ಶ್ರೀ ವನದುರ್ಗಾ ದೇವಿ ಸಾನ್ನಿಧ್ಯ ಪುನಃ ನಿರ್ಮಾಣ ಅಷ್ಟಭುಜದ ಶಿಲಾಕಟ್ಟೆ!

ಸುಬ್ರಹ್ಮಣ್ಯ: ನಿಂತಿಕಲ್ಲು ಶ್ರೀ ವನದುರ್ಗಾ ದೇವಿ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ಮೇ 25 ಮತ್ತು 26ರಂದು ನಡೆಯಲಿದೆ. ಕುಂಟಾರು ವಾಸುದೇವ ತಂತ್ರಿ ಮತ್ತು ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳು ನೆರವೇರಲಿವೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಸಂತ ನಡುಬೈಲು ತಿಳಿಸಿದ್ದಾರೆ.
ಕ್ಷೇತ್ರವನ್ನು ಸುಮಾರು 40 ಲಕ್ಷ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಪುನಃನಿರ್ಮಾಣಗೊಳಿಸಲಾಗಿದೆ. ಅಷ್ಟಭುಜ ಶಿಲಾ ಕಟ್ಟೆಯ ನಿರ್ಮಾಣವಾಗಿದೆ. 25ರಂದು ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಮತ್ತು ಭಜನಾ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲ ಧಾರ್ಮಿಕ ಸಭೆ ನಡೆಯಲಿದ್ದು, ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದಯಾನಂದ ಕತ್ತಲ್ ಸಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕೆ.ಎಸ್ . ಹೆಗ್ಡೆ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮಹಾಬಲೇಶ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಗಳೂರು ವಿಭಾಗದ ನಿರ್ದೇಶಕ ಚಂದ್ರಶೇಖರ, ಮಿಲ್ಕ್ ಮಾಸ್ಟರ್ ರಾಘವ್ ಗೌಡ ಪಲ್ಲತ್ತಡ್ಕ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಮಂಗಳೂರಿನ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಸದಸ್ಯರಿಂದ ತುಳುನಾಡ ಸಂಸ್ಕೃತಿ ಪ್ರದರ್ಶಿತವಾಗಲಿದೆ.
ಕಾರಣಿಕ ತಾಣ
800 ವರ್ಷಗಳ ಇತಿಹಾಸವಿರುವ ನಿಂತಿಕಲ್ಲು ಶ್ರೀ ವನದುರ್ಗಾ ಉಮಾಮಹೇಶ್ವರ ಶಕ್ತಿಯು ನಿಂತಿರುವ ಕಲ್ಲಿನಲ್ಲಿ ಇತ್ತು ಎಂಬುದಾಗಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿದೆ. ಹಿಂದಿನ ರಾಜರ ಕಾಲದಲ್ಲಿ ಶಕ್ತಿ ಇರುವ ನಿಂತ ಕಲ್ಲನ್ನು ಆನೆಯಿಂದ ಹಗ್ಗ ಕಟ್ಟಿ ಎಳೆಯಲು ನೋಡಿದಾಗ ದೇವಿ ದುಂಬಿ ರೂಪದಲ್ಲಿ ಬಂದು ಆನೆಯ ಮೇಲೆ ದಾಳಿ ಮಾಡಿತು. ದಾಳಿಯಿಂದ ಆನೆ ಛಿದ್ರವಾಗಿ ಬೇರೆ ಬೇರೆ ಜಾಗಕ್ಕೆ ಬಿಟ್ಟು. ಬಾಲ ಬಿದ್ದ ಜಾಗ ಬೀರಾಳ, ಕಿವಿ ಬಿದ್ದ ಜಾಗ ಕೆರೆಕ್ಕೋಡಿ, ಹೊಟ್ಟೆಯ ಭಾಗ ಬಿದ್ದ ಸ್ಥಳ ಅಂಬೋಜಿಕೆರೆ ಆಗಿದೆ. ಈಗಲೂ ಈ ಸ್ಥಳಗಳು ಗ್ರಾಮದಲ್ಲಿದೆ. ಈ ಶಕ್ತಿ ಕಲ್ಲಿನ ಕಾರಣದಿಂದ ನಿಂತಿಕಲ್ಲು ಎಂಬ ಹೆಸರು ಈ ಊರಿಗೆ ಬಂದಿದೆ. ಆರೋಗ್ಯ, ಉದ್ಯೋಗ, ಸಂತಾನ ಭಾಗ್ಯ, ವ್ಯವಹಾರ, ಕಂಕಣ ಭಾಗ್ಯಕ್ಕಾಗಿ ನಿಂತಿಕಲ್ಲು ಸಾನ್ನಿಧ್ಯದಲ್ಲಿ ಪ್ರಾರ್ಥನೆ ನೆರವೇರಿಸಿ ಪ್ರತಿಫಲ ಪಡೆಯುತ್ತಾರೆ.
Leave A Reply