ಸಿಂಗಂ ಅಣ್ಣಾಮಲೈ ದೋವಲ್ ತಂಡದಲ್ಲಿ ಸೇರುವ ಸಾಧ್ಯತೆ ಇದೆಯಾ?
ಕರ್ನಾಟಕದ ಸಿಂಗಂ ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ. ತುಂಬಾ ಪ್ರತಿಭಾವಂತ ಜನ ಒಂದೇ ಕಡೆ ತುಂಬಾ ವರ್ಷ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಬಹುಶ: ಅಣ್ಣಾಮಲೈ ಅದೇ ಸಾಲಿಗೆ ಸೇರಿದವರು ಇರಬೇಕು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದ ಅಣ್ಣಾಮಲೈ ನಂತರ ಎಂಬಿಎ ಮಾಡುತ್ತಾರೆ. ಆ ಬಳಿಕ ಲಕ್ನೋದಲ್ಲಿ ಐಐಎಂ ಕೂಡ ಮಾಡುತ್ತಾರೆ. ಬಹುಶ: ಅಣ್ಣಾಮಲೈ ನಿರ್ಧರಿಸಿದ್ದರೆ ಯಾವುದಾದರೂ ದೊಡ್ಡ ಕಂಪೆನಿಯಲ್ಲಿ ಸಿಇಒ ಅಥವಾ ಡೈರೆಕ್ಟರ್ ಆಗಿಯೋ ಲಕ್ಷಗಟ್ಟಲೆ ಸಂಬಳ ಎಣಿಸಿಕೊಂಡು ಆರಾಮವಾಗಿ ಇರಬಹುದಿತ್ತು. ಆದರೆ ಅಣ್ಣಾಮಲೈ ಉತ್ತರಪ್ರದೇಶದಲ್ಲಿ ಎಂಬಿಎ ಕಲಿಯುವಾಗಲೇ ಅಲ್ಲಿನ ಪರಿಸರದ ಬಡತನ, ಸಾಮಾಜಿಕ ಅಸಮಾನತೆ, ಸಿರಿವಂತರ ದೌರ್ಜನ್ಯ ಸಹಿತ ಅನೇಕ ಅನಿಷ್ಟಗಳನ್ನು ನೋಡುತ್ತಾರೆ. ಇದನ್ನೆಲ್ಲಾ ಸರಿ ಮಾಡಲು ಆವತ್ತೆ ನಿಶ್ಚಯಿಸಿಬಿಡುತ್ತಾರೆ. ತಾವು ಒಂದು ವೇಳೆ ಯಾವುದಾದರೂ ಕಂಪೆನಿ ಸೇರಿ ಎಸಿ ಚೇಂಬರ್, ಎಸಿ ಕಾರು ಇದರ ನಡುವೆ ಜೀವನ ಕಳೆದು ಹೋದರೆ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಮುಕ್ತಿ ಕೊಡುವುದು ಯಾವಾಗ ಎಂದು ಯೋಚಿಸುವಾಗ ಅವರಿಗೆ ಇದೆಲ್ಲಾ ಸರಕಾರಿ ಸೇವೆಯಲ್ಲಿ ಇದ್ದರೆ ಮಾತ್ರ ಸಾಧ್ಯ ಎಂದು ಅನಿಸಲು ಶುರುವಾಗುತ್ತದೆ. ಯಾವುದು ಜನರೊಂದಿಗೆ ನೇರಾನೇರಾ ಇರುವಂತಹ ಸರಕಾರಿ ಸೇವೆ ಎಂದು ಯೋಚಿಸುವಾಗ ಅವರಿಗೆ ಹೊಳೆದದ್ದು ಪೊಲೀಸ್ ಇಲಾಖೆ.
ಮೋದಿ ಎತ್ತಿಕೊಂಡ ಆಯ್ಕೆನಾ…
2011ರ ಐಪಿಎಸ್ ಬ್ಯಾಚ್ ನಿಂದ ಹೊರಗೆ ಬಂದ ಅಣ್ಣಾಮಲೈ 2013 ರಲ್ಲಿ ಕಾರ್ಕಳದಲ್ಲಿ ಎಎಸ್ ಪಿ ಯಾಗಿ ಸೇವೆಗೆ ನಿಲ್ಲುತ್ತಾರೆ. ನಂತರ ಉಡುಪಿಯ ಪೊಲೀಸ್ ವರಿಷ್ಟಾಧಿಕಾರಿಯಾಗುತ್ತಾರೆ. ನಂತರ ಚಿಕ್ಕಮಗಳೂರು ಎಸ್ ಪಿ ಯಾಗಿ ನಂತರ ಬೆಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಯಾಗುತ್ತಲೆ ಅಣ್ಣಾಮಲೈ ರಾಜೀನಾಮೆ ಘೋಷಿಸಿಬಿಟ್ಟಿದ್ದಾರೆ. ಸಾಮಾನ್ಯವಾಗಿ ಉನ್ನತ ಸರಕಾರಿ ಹುದ್ದೆಯಲ್ಲಿರುವ ಯಾರೇ ಆಗಲಿ, ಕೆಲಸ ಬಿಡುತ್ತಾರೆ ಎಂದ ಕೂಡಲೇ ಪ್ರತಿಯೊಬ್ಬರ ಹುಬ್ಬು ಏರುವುದು ಸಹಜ. ಯಾಕೆಂದರೆ ಸರಕಾರಿ ಉದ್ಯೋಗ ಸಿಗುವುದೇ ಕಷ್ಟವಿರುವಾಗ ಸಿಕ್ಕಿದ ಬಂಗಾರದಂತಹ ಹುದ್ದೆಯನ್ನು ಬಿಡುವುದು ಎಂದರೆ ಹುಡುಗಾಟದ ಮಾತಾ? ಆದರೂ ಅಣ್ಣಾಮಲೈ ರಾಜೀನಾಮೆ ಕೊಡುವ ಮೊದಲು ಆರು ತಿಂಗಳಿನಿಂದ ಈ ಬಗ್ಗೆ ಚಿಂತನೆ ಮಾಡಿದ್ದೆ ಎಂದಿದ್ದಾರೆ. ಅಣ್ಣಾಮಲೈಗೆ ಭಾರತೀಯ ಜನತಾ ಪಾರ್ಟಿಯಲ್ಲಿ ರಾಷ್ಟ್ರಮಟ್ಟದ ಉನ್ನತ ಜವಾಬ್ದಾರಿಯೊಂದು ಕಾಯುತ್ತಿದೆ ಎನ್ನುವ ಮಾಹಿತಿ ಬರುತ್ತಿದೆ. ಬಹುಶ: ಅಣ್ಣಾಮಲೈ ಅದಕ್ಕೆ ಓಕೆ ಎಂದಿರಬೇಕು. ದೇಶದ ಯಾವುದೇ ಮೂಲೆಯಲ್ಲಿ ಪ್ರತಿಭಾವಂತರು ಇರಲಿ, ಅವರಲ್ಲಿ ದೇಶಪ್ರೇಮದ ಕಿಚ್ಚು ಒಂದು ಇದ್ದರೆ ಸಾಕು, ಅಂತವರನ್ನು ಹುಡುಕಿ, ಹೆಕ್ಕಿ, ಎತ್ತುವುದರಲ್ಲಿ ಮೋದಿ, ಅಮಿತ್ ಶಾ ಅವರಷ್ಟು ಪರಿಣತರು ಯಾರೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಣ್ಣಾಮಲೈ ಆರ್ಥಿಕವಾಗಿ ಸಿರಿವಂತ ಕುಟುಂಬದಿಂದ ಬಂದವರು. ಅಪಾರ ಆಸ್ತಿಪಾಸ್ತಿ ಇರುವ ಮನೆತನವದು. ಇವರೇ ನಿತ್ಯ ದುಡಿದು ಮನೆ ನಡೆಸಬೇಕೆಂಬ ಪರಿಸ್ಥಿತಿ ಇಲ್ಲ. ಆದ್ದರಿಂದ ಒಂದು ವೇಳೆ ಕೆಲಸ ಬಿಟ್ಟು ಬಂದರೂ ಇವರ ಕುಟುಂಬದವರು ಯಾರೂ ಅಳುವುದಿಲ್ಲ. ಅಪ್ಪ, ಅಮ್ಮನೊಂದಿಗೆ ಇದ್ದು, ದೇಶಕ್ಕಾಗಿ ಚಿಂತಿಸುವ ಪಕ್ಷದಲ್ಲಿ ಇರೋಣ ಎಂದು ಅಣ್ಣಾಮಲೈ ನಿರ್ಧರಿಸಿರುವಂತಿದೆ.
ಅವರ ಸ್ಟೈಲೆ ಬೇರೆ…
ಸರಿಯಾಗಿ ನೋಡಿದರೆ ಅಣ್ಣಾಮಲೈ ತಮ್ಮ ಸಂಬಳದಲ್ಲಿ ಹೆಚ್ಚಿನ ಪಾಲನ್ನು ದಾನ, ಧರ್ಮಗಳಿಗೆ ವಿನಿಯೋಗಿಸಿದವರು. ಅವರು ಪ್ರತಿ ತಿಂಗಳು ಸಂಬಳದಲ್ಲಿ ಐದು, ಹತ್ತು ಸಾವಿರದಂತೆ ಎಷ್ಟೋ ಜನರಿಗೆ ಕೊಡುತ್ತಿದ್ದದ್ದಕ್ಕೆ ಲೆಕ್ಕವಿಲ್ಲ ಎಂದೇ ಅವರ ಕೈಕೆಳಗಿನ ಸಿಬ್ಬಂದಿಗಳು ಹೇಳುತ್ತಾರೆ. ಪೊಲೀಸ್ ಸಿಬ್ಬಂದಿಗಳ ಮಕ್ಕಳ ಫೀಸ್, ಹುಟ್ಟುಹಬ್ಬ, ಮನೆಗಳ ಕಾರ್ಯಕ್ರಮಕ್ಕೆ ತಮ್ಮ ಸಂಬಳವನ್ನೇ ಎತ್ತಿಟ್ಟ ಉದಾಹರಣೆ ಅಣ್ಣಾಮಲೈಯವರ ಉದ್ಯೋಗದ ಜೀವನದಲ್ಲಿದೆ. ಅಣ್ಣಾಮಲೈಯವರನ್ನು ನೋಡಿ ಸಿಂಗಂನಂತಹ ಸಿನೆಮಾ ತೆಗೆಯುತ್ತಾರೋ ಅಥವಾ ಎಸ್ ಪಿ ಸಾಂಗ್ಲಿಯಾನಾದಂತಹ ಸಿನೆಮಾ ನೋಡಿ ಅಣ್ಣಾಮಲೈ ಪ್ರಭಾವಿತರಾಗುತ್ತಾರೋ ಗೊತ್ತಿಲ್ಲ. ಎಷ್ಟೋ ಬಾರಿ ಪೊಲೀಸ್ ಜೀಪ್ ನಲ್ಲಿ ಹೋದರೆ ಅಕ್ರಮ ಚಟುವಟಿಕೆ ನಡೆಸುವವರಿಗೆ ಗೊತ್ತಾಗುತ್ತದೆ ಎಂದು ಅಣ್ಣಾಮಲೈ ಸೈಕಲ್ ನಲ್ಲಿಯೇ ಹೋಗಿ ಅನೈತಿಕ ಅಡ್ಡಾಗಳ ಮೇಲೆ ಮುಗಿಬಿದ್ದದ್ದು ಇದೆ. ಎತ್ತರದ ನಿಲುವು, ಧೃಡವಾದ ದೇಹ, ಕೆತ್ತಿಟ್ಟ ಶಿಲ್ಪದಂತಹ ದೇಹಾಕೃತಿ, ಮಾತುಗಳಲ್ಲಿ ಬೆಂಕಿ ಮತ್ತು ಹೃದಯದಲ್ಲಿ ಗುಲಾಬಿ ಒಟ್ಟು ಸೇರಿದರೆ ಅದು ಅಣ್ಣಾಮಲೈ. ಎಲ್ಲಿಯಾದರೂ ಗಲಾಟೆ ಆಗುತ್ತಿದ್ದರೆ ನೇರಾನೇರ ನುಗ್ಗಿ ತಪ್ಪು ಮಾಡಿದವರಿಗೆ ಬಿಸಿ ಮುಟ್ಟಿಸುತ್ತಿದ್ದ ಅಣ್ಣಾಮಲೈಯವರು ನಮ್ಮ ಜಿಲ್ಲೆಗೆ ಬರಲಿ ಎಂದು ಪ್ರತಿಯೊಬ್ಬ ನಾಗರಿಕ ಕೂಡ ಬಯಸುತ್ತಿದ್ದ. ಅನೇಕ ಜನಪ್ರತಿನಿಧಿಗಳು ಅವರನ್ನು ತಮ್ಮ ಕ್ಷೇತ್ರಕ್ಕೆ ಹಾಕಲು ತೆರೆಮರೆಯ ಪ್ರಯತ್ನ ಮಾಡುತ್ತಿದ್ದರು. ಆದರೆ ಅದೆಲ್ಲದರಿಂದ ಸಿಂಗಂ ತಪ್ಪಿಸಿಕೊಂಡು ಹೋಗಿದ್ದಾರೆ. ಅವರ ಸೇವೆ ಎಲ್ಲಿ ಇದ್ದರೂ ಅದು ಭಾರತದ ಏಳಿಗೆಗಾಗಿಯೇ ಇರುತ್ತದೆ ಎಂದು ಅಂದುಕೊಂಡಿದ್ದೇನೆ!!
Leave A Reply