ಖಾದರ್ ಅವರದ್ದು ಪೆಟ್ಟು ತಪ್ಪಿಸುವ ಯತ್ನ!!!
ಯುಟಿ ಖಾದರ್ ಚಾಣಾಕ್ಷ ರಾಜಕಾರಣಿ. ಅವರು ರಮಾನಾಥ ರೈ ಅವರಂತೆ ಅಲ್ಲಾನ ಕೃಪೆ ತರಹದ ಹೇಳಿಕೆ ಕೊಟ್ಟು ಸಿಕ್ಕಿ ಬೀಳುವುದಿಲ್ಲ. ಅಭಯಚಂದ್ರ ಜೈನ್ ತರಹ ಯಾರನ್ನೋ ಬಹಿರಂಗವಾಗಿ ಬೈದು ಹೊಡೆಯಲು ಹೋಗುವುದಿಲ್ಲ. ವರದಿಗಾರರ ಎದುರು ನಗುನಗುತ್ತಲೇ ತಾವು ಎಲ್ಲಿ ಬತ್ತಿ ಇಡಬೇಕೋ ಅಲ್ಲಿ ಇಟ್ಟುಬಿಡುತ್ತಾರೆ. ಅಂತಹ ಮತ್ತೊಂದು ಕೆಲಸವನ್ನು ಅವರು ನಿನ್ನೆ ಮಾಡಿದ್ದಾರೆ. ಆ ಮೂಲಕ ಪೆಟ್ಟು ತಪ್ಪಿಸುವ ತಮ್ಮ ಬುದ್ಧಿವಂತಿಕೆಯ ನಡೆ ಪ್ರದರ್ಶಿಸಿದ್ದಾರೆ.
ವಿಷಯ ಪ್ರಾರಂಭವಾಗುವುದೇ ಖಾದರ್ ತುಂಬೆಗೆ ಭೇಟಿ ಕೊಟ್ಟ ಬಳಿಕ. ಈ ಬಾರಿ ಅವರು ಉಸ್ತುವಾರಿ ಆಗಿರುವುದರಿಂದ ಎಪ್ರಿಲ್ ನಲ್ಲಿ ತುಂಬೆ ದರ್ಶನ ಮಾಡಬೇಕಾದ ಸಂಪ್ರದಾಯ. ಅಲ್ಲಿ ಹೋಗುವಾಗ ಖಾದರ್ ತಮ್ಮ ಪಟಾಲಾಂ ತೆಗೆದುಕೊಂಡು ಹೋಗಿದ್ದಾರೆ. ಹೋಗುವಾಗ ತುಂಬೆಯ ನೀರು ಹೋಗುವ ಎರಡು ವಿಧಾನಸಭಾ ಕ್ಷೇತ್ರದ ಶಾಸಕರನ್ನು ಕರೆದುಕೊಂಡು ಹೋಗಬಹುದಿತ್ತು. ಯಾಕೆಂದರೆ ಇಲ್ಲಿ ರಾಜಕೀಯ ಮಾಡಬಾರದು. ಆದರೆ ಲೋಕಸಭಾ ಚುನಾವಣೆಯ ಗುಂಗಿನಿಂದ ಖಾದರ್ ಹೊರಗೆ ಬಂದಿಲ್ಲ ಎಂದು ಕಾಣಿಸುತ್ತದೆ. ಅವರು ಇನ್ನೂ ರಾಜಕೀಯ ಮಾಡುತ್ತಲೇ ಇರುವುದರಿಂದ ಅವರಿಗೆ ಹಾಲಿ ಶಾಸಕರನ್ನು ಕರೆದುಕೊಂಡು ಹೋಗಬೇಕು ಎಂದು ಅನಿಸಲಿಲ್ಲ. ಅಲ್ಲಿ ಫೋಟೋಗೆ ಮುಖ ಮಾಡಿ ಫೋಸ್ ಕೊಟ್ಟ ನಂತರ ರೇಶನಿಂಗ್ ಇಲ್ಲ ಎನ್ನುವ ಮಾತನ್ನು ಆಡಿದ್ದಾರೆ. ಅದರ ನಂತರ ಒಂದು ವೇಳೆ ರೇಶನಿಂಗ್ ಬೇಕಾದರೆ ಆಗ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರದ ಶಾಸಕರೊಂದಿಗೆ ಮಾತನಾಡಿ ರೇಶನಿಂಗ್ ಪ್ರಾರಂಭಿಸುತ್ತೇವೆ ಎಂದಿದ್ದಾರೆ.
ಖಾದರ್ ಅವರ ಒಂದು ವಿಶೇಷ ಎಂದರೆ ಅವರು ಬೀಸುವ ದೊಣ್ಣೆಯಿಂದ ತಪ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಾರೆ. ತಾನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದು ಅನೇಕ ವೇದಿಕೆಗಳಲ್ಲಿ ಹೇಳಿದ್ದಾರೆ. ಆದರೆ ವೇದಿಕೆಗಳಿಂದ ಇಳಿಯುತ್ತಲೇ ಅದನ್ನು ಮರೆಯುತ್ತಾರೆ. ತುಂಬೆಯ ವಿಷಯದಲ್ಲಿಯೂ ಹಾಗೆ. ರೇಶನಿಂಗ್ ಆರಂಭಿಸಿ ವಾರದ ನಂತರ ತುಂಬೆಗೆ ಹೋದ ಸಚಿವರು ಅಲ್ಲಿಗೆ ಹೋಗಿ ರೇಶನಿಂಗ್ ಇಲ್ಲ ಎಂದರು. ಅದೇ ರೇಶನಿಂಗ್ ಅನಿವಾರ್ಯ ಎನ್ನುವ ಸಂಗತಿ ಅವರ ಕಿವಿಗೆ ಬಿದ್ದೊಡನೆ ಈ ಬಗ್ಗೆ ಶಾಸಕರೊಂದಿಗೆ ಮಾತನಾಡುತ್ತೇನೆ ಎಂದರು. ಅವರಿಗೆ ಗೊತ್ತಿದೆ. ನೀರಿನ ರೇಶನಿಂಗ್ ಆಗಲೇಬೇಕು ಎನ್ನುವ ಪರಿಸ್ಥಿತಿ ಇದೆ. ರೇಶನಿಂಗ್ ಸಮರ್ಪಕವಾಗಿ ನಡೆಯಲ್ಲ ಎನ್ನುವುದು ಕೂಡ ಸಚಿವ ಖಾದರ್ ಅವರಿಗೆ ಗೊತ್ತಿದೆ. ಈ ವಿಷಯದಲ್ಲಿ ತಾವು ತೆಗೆದುಕೊಳ್ಳುವ ಯಾವುದೇ ಕ್ರಮ ತಮಗೆ ಸಣ್ಣ ರಾಜಕೀಯ ಹಿನ್ನಡೆಗೆ ಕಾರಣವಾಗಬಹುದು ಎನ್ನುವುದು ಕೂಡ ಗೊತ್ತಿದೆ. ಆದ್ದರಿಂದ ರೇಶನಿಂಗ್ ಇಲ್ಲ ಎನ್ನುವಾಗ ತೋರಿಸಿದ ಧೈರ್ಯ ರೇಶನಿಂಗ್ ಬೇಕಾಗಲಿದೆ ಎನ್ನುವಾಗ ಶಾಸಕರೊಂದಿಗೆ ಮಾತನಾಡಿ ಹೇಳುತ್ತೇನೆ ಎಂದಿದ್ದಾರೆ. ಇದರ ಅರ್ಥ ಒಂದು ವೇಳೆ ರೇಶನಿಂಗ್ ನಿಂದ ತೊಂದರೆಯಾಗಿ ಜನರ ಬೊಬ್ಬೆ ಹೊಡೆದರೆ ಆಗ ನಾವು ಶಾಸಕರೆಲ್ಲರೂ ಸೇರಿ ಈ ನಿರ್ಧಾರ ತೆಗೆದುಕೊಂಡಿದ್ದು ಎನ್ನಬಹುದಲ್ಲ. ಈ ಮೂಲಕ ಇಮೇಜ್ ಹಾಳಾದರೆ ಸ್ಥಳೀಯ ಶಾಸಕರದ್ದು ಕೂಡ ಆಗಲಿ ಎನ್ನುವ ರಾಜಕೀಯ ನಡೆ ಯುಟಿ ಖಾದರ್ ಅವರದ್ದು.
ಇನ್ನೂ ರೇಶನಿಂಗ್ ಆಗುವಾಗ ಖಂಡಿತ ತೊಂದರೆಯಾಗುತ್ತದೆ. ಅದನ್ನು ಆದಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳುವ ಹೊಣೆ ಸಚಿವರದ್ದು. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಮಾಡಬಹುದಾಗಿದೆ. ಮಾಡುತ್ತಾರಾ ಎನ್ನುವುದು ಸದ್ಯದ ಪ್ರಶ್ನೆ!!!
Leave A Reply