ತುಂಬೆಯಲ್ಲಿ ಏಳು ಮೀಟರ್ ನೀರು ನಿಲ್ಲಿಸಲು ಬಿಜೆಪಿ ಸರಕಾರ ಬರಬೇಕಾಯಿತು!!
ಇವತ್ತಿನ ದಿನಪತ್ರಿಕೆಯಲ್ಲಿ ಗಮನಿಸಿದ್ದೇನೆ. ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ತುಂಬೆಯಲ್ಲಿ ಹೊಸ ಡ್ಯಾಂನಲ್ಲಿ ಏಳು ಮೀಟರ್ ತನಕ ನೀರು ನಿಲ್ಲಿಸಲು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳಲು ಆದ್ಯತೆ ವಹಿಸುವುದಾಗಿ ಹೇಳಿದ್ದಾರೆ. ಬಹುಶ: ಮಂಗಳೂರು ನಗರ ದಕ್ಷಿಣ ಮತ್ತು ಉತ್ತರದ ಮಟ್ಟಿಗೆ ನೀರಿನ ಸಮಸ್ಯೆ ಪರಿಹಾರವಾಗಬೇಕಾದರೆ ಮೊದಲು ಆಗಬೇಕಾಗಿರುವುದು ಅದೇ. ಏಳು ಮೀಟರ್ ನಿಲ್ಲಿಸಲು ಇರುವ ಮುಖ್ಯ ತೊಂದರೆ ಏನೆಂದರೆ ಮುಳುಗಡೆಯಾಗಲಿರುವ ಭೂಮಿಯ ಮಾಲೀಕರಿಗೆ ಹಣ ಕೊಡಬೇಕಾಗಿರುವುದು. ಅದು ಬಹುತೇಕ 120 ಕೋಟಿ ರೂಪಾಯಿ. ಅಷ್ಟು ಹಣ ಹೊಂದಿಸಿದರೆ ಒಂದಷ್ಟರ ಮಟ್ಟಿಗೆ ಪ್ರತಿ ಬೇಸಿಗೆಯಲ್ಲಿಯೂ ನಾವು ನಿಶ್ಚಿಂತೆಯಿಂದ ಇರಬಹುದು. ಇಲ್ಲದಿದ್ದರೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ ನಮಗೆ ಮಾರ್ಚಿನಲ್ಲಿಯೇ ಆಕಾಶ ನೋಡುವಂತೆ ಮಾಡುತ್ತದೆ. ಕಾಂಗ್ರೆಸ್ ಸರಕಾರ ಐದು ವರ್ಷ ಇದ್ದಾಗ ನಮ್ಮ ಜಿಲ್ಲೆಯಿಂದ ಮೂರು ಜನ ಸಚಿವರಿದ್ದರು. ರೈಗಳು, ಅಭಯರು ಮತ್ತು ಖಾದರ್. ಆವತ್ತೆ ತುಂಬೆ ಹೊಸ ಡ್ಯಾಂನಲ್ಲಿೇಳು ಮೀಟರ್ ನೀರು ನಿಲ್ಲಿಸಿದರೆ ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಹಣ ಕೊಟ್ಟಿದ್ದರೆ ಆ ಸಮಸ್ಯೆ ಉಳಿಯುತ್ತಿರಲಿಲ್ಲ. ಅದರ ನಂತರ ಮೈತ್ರಿ ಸರಕಾರ ಬಂತು. ಖಾದರ್ ಒಬ್ಬರೇ ಉಳಿದರು. ಅವರಿಗೆ ಅಷ್ಟು ಹಣ ಕೊಡಲು ಕುಮಾರಸ್ವಾಮಿ ಸರಕಾರ ಮನಸ್ಸು ಮಾಡುವ ಸಾಧ್ಯತೆನೆ ಇರಲಿಲ್ಲ. ಒಂದು ವೇಳೆ ಹೊಳೆನರಸಿಂಹಪುರದಲ್ಲಿ ಇಂತಹ ಪ್ರಸಂಗ ಇದ್ದಿದ್ದರೆ ಹಣ ನೂರಿಪ್ಪತ್ತು ಕೋಟಿಯಲ್ಲ, ಅದಕ್ಕಿಂತ ಜಾಸ್ತಿ ಬೇಕಾದರೂ ಬಿಡುಗಡೆಯಾಗುತ್ತಿತ್ತು. ಆದರೆ ಮಂಗಳೂರು ನೋಡಿ. ಜೆಡಿಎಸ್ ಶಾಸಕರು ಬಿಡಿ, ಇಲ್ಲಿ ಆ ಪಕ್ಷದ ಡೆಪಾಸಿಟ್ ಕೂಡ ಉಳಿಯಲ್ಲ. ಹಾಗಿರುವಾಗ ತುಂಬೆ ಹಾಗೆಯೇ ಉಳಿಯಿತು. ಈಗ ಬಿಜೆಪಿ ಸರಕಾರ ಬರುವ ಸಾಧ್ಯತೆ ಸ್ಪಷ್ಟವಾಗುತ್ತಿದೆ. ಹಾಗಿರುವಾಗ ಒಂದು ಜಿಲ್ಲೆಯಿಂದ ಏಳು ಜನ ಶಾಸಕರನ್ನು ಕರುಣಿಸಿರುವ ನಮಗೆ ತುಂಬೆ ಸಂತ್ರಸ್ತರ ಹಣ ಕೊಡಲು ಬಿಜೆಪಿ ಮುಖ್ಯಮಂತ್ರಿ ಮನಸ್ಸು ಮಾಡದೇ ಇರುತ್ತಾರಾ. ಬೇಗ ಮಾಡಿದ್ರೆ ಒಳ್ಳೆಯದು.
ಇಲ್ಲದಿದ್ದರೆ ಮುಂದಿನ ಸಲವೂ ಕುಡಿಯುವ ನೀರಿನ ಕೊರತೆ ಆದಾಗ ಪಾಲಿಕೆಯಲ್ಲಿ ಮತ್ತೆ ಸಂಭ್ರಮ ಮನೆಮಾಡುತ್ತದೆ. ಅದೇಗೆ ಎಂದರೆ ಖಾಸಗಿ ಟ್ಯಾಂಕರ್ ಗಳನ್ನು ಬಾಡಿಗೆಗೆ ಪಡೆಯುವ ಮೂಲಕ ಪಾಲಿಕೆಯಲ್ಲಿ ಕಮೀಷನ್ ಹೊಳೆ ಹರಿಯುತ್ತದೆ. ಸರಿಯಾಗಿ ನೋಡಿದರೆ ಪಾಲಿಕೆಯಲ್ಲಿ ಎರಡು ಟ್ಯಾಂಕರ್ ಗಳಿವೆ. ಅದಕ್ಕೆ ಡ್ರೈವರ್ ಗಳಿದ್ದಾರೆ. ಟ್ಯಾಂಕರ್ ಗಳು ಒಂದಿಷ್ಟು ಹಳತಾಗಿರಬಹುದು. ಆದರೆ ಅದನ್ನು ಬಳಸಬಹುದು. ಅಷ್ಟೇ ಅಲ್ಲ ಅಗತ್ಯ ಇದ್ದರೆ ಇನ್ನೆರಡು ಟ್ಯಾಂಕರ್ ಗಳನ್ನು ಖರೀದಿಸಬಹುದು. ಹೇಗೂ ಡ್ರೈವರ್ ಗಳಿದ್ದಾರೆ. ಇಂಧನದ ಖರ್ಚು ನೋಡಿದರೆ ಎಷ್ಟೋ ವಾರ್ಡುಗಳಿಗೆ ನೀರು ಪೂರೈಕೆ ಮಾಡಬಹುದು. ಆದರೆ ಈಗ ಹಾಗೆ ಆಗುತ್ತಿಲ್ಲ. ಖಾಸಗಿಯವರು ಒಂದು ಟ್ರಿಪ್ ಗೆ 900 ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರು ಎಷ್ಟು ಟ್ರಿಪ್ ಹಾಕಿದ್ರು, ಎಷ್ಟು ಕಡೆ ನಿಜಕ್ಕೂ ನೀರು ಹೋಗುತ್ತೆ, ಅವರಿಗೆ ಮತ್ತು ದೇವರಿಗೆ ಮಾತ್ರ ಗೊತ್ತು. ಬಿಲ್ ಮಾತ್ರ ಲಕ್ಷದಲ್ಲಿ ಸರಿಯಾಗಿ ಆಗುತ್ತದೆ. ಅದರಿಂದ ಕಮೀಷನ್ ಹೋಗುತ್ತದೆ. ಅದೇ ತುಂಬೆಯಲ್ಲಿ ಏಳು ಮೀಟರ್ ನಿಲ್ಲಿಸಿ ಅದು ಸಮರ್ಪಕವಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಸುವಂತಾದರೆ ಮುಂದಿನ ವರ್ಷದಿಂದ ಅಧಿಕಾರಿಗಳಿಗೆ ಕಮೀಷನ್ ಗೋತಾ.
ಇನ್ನು ಮಂಗಳೂರು ನಗರ ದಕ್ಷಿಣ ಮತ್ತು ಉತ್ತರದ ಇಬ್ಬರೂ ಶಾಸಕರೂ ಮಾಡಬೇಕಾಗಿರುವುದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 700 ರಷ್ಟು ಹುದ್ದೆಗಳನ್ನು ಭರ್ತಿಗೊಳಿಸುವುದು. ಪಾಲಿಕೆಯಲ್ಲಿ ಈಗ ಏನು ಆಗುತ್ತಿದೆ ಎಂದರೆ ಯಾವುದಕ್ಕೆ ಅಗತ್ಯವಾಗಿ ಸಿಬ್ಬಂದಿಗಳು ಬೇಕೋ ಅದಕ್ಕೆ ಇಲ್ಲ. ಯಾವ ಕೆಲಸ ಸಿಬ್ಬಂದಿಯಿಲ್ಲದಿದ್ದರೂ ಆಗುತ್ತದೆಯೋ ಅದಕ್ಕೆ ಸಿಬ್ಬಂದಿಗಳಿದ್ದಾರೆ. ಯಾವ ಕಂದಾಯ ವಿಭಾಗಕ್ಕೆ ಎಷ್ಟು ಸಿಬ್ಬಂದಿಗಳಿದ್ದರೆ ಒಳ್ಳೆಯದೋ ಅದರ ಅರ್ಧದಷ್ಟು ಸಿಬ್ಬಂದಿಗಳು ಇದ್ದಾರೆ. ಹೀಗೆ ಹಲವು ವಿಷಯಗಳಿವೆ. ಅದನ್ನೆಲ್ಲಾ ನಾಳೆ ವಿವರಿಸುತ್ತೇನೆ. ಇದೆಲ್ಲಾ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬಹುದು ಎನ್ನುವ ನಿರೀಕ್ಷೆ ಇಟ್ಟು ಬರೆಯುತ್ತಿದ್ದೇನೆ!
Leave A Reply