ಕರಂಗಲಪಾಡಿಯ ಹೋಟೇಲಿನವರ ಹಣ ತಿಂದಿದ್ರಾ ಪಾಲಿಕೆಯ ಆರೋಗ್ಯ ವಿಭಾಗ!
ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವ ಮಾತಿದೆ. ಜನರ ಜೀವದ ವಿಷಯ ಬಂದಾಗ ಕೂಡ ಶಂಖದಿಂದಲೇ ತೀರ್ಥ ಬರಲಿ ಎಂದು ಕಾಯುವವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಟೇಬಲಿಗೆ ಒಬ್ಬರಂತೆ ಕಾಣಬಹುದು. ಅದು ಮೊನ್ನೆ ಮತ್ತೊಮ್ಮೆ ಸಾಬೀತಾಗಿದೆ. ಮಂಗಳೂರಿನ ಹೃದಯಭಾಗದಲ್ಲಿರುವ ಕರಂಗಲಪಾಡಿಯಲ್ಲಿ ಮಾಂಸಹಾರಿ ಹೋಟೇಲ್ ಒಂದಿದೆ. ಅಲ್ಲಿ ಕೇರಳದ ಕಾಸರಗೋಡು ಜಿಲ್ಲೆಯಿಂದ ಒಂದು ಕುಟುಂಬ ಊಟಕ್ಕೆ ಬಂದಿದೆ. ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಿಂದ ನಿತ್ಯ ಹಲವಾರು ಜನ ಮಂಗಳೂರು ನಗರಕ್ಕೆ ವಿವಿಧ ಕಾರಣಗಳಿಗಾಗಿ ಬರುತ್ತಾರೆ. ಹಾಗೆ ಬಂದವರು ಇಲ್ಲಿನ ವಿವಿಧ ಹೋಟೆಲುಗಳಿಗೆ ಊಟ, ತಿಂಡಿಗೆ ಬರುವುದು ಮಾಮೂಲು. ಹಾಗೆ ಬಂದ ಕುಟುಂಬ ಹೋಟೇಲಿನಲ್ಲಿ ಊಟ ಮಾಡಿದೆ. ಅವರು ಕಾರಿನಲ್ಲಿ ಇಲ್ಲಿಂದ ತಮ್ಮ ಮನೆಗೆ ಹೋಗುವಷ್ಟರಲ್ಲಿ ಅವರುಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಅವರು ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಇದು ಫುಡ್ ಪಾಯಿಸನ್ ಅಂದರೆ ಆಹಾರದಲ್ಲಿ ವಿಷ ಎನ್ನುವ ವರದಿ ನೀಡಿದ್ದಾರೆ. ಅದು ಅಲ್ಲಿನ ಟಿವಿ ವಾಹಿನಿಗಳಲ್ಲಿ ಸುದ್ದಿಯಾಗಿದೆ. ಮಂಗಳೂರಿನ ಹೋಟೇಲ್ ಗಳಲ್ಲಿ ಆಹಾರ ಸೇವಿಸಿದವರಿಗೆ ತೀವ್ರ ಅನಾರೋಗ್ಯ, ಫುಡ್ ಪಾಯಿಸನ್ ನಿಂದ ಬಳಲುತ್ತಿರುವ ಸ್ಥಳೀಯರು ಎನ್ನುವ ಅರ್ಥದ ಸುದ್ದಿಗಳು ಅಲ್ಲಿ ಟಿವಿ, ಪತ್ರಿಕೆಗಳಲ್ಲಿ ಬಂದಿದೆ. ಅದನ್ನು ಕೇಳಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರು, ಸ್ಥಳೀಯ ರಾಜಕಾರಣಿಗಳು ಆಸ್ಪತ್ರೆಗೆ ಧಾವಿಸಿದ್ದಾರೆ. ಅಲ್ಲಿ ವಿಚಾರಿಸಿದ್ದಾರೆ. ಯಾವ ಹೋಟೇಲ್ ಹೀಗೆ ವಿಷಯುಕ್ತ ಆಹಾರವನ್ನು ಉಣಬಡಿಸುತ್ತಿದೆ ಎಂದು ತಿಳಿದುಕೊಂಡಿದ್ದಾರೆ. ಪುಣ್ಯಕ್ಕೆ ತಿಂದವರ ಅದೃಷ್ಟ ಚೆನ್ನಾಗಿತ್ತು. ಪ್ರಾಣ ಹೋಗುವಂತದ್ದು ಏನೂ ಆಗಿಲ್ಲ. ಆದರೆ ಹೋಟೇಲಿನವನ ಗ್ರಹಚಾರ ಕೆಟ್ಟಿತ್ತು. ಯಾಕೆಂದರೆ ತಿಂದು ನೋವು ಅನುಭವಿಸಿದವರು ಕೇರಳದವರು. ಅವರು ಅದನ್ನು ಹಾಗೆ ಸುಮ್ಮನೆ ಬಿಡುವ ಪ್ರಶ್ನೆಯೇ ಇರಲಿಲ್ಲ. ಅಲ್ಲಿನ ಜಿಲ್ಲಾ ಪಂಚಾಯತ್ ಸದಸ್ಯರು ಈ ವಿಷಯವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಯು ಟಿ ಖಾದರ್ ಅವರ ಗಮನಕ್ಕೆ ತಂದರು. ಹೋಟೇಲ್ ಜನಸಾಮಾನ್ಯರ ಪಾಲಿಗೆ ಪ್ರಾಣಸಂಕಟವಾಗಿ ಪರಿಣಮಿಸುತ್ತಿದೆ ಎಂದು ಮನವರಿಕೆ ಮಾಡಿದರು. ಖಾದರ್ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಆದೇಶ ನೀಡಿದರು. ಆರೋಗ್ಯಾಧಿಕಾರಿ ಡಾ|ಮಂಜಯ್ಯ ಶೆಟ್ಟಿ ತಮ್ಮ ಸಿಬ್ಬಂದಿಗಳನ್ನು ಕರೆದುಕೊಂಡು ಹೋಟೇಲಿಗೆ ಹೋಗಿ ಅಲ್ಲಿನ ಪರಿಸರ ನೋಡಿ ಬಂದ್ ಮಾಡಿಸಿ ಬಂದಿದ್ದಾರೆ. ಅಲ್ಲಿಗೆ ಕೇರಳಿಗರ ಹಟ ಗೆದ್ದಿದೆ.
ನಾನು ಈ ಹೋಟೆಲ್ ಬಂದ್ ಮಾಡಿದ್ದು ಸರಿಯಲ್ಲ ಎಂದು ಹೇಳುತ್ತಿಲ್ಲ. ಆದರೆ ವಿಷಯ ಇರುವುದು ಈ ಹೋಟೆಲಿನಲ್ಲಿ ಆಹಾರ ತಿಂದವರಿಗೆ ಆರೋಗ್ಯ ಏರುಪೇರಾಗುತ್ತದೆ ಎನ್ನುವುದು ಈ ಮೊದಲೇ ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ಗೊತ್ತಿತ್ತು. ಅದನ್ನು ಮಂಗಳೂರಿನ ಬಿಜೆಪಿಯ ಮಾಜಿ ಪಾಲಿಕೆ ಸದಸ್ಯರೊಬ್ಬರು ಆರೋಗ್ಯ ವಿಭಾಗಕ್ಕೆ ತಿಳಿಸಿದ್ದರು. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ವಿನಂತಿಸಿದ್ದರು. ಆದರೆ ಪಾಲಿಕೆ ಈ ಬಗ್ಗೆ ಯಾವ ಕ್ರಮವನ್ನು ಕೂಡ ತೆಗೆದುಕೊಂಡಿರಲಿಲ್ಲ. ಅದೇ ಕೇರಳದ ಕೆಲವರು ಅಸ್ವಸ್ಥರಾದ ಕೂಡಲೇ ಅಲ್ಲಿನವರೇ ಬಂದು ಖಾದರ್ ಬಗ್ಗೆ ಹೇಳಿದ ಕಾರಣ ಆ ಹೋಟೇಲ್ ಬಂದಾಗಿದೆ. ಇಲ್ಲದಿದ್ದರೆ ಇವತ್ತಿಗೂ ಆ ಹೋಟೇಲ್ ಇನ್ನಷ್ಟು ಜನರ ಬದುಕಿನೊಂದಿಗೆ ಆಟವಾಡುತ್ತಿತ್ತು.
ಈಗ ನಾನು ಪಾಲಿಕೆಯವರೊಂದಿಗೆ ಕೇಳುವುದು ಏನೆಂದರೆ ನಿಮಗೆ ಜನಸಾಮಾನ್ಯರ ಆರೋಗ್ಯ ಮುಖ್ಯವೋ ಅಥವಾ ಖಾದರ್ ಅವರಂತಹ ಸಚಿವರು ಹೇಳುವುದು ಮುಖ್ಯವೋ. ಪಾಲಿಕೆಯ ಮಾಜಿ ಸದಸ್ಯರು ಮನುಷ್ಯರಲ್ಲವೇ? ಅವರು ಹೇಳಿದ್ರೆ ಅಲ್ಲಿ ಹೋಗಿ ವಿಚಾರಿಸಲು ಆಗಲ್ವಾ? ವಿಷಯ ಹೌದು ಎಂದಾದರೆ ಬಂದ್ ಮಾಡಿಸಬಹುದಿತ್ತಲ್ಲ? ಅಥವಾ ಆ ಹೋಟೆಲಿನವರೊಂದಿಗೆ ಪಾಲಿಕೆಯ ಆರೋಗ್ಯ ವಿಭಾಗದವರು ಸೆಟಲ್ ಆಗಿದ್ರಾ? ತಿಂಗಳಿಗೆ ಇಷ್ಟು ಹಣ ಪಾಲಿಕೆಯ ಆರೋಗ್ಯ ವಿಭಾಗದವರಿಗೆ ಹೋಗುತ್ತಿತ್ತಾ?
Leave A Reply