ಇದ್ದ ಡ್ಯಾಂ ಸರಿಯಾಗಿ ಬಳಕೆ ಮಾಡಲು ಗೊತ್ತಿಲ್ಲದವರು ಹೊಸ ಡ್ಯಾಂ ಕಟ್ಟಲು ಹೊರಟ ಕಥೆ!!

ಸದ್ಯ ತುಂಬೆ ವೆಂಟೆಂಡ್ ಡ್ಯಾಂನಲ್ಲಿ 4.9 ಮೀಟರ್ ನಷ್ಟು ನೀರು ಇದೆ. ಮೇ ಒಂದರಿಂದ ರೇಶನಿಂಗ್ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಇವರು ಹೀಗೆ ಹೇಳಿರುವುದರಿಂದ ನಮ್ಮ ಊರಿನ ಎರಡು ಪ್ರಸಿದ್ಧ ಪತ್ರಿಕೆಗಳ ವರದಿಗಾರರು ಬೇರೆ ಬೇರೆ ರೀತಿಯಲ್ಲಿ ವರದಿ ಮಾಡಿದ್ದಾರೆ. ಒಂದರಲ್ಲಿ ರೇಶನಿಂಗ್ ಇಲ್ಲ ಎಂದು ಹೇಳಿದರೆ ಮತ್ತೊಂದರಲ್ಲಿ ಜಿಲ್ಲಾಡಳಿತದೊಂದಿಗೆ ಮಾತನಾಡಿ ಅಗತ್ಯ ಬಿದ್ದರೆ ರೇಶನಿಂಗ್ ಆರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ. ಹಾಗಾದರೆ ವಾಸ್ತವ ಏನು? ಸಚಿವರು ಸ್ಪಷ್ಟಪಡಿಸಬೇಕು.
ಇನ್ನು ಅಡ್ಯಾರ್ ನಲ್ಲಿ ಮತ್ತೊಂದು ಡ್ಯಾಂ ಕಟ್ಟಲು ರೂಪುರೇಶೆ ತಯಾರಿಸಲಾಗಿದೆ ಎನ್ನುವ ಅರ್ಥದ ಮಾತುಗಳನ್ನು ಸಚಿವರು ಹೇಳಿದ್ದಾರೆ. ಈ ಮೂಲಕ ಜನರ ನಡುವೆ ತಾವೊಬ್ಬ ಅಭಿವೃದ್ಧಿಯ ಹರಿಕಾರ ಎನ್ನುವ ಭಾವನೆ ಹುಟ್ಟುವ ಹಾಗೆ ನೋಡಿಕೊಂಡಿದ್ದಾರೆ. ಇವರು ಮಂಗಳೂರಿನಲ್ಲಿ ಒಂದಲ್ಲ, ಹತ್ತು ಡ್ಯಾಂ ಬೇಕಾದರೆ ಕಟ್ಟಲಿ. ನನ್ನ ಆಕ್ಷೇಪವಿಲ್ಲ. ಆದರೆ ಆಮೆಗತಿಯಲ್ಲಿ ನಿರ್ಮಾಣವಾಗಿರುವ ತುಂಬೆ ಹೊಸ ವೆಂಟೆಂಡ್ ಡ್ಯಾಂ ಕಟ್ಟಿರುವ ಉದ್ದೇಶ ಸರಿಯಾಗಿ ಬಳಕೆಯಾಗುತ್ತಿದೆಯಾ ಎನ್ನುವುದನ್ನು ನೋಡಲಿ. ಯಾಕೆಂದರೆ ತುಂಬೆಯಲ್ಲಿ ಏಳು ಮೀಟರ್ ಹೊಸ ಡ್ಯಾಂ ಕಟ್ಟಿದ್ದೇ ಹೆಚ್ಚು ನೀರು ಸಂಗ್ರಹಣೆ ಆಗಲಿ, ಆ ಮೂಲಕ ಬೇಸಿಗೆಯಲ್ಲಿ ಯಾವುದೇ ತೊಂದರೆ ಆಗದಿರಲಿ ಎನ್ನುವ ಉದ್ದೇಶದಿಂದ. ಆದರೆ ತುಂಬೆಯಲ್ಲಿ ಇಲ್ಲಿಯ ತನಕ ಏಳು ಮೀಟರ್ ನೀರು ನಿಲ್ಲಿಸಲೇ ಇಲ್ಲ. ಯಾಕೆಂದರೆ ನಿಲ್ಲಿಸಿದರೆ ದೊಡ್ಡ ಸಂಖ್ಯೆಯಲ್ಲಿ ಭೂಮಿ ಮುಳುಗಡೆಯಾಗುತ್ತದೆ. ಭೂಮಿ ಕಳೆದುಕೊಳ್ಳುವವರಿಗೆ ಹಣ ಕೊಡುವುದು ಬೇಡವೇ? ನಮ್ಮ ಉಸ್ತುವಾರಿ ಸಚಿವರು ಅದರ ಬಗ್ಗೆ ಯೋಚಿಸಿದ್ದಾರಾ?
ಡ್ಯಾಂ ಎಂದರೆ ಉಳ್ಳಾಲದ ಒಂಭತ್ತು ಕೆರೆಯಾ..
ಖಾದರ್ ಮಾತನಾಡಿದರೆ ಇನ್ನೊಂದು ಡ್ಯಾಂ ಕಟ್ಟಿಸುತ್ತೇನೆ ಎಂದು ಹೇಳುತ್ತಾರೆ. ಈಗ ಇರುವುದೇ ಇವರಿಗೆ ಸರಿಯಾಗಿ ಬಳಕೆ ಮಾಡಲು ಗೊತ್ತಿಲ್ಲ. ಹೆಚ್ಚೆಂದರೆ ಭೂಮಿ ಕಳೆದುಕೊಳ್ಳಲಿರುವ ಜನರಿಗೆ ಅಬ್ಬಬ್ಬಾ ಅಂದರೆ 115 ಕೋಟಿ ಹಂಚಲು ಬರಬಹುದು. ಅದನ್ನೇ ಕೊಡಲು ನಮ್ಮ ರಾಜ್ಯ ಸರಕಾರಕ್ಕೆ ಪುರುಸೊತ್ತು ಇಲ್ಲ. ಹಾಗಿರುವಾಗ ಖಾದರ್ ಇನ್ನೊಂದು ಡ್ಯಾಂ ಕಟ್ಟಲು ಯೋಚಿಸುತ್ತಿದ್ದಾರೆ. ಹೊಸ ಡ್ಯಾಮ್ ಕಟ್ಟುವುದು ಎಂದರೆ ಅದೇನು ಉಳ್ಳಾಲದ ಒಂಭತ್ತು ಕೆರೆಯಲ್ಲಿ ನೂರಾರು ಮನೆ ಕಟ್ಟಿಸಿ ನಂತರ ಅದರಲ್ಲಿ ವಾಸ ಮಾಡಲು ಯಾರೂ ಒಪ್ಪದೇ ಇದ್ದಾಗ ಬೀಡಾಡಿ ನಾಯಿಗಳಿಗೆ, ಡ್ರಗ್ಸ್, ಗಾಂಜಾ ಸೇವಿಸುವವರಿಗೆ, ಅನೈತಿಕ ಚಟುವಟಿಕೆ ನಡೆಸುವವರಿಗೆ ಕಟ್ಟಿಕೊಟ್ಟ ಟೆಂಟ್ ಗಳಂತೆ ಮಾಡುವುದು ಎಂದು ಸಚಿವರು ಅಂದುಕೊಂಡಿದ್ದಾರಾ? ನಮ್ಮ ಸಚಿವರು ರಾಜ್ಯ ಸರಕಾರದ ಮೇಲೆ ಒತ್ತಡ ತಂದು ತುಂಬೆಯ ಜನರಿಗೆ ಯೋಗ್ಯ ಪರಿಹಾರ ಕೊಡಿಸಿದ್ದರೆ ನಿನ್ನೆ ತುಂಬೆ ವೆಂಟೆಂಡ್ ಡ್ಯಾಂ ಮೇಲೆ ನಿಂತು ಫೋಸ್ ಕೊಡುತ್ತಾ ನಗುವ ಅವಶ್ಯಕತೆ ಇರಲಿಲ್ಲ.
ಇನ್ನು ಯಥಾ ರಾಜಾ, ತಥಾ ಪ್ರಜಾ ಎನ್ನುವ ಮಾತಿದೆ. ಸಚಿವರು ಹೊಸ ಡ್ಯಾಂ ಕನಸನ್ನು ತೋರಿಸಿ ಅಂಗೈಯಲ್ಲಿ ಅರಮನೆ ಕಟ್ಟಿಸುತ್ತಿದ್ದರೆ ಮಹಾನಗರ ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇಗೌಡರು ನಿರ್ಮಾಣ ಹಂತದಲ್ಲಿರುವ ಹೊಸ ಕಟ್ಟಡಗಳಿಗೆ ಕೊಡುವ ನೀರಿನ ಸಂಪರ್ಕವನ್ನು ಕಡಿತ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದು ಮತ್ತೊಂದು ಬಾಲಿಶ ಹೇಳಿಕೆ. ತುಂಬೆಯಿಂದ ಬರುವ ನೀರು ಮಂಗಳೂರಿಗೆ ಬಂದ ಬಳಿಕ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆಂದು ಪ್ರತ್ಯೇಕವಾಗಿ ಹೋಗುವುದಿಲ್ಲ. ಈ ರೀತಿ ಹೇಳಿಕೆ ಕೊಟ್ಟರೆ ಏನಾಗುತ್ತದೆ ಎಂದರೆ ಜನರಿಗೆ ಇವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಅನಿಸಬಹುದು. ಆದರೆ ವಾಸ್ತವದಲ್ಲಿ ಪ್ರತ್ಯೇಕ ಲೈನ್ ಎನ್ನುವುದೇ ಇಲ್ಲ. ಹಾಗಿದ್ದ ಮೇಲೆ ಜನರ ಹಾದಿ ತಪ್ಪಿಸಿ ನೀರು ಪೋಲಾಗುತ್ತಿರುವುದು ಕಟ್ಟಡ ನಿರ್ಮಾಣಕ್ಕೆ ಕೊಟ್ಟ ಕಾರಣದಿಂದ ಅಲ್ಲ ಎಂದು ಸಾಬೀತು ಪಡಿಸಲು ವಿಫಲ ಪ್ರಯತ್ನವನ್ನು ಪಾಲಿಕೆಯ ಇಂಜಿನಿಯರ್ಸ್ ಮಾಡುತ್ತಿದ್ದಾರೆ.
ಟ್ಯಾಂಕರ್ ಖರೀದಿ ಇಲ್ಲ, ಕಮೀಷನ್ ವ್ಯವಹಾರ ಎಲ್ಲ…
ಇನ್ನು ಮನಪಾದಲ್ಲಿ ಹಿಂದೆ ಎರಡು ನೀರಿನ ಟ್ಯಾಂಕರ್ ಗಳಿದ್ದವು. ಅದನ್ನು ಸರಿಯಾಗಿ ಬಳಕೆ ಮಾಡದ ಪರಿಣಾಮವಾಗಿ ಅವು ತುಕ್ಕು ಹಿಡಿದು ಬಳಸಲು ಅಯೋಗ್ಯವಾಗಿದೆ. ಒಂದೊಂದು ಟ್ಯಾಂಕರ್ ಗೂ ಹದಿನೇಳು ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಪಾಲಿಕೆಗೆ ಟ್ಯಾಂಕರ್ ಅತ್ಯಗತ್ಯವಾಗಿ ಬೇಕಾಗಿರುವುದರಿಂದ ಅದನ್ನು ಖರೀದಿಸಬಹುದಿತ್ತು. ಆದರೆ ಪಾಲಿಕೆಯ ಅಧಿಕಾರಿಗಳು ಬಾಡಿಗೆಯ ಆಧಾರದಲ್ಲಿ ಟ್ಯಾಂಕರ್ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಏನಾಗುತ್ತಿದೆ ಎಂದರೆ ಪ್ರತಿ ವರ್ಷ ಸಾಕಷ್ಟು “ನೀರು” ಅಧಿಕಾರಿಗಳು ಬಯಸಿದ ಕಡೆ ಹರಿದು ಅವರ ಭೂಮಿ ಫಲವತ್ತಾಗಿ ಹೋಗುತ್ತಿದೆ!
Leave A Reply