ಒಬ್ಬರು ಮೋದಿ ಏನು ಮಾಡುವುದು ಅಲ್ವಾ ಸ್ಮಾರ್ಟ್ ಸಿಟಿ ಅಧಿಕಾರಿಗಳೇ!!

ಪಾಪ, ಒಬ್ಬರು ನರೇಂದ್ರ ಮೋದಿಯವರು ಏನು ತಾನೇ ಮಾಡಬಹುದು. ಅವರು ಒಳ್ಳೊಳ್ಳೆಯ ಯೋಜನೆಗಳನ್ನು ಜಾರಿಗೆ ತರಬಹುದು. ಆದರೆ ಅದನ್ನು ಪ್ರತಿ ಒಂದು ಕಡೆ ಅನುಷ್ಟಾನಗೊಳಿಸಲು ಅವರೇ ಹೋಗಲು ಆಗುತ್ತದೆಯಾ? ಅವರು ಜಾರಿಗೆ ತಂದ ಸ್ಮಾರ್ಟ್ ಸಿಟಿ ಯೋಜನೆ ಎರಡನೇ ಹಂತದಲ್ಲಿ ಮಂಗಳೂರಿಗೆ ಸಿಕ್ಕಿರಬಹುದು. ಹಾಗಂತ ತಿಂಗಳಿಗೆ ಎರಡು ಸಲ ಮೋದಿಯವರು ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದಲ್ಲಿರುವ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಕುಳಿತು ಸಭೆ ಮಾಡಲು ಆಗುತ್ತದೆಯಾ? ದೆಹಲಿಯಲ್ಲಿ ಕುಳಿತ ಮೋದಿಯವರಿಗೆ ಯಾವ ವಿಝನ್ ಇದೆಯೋ ಅದೇ ನಮ್ಮ ಅಧಿಕಾರಿಗಳಿಗೆ ಇಲ್ಲಿ ಕೂಡ ಇರಬೇಕಲ್ವಾ? ಅಲ್ಲಿ ಮೋದಿಯವರು ದಿನಕ್ಕೆ ಇಪ್ಪತ್ತು ಗಂಟೆಗಳು ದುಡಿದು ದೇಶಕ್ಕಾಗಿ ಕೆಲಸ ಮಾಡುತ್ತಿದ್ದರೆ, ಇಲ್ಲಿ ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಾದವರಿಗೆ ಸರಿಯಾಗಿ ಇಪ್ಪತ್ತು ನಿಮಿಷ ದುಡಿಯಲು ಸೊಂಟಕ್ಕೆ ಬಲ ಇಲ್ಲದಂತಹ ಪರಿಸ್ಥಿತಿ ಇದೆ. ಏಕೆಂದರೆ ನಿವೃತ್ತಿಯಾಗಿ ಮನೆಯಲ್ಲಿ ಬಿಪಿ, ಶುಗರ್ ಮಾತ್ರೆಗಳನ್ನು ತೆಗೆದುಕೊಂಡು ಮಧ್ಯಾಹ್ನ ಊಟ ಮಾಡಿ ಮಲಗಿ ಸಂಜೆ ಚಾಗೆ ಎದ್ದು ಹತ್ತು ನಿಮಿಷ ವಾಂಕಿಂಗ್ ಮಾಡುವಾಗಲೇ ಏದುಸಿರು ಬಿಡುವವರನ್ನು ಈ ಯೋಜನೆ ಅನುಷ್ಟಾನಗೊಳಿಸಲು ಇಟ್ಟುಕೊಂಡಿದ್ದಾರೆ. ಇನ್ನು ಏನು ನಿರೀಕ್ಷೆ ಮಾಡಲು ಸಾಧ್ಯ. ಒಟ್ಟಿನಲ್ಲಿ ಸರಿಯಾದ ಕಲ್ಪನೆಯಿಲ್ಲದೆ ಸ್ಮಾರ್ಟ್ ಸಿಟಿ ಯೋಜನೆ ಹಳ್ಳಕ್ಕೆ ಇಳಿಯುತ್ತಿದೆ. ಹಳ್ಳಕ್ಕೆ ಇಳಿಸುವಲ್ಲಿ ನಮ್ಮ ಅಧಿಕಾರಿಗಳ ಶ್ರಮ ಎದ್ದುಕಾಣುತ್ತದೆ.
ಎಂಪಿ, ಶಾಸಕರು ಇದರಲ್ಲಿ ಇಲ್ಲ..
ಮೋದಿಜಿಯವರು ಇದನ್ನು ಜಾರಿಗೆ ತರುವಾಗ ಎಷ್ಟು ನಿಖರವಾಗಿ ಯೋಚನೆ ಮಾಡಿದ್ದಾರೆ ಎಂದರೆ ಯೋಜನೆ ಅನುಷ್ಟಾನಕ್ಕೆ ತರಬೇಕಾದ ಜವಾಬ್ದಾರಿ ಇರುವ ಸ್ಮಾರ್ಟ್ ಸಿಟಿ ನಿರ್ದೇಶಕ ಮಂಡಳಿಯಲ್ಲಿ ಯಾವುದೇ ಉನ್ನತ ರಾಜಕೀಯ ಪ್ರವೇಶ ಆಗಬಾರದು ಎನ್ನುವ ಕಾರಣಕ್ಕೆ ಸಮಿತಿಯಲ್ಲಿ ಸಂಸದ, ಸ್ಥಳೀಯ ಶಾಸಕರನ್ನು ಸೇರಿಸಿರಲಿಲ್ಲ. ಅದರ ಉದ್ದೇಶ ಚೆನ್ನಾಗಿದ್ದಿರಬಹುದು. ಆದರೆ ಇದು ಅಧಿಕಾರಿಗಳಿಗೆ ಬೇಕಾಬಿಟ್ಟಿ ಯೋಜನೆ ಅನುಷ್ಟಾನಕ್ಕೆ ತರಲು ರಹದಾರಿ ಮಾಡಿಕೊಟ್ಟಾಗಿದೆ. ಮೊದಲನೇಯದಾಗಿ ಸ್ಮಾರ್ಟ್ ಸಿಟಿ ಹೇಗೆ ಮಾಡಬೇಕೆನ್ನುವ ದೂರದೃಷ್ಟಿ ಇಲ್ಲಿ ಯಾರಿಗೂ ಇಲ್ಲ. ಮೋದಿಯವರು ಏನು ಪ್ಲಾನ್ ಮಾಡಿದ್ದರು ಎಂದರೆ ಅಡ್ಡಾದಿಡ್ಡಿ ಬೆಳೆಯುವ ನಗರಗಳನ್ನು ಭವಿಷ್ಯದ ನೂರು ವರ್ಷಗಳ ದೃಷ್ಟಿಯಿಂದ ಶಿಸ್ತುಬದ್ಧವಾಗಿ ಬೆಳೆಯಲು ಯೋಜನೆ ಹಾಕಿಕೊಳ್ಳಬೇಕು ಎನ್ನುವುದು ಅವರ ಕಲ್ಪನೆಯಾಗಿತ್ತು. ಅದರ ಪ್ರಕಾರ ಯಾವುದೇ ಪಾರಂಪರಿಕ ಕಟ್ಟಡಗಳನ್ನು ಕೆಡವದೇ ಅದನ್ನು ಉಳಿಸಿ ನಗರಗಳ ಬೆಳವಣಿಗೆಯ ದೃಷ್ಟಿಯಿಂದ ಏನು ಮೂಲಭೂತ ಸೌಕರ್ಯ ಆಗಬೇಕು ಅದಕ್ಕೆ ಅನುದಾನವನ್ನು ಬಳಸುವುದು ಎನ್ನುವ ಸಂಕಲ್ಪವಿತ್ತು. ಆದರೆ ಆಗಿದೆಯಾ?
ಕ್ಲಾಕ್ ಟವರ್ ಯಾಕೋ..
ನಮ್ಮ ಮಂಗಳೂರಿನ ಸ್ಮಾರ್ಟ್ ಸಿಟಿ ಅನುಷ್ಟಾನ ಮಂಡಳಿ ಮೊದಲು ಹಣ ವೇಸ್ಟ್ ಮಾಡಿದ್ದು ಪುರಭವನದದ ಬಳಿ ಕ್ಲಾಕ್ ಟವರ್ ಮಾಡಲು. ಅದಕ್ಕೆ ಇಟ್ಟಂತಹ ಹಣ 99 ಲಕ್ಷ. ನಿಜಕ್ಕೂ ಕ್ಲಾಕ್ ಟವರ್ ನಮ್ಮ ಮಂಗಳೂರಿಗೆ ಅಗತ್ಯವಿತ್ತಾ? ಅಲ್ಲಿ ಮೊದಲೇ ಜಾಗದ ಕೊರತೆ ಇದೆ. ಭರತ್ ಲಾಲ್ ಮೀನಾ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ ಕ್ಲಾಕ್ ಟವರ್ ಅನ್ನು ಒಡೆದು ಹಾಕಿದ್ದರು. ಅದರಿಂದ ಅಲ್ಲಿ ಒಂದಿಷ್ಟು ಹೆಚ್ಚು ಜಾಗ ಸಿಕ್ಕಿ ವಾಹನಗಳ ಓಡಾಟಕ್ಕೆ ಸುಲಭವಾಗಿತ್ತು. ಹಾಗಿರುವಾಗ ಒಡೆದು ಹಾಕಿದ್ದ ಕ್ಲಾಕ್ ಟವರ್ ಅನ್ನು ಮತ್ತೆ 99 ಲಕ್ಷ ನಮ್ಮ ತೆರಿಗೆಯ ಹಣ ಖರ್ಚು ಮಾಡಿ ಕಟ್ಟುವ ಅಗತ್ಯ ಇರಲಿಲ್ಲ. ಒಂದಾನೊಂದು ಕಾಲದಲ್ಲಿ ಮಂಗಳೂರು ನಗರಕ್ಕೆ ವ್ಯಾಪಾರ, ವಹಿವಾಟಿಗೆ, ಉದ್ಯೋಗಕ್ಕೆ ಬರುವವರಿಗೆ, ಆಸ್ಪತ್ರೆ, ಸರಕಾರಿ ಕಚೇರಿಗಳಿಗೆ ಬರುವವರಿಗೆ ಸಮಯ ನೋಡಲು ಗಡಿಯಾರದ ಅವಶ್ಯಕತೆ ಇತ್ತು. ಆದರೆ ಈಗ ಪ್ರತಿಯೊಬ್ಬರ ಕೈಯಲ್ಲೂ ವಾಚ್ ಇದೆ ಬಿಟ್ಟರೆ ಮೊಬೈಲಿನಲ್ಲಿಯೇ ಸಮಯ ನೋಡುತ್ತಾರೆ. ವಾಚ್ ನ ಕೆಲಸವನ್ನು ಮೊಬೈಲು ಮಾಡುತ್ತಿದೆ. ಹಾಗಿರುವಾಗ ಕೋಟಿಯ ಹತ್ತಿರ ಹಣವನ್ನು ಖರ್ಚು ಮಾಡಿ ಕ್ಲಾಕ್ ಟವರ್ ಕಟ್ಟಿಸುವುದು ಯಾಕೆ ಬೇಕಿತ್ತೊ. ಎರಡನೇಯದಾಗಿ ಸ್ಮಾರ್ಟ್ ಸಿಟಿಯವರು ರಸ್ತೆಯನ್ನು ಅಭಿವೃದ್ಧಿಪಡಿಸಲು ಕೈ ಹಾಕಿದ್ದಾರೆ. ಅದು ಯಾವ ರಸ್ತೆ ಎಂದು ಗೊತ್ತಾದರೆ ನಿಮಗೆ ಆಶ್ಚರ್ಯವಾಗಬಹುದು. ಅತ್ಯುತ್ತಮ ರಸ್ತೆಯನ್ನು ಮತ್ತೆ ಅಭಿವೃದ್ಧಿಪಡಿಸುವುಉ ಯಾಕೆ ಎಂದು ನಿಮಗೆ ಅನಿಸಬಹುದು. ಆ ಬಗ್ಗೆ ನಾಳೆ ಮಾತನಾಡೋಣ!
Leave A Reply