ಫ್ಲಾಕ್ಸ್, ಬ್ಯಾನರ್ ಹಾಕಬಹುದು, ನೇತ್ರಾವತಿಯ ಮೇಲೆ ಪ್ರೀತಿ ತರಿಸುವುದು ಹೇಗೆ?

ಎರಡು ದಿನಗಳಿಂದ ಅಲ್ಲಲ್ಲಿ ಕೆಲವು ಬ್ಯಾನರ್ ಗಳನ್ನು ನೀವು ಗಮನಿಸುತ್ತಿರಬಹುದು. ಒಂದು ಬ್ಯಾನರ್ ನಲ್ಲಿ ಬಿಜೆಪಿ ಮುಖಂಡ ಸದಾನಂದ ಗೌಡ ಮತ್ತು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ಅವರ ಫೋಟೋ ಹಾಗೂ ಇನ್ನೊಂದು ಬ್ಯಾನರ್ ನಲ್ಲಿ ಜಿಲ್ಲೆಯ ಎಂಟು ಜನ ಶಾಸಕರು (ಅದರಲ್ಲಿ ಒಬ್ಬರು ಸಚಿವರು) ಫೋಟೋ ಹಾಕಲಾಗಿದೆ. ಈ ಬಗ್ಗೆ ಹೋರಾಟ ಆಗಬೇಕಾಗಿರುವುದು ನಿಜ. ಆದರೆ ಹೋರಾಟ ಮಾಡಿದರೆ ಎಷ್ಟು ಜನ ಸೇರುತ್ತಾರೆ ಎನ್ನುವುದು ಕೂಡ ನಿಜ. ಈಗ ಒಂದು ವೇಳೆ ನಮ್ಮ ಏಳು ಜನ ಶಾಸಕರು ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಸದನದಲ್ಲಿ ಪ್ರತಿಭಟನೆ ಮಾಡಿದರು ಎಂದೇ ಇಟ್ಟುಕೊಳ್ಳೋಣ. ಅಲ್ಲಿ ಏನಾಗುತ್ತೆ, ಸ್ಪೀಕರ್ ರಮೇಶ್ ಅವರು ಏನು ಹೇಳಬಹುದು ಎಂದರೆ ನೀವು ಇಲ್ಲಿ ಪ್ರತಿಭಟನೆ ಮಾಡುತ್ತೀರಿ. ಆದರೆ ನಿಮ್ಮ ಜನ ಅಲ್ಲಿ ಮಾತನಾಡುವುದಿಲ್ಲವಲ್ಲ ಎಂದು ಹೇಳಿದರೆ ನಮ್ಮ ಶಾಸಕರು ಏನು ತಾನೆ ಹೇಳಿಯಾರು? ನಮ್ಮ ಜಿಲ್ಲೆಯಲ್ಲಿ ನೇತ್ರಾವತಿ ತಿರುವಿನ ಬಗ್ಗೆ ಎಷ್ಟು ಪ್ರತಿಭಟನೆ ಆಗಿದೆ. ಅದರಲ್ಲಿ ಎಷ್ಟು ಜನ ಭಾಗವಹಿಸಿದ್ದಾರೆ. ಹಾಗಾದರೆ ಭಾಗವಹಿಸಿದ ಕೆಲವರಿಗೆ ಮಾತ್ರ ನೇತ್ರಾವತಿಯ ನೀರು ಬೇಕಿತ್ತಾ? ಉಳಿದ ಯಾರಿಗೂ ಏನೂ ಬಿದ್ದು ಹೋಗಿಲ್ವಾ? ಈಗ ಹೋರಾಟ ಮಾಡಲು ಸಾಧ್ಯವಿಲ್ಲ, ಏನಿದ್ದರೂ ಚುನಾವಣಾ ನೀತಿ ಸಂಹಿತೆ ಮುಗಿದ ನಂತರವೇ, ಆವಾಗ ಪ್ರತಿಭಟನೆ ಮಾಡಬಹುದು. ಆದರೆ ನಮ್ಮಲ್ಲಿ ಎಷ್ಟು ಜನ ಈ ಹೋರಾಟದಲ್ಲಿ ಧುಮುಕಬಹುದು. ಬಿಜೆಪಿಯ ಶಾಸಕರು ಬೃಹತ್ ಸಭೆ ಕರೆದರು ಎಂದೇ ಇಟ್ಟುಕೊಳ್ಳೋಣ, ಎಷ್ಟು ಜನ ಸೇರುತ್ತಾರೆ. ಒಂದು ಹೋರಾಟ ಯಶಸ್ವಿಯಾಗಿ ಅದು ಸರಕಾರದ ಕಣ್ಣು ತೆರೆಯಬೇಕಾದರೆ ಅದು ಸರಕಾರವನ್ನೇ ಅಲುಗಾಡಿಸುವಂತಿರಬೇಕು. ಆದರೆ ನಮ್ಮಲ್ಲಿ ಹಾಗೆ ಆಗುವುದಿಲ್ಲ. ಮೋದಿ ನೆಹರೂ ಮೈದಾನದಲ್ಲಿ ಬರುತ್ತಾರೆ ಎನ್ನುವಾಗ ಸೇರಿದ್ದ ಜನರಷ್ಟೇ ನೇತ್ರಾವತಿಯ ತಿರುವು ವಿರುದ್ಧ ಬನ್ನಿ ಎಂದರೆ ಸೇರುತ್ತಾರಾ? ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇರುವುದರಿಂದ ಕಾಂಗ್ರೆಸ್, ಜೆಡಿಎಸ್ ನವರು ಕೈಜೋಡಿಸಲಿಕ್ಕಿಲ್ಲ. ಹಾಗಾದರೆ ಅವರಿಗೆ ನೀರು ಬೇಡ್ವಾ? ಡಿಸಿ ಆಫೀಸ್ ಹೊರಗೆ ನಡೆಯುವ ಹೋರಾಟಗಳಲ್ಲಿ ಎಷ್ಟು ಜನ ಸೇರುತ್ತಾರೆ ಎನ್ನುವುದು ನನಗೆ ಗೊತ್ತಿದೆ. ನೀರಿನ ಹೋರಾಟ ಎಂದ ಕೂಡಲೇ ಅದು ದಿನೇಶ್ ಹೊಳ್ಳ, ಶಶಿಧರ್ ಶೆಟ್ಟಿ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿಯವರಿಗೆ ಮಾತ್ರ ಎನ್ನುವಂತಹ ಪರಿಸ್ಥಿತಿ ಇದೆ. ಯಾಕೆ ಮಂಗಳೂರಿನ ಪ್ರಖ್ಯಾತ ವೈದ್ಯರು ನೀರು ಕುಡಿಯಲ್ವಾ? ಇಂಜಿನಿಯರ್ಸ್ ನೀರು ಕುಡಿಯಲ್ವಾ? ಪ್ರಮುಖ ದೇವಸ್ಥಾನ, ಚರ್ಚ್, ಮಸೀದಿಗಳ ಮುಖ್ಯಸ್ಥರು ನೀರು ಕುಡಿಯಲ್ವಾ? ಅವರೆಲ್ಲ ಜನರನ್ನು ಒಗ್ಗೂಡಿಸಿ ಹೋರಾಟಕ್ಕೆ ಯಾಕೆ ಬರಬಾರದು? ಯಾಕೆ ಬರಲ್ಲ ಎಂದರೆ ಯಾರೂ ಕೂಡ ಕೆಟ್ಟವರಾಗಲು ಇಷ್ಟ ಪಡುವುದಿಲ್ಲ.
ಯಾಕೆಂದರೆ ನಗರಗಳಲ್ಲಿ ವಾಸಿಸುವವರಿಗೆ ತಮಗೆ ನೀರಿನ ಸಮಸ್ಯೆಯಾದರೆ ಅದನ್ನು ಸರಿಪಡಿಸಬೇಕಾದವರು ಸ್ಥಳೀಯ ಕಾರ್ಪೋರೇಟರ್ ಎನ್ನುವ ಅನಿಸಿಕೆ. ನೀರಿನ ತೊಂದರೆಯಾದರೆ ನೇತ್ರಾವತಿಯ ಬಗ್ಗೆ ಯಾರೂ ಇಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾರ್ಪೋರೇಟರ್ ಕೂಡ ನೀರು ಇಲ್ಲ ಎಂದು ದೊಡ್ಡ ದೊಡ್ಡ ವಸತಿ ಸಮುಚ್ಚಯಗಳಿಂದ ಫೋನ್ ಬಂದ ಕೂಡಲೇ ಧಾವಿಸಿ ಟ್ಯಾಂಕರ್ ತರಿಸಿ ಫ್ಲಾಟ್ ಗಳ ಟಾಂಕಿ ತುಂಬಿಸುತ್ತಾರೆ. ಆದರೆ ತೊಂದರೆಯಲ್ಲಿ ಸಿಲುಕಿ ಬೀಳುವವರು ವಠಾರಗಳಲ್ಲಿ ಗುಂಪು ಗುಂಪುಗಳಾಗಿ ವಾಸಿಸುವವರು. ಅವರಿಗೆ ಒಮ್ಮೆ ಟ್ಯಾಂಕರ್ ಬಂದರೆ ಹೆಚ್ಚೆಂದರೆ ಆ ದಿನದ್ದು ಮಾತ್ರ ತುಂಬಿಸಬಹುದು. ನಾಳೆ ಮತ್ತೆ ಆಕಾಶ ನೋಡಬೇಕು. ಸದ್ಯ ಎರಡು ದಿನಗಳಿಗೊಮ್ಮೆ ನೀರು ಬರುತ್ತಿದೆ. ವಾರದೊಳಗೆ ಮಳೆ ಬರದಿದ್ದರೆ ಅದು ಮೂರು ದಿನಗಳಿಗೊಮ್ಮೆ ಆಗಬಹುದು. ಎರಡು ವಾರ ಮಳೆ ಬರದಿದ್ದರೆ ನಾಲ್ಕು ದಿನಗಳಿಗೊಮ್ಮೆ ನೀರು ಎಂಬ ಸೂಚನೆ ಬರಬಹುದು. ಆದರೆ ವಾರಕ್ಕೊಮ್ಮೆ ಎಂಬ ಪರಿಸ್ಥಿತಿ ಬಂದರೂ ಯಾರೂ ಮನೆ ಬಿಟ್ಟು ಬೀದಿಗೆ ಇಳಿಯಲ್ಲ, ಯಾಕೆಂದರೆ ನೇತ್ರಾವತಿ ಯಾರಿಗೂ ಸಂಬಂಧಿಯಲ್ಲ!
Leave A Reply