ಚುನಾಯಿತ ಸರಕಾರ, ಪ್ರಾದೇಶಿಕ ಆಯುಕ್ತ, ಪೂರ್ಣಕಾಲಿಕ ಆಯುಕ್ತ ಮೂರು ಶೂನ್ಯವಾದರೆ ಇನ್ನೇನಾಗುತ್ತೆ!!
ಮಳೆಗಾಲ ಶುರುವಾದಂತೆ ಪತ್ರಿಕೆ, ಟಿವಿಗಳಲ್ಲಿ ಮೊದಲು ಬರುವ ಫೋಟೋ, ವಿಡಿಯೋ ಎಂದರೆ ಅಲ್ಲಿ ನೀರು ನಿಂತಿದೆ, ಇಲ್ಲಿ ನೀರು ನಿಂತಿದೆ ಎನ್ನುವುದು. ಕೆಲವು ರಸ್ತೆಗಳಲ್ಲಿ ಇದು ಈ ಬಾರಿ ಪ್ರಥಮ ಏನಲ್ಲ. ಕೆಲವು ವರ್ಷಗಳಿಂದ ಅದೇ ಜಾಗ, ಅದೇ ರೀತಿಯಲ್ಲಿ ನೀರು ನಿಂತಿರುತ್ತದೆ. ಹಾಗೇನೆ ಈ ಬಾರಿಯೂ ನಿಂತಿದೆ. ಅದೇ ಫೋಟೋ ಬಂದಿದೆ. ಆದರೆ ನಮ್ಮ ಇಂಜಿನಿಯರ್ಸ್, ಅಧಿಕಾರಿಗಳಿಗೆ ಮಾತ್ರ ಇದು ಕಣ್ಣಿಗೆ ಕಾಣುತ್ತಿಲ್ಲ. ಅವರು ಯಥಾಪ್ರಕಾರ ಸಂಪ್ರದಾಯದಂತೆ ಗ್ಯಾಂಗ್ ಗಳನ್ನು ತಯಾರು ಮಾಡಿದ್ದಾರೆ. ಒಂದೊಂದು ವಾರ್ಡಿಗೆ ಒಂದೊಂದು ಗ್ಯಾಂಗ್ ಯಥಾಪ್ರಕಾರ ರೆಡಿಯಾಗಿದೆ. ಒಟ್ಟು ಆರವತ್ತು ವಾರ್ಡಿಗೆ ಅರವತ್ತು ಗ್ಯಾಂಗ್, ಹಾಗೆ ರಾತ್ರಿ ಎರಡು ಗ್ಯಾಂಗ್ ಸೇರಿದರೆ ಪಾಲಿಕೆಗೆ ತಗಲುವ ನಿವ್ವಳ ಖರ್ಚು ಜೂನ್, ಜುಲೈ ಎರಡು ತಿಂಗಳಿಗೆ ಒಂದೂಕಾಲು ಕೋಟಿ. ಇದರ ಅಗತ್ಯ ಇತ್ತಾ ಎನ್ನುವುದು ಮೊದಲ ಪ್ರಶ್ನೆ. ಎರಡು ಲಕ್ಷ ಐದು ಸಾವಿರ ರೂಪಾಯಿ ಒಂದೊಂದು ವಾರ್ಡಿಗೆ ಖರ್ಚು ಮಾಡುವ ಅಗತ್ಯ ಏನಿರುತ್ತೆ? ಪಾಲಿಕೆಯ ಅಧಿಕಾರಿಗಳಿಗೆ, ಇಂಜಿನಿಯರ್ಸ್ ಗಳಿಗೆ ಒಂದು ವಿಷಯ ಗ್ಯಾರಂಟಿ ಗೊತ್ತಿರುತ್ತೆ ಏನೆಂದರೆ ಮಳೆಯ ನೀರು ಸರಿಯಾಗಿ ಹೋಗಲು ನಾವು ವ್ಯವಸ್ಥೆ ಮಾಡಿಲ್ಲ, ಹೂಳು ಸರಿಯಾಗಿ ತೆಗೆದಿಲ್ಲ, ಆಂಟೋನಿ ವೇಸ್ಟ್ ನವರು ಒಂದು ಮೀಟರ್ ಅಗಲದ ತೋಡಿನ ಹೂಳು ತೆಗೆಯುವುದಕ್ಕೆ ನಿರ್ಲಕ್ಷ್ಯ ಮಾಡಿದರೂ ಬಾಯಿ ತೆರೆದಿಲ್ಲ, ಫೂತ್ ಪಾತ್ ಇರುವ ಕಡೆ ನೀರು ರಸ್ತೆಯಿಂದ ಚರಂಡಿಗೆ ಇಳಿದು ಹೋಗಲು ನಾವು ಸಣ್ಣ ಕಿಂಡಿಗಳನ್ನೇ ಇಟ್ಟಿಲ್ಲ. ಕಿಂಡಿ ಇರುವ ಕಡೆ ಈಗಾಗಲೇ ಕಸ, ಕಡ್ಡಿ ತುಂಬಿದ್ದರೂ ನಾವು ತೆಗೆದಿಲ್ಲ, ನೀರು ರಸ್ತೆಯಿಂದ ಕೆಳಗೆ ಇಳಿದು ಹೋಗಲು ಜಾಲಿ ಇಟ್ಟಿದ್ದರೂ ಅದಕ್ಕೆ ತುಂಬಿರುವ ಕಸ ತೆಗೆದಿಲ್ಲ, ಆದ್ದರಿಂದ ಕೃತಕ ಕೊಳ ಹಲವೆಡೆ ಸೃಷ್ಟಿಯಾಗುತ್ತದೆ. ಅದು ತೆಗೆಯಲು ಹೆಚ್ಚೆಂದರೆ ಒಂದೆರಡು ಗ್ಯಾಂಗ್ ಗಳು ಬೇಕಾಗಬಹುದು ಎನ್ನುವುದು ಪಾಲಿಕೆಯಲ್ಲಿರುವವರಿಗೆ ಗೊತ್ತಿದೆ. ಆದರೂ ಅವರು ಅರವತ್ತೆರಡು ಗ್ಯಾಂಗ್ ಬೇಕು ಎನ್ನುತ್ತಾರೆ. ಅದಕ್ಕೆ ಅವರು 62 ಗ್ಯಾಂಗ್ ಸೃಷ್ಟಿಸುವ ಪ್ರಕ್ರಿಯೆ ನಡೆಸುತ್ತಾರೆ ಮತ್ತು ಪಾಲಿಕೆಯ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಇವರು ಮೊದಲೇ ತಾವು ಮಾಡಬೇಕಾದ ಕೆಲಸವನ್ನು ನಿಷ್ಟೆಯಿಂದ ಮಾಡಿದ್ದರೆ, ನಾನು ಗ್ಯಾರಂಟಿಯಾಗಿ ಹೇಳುತ್ತೇನೆ, ಇಡೀ ಪಾಲಿಕೆಯ ವ್ಯಾಪ್ತಿಗೆ ಹೆಚ್ಚೆಂದರೆ ಮೂರ್ನಾಕು ಗ್ಯಾಂಗ್ ಎಮರಜೆನ್ಸಿಗೆ ಸಾಕು. ಅರವತ್ತೆರಡು ಗ್ಯಾಂಗುಗಳು ಬೇಕಾಗಿರಲ್ಲ.
ಚುನಾಯಿತ ಸರಕಾರ ಇಲ್ಲ…
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸದ್ಯ ಕೇಳುವವರು ಇಲ್ಲ ಎನ್ನುವ ಪರಿಸ್ಥಿತಿ ಇದೆ. ಮೊದಲಾಗಿ ಆಡಳಿತ ಮಾಡಲು ಒಂದು ಚುನಾಯಿತ ಸರಕಾರ ಇಲ್ಲ. ಉಸ್ತುವಾರಿ ಸಚಿವ ಯುಟಿ ಖಾದರ್ ಅವರ ರಾಜಕೀಯ ಆಟದಿಂದ ಮೀಸಲಾತಿ ಪಟ್ಟಿ ತಡವಾಗಿ ಚುನಾವಣೆ ನಡೆಯಲೇ ಇಲ್ಲ. ಎರಡನೇಯದಾಗಿ ಪಾಲಿಕೆಯ ಆಡಳಿತಾಧಿಕಾರಿಯಾಗಿ ನೇಮಕವಾಗಿರುವವರು ಮೈಸೂರಿನ ಪ್ರಾದೇಶಿಕ ಆಯುಕ್ತರು. ಅವರು ಆವತ್ತಿನಿಂದ ಇವತ್ತಿನ ತನಕ ಒಂದೇ ಒಂದು ಬಾರಿಯೂ ನಮ್ಮ ಪಾಲಿಕೆಗೆ ಕಾಲಿಟ್ಟಿರುವುದು ನಾನು ನೋಡಿಲ್ಲ. ಇನ್ನು ಮೂರನೇಯದಾಗಿ ನಮ್ಮ ಪಾಲಿಕೆಗೆ ಪೂರ್ಣಕಾಲಿಕ ಕಮೀಷನರ್ ಇಲ್ಲ. ಸ್ಮಾರ್ಟ್ ಸಿಟಿಯ ಡೈರೆಕ್ಟರ್ ಅವರನ್ನೇ ಪ್ರಭಾರಿಯನ್ನಾಗಿ ನೇಮಿಸಲಾಗಿದೆ. ಆದ್ದರಿಂದ ಅಕ್ಷರಶ: ಪಾಲಿಕೆಯ ಆಡಳಿತ ಅನಾಥ. ಇವತ್ತು ನಾನೊಂದು ಫೋಟೋ ಫೋಸ್ಟ್ ಮಾಡಿದ್ದೇನೆ. ಅದನ್ನು ನೋಡಿದರೆ ನಿಮಗೆ ಪಾಲಿಕೆಯ ಇಡೀ ವ್ಯವಸ್ಥೆಗೆ ಅದು ಕನ್ನಡಿ ಹಿಡಿದಂತೆ ಇದೆ.
ಕೋಟಿ ಖರ್ಚಾಗಿರುತ್ತದೆ, ಆದರೂ…
ಬೃಹತ್ ಚರಂಡಿ, ರಾಜಕಾಲುವೆಗಳ ಹೂಳು ತೆಗೆಯುವುದಕ್ಕೆ ಪಾಲಿಕೆಯ ಖರ್ಚಿನಲ್ಲಿ ಜೆಸಿಬಿ ಹಾಕಿ ಕೆಲಸ ಮಾಡಿಸಲಾಗಿದೆ. ಅದು ಎಷ್ಟು ಫಲಪ್ರದವಾಗಿದೆಯೋ ಅವರಿಗೆ ಮಾತ್ರ ಗೊತ್ತು, ಆದರೆ ಪಾಲಿಕೆಗೆ ಬಿಲ್ ಬರುತ್ತದೆ ಮತ್ತು ಅದು ಮಂಜೂರು ಕೂಡ ಆಗುತ್ತದೆ. ಅದರ ನಡುವೆ ಈ ಗ್ಯಾಂಗ್ ಯಾಕೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಸರಿ ಹೇಳಬೇಕಾದರೆ ನಿಜಕ್ಕೂ ಈ ಗ್ಯಾಂಗಿನವರು ಕೆಲಸ ಮಾಡುತ್ತಾರಾ, ಇಲ್ವಾ ಎನ್ನುವುದು ಕೂಡ ಪಾಲಿಕೆಗೆ ಮಾಹಿತಿ ಇಲ್ಲ. ಇಂಜಿನಿಯರ್ಸ್, ಎಕ್ಸಿಕ್ಯೂಟಿವ್ ಇಂಜಿನಿಯರ್ಸ್, ಜ್ಯೂನಿಯರ್ ಇಂಜಿನಿಯರ್ಸ್ ನವರಿಗೆ ಗ್ಯಾಂಗ್ ಏನು ಕೆಲಸ ಮಾಡುತ್ತೆ, ಯಾವಾಗ, ಎಲ್ಲಿ ಇರುತ್ತಾರೆ, ಗೊತ್ತಾ, ಕೇಳಿ. ಗೊತ್ತಿಲ್ಲ. ಇದಕ್ಕೆಲ್ಲ ಏನು ಮಾಡುವುದು, ನಮ್ಮ ತೆರಿಗೆ ಹಣ ಪೋಲಾಗುವುದು ಕಣ್ಣು ತುಂಬಿ ನೋಡುವುದು ಅಷ್ಟೇ!
Leave A Reply