ಟಿವಿ ಡಿಸ್ಕಷನ್ ನಲ್ಲಿ ಒಂದು ತಿಂಗಳು ಕಾಂಗ್ರೆಸ್, ಜೆಡಿಎಸ್ ಕಡ್ಡಾಯ ರಜೆ!!
ಇನ್ನು ಒಂದು ತಿಂಗಳು ಕಾಂಗ್ರೆಸ್ ವಕ್ತಾರರು ಯಾವುದೇ ಟಿವಿ ಪ್ಯಾನಲ್ ಗಳಿಗೆ ಚರ್ಚೆಗೆ ಹೋಗುವಂತಿಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರು ಸೂಚನೆ ನೀಡಿದ್ದಾರೆ. ಅದೇ ರೀತಿಯ ಸುತ್ತೋಲೆಯನ್ನು ಜಾತ್ಯಾತೀತ ಜನತಾದಳದ ನಾಯಕರು ಕೂಡ ಹೊರಡಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಪಕ್ಷದ ಅಧಿಕೃತ ವಕ್ತಾರರು ಕೂಡ ಮಾತನಾಡದ ಪರಿಸ್ಥಿತಿ ಈ ಪಕ್ಷಗಳದ್ದು. ಇಂತಹ ಪ್ರಸಂಗ ಉದ್ಭವವಾಗಿರುವುದು ನೋಡಿದರೆ ಎರಡೂ ಪಕ್ಷಗಳು ನಿಜಕ್ಕೂ ಸಂದಿಗ್ಣ ಸ್ಥಿತಿಗೆ ಬಂದು ಮುಟ್ಟಿದೆ ಎನ್ನುವುದು ಪಕ್ಕಾ. ಅಷ್ಟಕ್ಕೂ ವಕ್ತಾರರು ಯಾಕೆ ಟಿವಿ ಡಿಬೇಟ್ ಗಳಲ್ಲಿ ಭಾಗವಹಿಸಬಾರದು ಎಂದು ಹೇಳಲಾಗುತ್ತಿದೆ ಎಂಬುದೇ ಆಸಕ್ತಿಕರ ವಿಷಯ.
ವಕ್ತಾರರ ಜವಾಬ್ದಾರಿ ಏನು..
ಮೊದಲನೇಯದಾಗಿ ವಕ್ತಾರರು ಎಂದರೆ ಯಾರು ಎನ್ನುವುದನ್ನು ನೋಡೋಣ. ಒಂದು ವಿಷಯದಲ್ಲಿ ತಮ್ಮ ಪಕ್ಷದ ನಿಲುವು ಎಂದರೆ ಏನು ಎನ್ನುವುದನ್ನು ಮಾಧ್ಯಮಗಳ ಮೂಲಕ ಜನರಿಗೆ ತಿಳಿಸುವವರೇ ವಕ್ತಾರರು. ಅವರು ತಮ್ಮ ವೈಯಕ್ತಿಕ ನಿಲುವನ್ನು ಚರ್ಚಾ ವೇದಿಕೆಯಲ್ಲಿ ಹೇಳುವಂತಿಲ್ಲ. ಅವರು ಹೇಳಿದ್ದು ಅಧಿಕೃತ ಹೇಳಿಕೆ ಆಗಿ ಪರಿಣಮಿಸುತ್ತದೆ. ಸಾಮಾನ್ಯವಾಗಿ ಯಾವುದೇ ಚರ್ಚೆಗೆ ಹೋಗುವ ಮೊದಲು ಆ ವಿಷಯದ ಮೇಲೆ ವಕ್ತಾರರು ಅಧ್ಯಯನ ಮಾಡಿ ಹೋಗುವುದು ಕಡ್ಡಾಯ. ಆವತ್ತಿನ ಹಾಟ್ ಟಾಪಿಕ್ ಮೇಲೆ ಟಿವಿಯವರು ಪ್ಯಾನಲ್ ಡಿಸ್ಕಷನ್ ಇಟ್ಟರು ಎಂದುಕೊಳ್ಳೋಣ. ಕನಿಷ್ಟ ಕೆಲವು ಗಂಟೆಗಳ ಮೊದಲು ಪಕ್ಷದ ಮಾಧ್ಯಮ ಪ್ರಮುಖ್ ಎನ್ನುವ ಜವಾಬ್ದಾರಿ ಇದ್ದವರಿಗೆ ಟಿವಿಯ ಕಾರ್ಯಕ್ರಮ ಸಂಯೋಜಕು ವಿಷಯ ತಿಳಿಸುತ್ತಾರೆ. ಅದನ್ನು ಅವರು ವಕ್ತಾರರ ತಂಡಕ್ಕೆ ಕಳುಹಿಸಿದ ನಂತರ ಯಾರಾದರೂ ಒಬ್ಬ ವಕ್ತಾರರು ಆ ಟಿವಿ ವಾಹಿನಿಯಲ್ಲಿ ಮಾತನಾಡಲು ಸಜ್ಜಾಗುತ್ತಾರೆ. ಇದು ನಡೆದುಕೊಂಡು ಬರುತ್ತಿರುವ ಪ್ರಕ್ರಿಯೆ. ಇನ್ನು ಪ್ಯಾನಲ್ ಗೆ ಹೋಗುವ ವಕ್ತಾರರು ತಮಗೆ ಆವತ್ತು ಚರ್ಚೆಯಾಗಲಿರುವ ವಿಷಯದ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ಬಿಜೆಪಿಯ ಅಧ್ಯಕ್ಷರನ್ನೋ, ತಮ್ಮ ಪಕ್ಷದ ಸಂಸದರನ್ನೋ, ಸಚಿವರನ್ನೋ, ಹಿರಿಯ ಶಾಸಕರನ್ನೋ ಕೇಳಿ ಬಗೆಹರಿಸಿಕೊಂಡು ಮಾನಸಿಕವಾಗಿ ಸಿದ್ಧರಿರಬೇಕಾಗುತ್ತದೆ. ಕೆಲವೊಮ್ಮೆ ಪಕ್ಷದ ಇತಿಹಾಸದ ಬಗ್ಗೆ ಪ್ರಶ್ನೆಗಳಿದ್ದರೆ ಪಕ್ಷದ ಹಿರಿಯರನ್ನು ಸಂಪರ್ಕಿಸಿ ಕೇಳಿ ಬರೆದಿಟ್ಟುಕೊಂಡು ಬಂದು ಉತ್ತರಿಸಬೇಕಾಗುತ್ತದೆ. ಇನ್ನು ಕೆಲವು ಬಾರಿ ಯಾವುದಾದರೂ ಗಂಭಿರ ವಿಷಯದ ಮೇಲೆ ಪಕ್ಷದ ನಿಲುವಿನ ಬಗ್ಗೆ ಅನುಮಾನಗಳಿದ್ದರೆ ರಾಜ್ಯ, ರಾಷ್ಟ್ರೀಯ ನಾಯಕರನ್ನು ಕೇಳಿ ತಯಾರಾಗಿರಬೇಕಾಗುತ್ತದೆ. ಹೆಚ್ಚಿನ ಪ್ಯಾನಲ್ ಡಿಸ್ಕಷನ್ ನೇರಪ್ರಸಾರದಲ್ಲಿ ಇರುವುದರಿಂದ ವಕ್ತಾರರು ಆವತ್ತಿನ ವಿಷಯದ ವಿವಿಧ ಆಯಾಮಗಳಲ್ಲಿ ಉದ್ಭವವಾಗುವ ಪ್ರಶ್ನೆಗಳಿಗೆ ತಯಾರಾಗಿಯೇ ಇರಬೇಕು. ತಮ್ಮ ವಿರುದ್ಧ ಇಂತಹ ಪ್ರಶ್ನೆಗಳು ಬರಬಹುದು ಎಂದು ಮೊದಲೇ ಊಹಿಸಿ ಅದಕ್ಕೆ ಉತ್ತರವನ್ನು ಹೇಗೆ ಕೊಡಬೇಕು ಎಂದು ಯೋಚಿಸಿ ಇಡುವವನು ಜಾಣ ವಕ್ತಾರರು. ವಕ್ತಾರರು ಒಂದು ಪಕ್ಷದ ಪ್ರತಿನಿಧಿಯಾಗಿ ಪ್ಯಾನಲ್ ನಲ್ಲಿ ಭಾಗವಹಿಸುವುದರಿಂದ ಅವರನ್ನು ಸೂಕ್ಷ್ಮವಾಗಿ ವೀಕ್ಷಿಸುವ ವೀಕ್ಷಕರ ತಂಡವೇ ಇರುತ್ತದೆ. ತಮ್ಮ ಪಕ್ಷದ ವಕ್ತಾರರು ಯಾವುದೇ ಹಂತದಲ್ಲಿಯೂ ಸೋಲಬಾರದೆಂದು ಪಕ್ಷದ ಅಭಿಮಾನಿಗಳು ಬಯಸುತ್ತಾರೆ.
ಭೌತಿಕ ಶೂನ್ಯತೆ…
ಇಷ್ಟೆಲ್ಲ ಜವಾಬ್ದಾರಿ ಇರುವ ವಕ್ತಾರರ ಒಂದು ಸಣ್ಣ ಹಿನ್ನಡೆ ಅಥವಾ ಮಾಹಿತಿಯ ಕೊರತೆ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಪಕ್ಷದ ಇಮೇಜ್ ಹಾಳಾಗುವ ಸಾಧ್ಯತೆ ಇರುತ್ತದೆ. ಆದ ಕಾರಣ ಸದ್ಯಕ್ಕೆ ಒಂದು ತಿಂಗಳು ನೀವು ಪ್ಯಾನಲ್ ಗೆ ಹೋಗಬೇಡಿ ಎಂದು ಕಾಂಗ್ರೆಸ್, ಜೆಡಿಎಸ್ ನಿಂದ ವಕ್ತಾರರಿಗೆ ಸೂಚನೆ ಹೋಗಿದೆ. ಯಾಕೆಂದರೆ ತಮಗೆ ಏದುರಾಗುವ ಯಾವುದೇ ಪ್ರಶ್ನೆಗೂ ಉತ್ತರ ಕೊಡುವ ಸ್ಥಿತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಇಲ್ಲ. ಯಾಕೆಂದರೆ ಯಾವುದೇ ವಿಷಯದಲ್ಲಿ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಇಲ್ಲವೇ ಇಲ್ಲ. ಅಷ್ಟೇ ಅಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳ ಸರಕಾರ ನಡೆಯುತ್ತಾ ಇದೆ. ತುಮಕೂರಿನಲ್ಲಿ ದೇವೇಗೌಡರು, ಮಂಡ್ಯದಲ್ಲಿ ನಿಖಿಲ್ ಸೋತಿದ್ದಾರೆ. ಮೈಸೂರಿನಲ್ಲಿ ವಿಜಯಶಂಕರ್ ಸೋತಿದ್ದಾರೆ. ವೀರಪ್ಪ ಮೊಯಿಲಿಯವರ ಆದಿಯಾಗಿ ಶರವಣ ತನಕ ಎಲ್ಲರೂ ದೋಸ್ತಿಯಿಂದ ನಷ್ಟವಾಯಿತೇ ವಿನ: ಲಾಭ ಏನೂ ಆಗಿಲ್ಲ ಎಂದೇ ಬಹಿರಂಗ ಹೇಳಿಕೆ ನೀಡಿದ್ದಾರೆ. ಯಾವಾಗ ದೊಡ್ಡ ನಾಯಕರು ಹೀಗೆ ಹೇಳುತ್ತಾರೋ ವಕ್ತಾರರಿಗೆ ಸತ್ಯ ಹೇಳುವುದೋ ಅಥವಾ ಸುಳ್ಳು ಹೇಳಿ ಆತ್ಮವಂಚನೆ ಮಾಡಿಕೊಳ್ಳುವುದೋ ಎಂದು ಅರ್ಥವಾಗುತ್ತಿಲ್ಲ. ಎರಡೂ ಪಕ್ಷದವರಿಗೂ ಬಂದಿರುವುದು ಒಂದೊಂದೇ ಸ್ಥಾನ. ಕಾಂಗ್ರೆಸ್ 21 ರಲ್ಲಿ ಸ್ಪರ್ಧೆ ಮಾಡಿ ಒಂದು ಪಡೆದರೆ, ಜೆಡಿಎಸ್ ಏಳರಲ್ಲಿ ಅಭ್ಯರ್ಥಿ ನಿಲ್ಲಿಸಿ ಒಂದು ಗೆದ್ದಿದೆ. ಹಾಗೇ ನೋಡಿದರೆ ರನ್ ರೇಟ್ ಲೆಕ್ಕದಲ್ಲಿ ಜೆಡಿಎಸ್ ಮೇಲಿದೆ. ಅದಕ್ಕಿಂತ ಹೆಚ್ಚಾಗಿ ಬಿಜೆಪಿ ನಾಯಕರೇ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸೀಟ್ ಗೆದ್ದಿದ್ದಾರೆ. ಸದ್ಯ ಬಿಜೆಪಿ ಅಲೆ ರಾಜ್ಯದಲ್ಲಿ ಇರುವುದು ಎರಡೂ ದೋಸ್ತಿಗಳಿಗೆ ಗೊತ್ತಾಗಿದೆ. ಚುನಾವಣೆಗೆ ಹೋದರೆ ಬಿಜೆಪಿ 125 ಆರಾಮವಾಗಿ ಗೆಲ್ಲಬಹುದು ಎಂದು ಆಂತರಿಕ ಸಮೀಕ್ಷೆ ಹೇಳುತ್ತಿದೆ. ಆದ್ದರಿಂದ ವಿಚ್ಚೇದನ ಆಗುವುದಕ್ಕಿಂತ ಒಂದೇ ಮನೆಯಲ್ಲಿ ಬೇರೆ ಬೇರೆ ಕೋಣೆಗಳಲ್ಲಿ ಮಲಗುವ ಗಂಡ-ಹೆಂಡತಿಯ ಹಾಗೆ ಜೀವಿಸುವ ನಿರ್ಧಾರಕ್ಕೆ ಇಬ್ಬರೂ ಬಂದಿದ್ದಾರೆ. ಊಟದ ಹೊತ್ತಿನಲ್ಲಿ ಡೈನಿಂಗ್ ಟೇಬಲ್ ಮೇಲೆ ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ ಬಿಟ್ಟರೆ ಒಳಗೆ ಏನೂ ಉಳಿದಿಲ್ಲ ಎನ್ನುವುದು ಇಡೀ ಕುಟುಂಬಕ್ಕೆ ಗೊತ್ತು!
Leave A Reply