ಕುಮಾರಸ್ವಾಮಿಗೆ ಕರಾವಳಿಯ ಮಕ್ಕಳೂ ತಿಳುವಳಿಕೆಯ ಪಾಠ ಹೇಳಿಕೊಟ್ಟಿದ್ದಾರೆ!!

ಕರಾವಳಿಯ ಜನರಿಗೆ ತಿಳುವಳಿಕೆ ಇಲ್ಲ ಎನ್ನುವುದನ್ನು ಕುಮಾರಸ್ವಾಮಿ ಅದ್ಯಾವ ಘಳಿಗೆಯಲ್ಲಿ ಹೇಳಿದರೋ ಅದಕ್ಕೆ ಕರಾವಳಿಯವರು ಉತ್ತರ ಕೊಡುವುದಕ್ಕೆ ಪೈಪೋಟಿಯಲ್ಲಿ ನಿಂತಿದ್ದಾರೆ. ಚುನಾವಣೆಯಲ್ಲಿ ಬಿಡಿ, ಅದರಲ್ಲಿ ಉತ್ತರ ಕುಮಾರಸ್ವಾಮಿಯವರಿಗೆ ಸಿಕ್ಕೆ ಸಿಗುತ್ತದೆ. ಮಕ್ಕಳು ಕೂಡ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಒಂದನೇ ಸ್ಥಾನ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ ಪಡೆಯುವ ಮೂಲಕ ನಮ್ಮ ತಿಳುವಳಿಕೆ ಬಗ್ಗೆ ಮಾತನಾಡಿದರೆ ಹುಶಾರ್ ಎಂದು ತೋರಿಸಿಕೊಟ್ಟಿದ್ದಾರೆ. ಅಷ್ಟಕ್ಕೂ ಎಚ್ ಡಿಕೆ ತಿಳುವಳಿಕೆ ಬಗ್ಗೆ ಯಾಕೆ ಪ್ರಶ್ನೆ ಎತ್ತಿದ್ದರು ಎಂದರೆ ನಮ್ಮ ಪಕ್ಷಕ್ಕೆ ಮತ ನೀಡಿ ನಾವು ನಿಮಗೆ ಬೇಕಾದ ಸೌಲಭ್ಯಗಳನ್ನು ನೀಡುತ್ತೇವೆ. ಅದು ಬಿಟ್ಟು ಬಿಜೆಪಿಯವರಿಗೆ ಮತ ನೀಡಿದರೆ ಅವರು ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ವಲ್ಲಾ, ನಮ್ಮ ಇಬ್ಬರು ಅಭ್ಯರ್ಥಿಗಳನ್ನು ಉಡುಪಿ=ಚಿಕ್ಕಮಗಳೂರು ಮತ್ತು ಉತ್ತರ ಕನ್ನಡದಲ್ಲಿ ಗೆಲ್ಲಿಸಿಕೊಡಿ ನಾವು ನಿಮಗೆ ಉಪಕಾರ ಮಾಡುತ್ತೇವೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು ಸಿಎಂ. ಅವರ ಉದ್ದೇಶ ಜನರಿಗೆ ಅರ್ಥವಾಗಿತ್ತು. ಆದರೆ ಕುಮಾರಸ್ವಾಮಿಯವರೇ ಒಂದು ವಿಷಯ ನೀವು ಅರ್ಥ ಮಾಡಿಕೊಳ್ಳಿ ಎನೆಂದರೆ ಅವಕಾಶ ಬಂದ ಕಡೆ ತೂರಿಕೊಳ್ಳುವವರು ನೀವು, ನಾವಲ್ಲ. ನೀವು ಇವತ್ತು ಕಾಂಗ್ರೆಸ್ಸಿನವರೊಂದಿಗೆ ಬೈಟು ಕಾಫಿ ಕುಡಿತಾ ಇರಬಹುದು. ಅದೇ ನಾಳೆ ಹೆಚ್ಚು ಕಡಿಮೆ ಆದರೆ ನೀವು ಬಿಜೆಪಿಯವರೊಂದಿಗೆ ಒಂದೇ ತಟ್ಟೆಯಲ್ಲಿ ಊಟ ಮಾಡುವುದಕ್ಕೂ ಸೈ ಎನ್ನುವ ಮನೋಭಾವನೆಯವರು.
ಕರಾವಳಿಯಲ್ಲಿ ಜಾತಿ ಲಾಸ್ಟ್…
ನಿಮಗೆ ಅಧಿಕಾರ ಸಿಗುತ್ತೆ ಎಂದಾದರೆ ಅಲ್ಲಿ ನಂಬಿಕೆ, ತತ್ವ, ನಿಷ್ಟೆ, ಸಿದ್ಧಾಂತ ಯಾವುದೂ ಇರುವುದಿಲ್ಲ. ಅಲ್ಲಿ ಇರುವುದು ಕೇವಲ ಅಧಿಕಾರದ ದಾಹ. ಆದರೆ ಕರಾವಳಿಯವರು ಹಾಗೇ ಅಲ್ಲ. ಇಲ್ಲಿ ಚುನಾವಣೆಯಲ್ಲಿ ಕೀ ವೋಟರ್ಸ್ ಬಹಳ ಪ್ರಮುಖ ಪಾತ್ರ ವಹಿಸುತ್ತಾರೆ. ಅಂದರೆ ಪ್ರಜ್ಞಾವಂತ, ಬುದ್ಧಿವಂತ ಯಾವುದೇ ಪಕ್ಷಕ್ಕೂ ಸೇರದ ನಾಗರಿಕರು ಇದ್ದಾರಲ್ಲ, ಅವರು ತೆಗೆದುಕೊಳ್ಳುವ ಪ್ರಮುಖ ನಿರ್ಧಾರದಿಂದಲೇ ಇಲ್ಲಿ ಯಾರು ಶಾಸಕ, ಯಾರು ಸಂಸದರಾಗಿ ಆಯ್ಕೆಯಾಗುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಇಲ್ಲಿ 28 ವರ್ಷಗಳಿಂದ ಬಿಜೆಪಿ ಲೋಕಸಭಾ ಸ್ಥಾನಕ್ಕೆ ಗೆಲ್ಲುತ್ತಾ ಹೋಗುತ್ತಿದೆ. ಇಲ್ಲಿನ ಜನ ಅವಕಾಶವಾದಿ ರಾಜಕಾರಣ ಮಾಡಿದವರಲ್ಲ. ಅಸಲಿಗೆ ನಿಮ್ಮ ಹಾಗೆ ಇಲ್ಲಿ ರಾಜಕಾರಣ ನಮ್ಮ ಮನೆಯೊಳಗೆ ಇಡೀ ವರ್ಷ ಕುಳಿತುಕೊಂಡಿರುವುದಿಲ್ಲ. ಇಲ್ಲಿನವರಿಗೆ ಒಬ್ಬ ಸಂಸದನ ಜವಾಬ್ದಾರಿ ಏನು? ಒಬ್ಬ ಶಾಸಕನ ಕೆಲಸಗಳೇನು? ಒಬ್ಬ ಪಾಲಿಕೆ ಸದಸ್ಯನ ಹೊಣೆ ಏನು ಎನ್ನುವುದು ಗೊತ್ತಿದೆ. ಆದ್ದರಿಂದ ಸದೃಢ ರಾಷ್ಟ್ರದ ಚುನಾವಣೆಗೆ ಅವರು ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿದ್ದಾರೆ. ಅದರ ಮೊದಲು ಜನಾರ್ಧನ ಪೂಜಾರಿಯವರು ಗೆಲ್ಲುತ್ತಾ ಇದ್ರು. ಅದರ ನಂತರ ಯಾವುದೇ ಜಾತಿಯ ಬಲವಿಲ್ಲದ ಧನಂಜಯ ಕುಮಾರ್ ಅವರು ಇಲ್ಲಿ ಗೆದ್ದು ಸಂಸದರಾದರು. ನಿಮ್ಮ ಕಡೆ ಮಂಡ್ಯ, ಹಾಸನದಲ್ಲಿ ಹೀಗೆ ಆಗುತ್ತಾ, ಯಾವುದೇ ಜಾತಿಯ ಹಂಗಿಲ್ಲದ, ತನ್ನ ಜಾತಿಯವರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವ ವ್ಯಕ್ತಿಯನ್ನು ಕುಮಾರಸ್ವಾಮಿಯವರೇ ನೀವು ಸಂಸದ ಸ್ಥಾನಕ್ಕೆ ಟಿಕೆಟ್ ಕೊಡುತ್ತೀರಾ? ಇಲ್ಲ. ಆದರೆ ಬಿಜೆಪಿ ಕೊಡುತ್ತದೆ. ಅಷ್ಟೇ ಅಲ್ಲದೆ ಗೆಲ್ಲಿಸಿಕೊಂಡು ಬರುತ್ತದೆ. ಅದರ ನಂತರ ಧನಂಜಯ್ ಆಕ್ರಮಿಸಿಕೊಂಡ ಸೀಟನ್ನು ಬಿಜೆಪಿ ಇಲ್ಲಿಯವರೆಗೆ ಬಿಟ್ಟುಕೊಟ್ಟಿಲ್ಲ. ಧನಂಜಯ್ ಕುಮಾರ್ ನಿಮ್ಮ ಪಕ್ಷದಲ್ಲಿಯೂ ಇದ್ದರು. ನೀವು ಅವರಿಗೆ ಏನು ಮಾಡಿದ್ದೀರಿ.
ಇಲ್ಲಿ ಕಲಿಯಲು ನಿಮ್ಮವರು ಬರುತ್ತಾರೆ…
ಇರಲಿ, ಈಗ ಪಿಯುಸಿ ರಿಸಲ್ಟ್ ಗೆ ಬರೋಣ. ಪಿಯುಸಿಗೆ ವಿದ್ಯಾಭ್ಯಾಸ ಮಾಡಲು ನಿಮ್ಮದೇ ರಾಮನಗರ, ಮಂಡ್ಯ, ಹಾಸನ ಜಿಲ್ಲೆಯಿಂದ ಮಂಗಳೂರಿಗೆ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬರುತ್ತಾರೆ. ಇಲ್ಲಿ ಎಜುಕೇಶನ್ ಚೆನ್ನಾಗಿರುತ್ತದೆ ಎನ್ನುವುದು ನಿಮ್ಮ ಜಿಲ್ಲೆಗಳ ಪೋಷಕರ ಮಾತು. ಹಾಗಾದರೆ ಇಲ್ಲಿ ಕಲಿಯಲು ಬರುವ ನಿಮ್ಮ ಜಿಲ್ಲೆಯವರಿಗೆ ತಿಳುವಳಿಕೆ ಇಲ್ಲ ಎನ್ನೋಣವೇ. ದೇವೇಗೌಡರು, ನೀವು, ರೇವಣ್ಣ ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳದ ಉಜಿರೆಗೆ ಬಂದು ಒಂದಿಷ್ಟು ದಿನ ನಿಂತು ಹೋಗಿದ್ದಿರಿ. ಯಾವುದೇ ಚುನಾವಣೆ ಎಂದ ಕೂಡಲೇ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಕಟೀಲು, ಪೊಳಲಿ, ಉಡುಪಿ ದೇವಾಲಯಗಳಿಗೆ ಬಂದು ಕೈ ಮುಗಿದು ನಿಲ್ಲುವವರು ನೀವು. ವಿದ್ಯೆಗೆ ನಮ್ಮ ಜಿಲ್ಲೆ ಬೇಕು, ಆರೋಗ್ಯಕ್ಕೆ ನಮ್ಮ ಜಿಲ್ಲೆ ಬೇಕು, ದೇವರು ಎಂದರೆ ನಮ್ಮ ಜಿಲ್ಲೆ ಬೇಕು, ನಿಮ್ಮ ಪಕ್ಷದ ಆರ್ಥಿಕ ಶಕ್ತಿಯಾಗಿರುವ ಎಂಎಲ್ ಸಿ ಫಾರೂಕ್ ಕೂಡ ಇದೇ ಜಿಲ್ಲೆಯವರು. ಅಂದರೆ ಹಣದ ವಿಷಯ ಬಂದಾಗಲೂ ನಿಮಗೆ ನಮ್ಮ ಜಿಲ್ಲೆಯವರು ಬೇಕು. ಆದರೆ ಕೊನೆಗೆ ನಮ್ಮ ತಿಳುವಳಿಕೆ ಇಲ್ಲ ಎನ್ನುತ್ತೀರಿ. ಅಷ್ಟಕ್ಕೂ ನಿಮಗೆ ತಿಳುವಳಿಕೆ ಇದೆಯಲ್ಲ, ಹಾಗಿದ್ದ ಮೇಲೆ ಮಂಡ್ಯದಲ್ಲಿ ಯಾರದ್ದೋ ಬೈಕಿನ ಹಿಂದೆ ಕುಳಿತು ಪ್ರಚಾರ ಮಾಡುತ್ತಿರಲ್ಲ, ಆಗ ಹಿಂಬಂದಿ ಸವಾರ ಕೂಡ ಹೆಲ್ಮೆಟ್ ಧರಿಸಬೇಕು ಎನ್ನುವ ತಿಳುವಳಿಕೆ ನಿಮಗೆ ಬೇಡವೇ? ನಿಮ್ಮ ತಲೆ ನಿಮ್ಮ ಕುಟುಂಬಕ್ಕೆ ಅತ್ಯಗತ್ಯ. ಅದನ್ನು ರಕ್ಷಿಸಲು ಹೆಲ್ಮೆಟ್ ಧರಿಸಿ. ಅದನ್ನು ಕೂಡ ಹೇಳಬೇಕಾದರೆ ನಾವು ಕರಾವಳಿಯರು ಬೇಕು. ಕಡೆಗೆ ನಿಮಗೆ ನಮ್ಮ ಕಡೆಯ “ಇನ್ನೇನೋ” ಬೇಕು. ನಮಗೆ ನಿಮ್ಮ ಜೊತೆ ಬರಲಿಕ್ಕೆ ತಿಳುವಳಿಕೆ ಇಲ್ಲ, ಅಲ್ವಾ!!
Leave A Reply