ಪ್ರಾಪರ್ಟಿ ಕಾರ್ಡ್ ಸಮಸ್ಯೆಗೆ ಸರ್ವೆಯರ್ ಗಳೇ ಕಾರಣ!!

ಪ್ರಾಪರ್ಟಿ ಕಾರ್ಡ್ ಎನ್ನುವ ಶಬ್ದ ಇತ್ತೀಚಿನ ದಿನಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿ. ಪ್ರಾಪರ್ಟಿ ಕಾರ್ಡ್ ಬೇಕೋ, ಬೇಡ್ವೋ ಎನ್ನುವ ವಾದದಲ್ಲಿ ನೀವು ಯಾವ ಪರ ಇದ್ದೀರಿ ಎನ್ನುವುದು ನನನಗೆ ಗೊತ್ತಿಲ್ಲ. ಆದರೆ ನಾನು ಪ್ರಾಪರ್ಟಿ ಕಾರ್ಡ್ ಒಳ್ಳೆಯ ಕಾನ್ಸೆಪ್ಟ್ ಎನ್ನುವುದನ್ನು ಧೈರ್ಯದಿಂದ ಹೇಳಬಲ್ಲೆ. 2012 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಅವರು ಈ ಐಡಿಯಾವನ್ನು ಜಾರಿಗೆ ತಂದಿದ್ದರು. ಆದರೆ ಆವತ್ತು ನಮ್ಮ ಜಿಲ್ಲೆಯವರು ಆ ಬಗ್ಗೆ ಯಾವುದೇ ತಲೆಬಿಸಿ ಮಾಡಿಕೊಂಡಿರಲಿಲ್ಲ. ಆದರೆ ಅದರ ಬಿಸಿ ಈಗ ನಿಧಾನವಾಗಿ ತಾಗುತ್ತಿದೆ. ಈ ಬಿಸಿ ಹಚ್ಚಿರುವುದು ನಮ್ಮ ನಿರ್ಲಜ್ಜ ಸರ್ವೆಯರುಗಳು. ಅದು ಹೇಗೆ ಈಗ ವಿವರಿಸುತ್ತೇನೆ.
ಪ್ರಾಪರ್ಟಿ ಕಾರ್ಡ್ ಯಾಕೆ ಒಳ್ಳೆಯದು ಎಂದರೆ…
ಈಗ ಪ್ರಸ್ತುತ ಇರುವ ಆರ್ಟಿಸಿ ದಾಖಲೆಗಳಲ್ಲಿ ಮಾಲೀಕನ ಯಾವುದೇ ಫೋಟೋಗಳು ಇರುವುದಿಲ್ಲ. ಆದರೆ ಪ್ರಾಪರ್ಟಿ ಕಾರ್ಡ್ ಮಾಡಿಸುವಾಗ ಆಧಾರ್ ಕಾರ್ಡ್ ರೀತಿಯಲ್ಲಿ ಫೋಟೋ ತೆಗೆಯಲಾಗುತ್ತದೆ. ಆ ಮೂಲಕ ಅದು ಅಧಿಕೃತ ದಾಖಲೆಯಾಗಿ ಉಳಿಯುತ್ತದೆ. ಪ್ರಾಪರ್ಟಿ ಕಾರ್ಡ್ ಮಾಡಿಸುವುದು ಹೇಗೆ ಎನ್ನುವುದನ್ನು ಮೊದಲು ನೋಡೋಣ. ಮೊದಲಿಗೆ ನೀವು ಅರ್ಜಿ ಕೊಡಬೇಕು. ಅದನ್ನು ನೋಡಿ ಸರ್ವೆಯರ್ ನಿಮ್ಮ ಜಾಗದ ಬಳಿ ಬರುತ್ತಾರೆ. ನಕ್ಷೆ ತಯಾರಿಸಲಾಗುತ್ತದೆ. ಅವರು ಅದನ್ನು ರಿಪೋರ್ಟ್ ಮಾಡುತ್ತಾರೆ. ಅದು ನಂತರ ಡ್ರಾಫ್ಟ್ ಆಗುತ್ತದೆ. ಬಳಿಕ ಸ್ಕ್ಯಾನ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಜೋಡಿಸಿ, ಫೋಟೋ ಅಳವಡಿಸಿದರೆ ಪ್ರಾಪರ್ಟಿ ಕಾರ್ಡ್ ತಯಾರು.
ಇನ್ನು ಪ್ರಾಪರ್ಟಿ ಕಾರ್ಡ್ ನಲ್ಲಿ ನಮ್ಮ ಜಾಗದ ನಕ್ಷೆ ಇರುತ್ತದೆ. ಆದ್ದರಿಂದ ಯಾರೂ ಕೂಡ ಇಲ್ಲಿ ಡೊಂಗಿ ಮಾಡಲು ಸಾಧ್ಯವಿಲ್ಲ. ಫೋರ್ಜರಿಯ ಪ್ರಶ್ನೆನೆ ಉದ್ಭವಿಸುವುದಿಲ್ಲ. ಹಿಂದೆ ನಾವು ಮಾಡಿ ಕೊಟ್ಟ ದಾಖಲೆಯೇ ಫೈನಲ್ ಆಗಿತ್ತು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅದರ ದಾಖಲೆ ಇರುತ್ತಿತ್ತು. ಈಗ ಪ್ರಾಪರ್ಟಿ ಕಾರ್ಡ್ ನಲ್ಲಿ ಹಾಗಲ್ಲ. ಸರ್ವೆಯರ್ ನಿಮ್ಮ ಜಾಗಕ್ಕೆ ಬಂದು ಅಲ್ಲಿ ಸ್ಕೆಚ್ ಹಾಕಿ, ನಕ್ಷೆ ತಯಾರಿಸಿ ಅದನ್ನೇ ಡ್ರಾಫ್ಟ್ ಮಾಡಿ ಕೊಡುತ್ತಾರೆ. ಅದರಲ್ಲಿ ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರು, ಜಾಗ, ಅದರ ವಿಸ್ತ್ರೀರ್ಣ ಸಹಿತ ಎಲ್ಲಾ ವಿವರ ಇರುತ್ತದೆ. ಅದನ್ನು ಪರಿಶೀಲಿಸಲು ನಿಮಗೆ ಕೊಡುತ್ತಾರೆ. ನೀವು ಅದರಲ್ಲಿ ಏನಾದರೂ ಬದಲಾವಣೆ ಇದ್ರೆ ಅಥವಾ ಎಂಟ್ರಿ ಮಾಡುವಾಗ ಮಿಸ್ಟೇಕ್ ಆಗಿದ್ರೆ ಆಗ ಒಂದು ಒಬೆಕ್ಷನ್ ಲೆಟರ್ ಕೊಡಬೇಕಾಗುತ್ತದೆ. ಯಾವುದು ಬದಲಾವಣೆ ಆಗಬೇಕು ಎನ್ನುವುದನ್ನು ನೀವು ಲಿಖಿತವಾಗಿ ಬರೆದುಕೊಟ್ಟರೆ ಆಗ ಅದನ್ನು ಅಲ್ಲಿ ಸರಿ ಮಾಡಿಕೊಡಲಾಗುತ್ತದೆ. ನಂತರ ನೀವು ಮತ್ತೊಮ್ಮೆ ಅಲ್ಲಿಗೆ ಬಂದು ಫೋಟೋ ತೆಗೆಸಿಕೊಂಡರೆ ಪ್ರಾಪರ್ಟಿ ಕಾರ್ಡ್ ಬಹುತೇಕ ರೆಡಿ. ಇಲ್ಲಿ ಮೊದಲು ಆಗಬೇಕಾದದ್ದು ಏನೆಂದರೆ ಯಾರ ಡ್ರಾಫ್ಟ್ ನಲ್ಲಿ ಬದಲಾವಣೆ ಮಾಡಲು ಇದೆಯೋ ಅವರಿಗೆ ಡ್ರಾಫ್ಟ್ ಕರೆಕ್ಷನ್ ಆದ ನಂತರ ಪ್ರಾಪರ್ಟಿ ಕಾರ್ಡ್ ಕಚೇರಿಯಿಂದ ಒಂದು ಫೋನ್ ಕರೆ ಮತ್ತು ಮೇಸೆಜ್ ಹೋದರೆ ಆಗ ಮಾತ್ರ ಸಂಬಂಧಪಟ್ಟವರು ಬಂದರೆ ಒಳ್ಳೆಯದು.
ಇಲ್ಲಿಯ ತನಕ ಆದದ್ದು 30%…
ಇನ್ನು ಇದನ್ನು ಕಡ್ಡಾಯ ಮಾಡಿ ಜಾರಿಗೆ ತರುವ ಮೊದಲು ಪ್ರಾಪರ್ಟಿ ಕಾರ್ಡ್ ಎಲ್ಲರದ್ದೂ ಆಗಿದೆಯಾ ಎನ್ನುವುದನ್ನು ಪರಿಶೀಲಿಸಿಯೇ ಮುಂದುವರೆಯಬೇಕು. ಆದರೆ ಈಗ ಕೇವಲ 30% ನಾಗರಿಕರದ್ದು ಮಾತ್ರ ಪ್ರಾಪರ್ಟಿ ಕಾರ್ಡ್ ಆಗಿದೆ ಅಂದರೆ ಸುಮಾರು 70% ಜನರದ್ದು ಆಗಲಿಲ್ಲ. ಈ ಕಡ್ಡಾಯ ಮಾಡಿದರೆ ಜನ ಸಂಕಷ್ಟಕ್ಕೆ ಒಳಗಾಗುತ್ತಾರೆ. ಒಂದು ವೇಳೆ ಜಮೀನು ಪರಭಾರೆ ಮಾಡುವ ಅನಿವಾರ್ಯತೆ ಇದ್ದಲ್ಲಿ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರಾದರೂ ಆ ಬಗ್ಗೆ ಗ್ಯಾರಂಟಿ ಇಲ್ಲ. ಅದರ ಬದಲಿಗೆ ನಾನು ಹೇಳುವುದೇನೆಂದರೆ ಪ್ರಾಪರ್ಟಿ ಕಾರ್ಡ್ ಸಮಸ್ಯೆ ಗುಡ್ಡದಾಕಾರವಾಗಿ ಬೆಳೆಯಲು ಮುಖ್ಯ ಕಾರಣಗಳು ಸರ್ವೆಯರ್ ಗಳು. ಅವರು ಶ್ರೀಮಂತ ಕುಳಗಳನ್ನು, ಬಿಲ್ಡರ್ ಗಳನ್ನು ತಾವೇ ಹುಡುಕಿ ಹೋಗಿ ಪ್ರಾಪರ್ಟಿ ಕಾರ್ಡ್ ಮಾಡಿಸಿ ಕೈಯಲ್ಲಿ ಕೊಟ್ಟು ಬರುತ್ತಿದ್ದಾರೆ. ಅದೇ ಒಬ್ಬ ಸಾಮಾನ್ಯ ನಾಗರಿಕ ಪ್ರಾಪರ್ಟಿ ಕಾರ್ಡ್ ಮಾಡಿಸಲು ಮಿನಿ ವಿಧಾನಸೌಧದ ಬಳಿ ಅಲೆಯಬೇಕಾದ ಪರಿಸ್ಥಿತಿ ಇದೆ. ಮೊದಲು ಇದನ್ನು ಸ್ಟಿಕ್ಟ್ ಮಾಡುವ ಅಗತ್ಯ ಇದೆ. ಸರ್ವೆಯರ್ ಗಳಿಗೆ ತಮ್ಮ ಬಳಿ ಬಂದ ಕಡತಗಳನ್ನು ಸಿನಿಯಾರಿಟಿ ಮೇಲೆ ಇತ್ಯರ್ಥ ಮಾಡುವ ಗುರಿ ನೀಡಬೇಕು. ಅದನ್ನು ಟಾರ್ಗೆಟ್ ಎಂದು ನಿಗದಿಪಡಿಸಬೇಕು. ಆಗ ಎಲ್ಲವೂ ಸೂಸುತ್ರವಾಗಿ ನಡೆಯುತ್ತದೆ. ಹೀಗೆ ಆಗುತ್ತದೆಯಾ? ಉಳಿದದ್ದು ನಾಳೆ ಹೇಳುತ್ತೇನೆ!
Leave A Reply