ಮೋದಿ ಜೊತೆ ಫೋಟೋ ತೆಗೆಯಲು ಅಷ್ಟು ಆಸಕ್ತಿ ಯಾಕೆ ಕಾಂಗ್ರೆಸ್ಸಿಗರೇ!!
ಕೊನೆಗೂ ಹೇಗಾದರೂ ಮಾಡಿ ಮಿಥುನ್ ರೈ ಗೆಲ್ಲಲೇಬೇಕೆಂಬ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ ತನ್ನ ಅಂತಿಮ ದಾಳವನ್ನು ಉರುಳಿಸಲು ತಯಾರಾಗಿತ್ತು. ನರೇಂದ್ರ ಮೋದಿಯವರು ಮಂಗಳೂರಿಗೆ ಬಂದಾಗ ಅವರನ್ನು ಭೇಟಿಯಾಗಲು ಅವಕಾಶ ಕೊಡಬೇಕು ಎನ್ನುವ ಮನವಿ ಜಿಲ್ಲಾ ಕಾಂಗ್ರೆಸ್ ನಾಯಕರು ಜಿಲ್ಲಾಡಳಿತಕ್ಕೆ ಮಾಡಿದ್ದರು. ಮಿಥುನ್ ರೈ ಸೋತರೆ ಅದಕ್ಕೆ ತಾನು ಹೊಣೆಯಾಗಬಹುದು ಎನ್ನುವ ಅಪವಾದಿಂದ ಪಾರಾಗಲು ಐವನ್ ಡಿಸೋಜಾ ಪ್ರಧಾನಮಂತ್ರಿಗಳನ್ನು ಭೇಟಿಯಾಗುವ ನಿಯೋಗದ ಮುಖಂಡತ್ವವನ್ನು ವಹಿಸಲು ತಯಾರಾಗಿಬಿಟ್ಟಿದ್ದರು. ಹೇಗೂ ಸಣ್ಣ ರೈ ಸೋಲುವುದರಿಂದ ಕನಿಷ್ಟ ತನ್ನ ಬಗ್ಗೆಯಾದರೂ ಬೇಸರ ತೋರಿಸದಿರಲಿ ಎನ್ನುವ ಉದ್ದೇಶದಿಂದ ಐವನ್ ಡಿಸೋಜಾ ಈ ಗೇಮ್ ಪ್ಲಾನ್ ಮಾಡಿದಂತೆ ಕಾಣುತ್ತಿತ್ತು. ಆದರೆ ಭದ್ರತೆಯ ಕಾರಣದಿಂದ ಜಿಲ್ಲಾಡಳಿತ ಅವಕಾಶ ಕೊಡಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹೀಗೆ ಪ್ರಧಾನಮಂತ್ರಿಯೊಬ್ಬರು ಒಂದು ಊರಿಗೆ ಹೋಗುವಾಗ ಅವರ ಪೂರ್ವ ನಿರ್ಧರಿತ ಕಾರ್ಯಕ್ರಮಗಳನ್ನು ಬಿಟ್ಟು ಅವರು ಎಕ್ಸಟ್ರಾ ಒಬ್ಬನೇ ಒಬ್ಬನನ್ನು ಭೇಟಿಯಾಗುವ ಅವಕಾಶ ಇರುವುದಿಲ್ಲ. ಸ್ವತ: ಪ್ರಧಾನಿಗಳೇ ಮನಸ್ಸು ಮಾಡಿದರೂ ಅವರ ಶೆಡ್ಯೂಲ್ಡ್ ಕಾರ್ಯಕ್ರಮ ಬಿಟ್ಟು ಅವರು ಒಂದೇ ಒಂದು ಹೆಜ್ಜೆ ಹೆಚ್ಚು ಇಡಲು ಭದ್ರತಾ ಅಧಿಕಾರಿಗಳು ಬಿಡುವುದಿಲ್ಲ. ಎಸ್ ಪಿಜಿ ಭದ್ರತೆಯಲ್ಲಿರುವ ಪ್ರಧಾನಿಗಳ ಸುರಕ್ಷೆಯನ್ನು ಗಮನದಲ್ಲಿಟ್ಟುಕೊಂಡಿರುವ ಎಸ್ ಪಿಜಿಗಳು ತಾವು ಯಾರ ಭದ್ರತೆ ಮಾಡುತ್ತಿದ್ದೇವೋ ಅವರು ಪೂರ್ವ ನಿರ್ಧರಿತವಾಗಿ ಬೇರೆ ಏನಾದರೂ ಮುಟ್ಟುವುದಕ್ಕೂ ಅನುಮತಿ ಕೊಡುವುದಿಲ್ಲ. ಎಲ್ಲಿಯ ತನಕ ಅಂದರೆ ಕಳೆದ ಬಾರಿ ಸೋನಿಯಾ ಗಾಂಧಿ ಮಂಗಳೂರಿಗೆ ಬಂದಾಗ ಚುನಾವಣಾ ವೇದಿಕೆಯಲ್ಲಿ ಕುಳಿತು ಏನೋ ನೋಟ್ ಮಾಡಬೇಕು ಎಂದು ಅಂದುಕೊಂಡು ಪೆನ್ನಿಗೆ ಎಡತಾಕುತ್ತಿದ್ದಾಗ ಪಕ್ಕದ ಕುರ್ಚಿಯಲ್ಲಿಯೇ ಕುಳಿತಿದ್ದ ಆಸ್ಕರ್ ಫೆರ್ನಾಂಡಿಸ್ ತಮ್ಮ ಪೆನ್ನು ತೆಗೆದು ಸೋನಿಯಾ ಅವರಿಗೆ ನೀಡಬೇಕು ಎಂದು ಸಿದ್ಧರಾದಾಗ ಅಡ್ಡಬಂದ ಎಸ್ ಪಿಜಿ ಕಮಾಂಡೋ ತಕ್ಷಣ ಆಸ್ಕರ್ ಅವರನ್ನು ತಡೆದು ತನ್ನ ಪೆನ್ನು ನೀಡಿದ್ದರು. ರಾತ್ರಿ ಸೋನಿಯಾ ಕುದ್ರೋಳಿ ದೇವಸ್ಥಾನದಲ್ಲಿ ಪೂಜೆಗೆ ಬಂದಾಗ ಪೂಜೆ ಮಾಡಿದ ಅರ್ಚಕರು ಆರತಿ ತಟ್ಟೆಯನ್ನು ಸೋನಿಯಾ ಮುಂದೆ ಹಿಡಿದಾಗ ಎಸ್ ಪಿಜಿ ಆರತಿಯನ್ನು ತೆಗೆದುಕೊಳ್ಳಲು ಸೋನಿಯಾ ಅವರನ್ನು ಬಿಡಲಿಲ್ಲ. ಅಷ್ಟು ಕಟ್ಟುನಿಟ್ಟು ಇರುತ್ತದೆ.
ಹಾಗಿದ್ದರೂ ಜಿಲ್ಲಾ ಕಾಂಗ್ರೆಸ್ಸಿಗರು ಈ ಬಾರಿ ಯಾವ ಮಟ್ಟದ ಅಜ್ಞಾನವನ್ನು ಪ್ರದರ್ಶಿಸಿದರು ಅಂದರೆ ಮೋದಿ ಮಂಗಳೂರಿಗೆ ಬಂದಾಗ ತಾವು ಭೇಟಿಯಾಗಿ ಮಂಗಳೂರಿನ ಬಗ್ಗೆ ಹೇಳುತ್ತೇವೆ, ವಿಜಯಾ ಬ್ಯಾಂಕ್ ವಿಲೀನದ ವಿರೋಧ ಮಾಡುತ್ತೇವೆ, ಪಂಪ್ ವೆಲ್ ವಿರುದ್ಧ ತಿಳಿಸುತ್ತೇವೆ, ಹಾಗೆ ಹೇಳುತ್ತೇವೆ, ಹೀಗೆ ಹೇಳುತ್ತೇವೆ ಎಂದು ಮೊದಲೇ ಮಾಧ್ಯಮಗಳಿಗೆ ಹೇಳಿ ಪಬ್ಲಿಸಿಟಿ ಪಡೆದುಕೊಂಡರು. ಅದು ಟಿವಿಯಲ್ಲಿ ಬಂದೂ ಆಯಿತು, ಪತ್ರಿಕೆಗಳಲ್ಲಿ ಪ್ರಿಂಟ್ ಆಗಿಯೂ ಆಯಿತು. ನಂತರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಅದಕ್ಕೆ ಅವಕಾಶ ಕೊಡಬೇಕು ಎಂದು ಕೂಡ ಮನವಿ ಮಾಡಿದರು. ಆದರೆ ಪೊಲೀಸ್ ಇಲಾಖೆ ಆಗಲಿ, ಜಿಲ್ಲಾಧಿಕಾರಿಗಳು ಪಿಎಂ ಅವರನ್ನು ಭೇಟಿಯಾಗಲು ಕಾಂಗ್ರೆಸ್ಸಿಗರಿಗೆ ಅವಕಾಶ ಕೊಡುವ ಚಾನ್ಸೆ ಇರಲಿಲ್ಲ. ಯಾಕೆಂದರೆ ಅದು ಅವರ ಕೈಯಲ್ಲೇ ಇಲ್ಲ. ನೀವು ಪ್ರಧಾನಿಗಳನ್ನು ಎಲ್ಲಿಯಾದರೂ ಭೇಟಿಯಾಗಬೇಕು ಎಂದರೆ ಅದಕ್ಕೆ ಪೂರ್ವಭಾವಿಯಾಗಿ ಪ್ರಧಾನಿ ಸಚಿವಾಲಯಕ್ಕೆ ಲಿಖಿತ ಮನವಿ ಕೊಡಬೇಕು. ನಿಮ್ಮ ಹಿನ್ನಲೆ, ಭೇಟಿಯಾಗುವ ಕಾರಣಗಳನ್ನೆಲ್ಲವನ್ನು ಪರೀಕ್ಷಿಸುವ ಸಚಿವಾಲಯ ನಿಮ್ಮನ್ನು ಎರಡು ಮೂರು ರೌಂಡ್ ಇಂಟರ್ ವ್ಯೂ ಮಾಡಿಯೇ ಒಕೆ ಅಥವಾ ರಿಜಕ್ಟ್ ಮಾಡುತ್ತದೆ. ಪ್ರಧಾನಿ ಎಂದರೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಸಿಕ್ಕಿದಷ್ಟು ಸುಲಭವಾಗಿ ಸಿಗುವ ಸಾಧ್ಯತೆ ಇಲ್ಲ. ಆದರೆ ಜಿಲ್ಲಾ ಕಾಂಗ್ರೆಸ್ಸಿಗರಿಗೆ ಸಡನ್ನಾಗಿ ಮೋದಿ ಆಗಮನದಿಂದ ಏಳಲಿರುವ ಸುನಾಮಿಯನ್ನು ಕಡಿಮೆ ಮಾಡಲೇಬೇಕಾಗಿದೆ. ಉಕ್ಕುತ್ತಿರುವ ಹಾಲಿಗೆ ಲಿಂಬೆಹಣ್ಣು ಹಿಂಡಲೇಬೇಕಾಗಿದೆ. ಅದಕ್ಕೆ ಮೋದಿಯನ್ನು ಅಡ್ಡಹಾಕಿ ಮನವಿ ಕೊಟ್ಟಂತೆ ಮಾಡಿ ಫೋಟೋ ತೆಗೆಸಲೇಬೇಕಾಗಿದೆ. ಸಾಧ್ಯವಾದರೆ ಸೆಲ್ಫಿ ತೆಗೆದು ಕದ್ದು ಮುಚ್ಚಿ ಥ್ರಿಲ್ ಆಗುವ ಅವಕಾಶವನ್ನು ಪಡೆಯೋಣ ಎಂದುಕೊಂಡ ಕಾಂಗ್ರೆಸ್ಸಿಗರು ಬೇಡಿಕೆಯ ಪಟ್ಟಿಯ ನಾಟಕಕ್ಕೆ ಅಂಕದ ಪರದೆ ಎತ್ತಿದ್ದಾರೆ.
ಅಡಕತ್ತರಿಯಲ್ಲಿ ಸಿಲುಕಿಸಲು ಪ್ರಯತ್ನ..
ಒಂದು ವೇಳೆ ಮೋದಿ ಭೇಟಿ ಸಾಧ್ಯವಾಗದಿದ್ದರೆ ಕನಿಷ್ಟ ಅವರಿಗೆ ಈ ಬೇಡಿಕೆಯ ಪಟ್ಟಿಯನ್ನಾದರೂ ತಲುಪಿಸಿ, ಅವರು ಭಾಷಣದಲ್ಲಿ ಅದನ್ನು ಉಲ್ಲೇಖಿಸಲಿ ಎನ್ನುವ ಕೋರಿಕೆಯನ್ನು ಕಾಂಗ್ರೆಸ್ಸಿಗರು ಜಿಲ್ಲಾಧಿಕಾರಿಗೆ ಮಾಡಿದ್ದಾರೆ. ಒಂದು ವೇಳೆ ಮೋದಿಯವರು ತಮ್ಮ ಭಾಷಣದಲ್ಲಿ ವಿಜಯಾ ಬ್ಯಾಂಕ್, ಎತ್ತಿನಹೊಳೆ ತಿರುವು, ಪಂಪ್ ವೆಲ್ ಪ್ಲೈಒವರ್, ತುಳುವಿಗೆ ಎಂಟನೇ ಪರಿಚ್ಚೇದದಲ್ಲಿ ಮಾನ್ಯತೆಯಂತಹ ವಿಷಯ ಎತ್ತಿದರೆ ನಾವೇ ಒತ್ತಾಯ ಮಾಡಿದ್ದು ಎಂದು ಹೇಳಲು ಕಾಂಗ್ರೆಸ್ಸಿಗೆ ಒಂದು ಅಸ್ತ್ರ, ವಿಷಯ ತೆಗೆಯದಿದ್ದರೆ ಮೋದಿ ಆ ವಿಷಯ ಮಾತನಾಡಲಿಲ್ಲ ಎಂದು ಸುದ್ದಿಗೋಷ್ಟಿ ಮಾಡಿ ಹೇಳುವ ಸಿದ್ಧತೆಯನ್ನು ಕಾಂಗ್ರೆಸ್ಸಿಗರು ಮಾಡಲಿದ್ದಾರೆ. ಒಟ್ಟಿನಲ್ಲಿ ಮೋದಿ ಅಲೆ ನಿಧಾನವಾಗಿ ಸುನಾಮಿ ಆಗುವ ಹೊತ್ತಿನಲ್ಲಿ ತೆಪ್ಪ ಹಿಡಿದು ಸಮುದ್ರಕ್ಕೆ ಇಳಿಯುವ ಸಾಹಸ ಕಾಂಗ್ರೆಸ್ಸಿಗರದ್ದು!
Leave A Reply