ವಿನಯ್ ಗುರೂಜಿಗೆ ಬುದ್ಧಿ ಕೊಡು ಭಗವಂತ!!
ಹಿಂದೂ ಧರ್ಮದ ವಿರುದ್ಧ ಮಾತನಾಡಿದರೆ ಸುಲಭದಲ್ಲಿ ಪ್ರಚಾರಕ್ಕೆ ಬರಬಹುದು ಎನ್ನುವುದನ್ನು ಇತ್ತೀಚಿನ ವರ್ಷಗಳಲ್ಲಿ ತೋರಿಸಿಕೊಟ್ಟದ್ದು ಭಗವಾನ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಅಂತವರು ಹಿಂದೂ ವಿರೋಧಿ ಪಲ್ಲಂಕಿಗೆ ಹೆಗಲುಕೊಟ್ಟರು. ಅನಂತರ ಒಂದಿಷ್ಟು ಕೇಸರಿ ತೊಟ್ಟವರು ಕೂಡ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿ ಖರ್ಚಿಲ್ಲದೆ ಲೈಮ್ ಲೈಟ್ ನಲ್ಲಿ ಕಾಣಿಸಿಕೊಂಡರು. ಅದಕ್ಕೆ ಈಗ ತಾಜಾ ಉದಾಹರಣೆ ವಿನಯ ಗುರೂಜಿ.
ಮೂಲತ: ಶಿವಮೊಗ್ಗದವರಾದ ವಿನಯ್ ಒಂದು ಹೇಳಿಕೆ ಕೊಡುವ ಮೂಲಕ ತಾವೂ ಕೂಡ ಮಾಧ್ಯಮಗಳಲ್ಲಿ ಮಿಂಚುವ ಕೆಲಸ ಮಾಡಿದ್ದಾರೆ. ದೈವಾರಾಧನೆ, ನಾಗಾರಾಧನೆ, ಬೂತಕೋಲ ಎನ್ನುವಂತಹ ಕೆಲವು ಸಂಪ್ರದಾಯಗಳು ನಮ್ಮ ಹಿಂದೂ ಧರ್ಮದಲ್ಲಿವೆ. ಅದನ್ನು ನಾವು ಅನಾದಿಕಾಲದಿಂದಲೂ ಅನುಸರಿಸಿಕೊಂಡು ಬಂದಿದ್ದೇವೆ. ನಾಗನ ಬಗ್ಗೆ ತುಳುನಾಡಿನವರು ಎಷ್ಟು ಶ್ರದ್ಧೆ ಹೊಂದಿದ್ದಾರೆ ಎಂದರೆ ನಾಗಾನಿಗೆ ದೇವರ ಸ್ಥಾನ ಸಿಕ್ಕಿದೆ. ಇನ್ನೂ ದೈವಗಳ ಬಗ್ಗೆ ತುಳುಮಣ್ಣಿನಲ್ಲಿ ಪೌರಾಣಿಕ ಕಥೆಗಳಿವೆ. ಬೂತಕೋಲದ ಬಗ್ಗೆ ನಾವು ಯಾವತ್ತೂ ನಿಂದನಾತ್ಮಕವಾಗಿ ಮಾತನಾಡುವುದಿಲ್ಲ. ಆದರೆ ವಿನಯ್ ಗುರೂಜಿ ಇದನ್ನೆಲ್ಲ ಅಪ್ಪಟ ವೇಸ್ಟ್ ಎನ್ನುತ್ತಿದ್ದಾರೆ. ಬಹುಶ: ಇದರ ಪರವಾಗಿ ಮಾತನಾಡಿದರೆ ತಮ್ಮನ್ನು ಯಾರೂ ಗುರುತಿಸುವುದು ಇಲ್ಲ ಎಂದು ಅಂದುಕೊಂಡಿರುವುದರಿಂದ ಅದರ ವಿರುದ್ಧ ಮಾತನಾಡಿ ಎಡಪಂಥಿಯರ ಪ್ರೀತಿಗೆ ಪಾತ್ರರಾಗೋಣ ಎಂದು ಅಂದುಕೊಂಡಿದ್ದಾರೆ. ಒಬ್ಬ ಹಿಂದೂ ಆಗಿದ್ದು ಹಿಂದೂ ಧರ್ಮದ ವಿರುದ್ಧ ಮಾತನಾಡುವುದಾದರೆ ವಿನಯ್ ಅವರಿಗೆ ಗುರೂಜಿ ಎನ್ನುವ ಹಿಂದೂ ಬಿರುದು ಯಾಕೆ? ಅವರು ಯಾವುದಾದರೂ ಬೇರೆ ಧರ್ಮದ ಗುರುವಿನ ಸ್ಥಾನ ಅಲಂಕರಿಸಬಹುದಲ್ಲ. ಅವರಿಗೆ ಹಿಂದೂ ಧರ್ಮದ ಪೀಠ ಯಾಕೆ? ಆ ಪೀಠದ ಮೇಲೆ ಕುಳಿತು ಅದರ ತುದಿಯಲ್ಲಿ ಟಿಪ್ಪು ಸುಲ್ತಾನನ ಮುಖವನ್ನು ಇಟ್ಟುಕೊಳ್ಳುವ ಇವರ ಉದ್ದೇಶ ಏನು? ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲಾ ಒಂದೇ ಎನ್ನುವ ವಿನಯ ಗುರೂಜಿ(!) ಜಾತ್ಯಾತೀತ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಇರುವ ವಿನಯ್ ಅವರಿಗೆ ಆಯಾ ಧರ್ಮದಲ್ಲಿ ಇರುವ ಆಚರಣೆಗಳು ಆಯಾ ಧರ್ಮದ, ನಂಬಿಕೆಯ ತಳಹದಿಯ ಮೇಲೆ ಆ ಧರ್ಮದ ನಾಗರಿಕರು ಒಪ್ಪಿಕೊಂಡು ಬಂದದ್ದು ಎನ್ನುವುದು ಯಾಕೆ ಅರ್ಥವಾಗುವುದಿಲ್ಲ.
ದೈವಾರಾಧನೆ ಮಾಡುವುದರಿಂದ ಮಾಡಿದ ಕುಟುಂಬಗಳಿಗೆ ಒಳ್ಳೆಯದಾಗಿದೆ ಎನ್ನುವುದಾದರೆ ಅವರು ಮಾಡಲಿ ಬಿಡಿ, ನಾಗಾರಾಧನೆ ಮಾಡುವುದರಿಂದ ನಮಗೆ ಸಮಾಧಾನ ಸಿಕ್ಕಿದೆ ಎಂದು ಅನಿಸಿದರೆ ಅದನ್ನು ವಿರೋಧಿಸುವುದಕ್ಕೆ ವಿನಯ್ ಯಾರು? ಬೂತಕೋಲ ಮಾಡಿರುವುದರಿಂದ ವಿನಯ್ ಎನು ಕಳೆದುಕೊಂಡಿದ್ದಾರೆ? ಯಾರಾದರೂ ಹಿಂದೂಗಳು ಸರದಿಸಾಲಿನಲ್ಲಿ ಬಂದು ವಿನಯ್ ಅವರಿಂದ ಬೂತಕೋಲ, ದೈವಾರಾಧನೆ, ನಾಗಾರಾಧನೆಗೆ ಹಣ ತೆಗೆದುಕೊಂಡು ಹೋಗಿದ್ದಾರೆಯಾ? ಅಥವಾ ಇವರಿಂದ ವಂತಿಗೆ ತೆಗೆದುಕೊಂಡು ಮಾಡಿದ್ದಾರೆಯಾ?
ಮುಸ್ಲಿಮರು ಎಲ್ಲಿ ಬೇಕಾದರೂ ಒಂದು ಚಿಕ್ಕ ಚಾಪೆ ಸಿಕ್ಕಿದರೂ ಅದರ ಮೇಲೆ ಕುಳಿತು ಪ್ರಾರ್ಥನೆ ಮಾಡುತ್ತಾರೆ. ಕ್ರೈಸ್ತರಿಗೆ ಒಂದು ಶಿಲುಬೆಯ ಎದುರು ಪ್ರಾರ್ಥನೆ ಸಲ್ಲಿಸಿದರೆ ಮನಸ್ಸಿಗೆ ಸಮಾಧಾನ ಸಿಗುತ್ತದೆ. ಆದರೆ ಹಿಂದೂಗಳಿಗೆ ಮುಕ್ಕೋಟಿ ದೇವರುಗಳಿವೆ. ನಮ್ಮದೇ ರೀತಿಯಲ್ಲಿ ಆರಾಧನಾ ಪದ್ಧತಿಗಳಿವೆ. ಹೋಮ, ಹವನ, ಪೂಜಾ ವಿಧಾನಗಳಿವೆ. ಅದನ್ನು ವೇಸ್ಟ್ ಎಂದು ಹೇಳಿದರೆ ಅರ್ಥ ಇದೆಯಾ?
ಒಂದು ವೇಳೆ ದೊಡ್ಡ ರೀತಿಯಲ್ಲಿ ಸಂಪ್ರದಾಯ ಅನುಷ್ಟಾನ ಮಾಡಲಾಗದಿದ್ದರೆ ಅವರವರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಡುವವರಿದ್ದಾರೆ. ಹಾಗಂತ ಅವರ ಮನದಲ್ಲಿ ಹುಳಿ ಹಿಂಡುವ ಕೆಲಸ ಯಾರೂ ಮಾಡಬಾರದು. ಜಾಕೀರ್ ನೈಕ್ ಎನ್ನುವ ವ್ಯಕ್ತಿ ಮಾಡಿರುವ ಕಂದರವನ್ನು ಮುಚ್ಚುವಲ್ಲಿಯೇ ನಮಗೆ ಸಾಕಾಗಿದೆ. ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುವವರಿಗೆ ತಮಗೆ ಬಹುಸಂಖ್ಯಾತರು ವಿರೋಧ ಮಾಡಿಯೇ ಮಾಡುತ್ತಾರೆ ಎನ್ನುವುದು ಗೊತ್ತಿದೆ. ಅದರಿಂದ ತಾವು ಪ್ರವರ್ಧಮಾನಕ್ಕೆ ಬರಬಹುದು ಎಂದು ಅಂದುಕೊಂಡಿದ್ದಾರೆ. ಯಾವಾಗ ಹಿಂದೂಗಳು ತಕ್ಕ ಉತ್ತರ ಕೊಡುತ್ತಾರೋ ಆಗ ಬುದ್ಧಿ ಬರುತ್ತದೆ. ಬರದಿದ್ದರೆ ದೇವರೇ ಬುದ್ಧಿ ಕೊಡುತ್ತಾನೆ!!!
Leave A Reply