನಾಡನ್ನು. ಇಲ್ಲಿ ಅಸ್ಥಿ ಬಿಡಲು ಹೋಗುವವರ ಸಂಖ್ಯೆ ಸಾಕಷ್ಟಿದೆ. ಹಾಗಂತ ಇದು ಅಪ್ಪಟ ಕ್ರಿಶ್ಚಿಯನ್ ಬೆಲ್ಟ್. ಮುಸ್ಲಿಮರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಹೆಚ್ಚು ಕಡಿಮೆ ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಥವಾ ಹಿಂದಿನ ಉಳ್ಳಾಲಕ್ಕೆ ಹೋಲಿಸಬಹುದು. ಇಲ್ಲಿ ಯುಟಿ ಖಾದರ್ ಎಸ್ ಡಿಪಿಐಯನ್ನು ಬಾಯಿಗೆ ಬಂದಂತೆ ಬೈದು ಹಿಂದೂಗಳ ಮನೆಯ ಸತ್ಯನಾರಾಯಣ ಪೂಜೆಗೆ ಹೋಗಿ ಕಣ್ಣಿಗೆ ತೀರ್ಥ ಒತ್ತಿ ಪ್ರಸಾದ ತೆಗೆದುಕೊಳ್ಳುತ್ತಿದ್ದರೂ ಅವರನ್ನು ಅತ್ತ ಮುಸ್ಲಿಮರೂ ಕೈ ಬಿಟ್ಟಿಲ್ಲ, ಹಿಂದೂಗಳೂ ಜಾರೇ ಅಂದಿಲ್ಲ. ಹಾಗೆ ವರ್ಷದಿಂದ ವರ್ಷಕ್ಕೆ ಖಾದರ್ ಅಂತರ ಕಡಿಮೆಯಾಗುತ್ತಿದ್ದರೂ ಸದ್ಯ ತಮ್ಮದೇ ಭದ್ರಕೋಟೆಯಲ್ಲಿ ಖಾದರ್ ಚಕ್ರವರ್ತಿ. ಅದನ್ನು ನೋಡಿ ರಮಾನಾಥ ರೈ, ಅಭಯರು ಉರಿದುಕೊಳ್ಳುವುದು ಏನೂ ಕಡಿಮೆ ಅಲ್ಲ. ಹಾಗೆ ವಯನಾಡ್ ಕೂಡ. ಇದು ಅಪ್ಪಟ ಕಾಂಗ್ರೆಸ್ ಭದ್ರಕೋಟೆ. ಹಾಗಂತ ಇಲ್ಲಿ ಕಳೆದ ಬಾರಿ ಸ್ಪರ್ಧಿಸಿದ ಶಾನಾವಾಸ್ ಗೆದ್ದದ್ದು ಬಹುತೇಕ 27 ಸಾವಿರ ಮತಗಳ ಅಂತರದಿಂದ ಮಾತ್ರ.
ರಾಹುಲ್ ವಿರುದ್ಧ ರಾಹುಲ್..
ಲೋಕಸಭೆಗೆ ಹೋಲಿಸಿದರೆ ಗೆದ್ದ ಅಂತರ ತುಂಬಾ ಕಡಿಮೆ. ನಮ್ಮಲ್ಲಿ ಮೂಡಬಿದ್ರೆ-ಮೂಲ್ಕಿ ಶಾಸಕ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಷ್ಟೇ ಅಂತರದಲ್ಲಿ ವಿಧಾನಸಭೆಗೆ ಗೆದ್ದು ಬಂದಿದ್ದಾರೆ. ಆದರೆ ಶಾನವಾಸ್ ನಿಧನರಾದ ನಂತರ ಅಲ್ಲಿ ಅನುಕಂಪದ ಅಲೆ ಇದೆ. ಅದನ್ನು ಬಳಸಿ ರಾಹುಲ್ ಗೆಲ್ಲುವ ನಿರೀಕ್ಷೆಯಲ್ಲಿ ಇದ್ದಾರೆ. ಹಾಗಂತ ಅಮೇಠಿ ನಿಜಕ್ಕೂ ಕಠಿಣ ಸೀಟಾ. ಗುಪ್ತಚರ ಸಮೀಕ್ಷೆಯ ಪ್ರಕಾರ ಅಲ್ಲಿ ರಾಹುಲ್ ಸೋಲಲಿದ್ದಾರೆ ಎನ್ನುವ ಮಾಹಿತಿ ರಾಹುಲ್ ಆಪ್ತರಿಗೆ ಸಿಕ್ಕಿದೆ. ಆದರಿಂದ ಯಾವುದೇ ಕಾರಣಕ್ಕೂ ರಿಸ್ಕ್ ಬೇಡಾ ಎಂದು ಇನ್ನೊಂದು ಸೀಟ್ ಹುಡುಕಲಾಗಿದೆ. ಕರ್ನಾಟಕ ನೋಡೋಣ ಎಂದರೆ ತಮಗೆ ಸಿಕ್ಕಿರುವ ಇಪ್ಪತ್ತೊಂದು ಸೀಟಿನಲ್ಲಿ ಎಲ್ಲಿಂದ ನಿಲ್ಲುವುದು ಎನ್ನುವ ಜಿಜ್ಙಾಸೆ ರಾಹುಲ್ ಗೆ ಬಂದಿತ್ತು. ತಮ್ಮ ತಾಯಿ ನಿಂತ ಸ್ಥಳ ಬಳ್ಳಾರಿ ಬಿಟ್ಟರೆ ಬೇರೆ ಜಾಗ ಅವರಿಗೆ ಒಕೆ ಆಗಿರಲಿಲ್ಲ. ಆದರೆ ಬಳ್ಳಾರಿಯಲ್ಲಿ ನಿಂತರೆ ಸೋನಿಯಾ ಗೆದ್ದ ಮೇಲೆ ಇಲ್ಲಿ ಏನೂ ಮಾಡಿಲ್ಲ, ಈಗ ಮಗ ಬಂದಿದ್ದಾನೆ ಎನ್ನುವ ಬಿಜೆಪಿಗರ ಟೀಕೆಗೆ ಉತ್ತರ ಕೊಡುವಷ್ಟರಲ್ಲಿ ಚುನಾವಣೆ ಕಳೆದು ಹೋಗುವ ಚಾನ್ಸ್ ಇತ್ತು. ಅದು ಗೊತ್ತಿದ್ದೇ ರಾಹುಲ್ ಕರ್ನಾಟಕದ ಸಹವಾಸ ಬೇಡಾ ಎಂದರು. ಅಮೇಠಿಯಲ್ಲಿ 2009 ರಲ್ಲಿ ಮೂರುವರೆ ಲಕ್ಷದ ಅಂತರದಿಂದ ಗೆದ್ದಿದ್ದ ಜೂನಿಯರ್ ಗಾಂಧಿಗೆ ನಂತರದ 2014 ರ ಚುನಾವಣೆಯಲ್ಲಿ ಸಿಕ್ಕಿದ ಲೀಡ್ ಒಂದು ಲಕ್ಷದ ಮೂವತ್ತು ಸಾವಿರ ಮಾತ್ರ. ಈ ಸಲ ಅದೂ ಹೋಗಿ ಕೈಗೆ ಚಿಪ್ಪು ಮಾತ್ರ ಉಳಿದರೆ ಎನ್ನುವ ಹೆದರಿಕೆಯಿಂದ ಕೈಯಲ್ಲಿ ಚೊಂಬು ಹಿಡಿಯುವ ಕ್ಷೇತ್ರಕ್ಕೆ ವಲಸೆ ಹೋಗಿದ್ದಾರೆ. ಅಲ್ಲಿ ಚುನಾವಣೆಗೆ ನಿಂತ ಇನ್ನಿಬ್ಬರು ರಿಯಲ್ ಗಾಂಧಿಗಳು ನಕಲಿ ಗಾಂಧಿಯನ್ನು ಸೋಲಿಸದಿದ್ದರೆ ಕೇಳಿ!
Leave A Reply