ಬಾರ್ ಮಾಲೀಕನ ಅಪೂರ್ಣ ಕಟ್ಟಡದಲ್ಲಿ ಕುಳಿತು ಸುದ್ದಿಗೋಷ್ಟಿ ಮಾಡುವ ಮುನ್ನ ಕಾಂಗ್ರೆಸ್ಸಿಗರೇ ಯೋಚಿಸಿ!
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮತದಾನಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಹಂತದಲ್ಲಿ ಆರೋಪ ಪ್ರತ್ಯಾರೋಪಗಳು ಸಾಮಾನ್ಯ. ಆದರೆ ಪರಸ್ಪರ ವಾದ ವಿವಾದಗಳು ನಡೆಯುವಾಗ ತಾವು ಮಾತನಾಡುವ ವಿಷಯದಲ್ಲಿ ಒಂದಿಷ್ಟಾದರೂ ಧಮ್ ಇರಬೇಕು ಎನ್ನುವುದನ್ನು ಮಾತನಾಡುವವರು ಅರ್ಥ ಮಾಡಿಕೊಳ್ಳಬೇಕು. ಅದರಲ್ಲಿಯೂ ಉನ್ನತ ಸ್ಥಾನದಲ್ಲಿರುವ ನಾಯಕರಿಗೆ ತಾವು ಹೇಳುವುದು ಟ್ರೋಲ್ ಗೆ ಒಳಗಾಗುತ್ತದೆ ಎಂದು ಗೊತ್ತಾಗುವಂತಿದ್ದರೆ ಯಾವುದೇ ಕಳಪೆ ಹೇಳಿಕೆಯನ್ನು ಕೊಡಲೇಬಾರದು. ಆದರೆ ಸೋಲಿನ ಹತಾಶೆಯಲ್ಲಿರುವಂತೆ ಕಾಣುತ್ತಿರುವ ಕಾಂಗ್ರೆಸ್ ಮುಖಂಡರು ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಯಾವ ಮಟ್ಟದ ಹೇಳಿಕೆ ಕೊಡುತ್ತಿದ್ದಾರೆ ಎಂದರೆ ಅವರಿಗೆ ತಾವು ಹೇಳುವುದನ್ನು ಜನ ಪರಾಮರ್ಶಿಸುತ್ತಿದ್ದಾರೆ ಎನ್ನುವ ಸಣ್ಣ ಸಂಶಯ ಕೂಡ ಬಂದಂತೆ ಕಾಣುವುದಿಲ್ಲ.
ನಾನು ಹೇಳುತ್ತಿರುವುದು ವಿಧಾನಪರಿಷತ್ ಸದಸ್ಯರೂ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹರೀಶ್ ಕುಮಾರ್ ಅವರ ಬಗ್ಗೆ. ಹರೀಶ್ ಕುಮಾರ್ ಅವರು ಇತ್ತೀಚೆಗೆ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಸುದ್ದಿಗೋಷ್ಟಿ ಗೆ ಪ್ರತಿಯಾಗಿ ಯಾವುದೋ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೊಡುತ್ತಿದ್ದರು. ಜಿಲ್ಲಾ ಕಾಂಗ್ರೆಸ್ ಚುನಾವಣಾ ಕಚೇರಿ ಇರುವುದು ಒಬ್ಬ ಬಾರ್ ಮತ್ತು ವೈನ್ ಶಾಪ್ ಮಾಲೀಕನ ನಿರ್ಮಾಣ ಹಂತದಲ್ಲಿರುವ ಕಂಪ್ಲೀಶನ್ ಸರ್ಟಿಫಿಕೇಟ್ ಇಲ್ಲದ ಕಟ್ಟಡದಲ್ಲಿ ಎನ್ನುವುದು ಶಾಸಕ ಕಾಮತ್ ಅವರ ಹೇಳಿಕೆಯಾಗಿತ್ತು. ಅದರಲ್ಲಿ ಸುಳ್ಳಿರಲಿಲ್ಲ. ಅದನ್ನು ಸುಳ್ಳು ಎಂದು ಸಾಬೀತು ಮಾಡಬೇಕಾದ ಕಾಂಗ್ರೆಸ್ ಮುಖಂಡರು ತಮ್ಮದು ಅಪೂರ್ಣವಾಗಿರುವ ಕಟ್ಟಡವಲ್ಲ. ಕಂಪ್ಲೀಶನ್ ಸರ್ಟಿಫಿಕೇಟ್ ಇದೆ ಎಂದು ತೋರಿಸಬೇಕಿತ್ತೇ ವಿನ: ಬೇರೆಯದ್ದೇ ವರಾತ ತೆಗೆದರು. ಎಂಎಲ್ ಸಿ ಹರೀಶ್ ಕುಮಾರ್ ಅವರು ಯಾವ ಬಾಲಿಶತನದ ಹೇಳಿಕೆ ಕೊಟ್ಟರು ಎಂದರೆ ಶಾಸಕ ವೇದವ್ಯಾಸ ಕಾಮತ್ ಅವರ ಖಾಸಗಿ ಕಚೇರಿ ಅಟಲ್ ಸೇವಾ ಕೇಂದ್ರದಲ್ಲಿಯೂ ಬಾರ್ ಇದೆ ಎಂದರು. ಅಟಲ್ ಹೆಸರಿನ ಕಟ್ಟಡದಲ್ಲಿ ಬಾರ್ ನಡೆಸುವುದು ಸರಿಯಾ ಎಂದರು. ವಿಷಯ ಎನೆಂದರೆ ಕಲಾಕುಂಜ ಮದುವೆಯ ಹಾಲ್ ನಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿ ಶಾಸಕ ಕಾಮತ್ ಅವರ ಕಚೇರಿ ಇದೆ. ಭಂಡಾರಿ ಬಿಲ್ಡರ್ಸ್ ನವರ ವಸತಿ ಸಮುಚ್ಚಯದ ನೆಲ ಅಂತಸ್ತಿನಲ್ಲಿ ಅಟಲ್ ಸೇವಾ ಕೇಂದ್ರ ಇದೆ. ಅದು ಬಿಟ್ಟರೆ ಅಲ್ಲಿರುವ ಏಕೈಕ ಅಂಗಡಿ ಪ್ರಾವಿಶನ್ ಸ್ಟೋರ್. ಅಲ್ಲಿ ಯಾವ ಏಂಗಲ್ ನಿಂದ ನೋಡಿದರೂ ಬಾರ್ ಇಲ್ಲ. ಒಂದು ವೇಳೆ ಸ್ವತ: ಹರೀಶ್ ಕುಮಾರ್ ಅವರೇ ಬಾರ್ ನಡೆಸುತ್ತೇನೆ ಎಂದರೂ ಅಲ್ಲಿ ಖಾಲಿ ಅಂಗಡಿಗಳಿಲ್ಲ. ಹಾಗಿರುವಾಗ ಹರೀಶ್ ಕುಮಾರ್ ಅವರು ಅಲ್ಲಿ ಬಾರ್ ಎಲ್ಲಿ ಕಂಡರೋ ದೇವರೇ ಬಲ್ಲ. ಬೇಕಾದರೆ ನಾನು ಅವರಿಗೆ ಅಟಲ್ ಸೇವಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಇಡೀ ಕಟ್ಟಡ ತೋರಿಸಲು ತಯಾರಿದ್ದೇನೆ. ಬಾರ್ ಬಿಡಿ, ಒಂದು ಕುಡಿದ ಬಾಟಲಿ ಅಲ್ಲಿ ಸಿಗುವುದು ಸಾಧ್ಯವಿಲ್ಲ.
ಇದು ಯಾವಾಗ ಟ್ರೋಲ್ ಆಯಿತೋ ಕಾಂಗ್ರೆಸ್ ಮುಖಂಡರಿಗೆ ತಮ್ಮ ಮೂರ್ಖತನದ ಅರಿವಾಗಿದೆ. ಕುರುಡ ಕೂಡ ಅಟಲ್ ಸೇವಾ ಕೇಂದ್ರದ ಕಟ್ಟಡದಲ್ಲಿ ಬಾರ್ ಇಲ್ಲ ಎಂದು ಹೇಳಬಲ್ಲವನಾಗಿರುವಾಗ ನಾವು ಕಣ್ಣಿದ್ದು ಅಲ್ಲಿ ಬಾರ್ ಇದೆ ಎನ್ನುವುದು ಸರಿಯಾಗಲ್ಲ ಎಂದುಕೊಂಡ ಮಾಜಿ ಮೇಯರ್ ಮಹಾಬಲ ಮಾರ್ಲ ಅವರು ಇನ್ನೊಂದು ಸುದ್ದಿಗೋಷ್ಟಿ ಮಾಡುತ್ತಾರೆ. ಅದೇನೆಂದರೆ ಕೆಎಎಸ್ ರಾವ್ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ಪ್ರಾರಂಭವಾಗಿರುವ ನಮೋ ಸ್ಟಾಲ್ ಅಪೂರ್ಣ ಕಟ್ಟಡದಲ್ಲಿ ಇದೆ. ಇದು ಸರಿಯಾ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ತಮ್ಮದೇ ಕಾಲಿನ ಮೇಲೆ ತಾವೇ ಕಲ್ಲು ಎತ್ತಿ ಹಾಕಿದ್ದಾರೆ. ಈಗ ನಮೋ ಸ್ಟಾಲ್ ಇರುವುದು ಕಂಪ್ಲೀಶನ್ ಸರ್ಟಿಫಿಕೇಟ್ ಇಲ್ಲದ ಕಟ್ಟಡದಲ್ಲಿ ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ಆ ಕಟ್ಟಡಕ್ಕೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ಕೊಟ್ಟವರು ಯಾರು? ನೀವೆ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಮತ್ತು ಮೇಯರ್ ಅಲ್ಲವೇ? ಅಲ್ಲಿ ಕಳೆದ ಐದು ವರ್ಷಗಳಿಂದ ಆಡಳಿತ ಇದ್ದದ್ದು ನಿಮ್ಮದೇ ಕಾಂಗ್ರೆಸ್ ಸರಕಾರ ಅಲ್ಲವೇ? ಹಾಗಾದರೆ ನೀವೆ ಆ ಕಟ್ಟಡಕ್ಕೆ ವ್ಯವಹಾರ ಮಾಡಲು ಅವಕಾಶ ಕೊಟ್ಟು ನೀವೆ ಈಗ ಅದು ಅನಧಿಕೃತ ಕಟ್ಟಡ ಎನ್ನುವುದಾದರೆ ತಪ್ಪು ಯಾರದ್ದು? ಸರಿ, ಆ ಕಟ್ಟಡದಲ್ಲಿ ನಮೋ ಸ್ಟಾಲ್ ಇರುವುದು ತಪ್ಪು ಎಂದೇ ಇಟ್ಟುಕೊಳ್ಳೋಣ. ಅದನ್ನು ಮುಚ್ಚಲು ನಾನು ಆಗ್ರಹಿಸುತ್ತೇನೆ. ಅದಕ್ಕಿಂತ ಮೊದಲು ನೀವು ಅಲ್ಲಿರುವ ಉಳಿದ ಮಳಿಗೆಗಳಿಗೆ ಮುಚ್ಚಲು ಸೂಚನೆ ಕೊಡಿ. ಇನ್ನು ಮುಂದಾದರೂ ಯಾವುದೇ ಪ್ರತಿಕ್ರಿಯೆ ಕೊಡುವಾಗ ಕಾಂಗ್ರೆಸ್ ಮುಖಂಡರು ಯೋಚಿಸಲಿ ಎನ್ನುವುದು ನನ್ನ ಅಭಿಪ್ರಾಯ. ಇಲ್ಲದಿದ್ದರೆ ಯಾರದ್ದೋ ತಟ್ಟೆಯ ನೊಣ ಹುಡುಕಲು ಹೋಗಿ ತಮ್ಮ ಕಾಲಕೆಳಗೆ ಕೊಳೆತಿರುವ ಹಲಸಿನ ಹಣ್ಣು ಕಾಣಬಹುದು!!
Leave A Reply